ಸಾರಾಂಶ
ಬೆಂಗಳೂರು: ಅತಿಯಾದ ಆತ್ಮವಿಶ್ವಾಸ ಹಾಗೂ ವಿರೋಧ ಪಕ್ಷದವರು ವಿವಾದರಹಿತ ಅಭ್ಯರ್ಥಿಯನ್ನು ಕಣಕ್ಕಿಳಿಸಿದ್ದೇ ಡಿ.ಕೆ.ಸುರೇಶ್ ಸೋಲಿಗೆ ಕಾರಣ. ಎಚ್.ಡಿ.ದೇವೇಗೌಡ, ಎಚ್.ಡಿ.ಕುಮಾರಸ್ವಾಮಿ, ಅನಿತಾ ಕುಮಾರಸ್ವಾಮಿ, ನಿಖಿಲ್ ರೀತಿಯಲ್ಲೇ ಇದೀಗ ಡಿ.ಕೆ.ಸುರೇಶ್ ಸೋತಿದ್ದಾರೆ ಅಷ್ಟೆ. ಆದರೂ ಸೋಲಿನ ಬಗ್ಗೆ ಪರಾಮರ್ಶಿಸುತ್ತೇವೆ ಎಂದು ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ತಿಳಿಸಿದರು.
ವಿವಾದರಹಿತ ವ್ಯಕ್ತಿ ಕಣಕ್ಕಿಳಿಸಿ ಬಿಜೆಪಿ ಉತ್ತಮ ತಂತ್ರಗಾರಿಕೆ: ಮೆಚ್ಚಿದ ಡಿಸಿಎಂಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಡಿ.ಕೆ.ಸುರೇಶ್ ಗೆಲುವಿನ ಬಗ್ಗೆ ಅತಿಯಾದ ಆತ್ಮವಿಶ್ವಾಸದಲ್ಲಿದ್ದೆವು. ಅದೂ ಕೂಡ ಸೋಲಿಗೆ ಕಾರಣವಾಯಿತು. ಜತೆಗೆ ನಾನು ರಾಜ್ಯದ ಇತರ ಕ್ಷೇತ್ರಗಳಲ್ಲಿ ಪ್ರಚಾರದಲ್ಲಿ ನಿರತನಾಗಿ ಬೆಂಗಳೂರು ಗ್ರಾಮಾಂತರಕ್ಕೆ ಸಮಯ ಮೀಸಲಿಡಲು ಸಾಧ್ಯವಾಗಲಿಲ್ಲ. ಡಿ.ಕೆ.ಸುರೇಶ್ ಸೋಲು ನನ್ನ ವೈಯಕ್ತಿಕ ಸೋಲು ಎಂದು ನಾನು ಒಪ್ಪಿಕೊಳ್ಳುತ್ತೇನೆ ಎಂದರು.
ಜತೆಗೆ ಬಿಜೆಪಿ ಕೂಡ ವಿವಾದ ರಹಿತ ಅಭ್ಯರ್ಥಿಯನ್ನು ಕಣಕ್ಕಿಳಿಸಿ ಉತ್ತಮ ತಂತ್ರಗಾರಿಕೆ ಮಾಡಿದೆ. ಜೆಡಿಎಸ್‌ನಿಂದ ಕಣಕ್ಕಿಳಿದರೆ ಮತಗಳು ಬರುವುದಿಲ್ಲ ಎಂದು ಬಿಜೆಪಿಯಿಂದ ಟಿಕೆಟ್ ನೀಡಲಾಯಿತು. ಆದರೂ, ಸೋಲು ಸೋಲೇ ಎಂಬುದನ್ನು ಒಪ್ಪಿಕೊಳ್ಳುತ್ತೇವೆ. ಕನಕಪುರದಲ್ಲಿ 50ರಿಂದ 60 ಸಾವಿರ ಮುನ್ನಡೆಯ ನಿರೀಕ್ಷೆಯಿತ್ತು. ಅದು ಬರಲಿಲ್ಲ ಎಂದರು.ಬಿಜೆಪಿ-ಜೆಡಿಎಸ್ ಮೈತ್ರಿ ಮೂಲಕ ಒಕ್ಕಲಿಗ ಮತ್ತು ಲಿಂಗಾಯತ ಮತಗಳು ಒಗ್ಗೂಡಿವೆಯೇ ಎಂಬ ಪ್ರಶ್ನೆಗೆ, ಕಾಂಗ್ರೆಸ್ ವಿರೋಧಿ ಮತಗಳು ಒಂದಾಗುವ ನಿರೀಕ್ಷೆಯಿತ್ತು. ಅದರಂತೆ ಆಗಿದೆ ಎಂದು ಹೇಳಿದರು.
