ಸಿಎಂ ಜನಪ್ರಿಯತೆಗೆ ಹೆದರಿ ಪಾದಯಾತ್ರೆ ಷಡ್ಯಂತ್ರ: ಬಲ್ಕಿಸ್ ಬಾನು

| Published : Aug 06 2024, 12:35 AM IST

ಸಿಎಂ ಜನಪ್ರಿಯತೆಗೆ ಹೆದರಿ ಪಾದಯಾತ್ರೆ ಷಡ್ಯಂತ್ರ: ಬಲ್ಕಿಸ್ ಬಾನು
Share this Article
  • FB
  • TW
  • Linkdin
  • Email

ಸಾರಾಂಶ

ಶಿವಮೊಗ್ಗದ ಶಿವಪ್ಪನಾಯಕ ವೃತ್ತದಲ್ಲಿ ಸೋಮವಾರ ಬಿಜೆಪಿ, ಜೆಡಿಎಸ್‌ ಪಕ್ಷಗಳ ವಿರುದ್ಧ ಕಾಂಗ್ರೆಸ್‌ ಕಾರ್ಯಕರ್ತರು ಟೈಯರ್‌ಗೆ ಬೆಂಕಿ ಹಚ್ಚಿ ಪ್ರತಿಭಟನೆ ನಡೆಸಿದರು.

ಕನ್ನಡಪ್ರಭ ವಾರ್ತೆ ಶಿವಮೊಗ್ಗ

ಸಿಎಂ ಸಿದ್ದರಾಮಯ್ಯ ವಿರುದ್ಧ ಕುತಂತ್ರ ನಡೆಸುತ್ತಿರುವ ಬಿಜೆಪಿ, ಜೆಡಿಎಸ್‌ ಪಕ್ಷಗಳ ವಿರುದ್ಧ ಶಿವಮೊಗ್ಗದ ಶಿವಪ್ಪ ನಾಯಕ ವೃತ್ತದಲ್ಲಿ ಸೋಮವಾರ ಕಾಂಗ್ರೆಸ್‌ ಕಾರ್ಯಕರ್ತರು ಟೈಯರ್‌ಗೆ ಬೆಂಕಿ ಹಚ್ಚಿ ಪ್ರತಿಭಟನೆ ನಡೆಸಿದರು.

ಪ್ರತಿಭಟನೆಯಲ್ಲಿ ವಿಧಾನ ಪರಿಷತ್ ಸದಸ್ಯೆ ಬಲ್ಕಿಸ್ ಬಾನು ಮಾತನಾಡಿ, ಮುಖ್ಯಮಂತ್ರಿ ಸಿದ್ದರಾಮಯ್ಯನವರ ಜನಪ್ರಿಯತೆಗೆ ಹೆದರಿ ಬಿಜೆಪಿ ಜೆಡಿಎಸ್ ಮೈತ್ರಿಕೂಟ ಅವರನ್ನು ಅಧಿಕಾರದಿಂದ ಕೆಳಗಿಸಲು ಷಡ್ಯಂತ್ರ ಮಾಡಿದೆ ಎಂದು ಆಕ್ರೋಶ ವ್ಯಕ್ತಪಡಿಸಿದರು.

ನಗರದ ಶಿವಪ್ಪ ನಾಯಕ ವೃತ್ತದಲ್ಲಿ ಕರ್ನಾಟಕ ಶೋಷಿತ ವರ್ಗಗಳ ಮಹಾಒಕ್ಕೂಟದ ವತಿಯಿಂದ ಹಮ್ಮಿಕೊಂಡಿದ್ದ ಪ್ರತಿಭಟನಾ ಸಭೆಯಲ್ಲಿ ಮಾತನಾಡಿದ ಅವರು, ಸಿದ್ದರಾಮಯ್ಯನವರ ಮೇಲೆ ಸುಳ್ಳು ಆರೋಪ ಹೊರಿಸಲಾಗುತ್ತಿದೆ. ಈಗಾಗಲೇ ವಾಲ್ಮೀಕಿ ನಿಗಮದ ಹಗರಣ ತನಿಖೆಯ ಹಂತದಲ್ಲಿದೆ. ತಪ್ಪಿತಸ್ತರಿಗೆ ಶಿಕ್ಷೆಯಾಗಲಿದೆ. ಆದರೆ, ಸಿದ್ದರಾಮಯ್ಯನವರ ಆಡಳಿತಕ್ಕೆ ಹೆದರಿ, ಬಿಜೆಪಿಯವರು ಕುತಂತ್ರ ಮಾಡುತ್ತಿದ್ದಾರೆ ಎಂದು ಆರೋಪಿಸಿದರು.

ಮೊದಲು ಬಿಜೆಪಿಯ ಮಾಜಿ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಹಾಗೂ ಅವರ ಪುತ್ರರ ಅಕ್ರಮ ಆಸ್ತಿಗಳ ಬಗ್ಗೆ ತನಿಖೆಯಾಗಲಿ. ರೈಸ್‌ಮಿಲ್ ಗುಮಾಸ್ತನಾದ ಯಡಿಯೂರಪ್ಪನವರ ಆಸ್ತಿ ಈಗ ಕೋಟ್ಯಾಂತರ ಆಗಿದೆ. ಅದು ದಲಿತರ ಹಿಂದುಳಿದವರ ಮತ್ತು ರಾಜ್ಯದ ದುರ್ಬಲ ವರ್ಗದವರ ಹಣ ಕಿಡಿಕಾರಿದರು.

