ಜಮೀನು ದಾಖಲೆಯಲ್ಲಿ ಮಾಲೀಕರ ಹೆಸರು ನಾಪತ್ತೆ

| Published : Nov 23 2025, 01:15 AM IST

ಸಾರಾಂಶ

ಹಲವಾರು ವರ್ಷಗಳಿಂದ ತಮ್ಮಕುಟುಂಬದ ಜೀವನಾಧಾರವಾಗಿದ್ದ ಕೃಷಿ ಜಮೀನಿನ ದಾಖಲೆಗಳಲ್ಲಿ ಕಂದಾಯ ಅಧಿಕಾರಿಗಳು ಜಮೀನು ಮಾಲೀಕನಾಗಿದ್ದ ತಮ್ಮ ಗಂಡನ ಹೆಸರು ತೆಗೆದುಹಾಕಿದ್ದಾರೆ. ಈ ಲೋಪ ಸರಿಪಡಿಸಿ ಎಂದು 80 ವರ್ಷದ ವೃದ್ಧೆ ಸರ್ಕಾರಿ ಕಚೇರಿಗಳಿಗೆ ಅಲೆಯುತ್ತಿದ್ದಾರೆ.

ಕನ್ನಡಪ್ರಭ ವಾರ್ತೆ, ತುಮಕೂರು

ಹಲವಾರು ವರ್ಷಗಳಿಂದ ತಮ್ಮಕುಟುಂಬದ ಜೀವನಾಧಾರವಾಗಿದ್ದ ಕೃಷಿ ಜಮೀನಿನ ದಾಖಲೆಗಳಲ್ಲಿ ಕಂದಾಯ ಅಧಿಕಾರಿಗಳು ಜಮೀನು ಮಾಲೀಕನಾಗಿದ್ದ ತಮ್ಮ ಗಂಡನ ಹೆಸರು ತೆಗೆದುಹಾಕಿದ್ದಾರೆ. ಈ ಲೋಪ ಸರಿಪಡಿಸಿ ಎಂದು 80 ವರ್ಷದ ವೃದ್ಧೆ ಸರ್ಕಾರಿ ಕಚೇರಿಗಳಿಗೆ ಅಲೆಯುತ್ತಿದ್ದಾರೆ. ತುಮಕೂರು ತಾಲೂಕು ಊರ್ಡಿಗೆರೆ ಹೋಬಳಿಯ ಬೂರಗಮರಪಾಳ್ಯದ ಮಜರೆ ಬಸವಪಟ್ಟಣ ಗ್ರಾಮದ ವೃದ್ಧೆಗಂಗಮ್ಮ ಅವರು ತಮ್ಮ ಜಮೀನು ದಾಖಲೆಯಲ್ಲಿ ಆಗಿರುವ ಲೋಪ ಸರಿಪಡಿಸಿಕೊಳ್ಳಲು ತುಮಕೂರು ತಹಸೀಲ್ದಾರ್, ಉಪವಿಭಾಗಾಧಿಕಾರಿಗಳ ಕಚೇರಿಗೆ ಅಲೆದು ಸಾಕಾಗಿದ್ದಾರೆ. ಈಗ ನ್ಯಾಯಾಲಯದ ಮೆಟ್ಟಿಲು ಹತ್ತಿದ್ದಾರೆ. ಹೈ ಕೋರ್ಟ್ ನ್ಯಾಯವಾದಿ ಎಲ್.ರಮೇಶ್ ನಾಯ್ಕ್ ಈ ಪ್ರಕರಣದ ಬಗ್ಗೆ ಹೈಕೋರ್ಟ್ ಗೆ ಮನವಿ ಸಲ್ಲಿಸಿದ್ದರು. ಭೂ ವಿವಾದವಾದ ಕಾರಣ ಜಿಲ್ಲಾಧಿಕಾರಿಗಳ ನ್ಯಾಯಾಲಯದಲ್ಲಿ ಬಗೆಹರಿಸಿಕೊಳ್ಳಲು ಕೋರ್ಟ್ ಹೇಳಿದೆ ಎಂದು ನ್ಯಾಯವಾದಿ ರಮೇಶ್ ನಾಯ್ಕ್ ಹೇಳಿದ್ದಾರೆ.