ಮಾವು ರಫ್ತು ವಿಧಾನಗಳ ಕೊರತೆ ನಿವಾರಿಸಿ: ಶಾಸಕ ಬೆಲ್ಲದ

| Published : Oct 26 2025, 02:00 AM IST

ಮಾವು ರಫ್ತು ವಿಧಾನಗಳ ಕೊರತೆ ನಿವಾರಿಸಿ: ಶಾಸಕ ಬೆಲ್ಲದ
Share this Article
  • FB
  • TW
  • Linkdin
  • Email

ಸಾರಾಂಶ

ರೈತರು ಮಾವು ಬೆಳೆಯನ್ನು ಲಾಭದಾಯಕ ಮಾಡಲು ಮಾವು ಸಂರಕ್ಷಣಾ ಕೇಂದ್ರ ಧಾರವಾಡದಲ್ಲಿ ಸ್ಥಾಪಿಸಲು ಎಲ್ಲ ಸಿದ್ಧತೆ ಮಾಡಲಾಗಿದೆ ಎಂದು ಶಾಸಕ ಅರವಿಂದ ಬೆಲ್ಲದ ಹೇಳಿದರು.

ಧಾರವಾಡ:

ಧಾರವಾಡ ಪೇಡೆಯಷ್ಟೇ ಉತ್ಕೃಷ್ಣ ಗುಣಮಟ್ಟದಲ್ಲಿ ಇಲ್ಲಿನ ಮಾವು ಹೆಸರು ಮಾಡಿದೆ. ಮಾವು ಸಂರಕ್ಷಣೆ ಮಾಡಿ ರಫ್ತು ಮಾಡುವ ವಿಧಾನಗಳ ಕೊರತೆ ನಿವಾರಿಸಲು ಪ್ರಯತ್ನಿಸಬೇಕೆಂದು ವಿರೋಧ ಪಕ್ಷದ ಉಪ ನಾಯಕ ಅರವಿಂದ ಬೆಲ್ಲದ ತಿಳಿಸಿದರು.

ಆಲೂರು ವೆಂಕಟರಾವ್ ಸಭಾಭವನದಲ್ಲಿ ಮಾವು ಬೆಳೆಗಾರರ ಬಳಗ, ಕರ್ನಾಟಕ ಮಾವು ಅಭಿವೃದ್ಧಿ ಮತ್ತು ಮಾರಾಟ ನಿಗಮ, ಭಾರತೀಯ ತೋಟಗಾರಿಕೆ ಸಂಶೋಧನಾ ಸಂಸ್ಥೆ ಸಹಯೋಗದಲ್ಲಿ ನಡೆಯುತ್ತಿರುವ ಎರಡು ದಿನಗಳ ಕಾರ್ಯಾಗಾರದಲ್ಲಿ ಮಾತನಾಡಿದ ಅವರು, ರೈತರು ಮಾವು ಬೆಳೆಯನ್ನು ಲಾಭದಾಯಕ ಮಾಡಲು ಮಾವು ಸಂರಕ್ಷಣಾ ಕೇಂದ್ರ ಧಾರವಾಡದಲ್ಲಿ ಸ್ಥಾಪಿಸಲು ಎಲ್ಲ ಸಿದ್ಧತೆ ಮಾಡಲಾಗಿದೆ. ರೈತರು ಹೆಚ್ಚು ಮಾವಿನ ಹಣ್ಣಿನ ಬೆಳೆ ಕುರಿತು ಮಾಹಿತಿ ಪಡೆದುಕೊಂಡು ಗುಣಮಟ್ಟದ ಮಾವು ಬೆಳೆಯಬೇಕೆಂದರು.

