ಪಶ್ಚಿಮ ಪದವೀಧರ ಮತಕ್ಷೇತ್ರಕ್ಕೆ 74000ಕ್ಕೂ ಅಧಿಕ ನೋಂದಣಿ

| Published : Nov 18 2025, 01:15 AM IST

ಸಾರಾಂಶ

ಪದವೀಧರ ಕ್ಷೇತ್ರದಿಂದ ಪರಿಷತ್‌ಗೆ ಆರು ವರ್ಷಕ್ಕೊಮ್ಮೆ ನಡೆಯುವ ಚುನಾವಣೆಗೆ ಹೆಸರು ನೋಂದಣಿ ಮಾಡಿಸುವುದು ಕಡ್ಡಾಯವಾಗಿದೆ. ಪ್ರತಿ ಸಲ ನೋಂದಣಿ ಮಾಡಿಸುವುದು, ಉದ್ಯೋಗ ಅರಸಿ ವಿವಿಧೆಡೆ ತೆರಳಿರುವ ಪದವೀಧರರು ನೋಂದಣಿ ಮಾಡಿಸಲು ಹಿಂದೇಟು ಹಾಕುತ್ತಿದ್ದಾರೆ.

ಶಿವಾನಂದ ಗೊಂಬಿ

ಹುಬ್ಬಳ್ಳಿ:

ಪಶ್ಚಿಮ ಪದವೀಧರರ ಕ್ಷೇತ್ರದಿಂದ ವಿಧಾನ ಪರಿಷತ್‌ಗೆ ನಡೆಯಲಿರುವ ಚುನಾವಣೆಗೆ ನೋಂದಣಿ ಮಾಡಿಸುವಲ್ಲಿ ಪದವೀಧರರು ಈ ಬಾರಿ ನಿರಾಸಕ್ತಿ ತೋರಿದ್ದಾರೆ. ಆದರೂ ಸಹ ಕಳೆದ ಬಾರಿಗಿಂತ ನೋಂದಣಿ ಹೆಚ್ಚಳವಾಗಿದ್ದು ಮತ್ತಷ್ಟು ನೋಂದಣಿ ಹೆಚ್ಚಿಸಲು ನ. 25ರಿಂದ ಮತ್ತೆ ಕಾಲಾವಕಾಶ ನೀಡಲಾಗಿದೆ.

ಪದವೀಧರ ಕ್ಷೇತ್ರದಿಂದ ಪರಿಷತ್‌ಗೆ ಆರು ವರ್ಷಕ್ಕೊಮ್ಮೆ ನಡೆಯುವ ಚುನಾವಣೆಗೆ ಹೆಸರು ನೋಂದಣಿ ಮಾಡಿಸುವುದು ಕಡ್ಡಾಯವಾಗಿದೆ. ಪ್ರತಿ ಸಲ ನೋಂದಣಿ ಮಾಡಿಸುವುದು, ಉದ್ಯೋಗ ಅರಸಿ ವಿವಿಧೆಡೆ ತೆರಳಿರುವ ಪದವೀಧರರು ನೋಂದಣಿ ಮಾಡಿಸಲು ಹಿಂದೇಟು ಹಾಕುತ್ತಿದ್ದಾರೆ. ಆದರೂ ಸಹ ಟಿಕೆಟ್‌ ಆಕಾಂಕ್ಷಿಗಳೇ ಪದವೀಧರರನ್ನು ಹುಡುಕಿಕೊಂಡು ಹೋಗಿ ನೋಂದಣಿ ಮಾಡಿಸುತ್ತಾರೆ.

ಈ ಬಾರಿ ಹೆಚ್ಚು ನೋಂದಣಿ:

ಧಾರವಾಡ, ಹಾವೇರಿ, ಗದಗ ಹಾಗೂ ಉತ್ತರ ಕನ್ನಡ ಜಿಲ್ಲೆ ಒಳಗೊಂಡಿರುವ ಪಶ್ಚಿಮ ಪದವೀಧರರ ಕ್ಷೇತ್ರದಲ್ಲಿ ಕಳೆದ ಚುನಾವಣೆಯಲ್ಲಿ 72 ಸಾವಿರಕ್ಕೂ ಅಧಿಕ ಮತದಾರರಿದ್ದರು. ಈ ಬಾರಿ 74 ಸಾವಿರಕ್ಕೆ ಹೆಚ್ಚಳವಾಗಿದೆ. ಕಳೆದ ಸಲ ಹಾವೇರಿ ಜಿಲ್ಲೆ 24 ಸಾವಿರಕ್ಕೂ ಅಧಿಕ ಮತದಾರರಾಗಿದ್ದರೆ ಈ ಬಾರಿ 18230 ನೋಂದಣಿಯಾಗಿದೆ. ಧಾರವಾಡ ಜಿಲ್ಲೆಯಲ್ಲಿ 19000 ಇದ್ದ ಸಂಖ್ಯೆ ಈ ಬಾರಿ 26000 ದಾಟಿದೆ. ಗದಗ ಜಿಲ್ಲೆಯಲ್ಲಿ 15265 ಹಾಗೂ ಉತ್ತರ ಕನ್ನಡ ಜಿಲ್ಲೆಯಲ್ಲಿ 14751 ಪದವೀಧರರು ಮತದಾರರಾಗಿದ್ದಾರೆ. ಆದರೆ, ಪದವೀಧರರ ಸಂಖ್ಯೆ ನೋಡಿದರೆ ಇದು ಕಡಿಮೆಯಾಗಿದೆ.

