ಹೆಬ್ರಿ ತಾಲೂಕು ಸಾಹಿತ್ಯ ಸಮ್ಮೇಳನ ಸರ್ವಾಧ್ಯಕ್ಷೆ ಪಿ.ಜಯಲಕ್ಷ್ಮಿ

| Published : Jan 07 2025, 12:30 AM IST

ಸಾರಾಂಶ

ಹೆಬ್ರಿಯ ಶಿವಪುರದಲ್ಲಿ ಫೆ.16ರಂದು ನಡೆಯುವ ಹೆಬ್ರಿ ತಾಲೂಕು ಐದನೇ ಸಾಹಿತ್ಯ ಸಮ್ಮೇಳನ ಸರ್ವಾಧ್ಯಕ್ಷರಾಗಿ ಲೇಖಕಿ ಪಿ.ಜಯಲಕ್ಷ್ಮಿ ಅಭಯ ಕುಮಾರ್ (ಅಭಯ ಲಕ್ಷ್ಮಿ) ಅವರನ್ನು ಸರ್ವಾನುಮತದಿಂದ ಆಯ್ಕೆ ಮಾಡಲಾಗಿದೆ.ಶಿವಪುರದಲ್ಲಿ ನಡೆದ ಸಾಹಿತ್ಯ ಸಮ್ಮೇಳನ ಪೂರ್ವಭಾವಿ ಸಭೆಯಲ್ಲಿ ಜಿಲ್ಲಾ ಕಸಾಪ ಅಧ್ಯಕ್ಷ ನೀಲಾವರ ಸುರೇಂದ್ರ ಅಡಿಗ ಮಾರ್ಗದರ್ಶನದಲ್ಲಿ ಆಯ್ಕೆ ಪ್ರಕ್ರಿಯೆ ನಡೆಯಿತು.

ಕನ್ನಡಪ್ರಭ ವಾರ್ತೆ ಕಾರ್ಕಳ

ಹೆಬ್ರಿಯ ಶಿವಪುರದಲ್ಲಿ ಫೆ.16ರಂದು ನಡೆಯುವ ಹೆಬ್ರಿ ತಾಲೂಕು ಐದನೇ ಸಾಹಿತ್ಯ ಸಮ್ಮೇಳನ ಸರ್ವಾಧ್ಯಕ್ಷರಾಗಿ ಲೇಖಕಿ ಪಿ.ಜಯಲಕ್ಷ್ಮಿ ಅಭಯ ಕುಮಾರ್ (ಅಭಯ ಲಕ್ಷ್ಮಿ) ಅವರನ್ನು ಸರ್ವಾನುಮತದಿಂದ ಆಯ್ಕೆ ಮಾಡಲಾಗಿದೆ.ಶಿವಪುರದಲ್ಲಿ ನಡೆದ ಸಾಹಿತ್ಯ ಸಮ್ಮೇಳನ ಪೂರ್ವಭಾವಿ ಸಭೆಯಲ್ಲಿ ಜಿಲ್ಲಾ ಕಸಾಪ ಅಧ್ಯಕ್ಷ ನೀಲಾವರ ಸುರೇಂದ್ರ ಅಡಿಗ ಮಾರ್ಗದರ್ಶನದಲ್ಲಿ ಆಯ್ಕೆ ಪ್ರಕ್ರಿಯೆ ನಡೆಯಿತು.

ಈ ಸಂದರ್ಭ ಹೆಬ್ರಿ ತಾಲೂಕು ಕಸಾಪ ಅಧ್ಯಕ್ಷ ಶ್ರೀನಿವಾಸ ಭಂಡಾರಿ, ಸ್ವಾಗತ ಸಮಿತಿ ಅಧ್ಯಕ್ಷ ಗಣೇಶ ಹಾಂಡ, ಸಂಚಾಲಕ ರಮಾನಂದ ಶೆಟ್ಟಿ, ಗೌರವಾಧ್ಯಕ್ಷ ಶಂಕರನಾರಾಯಣ ಕೊಡಂಚ, ಗ್ರಾಮ ಪಂಚಾಯಿತಿ ಅಧ್ಯಕ್ಷರಾದ ಶೋಭಾ ಶೆಟ್ಟಿ, ಶಾಲಾ ಮುಖ್ಯೋಪಾಧ್ಯಾಯರಾದ ಗುಲಾಬಿ, ಗೌರವ ಕಾರ್ಯದರ್ಶಿಗಳಾದ ಡಾ. ಪ್ರವೀಣ ಕುಮಾರ್, ಮಂಜುನಾಥ ಕೆ. ಶಿವಪುರ ಮತ್ತು ವಿವಿಧ ಸಮಿತಿಗಳ ಪದಾಧಿಕಾರಿಗಳು ಉಪಸ್ಥಿತರಿದ್ದರು.

