ಕನ್ನಡಪ್ರಭ ವಾರ್ತೆ ಮೇಲುಕೋಟೆ

ಜಿಲ್ಲಾ ರೈತ ಸಂಘದ ಸಾರಥ್ಯದಲ್ಲಿ ಏಕರೂಪ ಸಮಾನ ಶಿಕ್ಷಣಕ್ಕಾಗಿ ಒತ್ತಾಯಿಸಿ ಜಿಲ್ಲಾದ್ಯಂತ ಹಮ್ಮಿಕೊಂಡಿರುವ ಐತಿಹಾಸಿಕ ಪಾದಯಾತ್ರೆ ‘ಸರ್ಕಾರಿ ಶಾಲೆ ನನ್ನವ್ವ’ ಮೇಲುಕೋಟೆಯಲ್ಲಿ ಸಂಚರಿಸಿತು.

ಏಪ್ರಿಲ್ 11ರಿಂದ ಆರಂಭವಾಗಿರುವ ಪಾದಯಾತ್ರೆ 1349 ಕಿಮೀ ಸಂಚರಿಸಿದ ಸಂತೋಷ್ ಮಂಡ್ಯಗೌಡ ಮುಂದಾಳತ್ವದ ತಂಡ ನಾಗಮಂಗಲ ತಾಲೂಕಿನಿಂದ ಮಧ್ಯಾಹ್ನ 2 ಗಂಟೆ ವೇಳೆಗೆ ಪಾಂಡವಪುರ ತಾಲೂಕಿನ ಬಳಿಘಟ್ಟ ಮೂಲಕ ಮೇಲುಕೋಟೆ ಪ್ರವೇಶಿಸಿತು.

ಮೇಲುಕೋಟೆ ಪ್ರಮುಖ ಬೀದಿಗಳಲ್ಲಿ ಜಾಥಾ ನಡೆಸಿದ ತಂಡ ಸರ್ಕಾರಿ ಶಾಲೆಗಳಿಗೆ ಮಕ್ಕಳನ್ನು ಸೇರಿಸಿ ಸರ್ಕಾರಿ ಶಾಲೆ ಬಲವರ್ಧನೆ ಮಾಡಿ ಎಂದು ಘೋಷಣೆ ಕೂಗಿದರು. ಪಾದಯಾತ್ರೆ ಮುಗಿದ ಬಳಿಕ ಜಕ್ಕನಹಳ್ಳಿ ತೆರಳಿ ವಾಸ್ತವ್ಯ ಹೂಡಿತು. ಪಾದಯಾತ್ರೆ ಜೂನ್ 6ರಂದು ಮುಕ್ತಾಯವಾಗಲಿದೆ. ಅಂತಿಮ ದಿನ ಪಂಜಿನ ಮೆರವಣಿಗೆ ನಡೆಯಲಿದೆ. ಮೇಲುಕೋಟೆ ಪೊಲೀಸರು ಭದ್ರತೆ ನೀಡಿದ್ದರು.

ಈ ವೇಳೆ ಸುದ್ದಿಗಾರರೊಂದಿಗೆ ಮಾತನಾಡಿದ ರೈತಸಂಘದ ಜಿಲ್ಲಾಧ್ಯಕ್ಷ ಇಂಡವಾಳು ಚಂದ್ರಶೇಖರ್, ಸಂವಿಧಾನದಲ್ಲಿ ಹೇಳಿರುವ ಸಮಾನತೆ ಹಾಗೂ ಸಮಾನ ಅವಕಾಶವನ್ನು ಏಕರೂಪ ಸಮಾನ ಶಿಕ್ಷಣ ನೀತಿಯನ್ನು ಜಾರಿಗೆ ತರುವ ಮೂಲಕ ಸಂವಿದಾನದ ಮೂಲ ತತ್ವವನ್ನು ಜಾರಿಗೆ ತರಬೇಕು ಎಂದರು.


ರಾಜ್ಯದ ಎಲ್ಲಾ ಶಾಲೆಗಳಲ್ಲಿ ದ್ವಿಭಾಷ ಶಿಕ್ಷಣ ಜಾರಿಯಾಗಬೇಕು. ಪ್ರತಿ ಗ್ರಾಮ ಪಂಚಾಯ್ತಿಯಲ್ಲಿ ಸಿಬಿಎಸ್‌ಸಿ ಮಾದರಿ ಗುಣ ಮಟ್ಟದ ಶಿಕ್ಷಣ ನೀಡುವ ಶಾಲೆ ಆರಂಭಿಸಿ ವಸತಿ ಸೌಕರ್ಯವನ್ನೂ ಕಲ್ಪಿಸಬೇಕು. ಶಾಲಾಭಿವೃದ್ಧಿ ಸಮಿತಿಗೆ ಅನುದಾನ ನೇರವಾಗಿ ನೀಡಬೇಕು. ಇದರಿಂದ ಪೋಷಕರೇ ತಮ್ಮೂರಿನ ಶಾಲೆಗಳನ್ನು ಅಭಿವೃದ್ಧಿಪಡಿಸುತ್ತಾರೆ ಎಂದರು.