ಕರ್ನಾಟಕ ವಿಶ್ವವಿದ್ಯಾಲಯ ವ್ಯಾಪ್ತಿಗೆ ಈ ನಾಲ್ಕು ಜಿಲ್ಲೆಗಳು ಬರುತ್ತವೆ. ಇದರ ವ್ಯಾಪ್ತಿಯಲ್ಲಿ ಹತ್ತಾರು ಪದವಿ ಕಾಲೇಜ್‌, ಸ್ನಾತಕೋತ್ತರ ಕೇಂದ್ರ, ವಿವಿ ಸೇರಿ ಪ್ರತಿ ವರ್ಷ ಸಾವಿರಾರು ವಿದ್ಯಾರ್ಥಿಗಳು ಪದವೀಧರರಾಗಿ ಹೊರಬರುತ್ತಾರೆ. ಇವರೆಲ್ಲರೂ ನೋಂದಣಿ ಮಾಡಿದರೆ ಲಕ್ಷ ಲಕ್ಷ ಮತದಾರರಾಗುತ್ತಾರೆ. ಆದರೆ, ಇದರಲ್ಲಿ ಕೆಲವೇ ಕೆಲವರು ಮಾತ್ರ ನೋಂದಣಿ ಮಾಡಿಸುತ್ತಿದ್ದಾರೆ.

ಮತ್ತೊಮ್ಮೆ ಅವಕಾಶ:

ನೋಂದಣಿ ಕಡಿಮೆಯಾದ ಹಿನ್ನೆಲೆ ನ. 25ರಿಂದ ಡಿ. 10ರ ವರೆಗೆ ನೋಂದಣಿಗೆ ಚುನಾವಣಾ ಆಯೋಗ ಅವಕಾಶ ಕಲ್ಪಿಸಿದೆ. ಈ ಮೂಲಕ ನೋಂದಣಿ ಹೆಚ್ಚಿಸುವ ಗುರಿ ಹೊಂದಲಾಗಿದೆ. ಆದರೆ, ಆಯಾ ಕ್ಷೇತ್ರದಲ್ಲಿಯೇ ನೋಂದಣಿ ಮಾಡಿಸಬೇಕಾದ ಹಿನ್ನೆಲೆ ವಿವಿಧೆಡೆ ತೆರಳಿರುವ ಪದವೀಧರರು ನೋಂದಣಿ ಮಾಡಿಸಲು ಬರಲು ಹಿಂದೇಟು ಹಾಕುತ್ತಿದ್ದಾರೆ. ಹೀಗಾಗಿ ಹಳೆಯ ಪದ್ಧತಿ ಬಿಟ್ಟು ಆನ್‌ಲೈನ್‌ನಲ್ಲಿ ನೋಂದಣಿಗೆ ಅವಕಾಶ ಕಲ್ಪಿಸಬೇಕೆಂಬ ಕೂಗು ಸಹ ಕೇಳಿ ಬರುತ್ತಿದೆ.ಪಶ್ವಿಮ ಪದವೀಧರರ ಕ್ಷೇತ್ರಕ್ಕೆ 2ನೇ ಹಂತದಲ್ಲಿ ನೋಂದಣಿ ಮಾಡಿಸಲು ನ. 25ರಿಂದ ಡಿ. 10ರ ವರೆಗೆ ಅವಕಾಶ ಕಲ್ಪಿಸಿದ್ದು ಹೆಚ್ಚಿನ ಸಂಖ್ಯೆಯಲ್ಲಿ ಪದವೀಧರರು ನೋಂದಣಿ ಮಾಡಿಸಬೇಕು.

ಲಿಂಗರಾಜ ಪಾಟೀಲ, ಬಿಜೆಪಿ ಮುಖಂಡ