--------------------------

ಅಭಯ ಲಕ್ಷ್ಮಿ ಅವರ ಪರಿಚಯ

ಪಿ.ಜಯಲಕ್ಷ್ಮಿ ಅಭಯ್ ಕುಮಾರ್ (ಕಾವ್ಯನಾಮ: ಅಭಯ ಲಕ್ಷ್ಮಿ) ಖ್ಯಾತ ಸಾಹಿತಿ. ಸ್ವಾತಂತ್ರ್ಯ ಹೋರಾಟಗಾರರಾಗಿರುವ ಎಂ.ಡಿ. ಅಧಿಕಾರಿ ಮತ್ತು ಕಮಲಾವತಿ ಅಧಿಕಾರಿ ದಂಪತಿಯ ಪುತ್ರಿಯಾಗಿ ಹೆಬ್ರಿ ತಾಲೂಕಿನ ಪಡುಕುಡೂರಿನಲ್ಲಿ ಜನಿಸಿದರು. ಕನ್ನಡ ಎಂ.ಎ ಪದವಿ ಮತ್ತು ಜೈನಾಲಜಿಯಲ್ಲಿ ಡಿಪ್ಲೋಮವನ್ನು ಪಡೆದವರು. ದಿ ನ್ಯೂ ಕೇಂಬ್ರಿಜ್ ಪದವಿ ಪೂರ್ವ ಕಾಲೇಜು, ವಿಜಯನಗರ ಇಲ್ಲಿ ಉಪನ್ಯಾಸಕಿಯಾಗಿದ್ದಾರೆ.

ಇವರು, ಹೇಗಿರಲಿ ನಾನು (ಕವನ ಸಂಕಲನ ), ಸ್ವಾತಂತ್ರ್ಯ ಯೋಧ ಶ್ರೀ ಎಂಡಿ ಅಧಿಕಾರಿ (ಜೀವನ ಚರಿತ್ರೆ ), ಅಭಿನವ ಅತ್ತಿಮಬ್ಬೆ (ಜೀವನ ಸಾಧನೆ), ಗಂಧಶಾಲಿ (ಪ್ರಬಂಧ ಸಂಕಲನ), ಪುಣ್ಯವನಿತೆ ಮೈನಾ ಸುಂದರಿ (ರಂಗ ನಾಟಕ), ಪ್ರೇಮ ಭಟ್ (ಬದುಕು ಬರಹ), ಮಹಾಕವಿ ರತ್ನಾಕರವರ್ಣಿ, ಸಾವಿರದ ಎಂಟು ಮಹಾವೀರವಾಣಿ ಮುಂತಾದ ಕೃತಿಗಳನ್ನು ಬರೆದಿದ್ದಾರೆ.

ಜೈನ ಧರ್ಮದ ತಿರುಳು, ರೂವಾರಿ ಅಭೀಷ್ಟ, ತ್ಯಾಗ ಶ್ರೀ, ಶತ ಸಂಭ್ರಮ (ಸಂಪಾದಕತ್ವ), ಇದಲ್ಲದೆ ಹಲವಾರು ಮಕ್ಕಳಿಗಾಗಿ ಕಿರು ನಾಟಕ ದೃಶ್ಯ ರೂಪಕಗಳನ್ನು ಬರೆದು ಧ್ವನಿ ಸುರುಳಿ ಹೊರತಂದಿದ್ದಾರೆ. ಅವುಗಳೆಂದರೆ ಸುವರ್ಣ ಭಾರತಿ, ಕೆಂಪಜ್ಜಿಯ ಸುಖೀ ಸಂಸಾರ, ನವರಸೋಲಾಸ, ನಿಸರ್ಗ ಇತ್ಯಾದಿ. ಭವ್ಯಾಂಜಲಿ (ಧ್ವನಿ ಸುರಳಿ) ವೀರ ಧರ್ಮ ದೀಪಿಕೆಯರು (ದೃಶ್ಯಾರೋಪಕ), ಹಂಪ - ಕಂತಿಯರ ಸಂವಾದ ಇದು ಇವರ ಕೃತಿಗಳು.

