ಬಡವ-ಶ್ರೀಮಂತ, ಮೇಲ್ವರ್ಗ-ಕೆಳವರ್ಗ ಎಂಬ ಭೇದವನರಿಯದೇ ದುರ್ಗುಣ ಅಳಿದು ಸದ್ಗುಣ ಬೆಳೆಸಿದ ಹುಕ್ಕೇರಿಮಠದ ಸದಾಶಿವ ಸ್ವಾಮಿಗಳ ಪಾದಯಾತ್ರೆ ಭಕ್ತರ ಮನ ಸೆಳೆದು ಸದ್ಭಾವನೆ ಮೂಡಿಸಿದೆ ಎಂದು ಹುಬ್ಬಳ್ಳಿ ಮೂರುಸಾವಿರ ಮಠದ ಜಗದ್ಗುರು ಡಾ. ಗುರುಸಿದ್ಧರಾಜಯೋಗೀಂದ್ರ ಮಹಾಸ್ವಾಮೀಜಿ ಪ್ರಶಂಸೆ ವ್ಯಕ್ತಪಡಿಸಿದರು.

ಹಾವೇರಿ: ಬಡವ-ಶ್ರೀಮಂತ, ಮೇಲ್ವರ್ಗ-ಕೆಳವರ್ಗ ಎಂಬ ಭೇದವನರಿಯದೇ ದುರ್ಗುಣ ಅಳಿದು ಸದ್ಗುಣ ಬೆಳೆಸಿದ ಹುಕ್ಕೇರಿಮಠದ ಸದಾಶಿವ ಸ್ವಾಮಿಗಳ ಪಾದಯಾತ್ರೆ ಭಕ್ತರ ಮನ ಸೆಳೆದು ಸದ್ಭಾವನೆ ಮೂಡಿಸಿದೆ ಎಂದು ಹುಬ್ಬಳ್ಳಿ ಮೂರುಸಾವಿರ ಮಠದ ಜಗದ್ಗುರು ಡಾ. ಗುರುಸಿದ್ಧರಾಜಯೋಗೀಂದ್ರ ಮಹಾಸ್ವಾಮೀಜಿ ಪ್ರಶಂಸೆ ವ್ಯಕ್ತಪಡಿಸಿದರು.ವಿದ್ಯಾ ನಗರ ಪಶ್ಚಿಮದಲ್ಲಿರುವ ಪ್ರಕೃತಿ ಉದ್ಯಾನದಲ್ಲಿ ನಡೆದ ಪಾದಯಾತ್ರೆ ಸಮಾರೋಪ ಸಮಾರಂಭದಲ್ಲಿ ಸಾನ್ನಿಧ್ಯ ವಹಿಸಿ ಮಾತನಾಡಿದ ಅವರು, ನಮ್ಮ ನಾಡಿನ ಯಾವುದೇ ಭಾಗದಲ್ಲಿ ಹೋದರೂ ಸದಾಶಿವ ಸ್ವಾಮೀಜಿ ಭಕ್ತಿಯ ಪ್ರವಾಹ ಸೃಷ್ಟಿಸುವರು. ಅವರ ಗುಣವೇ ಶಿವಸ್ವರೂಪಿ. ತಮ್ಮ ಪ್ರೇರಕ ಶಕ್ತಿಯ ಪರಿಣಾಮ ಭಕ್ತರ ಮನೆ-ಮನಗಳಿಗೆ ಆಗಮಿಸಿದ್ದಾರೆ. ನಮ್ಮ ಪಾಪವನ್ನು ನಾವೇ ಕಳೆದುಕೊಳ್ಳಬೇಕು. ಆದರೆ ಕೆಟ್ಟ ಹವ್ಯಾಸಗಳಿಗೆ ಅಂಟಿಕೊಂಡಿರುವ ಜನರಿಂದ ದುಶ್ಚಟ ಭಿಕ್ಷೆ ಬೇಡುತ್ತಿರುವರು. ಜೊತೆಗೆ ಪರಮಾತ್ಮನ ಬಳಿ ಸದಾಚಾರ ನೀಡುವಂತೆ ಕೇಳುತ್ತಿರುವರು. ಈ ಐತಿಹಾಸಿಕ ಗಳಿಗೆಗೆ ತಮ್ಮ ಆಪ್ತ ಗೆಳೆಯರನ್ನು ಮತ್ತು ಶಿಷ್ಯ ಸಮೂಹವನ್ನು ತಮ್ಮೊಂದಿಗೆ ಕರೆದುಕೊಂಡು ಬಂದಿರುವರು. ಶಿವಬಸವ ಹಾಗೂ ಶಿವಲಿಂಗ ಸ್ವಾಮೀಜಿಯವರ ಕೃಪೆಯಿಂದ ಇದು ಸಾಧ್ಯ ಎಂದು ತೋರಿಸಿಕೊಟ್ಟಿರುವರು ಎಂದರು.ಹುಕ್ಕೇರಿಮಠದ ಸದಾಶಿವ ಸ್ವಾಮೀಜಿ ಮಾತನಾಡಿ, 63 ಮಠಗಳಿರುವ ಹಾವೇರಿಗೆ ಮರಿ ಕಲ್ಯಾಣ ಎಂಬ ಪ್ರತೀತಿ ಇದೆ. ಸೌಹಾರ್ದ ಹಾಗೂ ಸದ್ಭಾವದಿಂದ ಕೂಡಿದ ಈ ಪಾದಯಾತ್ರೆಯ ಉದ್ದೇಶವೇ ಮನಸ್ಸುಗಳನ್ನು ಕೂಡಿಸುವುದು. ಜೊತೆಗೆ ದುಶ್ಚಟಗಳಿಂದ ಜನರನ್ನು ದೂರ ಮಾಡಿ ಸಾಮಾಜಿಕ ಮನ್ನಣೆ ಪಡೆಯುವಂತೆ ಮಾಡುವುದು. ಈ ಸತ್ಕಾರ್ಯಕ್ಕೆ ವಿಶಿಷ್ಟ ಕಾರ್ಯಕ್ರಮ ಆಯೋಜಿಸಿದ ಶ್ರೇಯಸ್ಸು ಶ್ರೀಮಠದ ಭಕ್ತರಿಗೆ ಸಲ್ಲುತ್ತದೆ. ಭಾವನಾತ್ಮಕ ಬೆಸುಗೆ ಬೆಸೆದ ಈ ಪಾದಯಾತ್ರೆ ಐತಿಹಾಸಿಕ ಗಳಿಗೆಗೆ ಸಾಕ್ಷಿಯಾಗಿದೆ ಎಂದರು. ಶೇಗುಣಸಿ ವಿರಕ್ತಮಠದ ಡಾ.ಮಹಾಂತಪ್ರಭು ಸ್ವಾಮೀಜಿ ಮಾತನಾಡಿ, ಒಲೆ ಮೇಲೆ ಮಾಡಿದ ಅಡುಗೆ ನಾಲ್ಕು ತಾಸಿನವರೆಗೆ ಇರುತ್ತದೆ. ತಲೆ ಮೇಲೆ ಮಾಡಿದ ಅಡುಗೆ ಜೀವನಪೂರ್ತಿ ಇರುತ್ತದೆ ಎಂಬ ಮಾತಿದೆ. ಅಂತೆಯೇ ಇದೇ ತಿಂಗಳು 27ರಂದು ನಡೆಯುವ ವಚನ ಪಠಣದಲ್ಲಿ 51 ಸಾವಿರ ಜನರು ಏಕಕಾಲಕ್ಕೆ ಹುಕ್ಕೇರಿಮಠದಿಂದ ಜಿಲ್ಲಾ ಕ್ರೀಡಾಂಗಣದವರೆಗೂ ಸಾಗಿ ಬರುವರು. ತಾವೆಲ್ಲರೂ ಈ ಅಭೂತಪೂರ್ವ ಕಾರ್ಯಕ್ರಮದಲ್ಲಿ ಭಾಗವಹಿಸುವ ಮೂಲಕ ಹಾವೇರಿ ಭಕ್ತರ ಭಕ್ತಿ ಬತ್ತುವುದಿಲ್ಲ ಎಂದು ಪುಷ್ಟೀಕರಿಸಬೇಕು ಎಂದರು.