ಸಾರಾಂಶ
ಲಾಯಿಲ ಗ್ರಾಮದಲ್ಲಿ ಸೋಮವತಿ ನದಿಯ ನೀರಿನ ಮಟ್ಟ ಏರಿಕೆಯಾಗಿದೆ. ಧರ್ಮಸ್ಥಳ ಸ್ನಾನಘಟ್ಟದಲ್ಲಿ ನೇತ್ರಾವತಿ ತುಂಬಿ ಹರಿಯುತ್ತಿದೆ.
ಬೆಳ್ತಂಗಡಿ: ಕಳೆದೊಂದು ದಿನದಿಂದ ಸುರಿಯುತ್ತಿರುವ ಧಾರಾಕಾರ ಮಳೆಗೆ ತಾಲೂಕಿನ ಎಲ್ಲ ಪ್ರಮುಖ ನದಿಗಳು ತುಂಬಿ ಹರಿಯಲು ಪ್ರಾರಂಭಿಸಿವೆ.
ನೇತ್ರಾವತಿ, ಮೃತ್ಯುಂಜಯ, ಸೋಮವಾತಿ, ಫಲ್ಗುಣಿ, ಕಪಿಲಾ ನದಿಗಳು ತಮ್ಮ ನಿಜ ಸ್ವರೂಪವನ್ನು ತೋರಿಸಿವೆ. ತಾಲೂಕಿನ ಅಲ್ಲಲ್ಲಿರುವ ಪ್ರಮುಖ ಹೊಳೆ, ತೋಡು, ಹಳ್ಳಗಳೂ ತುಂಬಿ ಹರಿಯುತ್ತಿವೆ. ಎಳನೀರು, ಬಂಡಾಜೆ, ಬೊಳ್ಳೆ, ಎರ್ಮಾಯಿ, ಕಡಮಗುಂಡಿ, ಕುಕ್ಕಾಜೆ ಜಲಪಾತಗಳು ಭೋರ್ಗರೆಯುತ್ತಿವೆ.ಗುರುವಾರ ಸಂಜೆ ಸುರಿದ ಗಾಳಿ, ಮಳೆಗೆ ಮರ ಬಿದ್ದ ಪರಿಣಾಮ ಮುಂಡಾಜೆಯ ದುಂಬೆಟ್ಟು ಬಳಿ ವಿದ್ಯುತ್ ಪರಿವರ್ತಕ ಧರಾಶಾಯಿಯಾಗಿದೆ. ಚಾರ್ಮಾಡಿಯ ಫರ್ಲಾನಿಯಲ್ಲಿನ ಕಿಂಡಿಅಣೆಕಟ್ಟಿಗೆ ನದಿಯಲ್ಲಿ ತೇಲಿಬಂದ ಮರಮಟ್ಟುಗಳು ಅಡ್ಡಾಲಾಗಿ ಸಿಲುಕಿಕೊಂಡಿವೆ. ಪಜಿರಡ್ಕ ದೇವಸ್ಥಾನದ ಕೆಳ ಅಂಗಳಕ್ಕೆ ಹೊಳೆಯ ನೀರು ತಲುಪಿದೆ. ಮುಂಡಾಜೆಯ ಕಾರ್ಯತೋಡಿಯಲ್ಲಿ ಹಲವರ ಅಡಕೆ ತೋಟಕ್ಕೆ ನೇತ್ರಾವತಿ ನೀರು ನುಗ್ಗಿದೆ. ನಾವೂರು ಗ್ರಾಮ ಪಂಚಾಯಿತಿ ವ್ಯಾಪ್ತಿಯ ಕೈಕಂಬದ ಬಳಿ ಮಾರ್ಗಕ್ಕೆ ಮರವೊಂದು ಬಿದ್ದು ವಾಹನ ಸಂಚಾರಕ್ಕೆ ತೊಂದರೆ ಉಂಟಾಗಿತ್ತು.
ಪಿಡಿಒ ಸ್ಥಳಕ್ಕೆ ಬೇಟಿ ನೀಡಿ ಅರಣ್ಯ ಇಲಾಖೆ ಅಧಿಕಾರಿಗೆ ಫೋನ್ ಮುಖಾಂತರ ತಿಳಿಸಿದ್ದು ತಕ್ಷಣ ಸ್ಪಂದಿಸಿದ ಇಲಾಖೆಯ ಸಿಬ್ಬಂದಿ ಸ್ಥಳೀಯರ ಸಹಕಾರದಿಂದ ಮರವನ್ನು ತೆರವುಗೊಳಿಸಿ ಸಂಚಾರಕ್ಕೆ ಅನುವು ಮಾಡಿ ಕೊಟ್ಟರು. ಲಾಯಿಲ ಗ್ರಾಮದಲ್ಲಿ ಸೋಮವತಿ ನದಿಯ ನೀರಿನ ಮಟ್ಟ ಏರಿಕೆಯಾಗಿದೆ. ಧರ್ಮಸ್ಥಳ ಸ್ನಾನಘಟ್ಟದಲ್ಲಿ ನೇತ್ರಾವತಿ ತುಂಬಿ ಹರಿಯುತ್ತಿದೆ.