ಬಸವಪಟ್ಟಣಗ್ರಾಮದಲ್ಲಿ 1 ಎಕರೆ 2 ಗುಂಟೆ ಜಮೀನು ನನ್ನ ಗಂಡ ಆಂಜನಪ್ಪನವರ ಹೆಸರಿಗೆ 1994 ರಲ್ಲಿ ಕಾನೂನುಬದ್ಧವಾಗಿ ಮಂಜೂರಾಗಿರುತ್ತದೆ. ಆಗಿನಿಂದ ಸುಮಾರು 31 ವರ್ಷಗಳಿಂದ ತಮ್ಮಕುಟುಂಬ ಆ ಜಮೀನಿನ ಮೇಲೆ ಅವಲಂಬಿತವಾಗಿ ಕೃಷಿ ಕಾರ್ಯದಲ್ಲಿ ನಿರತರಾಗಿ ಅಭಿವೃದ್ಧಿಪಡಿಸಿ ಕೃಷಿಯಲ್ಲಿ ನಿರತರಾಗಿದ್ದೆವು. ಈ ಜಮೀನಿನ ಮೇಲೆ ಬ್ಯಾಂಕ್ ಸಾಲ, ಸರ್ಕಾರದಿಂದ ಬೋರ್‌ವೆಲ್ ಮಂಜೂರಾಗಿದೆ. ಗಂಡ ಆಂಜನಪ್ಪ ಮರಣ ಹೊಂದಿದ್ದು ನಾನು ಮತ್ತು ಮಕ್ಕಳು ಒಟ್ಟು ಕುಟುಂಬದಲ್ಲಿ ಇದ್ದು ಇಲ್ಲಿಯವರೆಗೂ ಖಾತೆ, ಪಹಣಿ ಮಾಡಿಕೊಂಡಿರುವುದಿಲ್ಲ.ಈ ಜಮೀನಿಗೆ ಪವತಿ ವಾರಸು ಮೇರೆಗೆ ಖಾತೆ, ಪಹಣಿ ಬದಲಾವಣೆ ಮಾಡಲು ಅರ್ಜಿ ಸಲ್ಲಿಸಲು ಸರ್ಕಾರಿ ಕಚೇರಿಗೆ ಹೋದಾಗ ಜಮೀನಿನ ಪಹಣಿಯಲ್ಲಿ ಗಂಡ ಆಂಜಿನಪ್ಪನವರ ಹೆಸರು ತೆಗೆದುಹಾಕಿರುವುದು ಗೊತ್ತಾಯಿತು. ಈ ಬಗ್ಗೆ ತುಮಕೂರಿನ ಉಪವಿಭಾಗಾಧಿಕಾರಿ ಕಚೇರಿಯಲ್ಲಿ ಸ್ಪಷ್ಟನೆ ಕೇಳಲು ಹೋದಾಗ ಯಾವ ಅಧಿಕಾರಿಯೂ ಸ್ಪಂದಿಸಿ ಸಮಸ್ಯೆ ಬಗೆಹರಿಸುತ್ತಿಲ್ಲ ಎಂದು ಗಂಗಮ್ಮ ಹೇಳಿದ್ದಾರೆ.2016 ರಲ್ಲಿ ಸದರಿ ಜಮೀನು ಮಾಲೀಕ ಮರಣದ ನಂತರ ಸರ್ಕಾರಿ ಅಧಿಕಾರಿಗಳು ರಾತ್ರೋರಾತ್ರಿ ಮ್ಯುಟೇಶನ್ ಮತ್ತು ಆರ್‌ಟಿಸಿಯಿಂದ ಜಮೀನು ಮಾಲೀಕರ ಗಮನಕ್ಕೆ ತಾರದೆ ವ್ಯಕ್ತಿಯ ಹೆಸರನ್ನು ತೆಗೆದು ಹಾಕಿದರು. ಕಾನೂನುಬದ್ಧ ಉತ್ತರಾಧಿಕಾರಿಗಳು ತುಮಕೂರಿನ ತಹಸೀಲ್ದಾರ್ ಮತ್ತು ಉಪವಿಭಾಗಾಧಿಕಾರಿಗಳ ಕಚೇರಿಗೆ ಹೋದಾಗ ಮೃತನ ಹೆಸರನ್ನುದಾಖಲೆಯಲ್ಲಿ ಬಿಂಬಿಸಿರುವುದಿಲ್ಲ. ಅದನ್ನು ಪ್ರಶ್ನಿಸುವಲ್ಲಿ ಏಳು ವರ್ಷ ವಿಳಂಬವಿದೆ ಎಂದು ಹೇಳಿರುವ ಅಧಿಕಾರಿಗಳ ಜಮೀನು ಉತ್ತರಾಧಿಕಾರಿಗಳ ವಿನಂತಿಯನ್ನು ಸ್ವೀಕರಿಸಲು ಸಿದ್ಧರಿಲ್ಲ ಎಂದು ನ್ಯಾಯವಾದಿ ಎಲ್.ರಮೇಶ್ ನಾಯ್ಕ್ ಹೇಳಿದ್ದಾರೆ.ಈ ಸಂಬಂಧ ತಾವು ಹೈಕೋರ್ಟ್ಗೆ ಹೋದೆ, ನ್ಯಾಯಾಲಯವು ಸೂಕ್ತ ಪ್ರಾಧಿಕಾರದ ಮುಂದೆ ಅಂದರೆ ಜಿಲ್ಲಾಧಿಕಾರಿಗಳ ನ್ಯಾಯಾಲಯದ ಮುಂದೆ ಪ್ರಕರಣವನ್ನು ಪ್ರಶ್ನಿಸಲು ನನಗೆ ಅನುಮತಿ ನೀಡಿತು. ಆರ್‌ಟಿಸಿಯಿಂದ ಮೃತರ ಹೆಸರು ತೆಗೆದು ಹಾಕಿರುವ ಉಪವಿಭಾಗಾಧಿಕಾರಿ ಆದೇಶವನ್ನು ರದ್ದುಗೊಳಿಸುವಂತೆ ಕೋರಲು ಅವಕಾಶ ಸಿಕ್ಕಿತು ಎಂದು ತಿಳಿಸಿದ್ದಾರೆ. ಆದರೆ, ಈ ಪ್ರಕರಣವನ್ನು ಪ್ರಶ್ನಿಸಲು ತಾವು ತುಮಕೂರು ಜಿಲ್ಲಾಧಿಕಾರಿಗಳ ನ್ಯಾಯಾಲಯಕ್ಕೆ ಆನ್‌ಲೈನ್‌ನಲ್ಲಿ ನಿಯಮಾನುಸಾರ ದಾಖಲೆಗಳನ್ನು ನೀಡಿ, ಶುಲ್ಕ ಪಾವತಿಸಿದರೂ ತಮ್ಮ ಕೇಸನ್ನು ಸ್ವೀಕಾರ ಮಾಡುತ್ತಿಲ್ಲ. ಕೇಸು ತೆಗೆದುಕೊಳ್ಳುತ್ತಿಲ್ಲ ಎಂದ ಮೇಲೆ ಜಿಲ್ಲಾಧಿಕಾರಿಗಳ ನ್ಯಾಯಲಯ ಏಕಿರಬೇಕು, ಮುಚ್ಚಿಬಿಡಲಿ ಎಂದು ಅಸಮಾಧಾನ ವ್ಯಕ್ತಪಡಿಸಿದ ನ್ಯಾಯವಾದಿ ರಮೇಶ್ ನಾಯ್ಕ್, ಈ ಪ್ರಕರಣವನ್ನು ಮುಂದಿನ ಹಂತಗಳೀಗೆ ತೆಗೆದುಕೊಂಡು ಹೋಗಿ ಹೋರಾಟ ಮಾಡುವುದಾಗಿ ಹೇಳಿದ್ದಾರೆ.