ಹುಕ್ಕೇರಿಮಠದ ಸದಾಶಿವ ಸ್ವಾಮೀಜಿಯವರ ನೇತೃತ್ವದಲ್ಲಿ ದುಶ್ಚಟಗಳ ಭಿಕ್ಷೆ-ಸದ್ಗುಣಗಳ ದೀಕ್ಷೆ ಜನ ಜಾಗೃತಿ ಯಾತ್ರೆ ಹೆಸರಿನಡಿ ನ.6ರಿಂದ ಬ್ಯಾಡಗಿ ತಾಲೂಕಿನ ಮಲ್ಲೂರು ಗ್ರಾಮದಿಂದ ಆರಂಭವಾದ ಪಾದಯಾತ್ರೆ ಸೋಮವಾರ ಸಮಾರೋಪಗೊಂಡಿತು. 45 ದಿನಗಳ ಕಾಲ ಹಾವೇರಿ ತಾಲೂಕಿನ 70 ಹಳ್ಳಿಗಳಲ್ಲಿ ಹಾಗೂ ಹಾವೇರಿ ನಗರದಲ್ಲಿ ಸಂಚರಿಸಿತು. ಇದರ ಸ್ಮರಣಾರ್ಥ ವಿದ್ಯಾ ನಗರ ಪಶ್ಚಿಮದಲ್ಲಿನ ಪ್ರಕೃತಿ ಉದ್ಯಾನದಲ್ಲಿ ಆಲದ ಹಾಗೂ ಬೇವಿನಮರಗಳ ಸಸಿ ನೆಡಲಾಯಿತು. ಇದೇ ಸಂದರ್ಭದಲ್ಲಿ ವೇದಿಕೆಯಲ್ಲಿದ್ದ ಶ್ರೀಗಳ ಪಾದಪೂಜೆ ನೆರವೇರಿಸಲಾಯಿತು.ನಾಡಿನ ವಿವಿಧ ಭಾಗದ ಶ್ರೀಗಳೂ ಸಹಿತ ಈ ಪಾದಯಾತ್ರೆಯಲ್ಲಿ ಪಾಲ್ಗೊಂಡಿದ್ದರಿಂದ ಭಕ್ತರು ತಮ್ಮ ವಾರ್ಡ್ ಹಾಗೂ ಓಣಿಗಳನ್ನು ತಳಿರು ತೋರಣಗಳಿಂದ, ರಂಗೋಲಿ ಚಿತ್ತಾರಗಳಿಂದ ಶೃಂಗರಿಸಿದ್ದರು. ಸುಮಂಗಲೆಯರು ಕುಂಭ ಹೊತ್ತು ಶ್ರೀಗಳೊಂದಿಗೆ ಹೆಜ್ಜೆ ಹಾಕಿದ್ದರು.ಶಿವಾಜಿ ನಗರದ ವಡ್ಡಮ್ಮ ದೇಗುಲದಿಂದ ಆರಂಭವಾದ ಪಾದಯಾತ್ರೆ ವಿದ್ಯಾ ನಗರ ಪಶ್ಚಿಮದಲ್ಲಿನ ವಿವಿಧ ವಾರ್ಡುಗಳಿಗೆ ಸಂಚರಿಸಿತು. ಈ ವೇಳೆ ಬಿಜೆಪಿ ಜಿಲ್ಲಾಧ್ಯಕ್ಷ ವಿರೂಪಾಕ್ಷಪ್ಪ ಬಳ್ಳಾರಿ, ನಗರಸಭೆ ಸದಸ್ಯೆ ಚನ್ನಮ್ಮ ಬ್ಯಾಡಗಿ, ವಾರ್ಡ್ನ ರಾಘವೇಂದ್ರ ಬಾಸೂರ, ನಿಂಗಣ್ಣ ಪೂಜಾರ, ಗುರುರಾಜ ಕಲಾಲ, ಸೌಭಾಗ್ಯ ಹಿರೇಮಠ, ಲಲಿತಾ ಗುಂಡೇನಹಳ್ಳಿ, ರೋಹಿಣಿ ಪಾಟೀಲ, ಮುಖೇಶ ಮುಂದಿನಮನಿ, ಜಗದೀಶ ಕನವಳ್ಳಿ, ದಾನೇಶಪ್ಪ ಕೆಂಗೊಂಡ, ಶಿವಬಸು ವನಹಳ್ಳಿ ಪಾಲ್ಗೊಂಡಿದ್ದರು. ಮಲ್ಲಿಕಾರ್ಜುನ ಹಾವೇರಿ ಸ್ವಾಗತಿಸಿದರು. ವೀರಬಸವ ದೇವರು ಕಾರ್ಯಕ್ರಮ ನಿರ್ವಹಿಸಿದರು.ನಮ್ಮ ದೇಶದಲ್ಲಿ ಧರ್ಮ ರಕ್ಷಣೆಗೆ, ಸ್ವಾತಂತ್ರ್ಯ ಹೋರಾಟಕ್ಕೆ ಪಾದಯಾತ್ರೆ ಆಗಿರುವುದನ್ನು ಕೇಳಿದ್ದೆವು. ಆದರೆ ಜನರಲ್ಲಿನ ದುಶ್ಚಟಗಳ ಭಿಕ್ಷೆಗೆ ಪಾದಯಾತ್ರೆ ಕೈಗೊಂಡು ಗಮನ ಸೆಳೆದಿರುವ ಹುಕ್ಕೇರಿಮಠದ ಸದಾಶಿವ ಸ್ವಾಮೀಜಿಯವರ ನಡೆ ಐತಿಹಾಸಿಕವಾದದ್ದು. ಇವರಿಗೆ ಕೈಜೋಡಿಸಿದ ನಾಡಿನ ವಿವಿಧ ಮಠಾಧೀಶರು ಮತ್ತು ಶ್ರೀಮಠದ ಭಕ್ತರು ಅಭಿನಂದನಾರ್ಹರು ಎಂದು ಹುಬ್ಬಳ್ಳಿ ಮೂರುಸಾವಿರ ಮಠದ ಜಗದ್ಗುರು ಡಾ.ಗುರುಸಿದ್ಧರಾಜಯೋಗೀಂದ್ರ ಮಹಾಸ್ವಾಮೀಜಿ ಹೇಳಿದರು.ಡಿ.24ರಂದು ಶ್ರೀಮಠದ ಎದುರು ಬೀಡಿ, ಸಿಗರೇಟ್ ಹಾಗೂ ಸಾರಾಯಿ ಪ್ಯಾಕೆಟ್‌ಗಳನ್ನು ಸುಡುವ ಮೂಲಕ ಚಟ ಹೋಮ ಮಾಡಲಾಗುವುದು. ದುರ್ಗುಣ ಸುಟ್ಟು ಸದ್ಗುಣ ಬೆಳೆಸುವುದೇ ಈ ಹೋಮದ ಉದ್ದೇಶ. ವ್ಯಸನಮುಕ್ತ ಸಮಾಜ ನಿರ್ಮಿಸುವುದೇ ನಮ್ಮ ಒಟ್ಟಾರೆ ಆಶಯ ಎಂದು ಹಾವೇರಿ ಹುಕ್ಕೇರಿಮಠದ ಸದಾಶಿವ ಸ್ವಾಮೀಜಿ ಹೇಳಿದರು.