ಅಭಿವೃದ್ಧಿ ವಿಷಯದಲ್ಲಿ ಯಾರೂ ರಾಜಕಾರಣ ಮಾಡಬಾರದು. ೨೦೨೨- ೨೩ನೇ ಸಾಲಿನ ಕಾಮಗಾರಿಗಳನ್ನು ಕೈಗೆತ್ತಿಕೊಳ್ಳಲಾಗುತ್ತಿದೆ. ೨ ವರ್ಷದಲ್ಲಿ ₹೨೦೦ ಕೋಟಿಗೂ ಅಧಿಕ ರಸ್ತೆ ಅಭಿವೃದ್ಧಿ ಕಾಮಗಾರಿಗಳು ಮತಕ್ಷೇತ್ರದಲ್ಲಿ ನಡೆದಿವೆ ಎಂದು ಶಾಸಕ ಸಿ.ಎಸ್.ನಾಡಗೌಡ(ಅಪ್ಪಾಜಿ) ಹೇಳಿದರು.

ಕನ್ನಡಪಪ್ರಭ ವಾರ್ತೆ ತಾಳಿಕೋಟೆ

ಅಭಿವೃದ್ಧಿ ವಿಷಯದಲ್ಲಿ ಯಾರೂ ರಾಜಕಾರಣ ಮಾಡಬಾರದು. ೨೦೨೨- ೨೩ನೇ ಸಾಲಿನ ಕಾಮಗಾರಿಗಳನ್ನು ಕೈಗೆತ್ತಿಕೊಳ್ಳಲಾಗುತ್ತಿದೆ. ೨ ವರ್ಷದಲ್ಲಿ ₹೨೦೦ ಕೋಟಿಗೂ ಅಧಿಕ ರಸ್ತೆ ಅಭಿವೃದ್ಧಿ ಕಾಮಗಾರಿಗಳು ಮತಕ್ಷೇತ್ರದಲ್ಲಿ ನಡೆದಿವೆ ಎಂದು ಶಾಸಕ ಸಿ.ಎಸ್.ನಾಡಗೌಡ(ಅಪ್ಪಾಜಿ) ಹೇಳಿದರು.

ತಾಲೂಕಿನ ಬಳಗಾನೂರ ಗ್ರಾಮದಲ್ಲಿ ಗುರುವಾರ ೨೦೨೨-೨೩ನೇ ಸಾಲಿನ ಮುಖ್ಯಮಂತ್ರಿಗಳ ವಿಶೇಷ ಅಭಿವೃದ್ಧಿ ಯೋಜನೆಯಡಿ ₹೨.೧೦ ಕೋಟಿ ವೆಚ್ಚದಲ್ಲಿ ಬಳಗಾನೂರ ಗ್ರಾಮದಿಂದ ಕೊಣ್ಣೂರ (ಕೆನಾಲ್) ವರೆಗಿನ ರಸ್ತೆ ಕಾಮಗಾರಿಗೆ ಚಾಲನೆ ನೀಡಿ ಅವರು ಮಾತನಾಡಿದರು.