ರಾಜ್ಯಪಾಲರು ಕೇಂದ್ರ ಸರ್ಕಾರದ ಕೊಯ್ಗೊಂಬೆಯಾಗಿದ್ದು, ಮುಖ್ಯಮಂತ್ರಿಯನ್ನು ಇಳಿಸಲು ಹೊರಟರೆ ಪರಿಣಾಮ ನೆಟ್ಟಗಿರಲ್ಲ ಎಂದು ಸವಾಲು ಹಾಕಿದರು.

ಹಿಂದುಳಿದ ವರ್ಗಗಳ ನಾಯಕ ಕಲಗೋಡು ರತ್ನಾಕರ್ ಮಾತನಾಡಿ, ಸಿದ್ದರಾಮಯ್ಯನವರನ್ನು ಮುಟ್ಟಲು ಹೋದರೆ ರಾಜ್ಯದ ಜನ ತಕ್ಕ ಪಾಠ ಕಲಿಸುತ್ತಾರೆ ಎಂದರು

ಸೂಡಾ ಅಧ್ಯಕ್ಷ ಎಚ್‍.ಎಸ್.ಸುಂದರೇಶ್ ಮಾತನಾಡಿ, ಶಿವಮೊಗ್ಗದಲ್ಲೇ ಬಿಜೆಪಿಯ ಭ್ರಷ್ಟಾಚಾರ ತಾಂಡವ ಆಡುತ್ತಿದೆ. ಆರ್‌ಟಿಜಿಎಸ್ ಮೂಲಕ ಲಂಚ ಪಡೆದ ಬಿಜೆಪಿಗೆ ಕಾಂಗ್ರೆಸ್ ನಾಯಕರ ಮೇಲೆ ಭ್ರಷ್ಟಾಚಾರದ ಆರೋಪವರಿಸುವ ಯಾವ ನೈತಿಕತೆಯೂ ಇಲ್ಲ ಎಂದರು.

ಐಟಿ ಮತ್ತು ಇಡಿ ದಾಳಿ ನಡೆಸಿ ಕಾಂಗ್ರೆಸ್ ನಾಯಕರನ್ನು ಬಗ್ಗು ಬಡೆಯಲು ಯತ್ನಿಸಲಾಗುತ್ತಿದೆ. ಕೇಂದ್ರ ಸರ್ಕಾರದ ವಿರುದ್ಧವು ಕೂಡ ದೇಶಾದ್ಯಂತ ಪಾದಯಾತ್ರೆ ಹಮ್ಮಿಕೊಳ್ಳಲಾಗುವುದು ಎಂದು ಎಚ್ಚರಿಕೆ ನೀಡಿದರು.

ಆರ್.ಎಂ.ಮಂಜುನಾಥ್ ಗೌಡ ಮಾತನಾಡಿ, ಬಿಜೆಪಿಯವರ ಪಾಪದ ಕೃತ್ಯಗಳು ಶೀಘ್ರದಲ್ಲೇ ಬಯಲಾಗಲಿದೆ. ಬಿಜೆಪಿಯವರಿಗೆ ಜನತಂತ್ರ ವ್ಯವಸ್ಥೆಯಲ್ಲಿ ನಂಬಿಕೆ ಇಲ್ಲ. ಸಿದ್ದರಾಮಯ್ಯ ಮಾಸ್ ಲೀಡರ್ ಆಗಿದ್ದು, ಅವರ ವಿರುದ್ಧದ ಯಾವುದೇ ಕುತಂತ್ರಕ್ಕೆ ಫಲ ನೀಡುವುದಿಲ್ಲ ಬದಲಾಗಿ ಬಿಜೆಪಿ ಮತ್ತು ಜೆಡಿಎಸ್ ನಾಯಕರ ಬಣ್ಣ ಬಯಲಾಗಲಿದೆ ಎಂದರು.

ಈ ಸಂದರ್ಭದಲ್ಲಿ ಜಿಲ್ಲಾಧ್ಯಕ್ಷ ಆರ್.ಪ್ರಸನ್ನ ಕುಮಾರ್, ಪ್ರಮುಖರಾದ ಎಸ್.ಕೆ.ಮರಿಯಪ್ಪ. ಕಲೀಮ್ ಪಾಷಾ ಅಲ್ತಾಫ್ ಪರ್ವೀಜ್ ಗಿರೀಶ್ ಶರತ್ ಮರಿಯಪ್ಪ. ತಂಗರಾಜ್. ಚಾವಡಿ ಲೋಕೇಶ್. ಚಂದ್ರ ಭೂಪಾಲ್ ,ನಾಜೀಮ ಚಿನ್ನಪ್ಪ ದೇವಿ ಕುಮಾರ್ ವಿಶ್ವನಾಥ್ ಕಾಶಿ ಡಾ.ಶ್ರೀನಿವಾಸ ಕರಿಯಣ್ಣ, ಜಿ.ಡಿ.ಮಂಜುನಾಥ್. ಪಾಲಾಕ್ಷಿ. ರಂಗನಾಥ್ ರೇಖಾ ರಂಗನಾಥ್. ನವಲೆ ಮಂಜುನಾಥ್ ನಾಗರಾಜ್ ಕಂಕಾರಿ, ಸ್ಟೆಲ್ಲಾ ಮಾರ್ಟಿನ್ ಮೊದಲಾದವರಿದ್ದರು.