ಸಾರಾಂಶ
ಯಲಬುರ್ಗಾ:
ಪಟ್ಟಣದ ಪ್ರಮುಖ ರಸ್ತೆಗಳ ಬದಿಯಲ್ಲಿ ಅನಧಿಕೃತವಾಗಿ ನಿರ್ಮಿಸಿದ ಗೂಡಂಗಡಿ ಹಾಗೂ ಶೆಡ್‌ಗಳನ್ನು ತೆರವುಗೊಳಿಸಲು ನೋಟಿಸ್ ನೀಡಿದರೂ ತೆರವುಗೊಳಸದ ಹಿನ್ನೆಲೆಯಲ್ಲಿ ಮಂಗಳವಾರ ಪಟ್ಟಣ ಪಂಚಾಯಿತಿ ತೆರವು ಕಾರ್ಯಾಚರಣೆಗೆ ಮುಂದಾಯಿತು. ಈ ವೇಳೆ ಕೆಲವರು ಅಧಿಕಾರಿಗಳೊಂದಿಗೆ ವಾಗ್ವಾದ ನಡೆಸಿ ಕಾಲಾವಕಾಶ ಕೇಳಿದ್ದರಿಂದ ಮುಖ್ಯಾಧಿಕಾರಿ 3 ದಿನ ಕಾಲಾವಕಾಶ ನೀಡಿದರು.ಈ ವೇಳೆ ಮುಖ್ಯಾಧಿಕಾರಿ ನಾಗೇಶ ಮಾತನಾಡಿ, ನಾನಾ ಯೋಜನೆಗಳಡಿ ಸಣ್ಣ ವ್ಯಾಪಾರಸ್ಥರು ಅನಧಿಕೃತ ಸ್ಥಳದಲ್ಲಿ ಅಂಗಡಿ ನಿರ್ಮಿಸಿಕೊಂಡ ಕಾರಣ ಸಾರ್ವಜನಿಕರಿಗೆ ಮತ್ತು ವಾಹನ ಸಂಚಾರಕ್ಕೆ ತೊಂದರೆಯಾಗುತ್ತಿದೆ. ಸುಗಮ ಸಂಚಾರದ ಹಿತದೃಷ್ಟಿಯಿಂದ ಪಾದಚಾರಿ ರಸ್ತೆ ಅತಿಕ್ರಮಣದಿಂದ ಮುಕ್ತಗೊಳಿಸುವಂತೆ ಜಿಲ್ಲಾಧಿಕಾರಿ ಕಟ್ಟನಿಟ್ಟಿನ ಸೂಚನೆ ನೀಡಿದ್ದಾರೆ. ಆ ಹಿನ್ನೆಲೆಯಲ್ಲಿ ತೆರವು ಕಾರ್ಯಾಚರಣೆ ಕೈಗೊಳ್ಳುವುದಕ್ಕೆ ಕ್ರಮ ವಹಿಸಲಾಗಿದೆ ಎಂದು ತಿಳಿಸಿದರು.ಪಪಂ ಅನುದಾನದಲ್ಲಿ ಚರಂಡಿ ನಿರ್ಮಾಣ ಮಾಡಿದ ಹಿನ್ನೆಲೆಯಲ್ಲಿ ಅತಿಕ್ರಮಣ ಮಾಡಿಕೊಂಡವರಿಗೆ ನೋಟಿಸ್ ಜಾರಿ ಮಾಡುವ ಅವಶ್ಯಕತೆ ಇಲ್ಲವಾದರೂ ಮೌಖಿಕವಾಗಿ ಧ್ವನಿವರ್ಧಕದ ಮೂಲಕ ಸಾರ್ವಜನಿಕವಾಗಿ ಮಾಹಿತಿ ನೀಡಲಾಗಿದೆ. ರಸ್ತೆ ಸುರಕ್ಷತಾ ಕಾಯ್ದೆ ಪಾಲನೆ ದೃಷ್ಟಿಯಿಂದ ಅನಧಿಕೃತ ಅಂಗಡಿ ತೆರವುಗೊಳಿಸುವ ವಿಷಯದಲ್ಲಿ ಹಿಂದೆ ಸರಿಯುವ ಮಾತೇ ಇಲ್ಲ. ಸೂಕ್ತ ದಾಖಲೆ ಇಟ್ಟುಕೊಂಡು ತೆರವು ಕಾರ್ಯಾಚರಣೆ ಕೈಗೊಳ್ಳಲಾಗಿದೆ ಎಂದು ಸ್ಪಷ್ಟಪಡಿಸಿದರು.
