ಪಿ.ಎಲ್. ಪಾಟೀಲ ಅವರು ಗ್ರಾಮೀಣ ಪ್ರದೇಶದ ರೈತರು ಮತ್ತು ಸಾಮಾನ್ಯ ಜನರನ್ನು ಆರ್ಥಿಕವಾಗಿ ಸಶಕ್ತರನ್ನಾಗಿ ಮಾಡಲು ಸಹಕಾರಿ ತತ್ವಗಳನ್ನು ಪರಿಣಾಮಕಾರಿಯಾಗಿ ಜಾರಿಗೆ ತಂದರು.

ರೋಣ: ಸಹಕಾರಿ ರಂಗದ ಅನರ್ಘ್ಯ ರತ್ನ, ಸಹಕಾರ ಕ್ಷೇತ್ರದ ಧೀಮಂತ ನಾಯಕ ದಿ. ಪಿ.ಎಲ್. ಪಾಟೀಲ ಅವರ ಕೊಡುಗೆ, ದೂರದೃಷ್ಟಿ ಮತ್ತು ಸಾಧನೆಗಳು ಕರ್ನಾಟಕದ ಸಹಕಾರ ಚಳವಳಿಯ ಇತಿಹಾಸದಲ್ಲಿ ಸುವರ್ಣ ಅಕ್ಷರಗಳಲ್ಲಿ ಬರೆದಿಡುವಂಥದ್ದು ಎಂದು ಶಾಸಕ ಸಿ.ಸಿ. ಪಾಟೀಲ ಹೇಳಿದರು.

ಸೋಮವಾರ ತಾಲೂಕಿನ ಮಾಳವಾಡ ಗ್ರಾಮದಲ್ಲಿ ಪ್ರಾಥಮಿಕ‌ ಕೃಷಿ ಪತ್ತಿನ ಸಹಕಾರ ಸಂಘದ ನೂತನ ಕಟ್ಟಡ ಉದ್ಘಾಟನೆ, ಸಹಕಾರಿ ಧುರೀಣ ದಿ. ಪಿ.ಎಲ್. ಪಾಟೀಲ ಪುತ್ಥಳಿ ಅನಾವರಣ, ಸಮುದಾಯ ಭವನ ಭೂಮಿಪೂಜೆ, ₹70 ಲಕ್ಷ ವೆಚ್ಚದಲ್ಲಿ ಸಿಸಿ ರಸ್ತೆ ಮುಂತಾದ ಅಭಿವೃದ್ಧಿ ಕಾಮಗಾರಿಗಳಿಗೆ ಭೂಮಿಪೂಜೆ ನೆರವೇರಿಸಿ ಬಳಿಕ ಜರುಗಿದ ಕಾರ್ಯಕ್ರಮದಲ್ಲಿ ಮಾತನಾಡಿದರು.

ಪಿ.ಎಲ್. ಪಾಟೀಲ ಅವರು ಗ್ರಾಮೀಣ ಪ್ರದೇಶದ ರೈತರು ಮತ್ತು ಸಾಮಾನ್ಯ ಜನರನ್ನು ಆರ್ಥಿಕವಾಗಿ ಸಶಕ್ತರನ್ನಾಗಿ ಮಾಡಲು ಸಹಕಾರಿ ತತ್ವಗಳನ್ನು ಪರಿಣಾಮಕಾರಿಯಾಗಿ ಜಾರಿಗೆ ತಂದರು. ಸಹಕಾರಿ ರಂಗದಲ್ಲಿ ಪ್ರಾಮಾಣಿಕತೆ, ನಿಸ್ವಾರ್ಥ ಸೇವೆ ಮತ್ತು ಪಾರದರ್ಶಕ ಆಡಳಿತಕ್ಕೆ ಹೆಸರುವಾಸಿಯಾಗಿದ್ದರು. ಅವರ ವ್ಯಕ್ತಿತ್ವ, ಸಹಕಾರಿ ಕ್ಷೇತ್ರದ ಸೇವೆ ಅನುಪಮವಾಗಿದೆ ಎಂದರು.

