ವಿಶ್ವ ವಿಖ್ಯಾತ ಹಂಪಿ ಸ್ಮಾರಕಗಳ ವೀಕ್ಷಣೆಗೆ ಭಾರೀ ಪ್ರಮಾಣದಲ್ಲಿ ಪ್ರವಾಸಿಗರು ಆಗಮಿಸಿದ್ದಾರೆ.
ಹೊಸಪೇಟೆ: ವಿಶ್ವ ವಿಖ್ಯಾತ ಹಂಪಿ ಸ್ಮಾರಕಗಳ ವೀಕ್ಷಣೆಗೆ ಭಾರೀ ಪ್ರಮಾಣದಲ್ಲಿ ಪ್ರವಾಸಿಗರು ಆಗಮಿಸಿದ್ದು, ಕಳೆದ ನಾಲ್ಕು ದಿನಗಳಲ್ಲಿ 4 ಲಕ್ಷಕ್ಕೂ ಅಧಿಕ ಪ್ರವಾಸಿಗರು ಹಂಪಿಗೆ ಆಗಮಿಸಿ ಸ್ಮಾರಕಗಳನ್ನು ವೀಕ್ಷಣೆ ಮಾಡಿದ್ದಾರೆ.
ಕ್ರಿಸ್‌ಮಸ್, ವೀಕೆಂಡ್ ಹಾಗೂ ಸಾಲು-ಸಾಲು ರಜೆ ಹಿನ್ನೆಲೆಯಲ್ಲಿ ಪ್ರವಾಸಿಗರು ಹಂಪಿಗೆ ಹರಿದು ಬಂದಿದ್ದಾರೆ. ಹಂಪಿಗೆ ಭಾರೀ ಪ್ರಮಾಣದಲ್ಲಿ ಪ್ರವಾಸಿಗರು ಆಗಮಿಸಿರುವ ಹಿನ್ನೆಲೆಯಲ್ಲಿ ವಿಜಯ ವಿಠಲ ದೇವಾಲಯಕ್ಕೆ ತೆರಳುವ ರಸ್ತೆಯಲ್ಲಿ ಶನಿವಾರ ಟ್ರಾಫಿಕ್ ಜಾಮ್ ಕೂಡ ಉಂಟಾಗಿತ್ತು. ಹಂಪಿಯಲ್ಲಿ ಪ್ರವಾಸಿಗರ ವಾಹನಗಳ ನಿಯಂತ್ರಣಕ್ಕಾಗಿ ಏಕಮುಖ ಮಾರ್ಗದ ವ್ಯವಸ್ಥೆ ಮಾಡಿದ್ದರೂ ಪ್ರವಾಸಿಗರು ಪರದಾಡಿದರು. ಇನ್ನು ಸುಗಮ ಸಂಚಾರದ ವ್ಯವಸ್ಥೆ ಮಾಡಲು ಪೊಲೀಸರು ಕೂಡ ಹರಸಾಹಸಪಟ್ಟರು.ಪ್ರವಾಸಿಗರ ದಂಡು:
ಹಂಪಿಗೆ ಡಿ.27ರಂದು 1ಲಕ್ಷ 20 ಸಾವಿರಕ್ಕೂ ಅಧಿಕ ಪ್ರವಾಸಿಗರು ಆಗಮಿಸಿದ್ದರೆ, ಡಿ.26ರಂದು 1ಲಕ್ಷ 10 ಸಾವಿರಕ್ಕೂ ಅಧಿಕ ಪ್ರವಾಸಿಗರು ಆಗಮಿಸಿದ್ದರು. ಡಿ.25ರಂದು 90 ಸಾವಿರಕ್ಕೂ ಅಧಿಕ ಪ್ರವಾಸಿಗರು ಆಗಮಿಸಿದ್ದರೆ, ಡಿ.24ರಂದು 80 ಸಾವಿರಕ್ಕೂ ಅಧಿಕ ಪ್ರವಾಸಿಗರು ಹಂಪಿಗೆ ಆಗಮಿಸಿದ್ದರು. ಭಾರೀ ಸಂಖ್ಯೆಯಲ್ಲಿ ಪ್ರವಾಸಿಗರು ಹರಿದು ಬಂದ ಹಿನ್ನೆಲೆಯಲ್ಲಿ ಹಂಪಿ ಭಾಗದಲ್ಲಿ ಪ್ರವಾಸೋದ್ಯಮ ಚೇತರಿಸಿದೆ. ಪ್ರವಾಸೋದ್ಯಮದಿಂದ ಆರ್ಥಿಕ ಚಟುವಟಿಕೆಯೂ ಗರಿಗೆದರಿದೆ.ಹೋಟೆಲ್, ರೆಸಾರ್ಟ್ ಫುಲ್ ರಶ್:
ಹಂಪಿಗೆ ಭಾರೀ ಪ್ರಮಾಣದಲ್ಲಿ ಪ್ರವಾಸಿಗರ ದಂಡು ಲಗ್ಗೆ ಇಟ್ಟಿರುವ ಹಿನ್ನೆಲೆಯಲ್ಲಿ ಹಂಪಿ, ಹೊಸಪೇಟೆ, ಕಮಲಾಪುರ ಭಾಗದಲ್ಲಿ ಹೋಟೆಲ್, ರೆಸಾರ್ಟ್‌ಗಳು ಮತ್ತು ಹೋಂ ಸ್ಟೇಗಳು ಫುಲ್ ರಶ್ ಆಗಿವೆ. ಹೋಟೆಲ್, ರೆಸ್ಟೋರೆಂಟ್‌ಗಳಲ್ಲಿ ವಹಿವಾಟು ಉತ್ತಮವಾಗಿ ನಡೆದಿದೆ. ಹಂಪಿ ಪ್ರದೇಶದಲ್ಲಿ ಉತ್ತರ ಭಾರತ, ದಕ್ಷಿಣ ಭಾರತ, ಚೈನೀಸ್, ಇಟಾಲಿಯನ್ ಆಹಾರ ಕೂಡ ದೊರೆಯುವುದರಿಂದ ಪ್ರವಾಸಿಗರು ಕೂಡ ಖುಷಿಯಾಗಿದ್ದಾರೆ.ಸ್ಮಾರಕಗಳ ವೀಕ್ಷಣೆ:
ಹಂಪಿಯ ವಿರೂಪಾಕ್ಷೇಶ್ವರ ದೇವಾಲಯ, ರಥಬೀದಿ, ಎದುರು ಬಸವಣ್ಣ ಮಂಟಪ, ಸಾಸಿವೆ ಕಾಳು ಗಣಪತಿ, ಕಡಲೆ ಕಾಳು ಗಣಪತಿ, ಬಡವಿಲಿಂಗ, ಉಗ್ರ ನರಸಿಂಹ, ಶ್ರೀಕೃಷ್ಣ ದೇವಾಲಯ, ಉದ್ದಾನ ವೀರಭದ್ರೇಶ್ವರ ದೇವಾಲಯ, ಮಹಾನವಮಿ ದಿಬ್ಬ, ಹಜಾರ ರಾಮ ದೇವಾಲಯ, ರಾಣಿ ಸ್ನಾನ ಗೃಹ, ಕಮಲ ಮಹಲ್, ವಿಜಯ ವಿಠಲ, ಕಲ್ಲಿನತೇರು, ಪುರಂದರದಾಸರ ಮಂಟಪ, ರಾಜರ ತುಲಾಭಾರ, ವಿಷ್ಣು ಮಂಟಪ, ಕೋದಂಡರಾಮ, ಯಂತ್ರೋದ್ಧಾರಕ ಆಂಜನೇಯ, ವರಾಹ ದೇವಾಲಯ, ಅಚ್ಯುತರಾಯ ದೇವಾಲಯ ಸೇರಿದಂತೆ ವಿವಿಧ ಸ್ಮಾರಕಗಳನ್ನು ದೇಶ, ವಿದೇಶಿ ಪ್ರವಾಸಿಗರು ವೀಕ್ಷಿಸಿದರು.ಹಂಪಿ ಸ್ಮಾರಕಗಳ ವೀಕ್ಷಣೆಗೆ ಬೆಂಗಳೂರು, ಮಂಗಳೂರು, ಮೈಸೂರು, ಮಂಡ್ಯ ಸೇರಿದಂತೆ ರಾಜ್ಯದ ವಿವಿಧ ಜಿಲ್ಲೆಗಳಿಂದ ಪ್ರವಾಸಿಗರು ಆಗಮಿಸಿದ್ದರು. ಇನ್ನು ತೆಲಂಗಾಣ, ಆಂಧ್ರಪ್ರದೇಶ, ಕೇರಳ, ತಮಿಳುನಾಡು, ದಿಲ್ಲಿ, ಹರ್ಯಾಣ, ಉತ್ತರಪ್ರದೇಶ, ಬಿಹಾರ ಸೇರಿದಂತೆ ವಿವಿಧ ರಾಜ್ಯಗಳಿಂದಲೂ ಪ್ರವಾಸಿಗರು ಭಾರೀ ಸಂಖ್ಯೆಯಲ್ಲಿ ಆಗಮಿಸಿದ್ದರು. ಹಂಪಿ ಪ್ರವಾಸೋದ್ಯಮದಿಂದ ಪ್ರತ್ಯಕ್ಷ ಹಾಗೂ ಪರೋಕ್ಷವಾಗಿ ಉದ್ಯೋಗ ಕೂಡ ಸೃಷ್ಟಿಯಾಗಿದೆ.