ಪಟ್ಟಣದ ಟಿಪ್ಪು ಸುಲ್ತಾನ ವೃತ್ತದಿಂದ ಕನಕದಾಸ ವೃತ್ತ, ಅಪ್ಪು (ಕನ್ನಡ ಕ್ರಿಯಾ ಸಮಿತಿ) ಸರ್ಕಲ್ ಹಾಗೂ ಕಿತ್ತೂರು ರಾಣಿ ಚೆನ್ನಮ್ಮ ವೃತ್ತದಿಂದ ಮುಧೋಳ ರಸ್ತೆಯ ಸಿದ್ಧರಾಮೇಶ್ವರ ಕಾಲನಿ, ಬುದ್ಧ, ಬಸವ, ಅಂಬೇಡ್ಕರ್ ಭವನದ ವರೆಗೆ ಅನಧಿಕೃತ ಅಂಗಡಿ ಗುರುತಿಸಲಾಗಿದ್ದು, ಶೀಘ್ರದಲ್ಲಿಯೇ ತೆರವು ಕಾರ್ಯಾಚರಣೆ ನಡೆಸಲಾಗುವುದು. ಅನವಶ್ಯಕವಾಗಿ ಯಾರಿಗೂ ತೊಂದರೆ ಕೊಡುವ ಉದ್ದೇಶ ಇಲ್ಲ ಎಂದರು.ಪಪಂ ಆಸ್ತಿಯನ್ನು ಅತಿಕ್ರಮಣ ಮಾಡಿಕೊಂಡು ತೆರವು ಕಾರ್ಯಾಚರಣೆಗೆ ಅಡ್ಡಿಪಡಿಸಿದರೇ ಕಾನೂನು ಕ್ರಮ ಜರುಗಿಸಲಾಗುವುದು. ಅಂಗಡಿ ಹಾಗೂ ಶೆಡ್ ತಮ್ಮ ಆಸ್ತಿಯಲ್ಲಿ ಇಟ್ಟುಕೊಂಡಿದ್ದರೇ ಸೂಕ್ತ ದಾಖಲೆಗಳನ್ನು ಮೂರು ದಿನದೊಳಗಾಗಿ ಪಪಂಗೆ ಸಲ್ಲಿಸಲು ಅವಕಾಶವಿದೆ. ಪಪಂನಿಂದ ನಿಗದಿಪಡಿಸಿದ ಅವಧಿಯಲ್ಲಿ ಅಂಗಡಿ ತೆರವುಗೊಳಿಸದಿದ್ದರೇ ಪಂಚಾಯಿತಿಯಿಂದಲೇ ತೆರವುಗೊಳಿಸಿ, ಅದಕ್ಕೆ ತಗುಲಿದ ವೆಚ್ಚವನ್ನು ಅಂಗಡಿಕಾರರಿಂದ ತೆರಿಗೆ ರೂಪದಲ್ಲಿ ವಸೂಲಿ ಮಾಡಲಾಗುವುದೆಂದು ಮುಖ್ಯಾಧಿಕಾರಿ ತಿಳಿಸಿದರು.
ತೆರವು ಕಾರ್ಯಾಚರಣೆಯಲ್ಲಿ ತಾರತಮ್ಯ ಮಾಡದೇ ವೈಜ್ಞಾನಿಕವಾಗಿ ನಡೆಸಬೇಕು. ಏಕಾಏಕಿ ತೆರವು ಕಾರ್ಯಾಚರಣೆ ಪ್ರಾರಂಭಿಸಿದರೇ ಅಂಗಡಿಕಾರರಿಗೆ ತೊಂದರೆಯಾಗುತ್ತದೆ. ಇದಕ್ಕೆ ಇನ್ನಷ್ಟು ದಿನ ಕಾಲಾವಕಾಶ ನೀಡಬೇಕು ಎಂದು ಅಂಗಡಿಕಾರರು ಮುಖ್ಯಾಧಿಕಾರಿಗೆ ಒತ್ತಾಯಿಸಿದರು.