ಪಾದಯಾತ್ರೆ ನೇತೃತ್ವ ವಹಿಸಿರುವ ರೈತಸಂಘದ ಯುವ ಘಟಕದ ಅಧ್ಯಕ್ಷ ಸಂತೋಷ್ ಮಂಡ್ಯಗೌಡ ಮಾತನಾಡಿ, ಪ್ರತಿ ಗ್ರಾಮದ ಶಾಲೆಗಳೂ ದೇವಾಲಯದಷ್ಟೇ ಮಹತ್ವವಾಗಿದೆ. ಮೇಲುಕೋಟೆ ಬಳಿಘಟ್ಟ ಸೇರಿದಂತೆ ಜಿಲ್ಲೆಯ ಬಹುತೇಕ ಗ್ರಾಮಗಳಲ್ಲಿ ಶಾಲೆಗಳು ಮುಚ್ಚಿವೆ ಎಂದರು.

ಈಗಿರುವ ಸರ್ಕಾರಿ ಶಾಲೆಗಳಲ್ಲಿ ಎಲ್ಲಾ ಮೂಲ ಸೌಕರ್ಯಗಳನ್ನು ಕಲ್ಪಿಸಿ ಮಕ್ಕಳ ದಾಖಲಾತಿ ಹೆಚ್ಚಿಸಲು ಗ್ರಾಪಂನಿಂದ ಮೇಲ್ಮಟ್ಟದವರೆಗಿನ ಅಧಿಕಾರಿಗಳು ಮತ್ತು ಜನಪ್ರತಿನಿಧಿಗಳು ಶ್ರಮವಹಿಸಬೇಕು ಪಾದಯಾತ್ರೆ ಸಾಗಿಬಂದ ದಾರಿಯುದ್ದಕ್ಕೂ ಅಳಿದುಳಿದಿರುವ ಸರ್ಕಾರಿ ಶಾಲೆಗಳ ಸ್ಥಿತಿ ಶೋಷನೀಯವಾಗಿದ್ದನ್ನು ಕಂಡಿದ್ದೇವೆ. ಸರ್ಕಾರ ಮತ್ತು ಶಿಕ್ಷಣ ಇಲಾಖಾಧಿಕಾರಿಗಳು ಸರ್ಕಾರಿ ಶಾಲೆಗಳ ಬಲವರ್ಧನೆಯತ್ತ ಗಮನ ನೀಡಬೇಕು ಎಂದು ಒತ್ತಾಯಿಸಿದರು.

ಮೇಲುಕೋಟೆ ಯದುಶೈಲಾ ಪ್ರೌಢಶಾಲೆ ಕಳೆದ ವರ್ಷದಿಂದ ಮುಚ್ಚಿ ಹೋಗಿದ್ದನ್ನು ಕಂಡ ತಂಡ ತೀವ್ರ ಅಸಮಾಧಾನ ವ್ಯಕ್ತಪಡಿಸಿದ ಪಾದಯಾತ್ರೆ ತಂಡ ಅವಿವೇಕಿ ಆಡಳಿತ ವ್ಯವಸ್ಥೆ ಹಾಗೂ ರಾಜಕಾರಣಿಯಿಂದಾಗಿ ಏಳು ದಶಕ ಇತಿಹಾಸವಿರುವ ಯದುಶೈಲಾ ಪ್ರೌಢಶಾಲೆ ಮುಚ್ಚಿಹೋಗಿರುವುದು ದೌರ್ಭಾಗ್ಯದ ಸಂಗತಿಯಾಗಿದೆ ಎಂದರು.

ಮೇಲುಕೋಟೆಯಲ್ಲಿ ಸರ್ಕಾರಿ ಪ್ರೌಢಶಾಲೆ ಆರಂಬಿಸುವ ಜೊತೆಗೆ ಇರುವ ಸರ್ಕಾರಿ ಶಾಲೆಗಳನ್ನಾದರೂ ಉಳಿಸಿಕೊಳ್ಳುವ ಕಾರ್ಯಮಾಡಬೇಕು ಎಂದು ಒತ್ತಾಯಿಸಿದರು.

ಪಾದಯಾತ್ರೆಯಲ್ಲಿ ರೈತ ಸಂಘದ ಜಿಲ್ಲಾ ಉಪಾಧ್ಯಕ್ಷ ಶಿವಳ್ಳಿ ಚಂದ್ರಶೇಖರ್, ರೈತ ಮತ್ತು ಕಾರ್ಮಿಕ ರಕ್ಷಣಾ ವೇದಿಕೆ ಅಧ್ಯಕ್ಷ ಮೇಲುಕೋಟೆ ಬೆಟ್ಟಸ್ವಾಮಿಗೌಡ, ಎಸ್ ಡಿಎಂಸಿ ಸಮಿತಿ ರಾಜ್ಯಾಧ್ಯಕ್ಷ ಅಮೃತಿ ಶಂಕರ್, ಮುಖಂಡರಾದ ತಗ್ಗಳ್ಳಿ ರವಿಚಂದ್ರ, ಹುಬ್ಬಳ್ಳಿ ದನುಷ್‌ಗೌಡ, ತೇಜಸ್, ಕೃಷ್ಣೇಗೌಡ, ಮೇಲುಕೋಟೆ ಶಾಲೆ ಎಸ್.ಡಿ.ಎಂ.ಸಿ ಅಧ್ಯಕ್ಷ ಮಹೇಶ್ ಸೇರಿದಂತೆ ಹಲವರು ಭಾಗಿಯಾಗಿದ್ದರು.