ಸಾರಾಂಶ
ಕನ್ನಡಪ್ರಭ ವಾರ್ತೆ, ಭದ್ರಾವತಿ
ನಗರಸಭೆ ವತಿಯಿಂದ ಈ ಬಾರಿ ಹಮ್ಮಿಕೊಳ್ಳಲಾಗಿರುವ ನಾಡಹಬ್ಬ ದಸರಾ ಆಚರಣೆಗೆ ಸಮಾಜ ಸೇವಕ ಪಿ.ವೆಂಕಟರಮಣ ಶೇಟ್ ಚಾಲನೆ ನೀಡಲಿದ್ದಾರೆ.ಪಿ.ವೆಂಕಟರಮಣ ಶೇಟ್ ಬಹುಮುಖ ವ್ಯಕ್ತಿತ್ವ ಹೊಂದಿದ್ದಾರೆ. ಬಹಳ ವರ್ಷಗಳಿಂದ ಧಾರ್ಮಿಕ, ಶಿಕ್ಷಣ, ಸಾಮಾಜಿಕ ಸೇವಾ ಕಾರ್ಯಗಳಲ್ಲಿ ತೆರೆಮರೆಯಲ್ಲಿದ್ದು ಸೇವೆ ಸಲ್ಲಿಸುತ್ತಿದ್ದಾರೆ. ಅವರ ಸೇವೆಯನ್ನು ನಗರಸಭೆ ಗುರುತಿಸಿರುವುದು ವಿಶೇಷವಾಗಿದೆ. ಈ ಸಂದರ್ಭ ಪತ್ರಿಕೆಯೊಂದಿಗೆ ದಸರಾ ಉದ್ಘಾಟನೆ ಅವಕಾಶದ ಸಂಭ್ರಮ ಹಂಚಿಕೊಂಡರು.
ನಾನು ಜೀವನೋಪಾಯಕ್ಕಾಗಿ ಭದ್ರಾವತಿ ನಗರಕ್ಕೆ ಆಗಮಿಸಿದ್ದು, ಇಲ್ಲಿಯೇ ನಾನು ಬದುಕು ಕಟ್ಟಿಕೊಳ್ಳುವ ಜೊತೆಗೆ ಹಲವು ಕ್ಷೇತ್ರಗಳಲ್ಲಿ ಕೈಲಾದಷ್ಟು ಸೇವೆ ಸಲ್ಲಿಸಿಕೊಂಡು ಬರುತ್ತಿದ್ದೇನೆ. ನನ್ನ ಅಳಿಲು ಸೇವೆಯನ್ನು ಗುರುತಿಸಿರುವುದಕ್ಕೆ ನಗರಸಭೆ ಆಡಳಿತಕ್ಕೆ ಕೃತಜ್ಞತೆ ಸಲ್ಲಿಸುತ್ತೇನೆ. ನಾಡದೇವತೆ ಶ್ರೀ ಚಾಮುಂಡೇಶ್ವರಿ ದೇವಿ ಭದ್ರಾವತಿ ಕ್ಷೇತ್ರದ ಜನತೆಗೆ ಒಳಿತು ಮಾಡಲಿ, ಯಾವುದೇ ಸಂಕಷ್ಟಗಳು ಎದುರಾಗದಿರಲಿ ಎಂದು ಪ್ರಾರ್ಥಿಸುತ್ತೇನೆ ಎಂದರು.ವೆಂಕಟರಮಣ ಶೇಟ್ ಅವರ ಪತ್ನಿ ಪ್ರೇಮ ಶೇಟ್ ಮಾತನಾಡಿ, ನನ್ನ ಪತಿಯವರು ಸಮಾಜದಲ್ಲಿ ಸಾಕಷ್ಟು ಸೇವೆಯನ್ನು ಸಲ್ಲಿಸಿದ್ದಾರೆ. ಅವರನ್ನು ನಾಡಹಬ್ಬ ಉದ್ಘಾಟನೆಗೆ ಆಹ್ವಾನಿಸಿರುವುದು ತುಂಬಾ ಸಂತೋಷವನ್ನುಂಟು ಮಾಡಿದೆ ಎಂದರು.
ವೆಂಕಟರಮಣ ಶೇಟ್ ಪರಿಚಯ:ಮೂಲತಃ ಉದ್ಯಮಿಯಾಗಿರುವ ವೆಂಕಟರಮಣ ಶೇಟ್ 1948ರಲ್ಲಿ ಹೊನ್ನಾವರ ತಾಲೂಕಿನ ಉಪ್ಪಾಣಿಯಲ್ಲಿ ಜನಿಸಿದವರು. ಪತ್ನಿ ಪ್ರೇಮ ಶೇಟ್, ನಾಲ್ವರು ಪುತ್ರಿಯರು, ಇಬ್ಬರು ಪುತ್ರರು ಇದ್ದಾರೆ. 1969ರಲ್ಲಿ ಭದ್ರಾವತಿಗೆ ಆಗಮಿಸಿ ಉದ್ಯಮ ಆರಂಭಿಸಿ, ಹಳೇನಗರದಲ್ಲಿಯೇ ವಾಸವಾಗಿದ್ದಾರೆ.
ಸಾಮಾಜಿಕ ಸೇವೆ: ನಗರದ ಲಯನ್ಸ್ ಕ್ಲಬ್ ಅಧ್ಯಕ್ಷ, ವಲಯ ಅಧ್ಯಕ್ಷ, ಜಿಲ್ಲಾ ಅಧ್ಯಕ್ಷ, ಪ್ರಾಂತೀಯ ಅಧ್ಯಕ್ಷರಾಗಿ ಸೇವೆ ಸಲ್ಲಿಸಿದ್ದಾರೆ. ನಗರದ ದೈವಜ್ಞ ಬ್ರಾಹ್ಮಣ ಸಂಘದ ಸಂಸ್ಥಾಪಕ ಅಧ್ಯಕ್ಷರಾಗಿ, ಅಖಿಲ ಕರ್ನಾಟಕ ದೈವಜ್ಞ ಬ್ರಾಹ್ಮಣ ಸಂಘದ ವಲಯ ಅಧ್ಯಕ್ಷರಾಗಿ ಸೇವೆ ಸಲ್ಲಿಸಿದ್ದಾರೆ.ಹಳೇನಗರದ ಸಂಚಿಯ ಹೊನ್ನಮ್ಮ ಸರ್ಕಾರಿ ಬಾಲಕಿಯರ ಕಾಲೇಜಿನಲ್ಲಿ ಸುಮಾರು 28 ವರ್ಷಗಳಿಂದ ಎಸ್‌ಬಿಸಿ/ ಸಿ.ಬಿ.ಸಿ ಸದಸ್ಯ, ಕಾರ್ಯಾಧ್ಯಕ್ಷರಾಗಿದ್ದರು. ಶಿವಮೊಗ್ಗ ಗಾಯತ್ರಿ ವಿದ್ಯಾಸಂಸ್ಥೆ ಆಡಳಿತ ಮಂಡಳಿ ಟ್ರಸ್ಟ್ ಅಧ್ಯಕ್ಷ, ವಿಶ್ವ ಹಿಂದೂ ಪರಿಷತ್ ತಾಲೂಕು ಅಧ್ಯಕ್ಷ, ಕಾಳಿಕಾಂಬ ಸೇವಾ ಸಮಿತಿ ಹಾಗೂ ಕರ್ನಾಟಕ ಜಾನಪದ ಪರಿಷತ್ ಗೌರವಾಧ್ಯಕ್ಷರಾಗಿದ್ದರು. ಪತಂಜಲಿ ಯೋಗ ಸಂಸ್ಥೆ ಅಧ್ಯಕ್ಷ, ಸೈಂಟ್ ಜೋಸೆಫ್ ಕಾಲೇಜಿನ ಉಪಾಧ್ಯಕ್ಷ ಹಾಗೂ ಸಂಧ್ಯಾದೀಪ ವೃದ್ಧಾಶ್ರಮದ ಟ್ರಸ್ಟಿ, ದೈವಜ್ಞ ಕ್ರೆಡಿಟ್ ಕೋ-ಆಪರೇಟಿವ್ ಸೊಸೈಟಿ ಉಪಾಧ್ಯಕ್ಷರಾಗಿ ಸೇವೆ ಸಲ್ಲಿಸಿದ್ದಾರೆ. ಅಲ್ಲದೇ ವಿವಿಧ ಸಂಘ-ಸಂಸ್ಥೆಗಳಲ್ಲಿ ಸಕ್ರಿಯವಾಗಿ ತೊಡಗಿಸಿಕೊಂಡಿದ್ದಾರೆ.
ದಸರಾ ಉದ್ಘಾಟನೆ:ದಸರಾ ಉದ್ಘಾಟನೆ ಅ.15ರಂದು ಬೆಳಗ್ಗೆ 10.15 ರಿಂದ 10.36 ರವರೆಗೆ ನಡೆಯಲಿದೆ. ಸಮಾಜ ಸೇವಕರಾದ ಪಿ.ವೆಂಕಟರಮಣ ಶೇಟ್ ಅವರು ನಗರಸಭೆ ಆವರಣದ ನಾಡದೇವತೆ ಶ್ರೀ ಚಾಮುಂಡೇಶ್ವರಿ ದೇವಿಗೆ ವಿಶೇಷ ಪೂಜೆಯೊಂದಿಗೆ ಪುಷ್ಪನಮನ ಸಲ್ಲಿಸಿ ಚಾಲನೆ ನೀಡಲಿದ್ದಾರೆ.
ಶಾಸಕ ಬಿ.ಕೆ. ಸಂಗಮೇಶ್ವರ್ ಅಧ್ಯಕ್ಷತೆ ವಹಿಸಲಿದ್ದಾರೆ. ನಗರಸಭೆ ಅಧ್ಯಕ್ಷೆ ಶೃತಿ ವಸಂತಕುಮಾರ್, ಉಪಾಧ್ಯಕ್ಷೆ ಸರ್ವಮಂಗಳ ಭೈರಪ್ಪ, ಸ್ಥಾಯಿ ಸಮಿತಿ ಅಧ್ಯಕ್ಷ ಕೆ. ಸುದೀಪ್‌ಕುಮಾರ್, ಪೌರಾಯುಕ್ತ ಎಚ್.ಎಂ. ಮನುಕುಮಾರ್ ಹಾಗೂ ಸದಸ್ಯರು, ಅಧಿಕಾರಿಗಳು, ಸಿಬ್ಬಂದಿ, ಪೌರಕಾರ್ಮಿಕರ ಸಂಘದ ಅಧ್ಯಕ್ಷರು, ಪದಾಧಿಕಾರಿಗಳು, ಪೌರಕಾರ್ಮಿಕರು, ವಿವಿಧ ಸಂಘ-ಸಂಸ್ಥೆಗಳ ಪ್ರಮುಖರು ಉಪಸ್ಥಿತರಿರುವರು.- - - -ಡಿ13ಬಿಡಿವಿಟಿ:
ಪಿ.ವೆಂಕಟರಮಣ ಶೇಟ್,ಪ್ರೇಮಾ ಶೇಟ್