ಕಾರ್ಯಾಗಾರ ಉದ್ಘಾಟಿಸಿದ ನಾಸಿಕ್‌ನ ಸಹ್ಯಾದ್ರಿ ಫಾರ್ಮನ ಮುಖ್ಯಸ್ಥ ವಿಲಾಸ್ ರಾವ್ ಶಿಂಧೆ, ಕೃಷಿ ಕ್ಷೇತ್ರದಲ್ಲಿ ಲಾಭಗಳಿಸುವ ನಿಟ್ಟಿನಲ್ಲಿ ಪ್ರಯತ್ನಿಸಬೇಕು. ಅಂದಾಗ ಯಶಸ್ಸು ಸಿಗುತ್ತದೆ. ಕೃಷಿಯಲ್ಲಿ ಸಿಗುವಷ್ಟು ಲಾಭ ಎಲ್ಲಿಯೂ ಸಿಗುವುದಿಲ್ಲ, ಅಭಿವೃದ್ಧಿ ಕೃಷಿ ತಂತ್ರಜ್ಞಾನ ಬಳಸಿಕೊಂಡು ಕೃಷಿ ಚಟುವಟಿಕೆ ಮಾಡಿದರೆ, ರೈತರು ಉತ್ತಮ ಆದಾಯ ಗಳಿಸಬಹುದು. ಗುಣಮಟ್ಟದ ಆಹಾರ ಉತ್ಪನ್ನಗಳಿಗೆ ಬೇಡಿಕೆ ಇದ್ದು ಕೆಲಸ ಮಾಡುವಾಗ ಶ್ರಮವಹಿಸಿದರೇ ಮಾತ್ರ ಫಲ ಸಿಗುತ್ತದೆ ಎಂದರು.

ಮಾವು ಬೆಳೆಗಾರರ ಬಳಗದ ಗೌರವ ಅಧ್ಯಕ್ಷ ರಾಜೇಂದ್ರ ಪೋದಾರ ಮಾತನಾಡಿ, ಕರ್ನಾಟಕದಲ್ಲಿ 1.80 ಲಕ್ಷ ಹೆಕ್ಟೇರ್‌ನಲ್ಲಿ ಮಾವಿನ ಬೆಳೆ ಇದ್ದು, ಸರಾಸರಿ 17.5 ಲಕ್ಷ ಟನ್‌ ಮೆಟ್ರಿಕ್‌ ಟನ್‌ ಉತ್ಪಾದನೆ ಇದೆ. ಈ ಬೆಳೆಯು ಪೌಷ್ಟಿಕ ಭದ್ರತೆ, ಆರೋಗ್ಯ ಹಾಗೂ ರೈತರ ಆದಾಯದ ದೃಷ್ಟಿಯಿಂದ ಆಪಾರ ಅವಕಾಶ ಹೊಂದಿದೆ. ಅಂತೆಯೇ ರಾಜ್ಯದಲ್ಲಿಯೇ ಧಾರವಾಡದಲ್ಲಿ ಅಂದಾಜು 60 ಸಾವಿರ ಎಕರೆ ವಿವಿಧ ಮಾವಿನ ತಳಿಗಳ ಉತ್ಪಾದನೆಯಾಗುತ್ತಿದ್ದು, ಇದನ್ನು ಇನಷ್ಟು ಅಭಿವೃದ್ಧಿಗೊಳಿಸಲು ತಾವು ಮಾವು ಬೆಳೆಗಾರರ ಬಳಗ ಕಟ್ಟಿಕೊಂಡು ಕೆಲಸ ಮಾಡುತ್ತಿದ್ದೇವೆ ಎಂದು ತಿಳಿಸಿದರು.

ಹಲವು ವರ್ಷಗಳಿಂದ ಹವಾಮಾನ ಬದಲಾವಣೆ, ಮಾರುಕಟ್ಟೆ ಸವಾಲುಗಳ ಪರಿಣಾಮದಿಂದ ಬೆಳೆಗಾರರಲ್ಲಿ ಆದಾಯ ಮತ್ತು ಬೆಳೆ ಭವಿಷ್ಯದ ಬಗ್ಗೆ ಆತಂಕ ಹುಟ್ಟಿಕೊಂಡಿದೆ. ಆದ್ದರಿಂದ ಬೆಳೆಗಾರರನ್ನು ಒಗ್ಗೂಡಿಸಿ ಮಾವು ಉತ್ಪಾದನೆ, ತಾಂತ್ರಿಕತೆ, ರಫ್ತು, ಸಂಸ್ಕರಣೆ, ಮಾರುಕಟ್ಟೆ ಎಲ್ಲವನ್ನು ರೈತರಿಗೆ ತಿಳಿಸಲಾಗುತ್ತಿದೆ. ಧಾರವಾಡ ಅಲ್ಲದೇ ಬೆಳಗಾವಿ, ಹಾವೇರಿ, ವಿಜಯಪುರ, ಬಾಗಲಕೋಟ, ಗದಗ ಮತ್ತು ಕೊಪ್ಪಳ ಜಿಲ್ಲೆಗಳಲ್ಲೂ ಸಂಸ್ಥೆ ಕಾರ್ಯ ನಿರ್ವಹಿಸುತ್ತಿದ್ದು, ಇದೀಗ ಕಾರ್ಯಾಗಾರದ ಮೂಲಕ ಮತ್ತಷ್ಟು ರೈತರನ್ನು ತಲುಪುವ ಹಾಗೂ ಮಾಹಿತಿ ನೀಡುವ ಪ್ರಯತ್ನ ನಡೆದಿದೆ ಎಂದರು.