ಈ ರಸ್ತೆ ಕಾಮಗಾರಿಯು ೧.೮ ಕಿ.ಮೀ ಅಭಿವೃದ್ಧಿ ಕಾಣಲಿದೆ. ಮುಂದುವರಿದ ಕಾಮಗಾರಿಗೆ ಹೆಚ್ಚುವರಿ ಅನುದಾನಕ್ಕೆ ಸರ್ಕಾರಕ್ಕೆ ಪ್ರಸ್ತಾವನೆ ಸಲ್ಲಿಸಲಾಗಿದೆ. ೨೦೨೨- ೨೩ನೇ ಸಾಲಿನಲ್ಲಿ ೯ ಕಾಮಗಾರಿಗಳು ಹಿಂದಿನ ಸರ್ಕಾರದಲ್ಲಿ ಮಂಜೂರಾಗಿದ್ದರೂ ಆರ್ಥಿಕ ಇಲಾಖೆಯಿಂದ ಅನುಮೋದನೆಗೊಂಡಿರಲಿಲ್ಲ. ನಮ್ಮ ಸರ್ಕಾರ ಬಂದ ಮೇಲೆ ಕೆಲವು ಶಾಸಕರು ಚೇಂಜ್ ಆಫ್ ವರ್ಕ್ ಮಾಡಿಸಿದರು. ಆದರೆ ನಾನು ಮಾಡಿಸದೇ ಜನರ ಬೇಡಿಕೆ ಅರಿತು ಕಾಮಗಾರಿ ಕೈಗೊಳ್ಳಲಾಗುತ್ತಿದ್ದೇನೆ. ದಿಂಡಿವಾರ-ನಾಲತವಾಡ ರಸ್ತೆ ರಾಜ್ಯ ಹೆದ್ದಾರಿಯನ್ನಾಗಿ ಪರಿವರ್ತನೆಗೊಳಿಸಲಾಗಿದೆ. ಇದರಿಂದ ಗ್ರಾಮೀಣ ಭಾಗದ ಶೇ.೩೦ರಷ್ಟು ಗ್ರಾಮಗಳಿಗೆ ನೇರ ರಾಜ್ಯ ಹೆದ್ದಾರಿ ಸಂಪರ್ಕ ಕಲ್ಪಿಸಿದಂತಾಗುತ್ತದೆ. ಬಳಗಾನೂರ- ಮಿಣಜಗಿ ೩ ಕಿ.ಮೀ ರಸ್ತೆ ಅಭಿವೃದ್ಧಿಗೆ ₹೨.೨೫ ಕೋಟಿ ಹಣ ಬಿಡುಗಡೆಗೆ ಸರ್ಕಾರಕ್ಕೆ ಪ್ರಸ್ತಾವನೆ ಸಲ್ಲಿಸಿದ್ದೇನೆ. ಪ್ರಗತಿ ಪಥ ಯೋಜನೆಯಡಿ ೩೫ ಕಿ.ಮೀ ರಸ್ತೆಗೆ ಸರ್ಕಾರದಿಂದ ಅನುಮೋದನೆ ದೊರೆತಿದೆ. ಶೀಘ್ರದಲ್ಲಿ ಈ ಕಾಮಗಾರಿ ಕೈಗೆತ್ತಿಕೊಳ್ಳಲಾಗುವುದು ಎಂದರು.