ಅವರಿಗೆ 1998ರಲ್ಲಿ ಕನ್ನಡ ಸಾಹಿತ್ಯ ಪರಿಷತ್ತಿನ ವತಿಯಿಂದ ಕವನ ಸಂಕಲನಕ್ಕೆ ಪಿ.ಶಾಂತಿಲಾಲ್ ಪ್ರಶಸ್ತಿ ಬಂದಿದೆ (ಮೂರು ಬಾರಿ). 1998ರಲ್ಲಿ ಪ್ರಶಾಂತನಗರದ ಲಯನ್ಸ್ ಕ್ಲಬ್‌ನಿಂದ ಉತ್ತಮ ಶಿಕ್ಷಕ ಪ್ರಶಸ್ತಿ, 1998ರಲ್ಲಿ ಶ್ರವಣಬೆಳಗೊಳದ ಸ್ವಸ್ತಿ ಶ್ರೀ ಚಾರು ಕೀರ್ತಿ ಸ್ವಾಮೀಜಿ ಅವರಿಂದ ರಾಜ್ಯಮಟ್ಟದ ಜೈನ ಕವಿಗೋಷ್ಠಿಯಲ್ಲಿ ಸ್ವಸ್ತಿ ಪ್ರಶಸ್ತಿ, 1999ರಲ್ಲಿ ಕವನ ಸಂಕಲನಕ್ಕೆ ಅತ್ತಿಮಬ್ಬೆ ಪ್ರಶಸ್ತಿ, 2001ರಲ್ಲಿ ಸ್ವಾತಂತ್ರ್ಯ ಯೋಧ ಎಂ.ಡಿ. ಅಧಿಕಾರಿ ಕೃತಿಗೆ ಗೋರೂರು ಸಾಹಿತ್ಯ ಪ್ರಶಸ್ತಿ, 2004ರಲ್ಲಿ ಕರ್ನಾಟಕ ಪ್ರತಿಭ ಅಕಾಡೆಮಿಯಿಂದ ಡಾ. ಸರ್ವೆಪಲ್ಲಿ ರಾಧಾಕೃಷ್ಣನ್ ಪ್ರಶಸ್ತಿ ನ್ಯೂ ಕೇಂಬ್ರಿಜ್ ವಿದ್ಯಾ ವಿದ್ಯಾ ಸಂಸ್ಥೆಯಿಂದ ಉತ್ತಮ ಶಿಕ್ಷಕ ಪ್ರಶಸ್ತಿ, 2012ರಲ್ಲಿ ಜೈಹಿಂದ್ ಅಕಾಡೆಮಿ ಎಜುಕೇಶನ್ ಟ್ರಸ್ಟ್‌ನಿಂದ ಉತ್ತಮ ಶಿಕ್ಷಕಿ ಪ್ರಶಸ್ತಿ, 2017ರಲ್ಲಿ ನವಚೈತನ್ಯ ಉದಯ ಪ್ರತಿಷ್ಠಾನದಿಂದ ಕರುನಾಡ ಸಾಧನ ಶ್ರೀ ಸಿರಿ ರತ್ನ ಪ್ರಶಸ್ತಿ,

ಇವರ ಬೆಳವಣಿಗೆಯಲ್ಲಿ ಇವರ ಪತಿ ಅಭಯ್ ಕುಮಾರ್ ಜೊತೆಗಿದ್ದವರು. ಅಭಯಕುಮಾರ್ -ಜಯಲಕ್ಷ್ಮೀ ದಂಪತಿಗೆ ನಿಖಿಲ್ ಬಿ.ಎ. ಹಾಗೂ ನಿಶ್ಚಲ್ ಬಿ.ಎ. ಎಂಬ ಪುತ್ರರಿದ್ದಾರೆ.