2024- 25ನೇ ಸಾಲಿನ ಮಳೆ ಪರಿಹಾರ ಕಾರ್ಯಕ್ರಮ ಯೋಜನೆಯಡಿ ₹50 ಲಕ್ಷ ವೆಚ್ಚದಲ್ಲಿ ಸಿಸಿ ರಸ್ತೆ, ಆರೋಗ್ಯ ಇಲಾಖೆಯಿಂದ ₹65 ಲಕ್ಷ ವಚ್ಚದಲ್ಲಿ ಆಯುಷ್ಮಾನ ಆರೋಗ್ಯ ಕೇಂದ್ರ ಕಟ್ಟಡ ನಿರ್ಮಿಸಲಾಗುವುದು.₹1861 ಕೋಟಿ ಅನುದಾನ ತಂದಿದ್ದೇನೆ. ಆದರೆ ಈಗಿನ ಕಾಂಗ್ರೆಸ್ ನೇತೃತ್ವದ ಸರ್ಕಾರದಿಂದ ಕೇವಲ ₹25 ಕೋಟಿ ಅನುದಾನ ಬಿಡುಗಡೆಯಾಗಿದೆ. ಇದರಲ್ಲಿ ₹135 ಕೋಟಿ ಅನುದಾನ ಮಾಳವಾಡ ಗ್ರಾಮಕ್ಕೆ ಹಾಕಿದ್ದೇನೆ. 2007 ಮತ್ತು 2009ರಲ್ಲಿ ಭೀಕರ ಪ್ರವಾಹ ಬಂದೊದಗಿ ಜನಜೀವನ ಅಸ್ತವ್ಯಸ್ತವಾಗಿತ್ತು. ಆ ಸಂದರ್ಭದಲ್ಲಿ ಜನರ ಸಂಕಷ್ಟ ನೋಡಿ ಸ್ವತಃ ನಾನೇ ಕಣ್ಣಿರಾಕಿದ್ದೆ. ಆ ಸಂದರ್ಭದಲ್ಲಿ ಸರ್ಕಾರ ಪ್ರವಾಹ ಪೀಡಿತ ಗ್ರಾಮಗಳನ್ನು ಸ್ಥಳಾಂತರಗೊಳಿಸಿತು. ದಿ. ಪಿ.ಎಲ್. ಪಾಟೀಲ ಸಮುದಾಯ ಭವನಕ್ಕೆ ₹15 ಲಕ್ಷ ಅನುದಾನ ನೀಡಲಾಗುವುದು. ವಿಧಾನಪರಿಷತ್ ಸದಸ್ಯರು ₹5 ಲಕ್ಷ ಅನುದಾನ ನೀಡಿದ್ದಾರೆ. ಇನ್ನು ಹೆಚ್ಚಿನ ಅನುದಾನ ಆದ್ಯತೆ ನೀಡಲಾಗುವುದು ಎಂದರು.

ದಿ. ಪಿ.ಎಲ್. ಪಾಟೀಲ ಪುತ್ಥಳಿಯನ್ನು ಅನಾವರಣಗೊಳಿಸಿದ ಕುಂದಗೋಳ ಶಾಸಕ ಎಂ.ಆರ್. ಪಾಟೀಲ ಮಾತನಾಡಿ, ಸಹಕಾರಿ ರಂಗದ ಧೀಮಂತ ನಾಯಕ ದಿ. ಪಿ.ಎಲ್. ಪಾಟೀಲರು ಕೇವಲ ಹೆಸರಿಗೆ ಮಾತ್ರವಲ್ಲದೆ, ನೈಜವಾಗಿ ಸಹಕಾರಿ ಸಂಸ್ಥೆಗಳನ್ನು ಜನಸಾಮಾನ್ಯರ ಅಭಿವೃದ್ಧಿಗಾಗಿ ಬಳಸಿದರು ಎಂದರು

ವಿಧಾನಪರಿಷತ್ ಸದಸ್ಯ ಎಸ್.ವಿ. ಸಂಕನೂರ ಮಾತನಾಡಿ, ಸಮಾಜದ ಏಳ್ಗೆಗಾಗಿ ಬದುಕುವ ಜನ ಅತಿ ವಿರಳ.‌ ಇಂತಹ ಸಂದರ್ಭದಲ್ಲಿ ದಿ. ಪಿ.ಎಲ್. ಪಾಟೀಲರ ಸಾಮಾಜಿಕ ಸೇವೆ ಅನನ್ಯವಾಗಿದೆ ಎಂದರು.

ಸಾನ್ನಿಧ್ಯವನ್ನು ಭೇರನಹಟ್ಟಿಯ ಶಾಂತಲಿಂಗ ಸ್ವಾಮೀಜಿ ವಹಿಸಿದ್ದರು. ಕೆಸಿಸಿ ಬ್ಯಾಂಕ್ ನಿರ್ದೇಶಕ ಜಿ.ಪಿ. ಪಾಟೀಲ ಅಧ್ಯಕ್ಷತೆ ವಹಿಸಿದ್ದರು. ಕೆಸಿಸಿ ಬ್ಯಾಂಕ್ ಅಧ್ಯಕ್ಷ ಶಿವಕುಮಾರಗೌಡ ಪಾಟೀಲ, ರುದ್ರಗೌಡ ಪಾಟೀಲ, ಡಾ. ಬಿ.ಎಸ್. ಭಜಂತ್ರಿ, ಮಲ್ಲಸರ್ಜ ದೇಸಾಯಿ, ಎಲ್.ಎಸ್. ನೀಲಗುಂದ, ಮಲ್ಲಿಕಾರ್ಜುನಗೌಡ ಪಾಟೀಲ, ಸುರೇಶಗೌಡ ಪಾಟೀಲ, ಸೋಮಶೇಖರ ಚರೇದ, ಎಸ್.ಕೆ. ಪಾಟೀಲ, ಅಂದಪ್ಪ ಮಾಳವಾಡ ಮುಂತಾದವರು ಉಪಸ್ಥಿತರಿದ್ದರು. ಮಲ್ಲಯ್ಯ ಹಿರೆಮಠ ಸ್ವಾಗತಿಸಿದರು.