ಅಸ್ಕಿ ಫೌಂಡೇಶನ್ ಅಧ್ಯಕ್ಷ, ಕಾಂಗ್ರೆಸ್ ಮುಖಂಡ ಸಿ.ಬಿ.ಅಸ್ಕಿ ಮಾತನಾಡಿ, ಶಾಸಕ ಸಿ.ಎಸ್.ನಾಡಗೌಡ (ಅಪ್ಪಾಜಿ) ಮತಕ್ಷೇತ್ರಕ್ಕೆ ವಿವಿಧ ಯೋಜನೆಯಡಿ ಸಾಕಷ್ಟು ಅನುದಾನ ತಂದಿದ್ದಾರೆ. ಕೇವಲ ರಸ್ತೆ ಅಭಿವೃದ್ಧಿಗೆ ₹೨೦೦ ಕೋಟಿ ತಂದಿದ್ದಾರೆ. ಇನ್ನೂಳಿದ ಕೆಲಸಗಳಿಗೆ ನೂರಾರು ಕೋಟಿ ರು. ಅನುದಾನ ಬಂದಿದೆ. ಉಕ್ಕಲಿ-ದಿಂಡಿವಾರ, ಚವನಭಾವಿ, ನಾಲತವಾಡ ರಾಜ್ಯ ಹೆದ್ದಾರಿಗೆ ₹೩೯೦ ಕೋಟಿ ಶೀಘ್ರ ಬಿಡುಗಡೆಯಾಗಲಿದೆ. ಜನರ ಬೇಡಿಕೆಯಂತೆ ಬಳಗಾನೂರ- ಕೂಚಬಾಳ ರಸ್ತೆಗೆ ₹೫ ಕೋಟಿ ಸರ್ಕಾರದಿಂದ ಮಂಜೂರು ಮಾಡಿಸಿ ಅಭಿವೃದ್ಧಿ ಮಾಡಲು ಮುಂದಾಗಲಾಗಿದೆ. ಮೂಕೀಹಾಳ- ತಾಳಿಕೋಟೆ ರಸ್ತೆ ಮುಕ್ತಾಯಗೊಂಡಿದೆ. ₹೨ ಕೋಟಿ ವೆಚ್ಚದ ಬ್ರಿಡ್ಜ್‌ ಕೆಲಸ ಮಳೆಗಾಲದಿಂದ ಮಾತ್ರ ಬಾಕಿ ಉಳಿದಿದ್ದು, ಈ ವಾರದಲ್ಲಿ ಪ್ರಾರಂಭಗೊಳ್ಳಲಿದೆ. ತಂಗಡಗಿ-ನಾಲತವಾಡ ರಸ್ತೆಗೆ ₹೧೨ ಕೋಟಿ, ನಾಲತವಾಡ ಸರ್ಕಲ್‌ದಿಂದ ವಿರೇಶ ನಗರ ಸರ್ಕಲ್‌ವರೆಗೆ ಮತ್ತು ಕವಡಿಮಟ್ಟಿ- ಡೊಂಕಮಡು ಗ್ರಾಮದ ವರೆಗಿನ ರಸ್ತೆಗೆ ₹೧೮ ಕೋಟಿ ವೆಚ್ಚ ಮಾಡಲಾಗುತ್ತಿದೆ. ಕೊಣ್ಣೂರ ಗ್ರಾಮದ ಸರ್ಕಲ್‌ದಿಂದ ಊರಿನವರೆಗೆ ₹೨.೮೦ ಕೋಟಿ ಅನುಮೋದನೆಯಾಗಿದೆ. ಇನ್ನೂ ಎಡ-ಬಲದಲ್ಲಿ ಡ್ರೇನ್ ಮಾಡಲು, ಉಳಿದ ರಸ್ತೆ ಅಭಿವೃದ್ಧಿಗೆ ₹೫ ಕೋಟಿ ಅವಶ್ಯಕತೆಯಿದೆ. ಶಾಸಕರಿಂದ ಸರ್ಕಾರಕ್ಕೆ ಪ್ರಸ್ತಾವನೆ ಸಲ್ಲಿಕೆಯಾಗಿದೆ. ಶೀಘ್ರದಲ್ಲಿ ಅನುದಾನ ಬಿಡುಗಡೆಯಾಗಲಿದೆ ಈ ಕಾರ್ಯವೂ ಪ್ರಾರಂಭಗೊಳ್ಳಲಿದೆ ಎಂದರು.

ಶಾಂತಯ್ಯ ಮುತ್ಯಾ ಹಿರೇಮಠ, ಮುಖಂಡರುಗಳಾದ ಬಿ.ಎನ್.ಹೂಗಾರ, ಬಸನಗೌಡ ಬಗಲಿ, ಪ್ರಭುಗೌಡ ಮದರಕಲ್ಲ, ನಿಂಗನಗೌಡ ಪಾಟೀಲ, ಸಂಗನಗೌಡ ಅಸ್ಕಿ, ಶಿವಣ್ಣ ಕಡಕೋಳ, ಎಇಇ ಜಿ.ವಾಯ್.ಮುರಾಳ, ಮೊದಲಾದವರು ಇದ್ದರು.

ಕೇಂದ್ರದಿಂದ ಕೃಷ್ಣಾ ಕೊಳ್ಳದ ಜನರಿಗೆ ಅನ್ಯಾಯ:

ಆಲಮಟ್ಟಿ ಜಲಾಶಯ ೫೨೪ ಮೀ. ಏರಿಕೆಯಾಗುವರೆಗೂ ನಮಗೆ ನೀರು ಸಿಗುವುದಿಲ್ಲ. ಈ ಕಾರ್ಯವಾಗಬೇಕೆಂದರೆ ಕೇಂದ್ರ ಸರ್ಕಾರ ನೀರು ಹಂಚಿಕೆ ಮಾಡಿ ಆದೇಶ ಹೊರಡಿಸಬೇಕಿದೆ. ಕಳೆದ ೮ ವರ್ಷಗಳಿಂದ ಕೇಂದ್ರದ ಮೇಲೆ ಒತ್ತಡ ಹಾಕುತ್ತಿದ್ದೇವೆ. ಸದರಿ ಯೋಜನೆಯನ್ನು ರಾಷ್ಟ್ರೀಯ ಯೋಜನೆ ಎಂದು ಪರಿಗಣಿಸಲು ಒತ್ತಾಯಿಸಿದ್ದೇವೆ. ರೈತರ ಸಂಕಷ್ಟ ಕುರಿತು ಮನವರಿಕೆ ಮಾಡಿದರೆ ಕೇಂದ್ರ ಸರ್ಕಾರ ಕೆಲಸ ಮಾಡುತ್ತಿಲ್ಲ. ಕೇಂದ್ರ ಬಿಜೆಪಿ ಸರ್ಕಾರ ರೈತರ ಮೇಲೆ ಕಿಂಚಿತ್ತು ಕಾಳಜಿ ತೋರುತ್ತಿಲ್ಲ, ಕೃಷ್ಣಾ ಕೊಳ್ಳದ ಜನರ ಮೇಲೆ ಅನ್ಯಾಯವೆಸಗುತ್ತಾ ಸಾಗಿದೆ ಎಂದು ಶಾಸಕ ಸಿ.ಎಸ್.ನಾಡಗೌಡ(ಅಪ್ಪಾಜಿ) ಆರೋಪಿಸಿದರು.

ಬಿಜೆಪಿ ಸಂಸದರು ಕೇಂದ್ರದ ಮೇಲೆ ಒತ್ತಡ ಹಾಕುವಂತಹ ಕೆಲಸ ಮಾಡಬೇಕು. ನೀರಾವರಿ ಯೋಜನೆಗೆ ಮುಳುಗಡೆಗೊಂಡ ಒಣ ಬೇಸಾಯಿ ಭೂಮಿ ಏಕರೆಗೆ ₹೩೦ ಲಕ್ಷ, ನೀರಾವರಿಗೆ ₹೪೦ ಲಕ್ಷ ಪರಿಹಾರ ನೀಡಲು ಮುಖ್ಯಮಂತ್ರಿಗಳು ಮುಂದಾಗಿದ್ದಾರೆ. ಪ್ರತಿ ವರ್ಷ ₹೧೮.೫೦ ಸಾವಿರ ಕೋಟಿ ಕೃಷ್ಣಾ ಯೋಜನೆಗೆ ಮೀಸಲಿಡಲು ಸರ್ಕಾರವು ಮುಂದಾಗಿದೆ. ಸದ್ಯ ಎಎಲ್‌ಬಿಸಿ- ಎಆರ್‌ಬಿಸಿಯಿಂದ ಮಾತ್ರ ಕೆರೆ ತುಂಬಲು ನೀರು ಸಿಗುತ್ತಿದೆ. ಇದು ರಾಷ್ಟ್ರೀಯ ಯೋಜನೆಯಾದರೆ ಅಥವಾ ಕೇಂದ್ರ ನೀರು ಹಂಚಿಕೆ ಮಾಡಿ ಆದೇಶ ಹೊರಡಿಸಿದರೆ, ಎಲ್ಲ ರೈತರ ಭೂಮಿಗೆ ನೀರು ಬರಲಿದೆ. ಈ ಯೋಜನೆಗೆ ಕೇಂದ್ರ ಸರ್ಕಾರದಿಂದ ₹೧೫ ರಿಂದ ₹೨೦ ಸಾವಿರ ಕೋಟಿ ಹಣ ಕೊಡಬೇಕಾಗುತ್ತದೆ. ಈ ಕಾರಣದಿಂದಲೇ ಬಿಜೆಪಿ ಕೇಂದ್ರ ನಿರ್ಲಕ್ಷ್ಯ ತೋರುತ್ತಿದೆ ಎಂದು ಶಾಸಕ ಅಪ್ಪಾಜಿ ಹೇಳಿದರು.