ಬಳಗದ ಅಧ್ಯಕ್ಷ ಸುಭಾಷ್ ಆಕಳವಾಡಿ, ಕಾಶಿನಾಥ್ ಬದ್ರಣ್ಣವರ, ಮುದ್ದು ಗಂಗಾಧರ, ತೋಟಗಾರಿಕೆ ವಿಭಾಗದ ನಿವೃತ್ತ ಹೆಚ್ಚುವರಿ ನಿರ್ದೇಶಕ ಡಾ. ಎಸ್.ವಿ ಹಿತ್ತಲಮನಿ, ಬಾಗಲಕೋಟೆ ತೋಟಗಾರಿಕಾ ವಿಜ್ಞಾನ ವಿವಿ ಪ್ರಾಧ್ಯಾಪಕ ಡಾ. ಜೆ.ಬಿ ಗೋಪಾಲ, ವಿಜ್ಞಾನಿ ಡಾ. ಬಿ.ಎಲ್. ಮಂಜುನಾಥ, ತಜ್ಞ ಕಾಂತರಾಜು, ಮಾವು ಬೆಳೆಗಾರ ಪ್ರಮೋದ ಗಾಂವ್ಕರ್, ಸೂರ್ಯಕಾಂತ ಸಂಗೊಳ್ಳಿ, ಅಂಡ್ರೀವ್ಸ್ ವ್ಯವಸ್ಥಾಪಕಿ ಮಧುಮತಿ, ರಫ್ತುದಾರ ಸುಧೀರ್ ಚಿತ್ರಗಾರ, ಪ್ರಮೋದ್‌ ಗಾಂವ್ಕರ್, ಉಮೇಶ್ ಕಟಗಿ, ಎಸ್.ಎನ್. ಸವದಿ, ಎಸ್.ಎನ್. ಪಾಟೀಲ, ನಾಗರಾಜ ತೀಮ್ಮಾಪುರ ಇದ್ದರು.

ಸಂವಾದ-ಚರ್ಚೆನವೀನ ಮಾವು ಉತ್ಪಾದನಾ ತಂತ್ರಜ್ಞಾನಗಳ ಕುರಿತು ಬೆಂಗಳೂರಿನ ಡಾ. ಎಸ್‌.ವಿ. ಹಿತ್ತಲಮನಿ, ಮಾವಿನ ಉತ್ಪಾದನೆಗೆ ಹವಾಮಾನ ಸ್ಥಿತಿಸ್ಥಾಪಕ ಅಭ್ಯಾಸಗಳು ಕುರಿತು ಬಾಗಲಕೋಟ ತೋಟಗಾರಿಕೆ ವಿಜ್ಞಾನ ವಿವಿ ಡಾ. ಜೆ.ಬಿ. ಗೋಪಾಲಿ, ಮಾವು ಕೊಯ್ಲಿನ ನಂತರದ ಉಪಚಾರಗಳ ಕುರಿತು ವಿಜ್ಞಾನಿ ಡಾ. ಬಿ.ಎಲ್‌. ಮಂಜುನಾಥ, ಕಾಂತರಾಜು, ಪ್ರಗತಿಪರ ರೈತರ ಅನುಭವಿಗಳ ಮಾವು ಬೆಳೆಗಾರರಾದ ಪ್ರಮೋದ ಗಾಂವಕರ, ಸೂರ್ಯಕಾಂತ ಸಂಗೊಳ್ಳಿ ಮಾತನಾಡಿದರು. ಜತೆಗೆ ಸಂವಾದ, ಚರ್ಚೆ ನಡೆದವು.