ಚನ್ನಪಟ್ಟಣದಲ್ಲಿ ಸುರೇಶ್ ಸ್ಪರ್ಧೆ ಬಗ್ಗೆ ಯೋಚಿಸಿಯೇ ಇಲ್ಲ:ಚನ್ನಪಟ್ಟಣ ಉಪಚುನಾವಣೆಯಲ್ಲಿ ಡಿ.ಕೆ.ಸುರೇಶ್ ಸ್ಪರ್ಧೆ ವಿಚಾರವಾಗಿ ಪ್ರತಿಕ್ರಿಯಿಸಿ, ಚನ್ನಪಟ್ಟಣ ಉಪಚುನಾವಣೆ ಬಗ್ಗೆ ಇನ್ನೂ ಆಲೋಚನೆಯನ್ನೇ ಮಾಡಿಲ್ಲ. ನಾವಿನ್ನೂ ಸೋಲಿನ ನೋವಿನಿಂದ ಹೊರಬಂದಿಲ್ಲ. ಸದ್ಯಕ್ಕೆ ಕ್ಷೇತ್ರದ ಜನರಿಗೆ ಧನ್ಯವಾದವನ್ನು ಅರ್ಪಿಸುತ್ತೇನೆ. ಡಿ.ಕೆ.ಸುರೇಶ್ ಮತ್ತೆ ಚುನಾವಣೆಯಲ್ಲಿ ಸ್ಪರ್ಧಿಸುವ ಬಗ್ಗೆ ಆತುರವಿಲ್ಲ. ಮುಂದೆ ಪರಿಸ್ಥಿತಿ ಏನಿರಲಿದೆ ನೋಡೋಣ ಎಂದು ತಿಳಿಸಿದರು.ಬಿಜೆಪಿಯ ಹಗರಣದ ಬಗ್ಗೆ ಮಾತನಾಡಲಿ:
ರಾಹುಲ್ ಗಾಂಧಿ ಅವರು ಮುಖ್ಯಮಂತ್ರಿಗಳ ರಾಜೀನಾಮೆ ಪಡೆಯಲು ಬಂದಿದ್ದಾರಾ ಎಂಬ ಬಿಜೆಪಿ ಶಾಸಕ ಡಾ.ಸಿ.ಎನ್.ಅಶ್ವತ್ಥ ನಾರಾಯಣ ಅವರ ಹೇಳಿಕೆಗೆ ಪ್ರತಿಕ್ರಿಯಿಸಿದ ಡಿ.ಕೆ.ಶಿವಕುಮಾರ್, ಮೊದಲು ಅವರ ಪಕ್ಷದವರಿಂದಾಗಿರುವ ಅಕ್ರಮಗಳ ಬಗ್ಗೆ ಮಾತನಾಡಲಿ. ನಿಗಮ, ಮಂಡಳಿಗಳಲ್ಲಿನ ಹಣ ದುರುಪಯೋಗ ಹಿಂದೆಯೂ ಆಗಿದೆ. ಈಗ ಅಧಿಕಾರಿಯೊಬ್ಬರು ಆತ್ಮಹತ್ಯೆ ಮಾಡಿಕೊಂಡಿದ್ದರಿಂದ ಬಯಲಾಗಿದೆಯಷ್ಟೇ. ಬಿಜೆಪಿ ಅವಧಿಯಲ್ಲಿಯೂ ಅಕ್ರಮಗಳು ನಡೆದಿವೆ. ಅದನ್ನು ಮುಂದೆ ಮಾತನಾಡುತ್ತೇನೆ ಎಂದರು.ಕಲ್ಯಾಣ ಕರ್ನಾಟಕದವರು ಋಣ ತೀರಿಸುವಂತೆ ಗೆಲ್ಲಿಸಿದ್ದಾರೆ:
ಮಲ್ಲಿಕಾರ್ಜುನ ಖರ್ಗೆ ಅವರು ಈ ಹಿಂದೆ ಕಲ್ಯಾಣ ಕರ್ನಾಟಕವನ್ನು 371ಜೆ ಅಡಿಯಲ್ಲಿ ತಂದು ವಿಶೇಷ ಸ್ಥಾನಮಾನ ಸಿಗುವಂತೆ ಮಾಡಿದರು. ಅದರ ಋಣ ತೀರಿಸುವಂತೆ ಆ ಭಾಗದ 5 ಲೋಕಸಭಾ ಕ್ಷೇತ್ರಗಳಲ್ಲೂ ಕಾಂಗ್ರೆಸ್ ಗೆಲ್ಲಿಸಿ ಶಕ್ತಿ ತುಂಬಿದ್ದಾರೆ ಎಂದು ಡಿ.ಕೆ. ಶಿವಕುಮಾರ್ ಹೇಳಿದರು.