ಕಸ್ತೂರಿರಂಗನ್ ವರದಿ ಜಾರಿ ಖಂಡಿಸಿ ಸೆ. 9 ಹಾಗೂ 10 ರಂದು ತಾಲೂಕಿನ ಗಡಿಭಾಗ ಕಲ್ಮನೆಯಿಂದ ಶಿಕಾರಿಪುರ ಪಟ್ಟಣದವರೆಗೆ ಯುವ ಕಾಂಗ್ರೆಸ್, ಮಹಿಳಾ ಕಾಂಗ್ರೆಸ್, ಎನ್ ಎಸ್ ಯು ಐ, ನಗರ ಕಾಂಗ್ರೆಸ್, ಗ್ರಾಮಾಂತರ ಕಾಂಗ್ರೆಸ್, ಅಲ್ಪಸಂಖ್ಯಾತರ ಘಟಕದ ವತಿಯಿಂದ ಪಾದಯಾತ್ರೆಯನ್ನು ಹಮ್ಮಿಕೊಂಡಿರುವುದಾಗಿ ಕಾಂಗ್ರೆಸ್ ಮುಖಂಡ ಎನ್.ವಿ. ಈರೇಶ್ ತಿಳಿಸಿದರು.
ಕನ್ನಡಪ್ರಭ ವಾರ್ತೆ ಶಿಕಾರಿಪುರ
ಕಸ್ತೂರಿರಂಗನ್ ವರದಿ ಜಾರಿ ಖಂಡಿಸಿ ಸೆ. 9 ಹಾಗೂ 10 ರಂದು ತಾಲೂಕಿನ ಗಡಿಭಾಗ ಕಲ್ಮನೆಯಿಂದ ಶಿಕಾರಿಪುರ ಪಟ್ಟಣದವರೆಗೆ ಯುವ ಕಾಂಗ್ರೆಸ್, ಮಹಿಳಾ ಕಾಂಗ್ರೆಸ್, ಎನ್ ಎಸ್ ಯು ಐ, ನಗರ ಕಾಂಗ್ರೆಸ್, ಗ್ರಾಮಾಂತರ ಕಾಂಗ್ರೆಸ್, ಅಲ್ಪಸಂಖ್ಯಾತರ ಘಟಕದ ವತಿಯಿಂದ ಪಾದಯಾತ್ರೆಯನ್ನು ಹಮ್ಮಿಕೊಂಡಿರುವುದಾಗಿ ಕಾಂಗ್ರೆಸ್ ಮುಖಂಡ ಎನ್.ವಿ. ಈರೇಶ್ ತಿಳಿಸಿದರು.ಬುಧವಾರ ಪಟ್ಟಣದಲ್ಲಿ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಕಸ್ತೂರಿ ರಂಗನ್ ವರದಿಯು ಸಾಗುವಳಿದಾರರ ಸಹಿತ ಗಡಿ ಭಾಗದ ಹಲವು ಗ್ರಾಮಸ್ಥರಿಗೆ ಕಂಟಕವಾಗಿದ್ದು, ವರದಿ ಅನುಷ್ಠಾನದಿಂದ ಹಲವರು ಜಮೀನು ಮನೆಮಠ ಕಳೆದುಕೊಳ್ಳಬೇಕಾಗುತ್ತದೆ. ಅವೈಜ್ಞಾನಿಕವಾದ ವರದಿಯನ್ನು ಖಂಡಿಸಿ ಹಾಗೂ ತಾಲೂಕಿನಲ್ಲಿ ಕಳೆದ ನಾಲ್ಕು ಐದು ದಶಕದಿಂದ ಶಾಸಕರಾಗಿ ಸಾಗುವಳಿದಾರರಿಗೆ ಹಕ್ಕು ಪತ್ರವನ್ನು ನೀಡದೆ ದ್ರೋಹವೆಸಗಿದ ಸ್ಥಳೀಯ ಶಾಸಕರ ವರ್ತನೆಯನ್ನು ಖಂಡಿಸಿ ಹಾಗೂ ಭ್ರಷ್ಟಾಚಾರದಲ್ಲಿ ಖುದ್ದು ಸಿಲುಕಿಸಿ ಜೈಲುವಾಸ ಅನುಭವಿಸಿ ಇದೀಗ ವಿನಾಕಾರಣ ಪಾದಯಾತ್ರೆಯನ್ನು ಹಮ್ಮಿಕೊಂಡಿರುವ ಕ್ಷೇತ್ರದ ಶಾಸಕರ ನೈತಿಕತೆಯನ್ನು ಪ್ರಶ್ನಿಸಿ ಇದೆ 9 ಹಾಗೂ 10 ರಂದು ತಾಲೂಕಿನ ಗಡಿ ಭಾಗವಾದ ಕಲ್ಮನೆಯಿಂದ ಹಿತ್ತಲ ಮೂಲಕ ಈಸೂರಿನಲ್ಲಿ ವಾಸ್ತವ್ಯದ ನಂತರ ಹತ್ತರಂದು ಶಿಕಾರಿಪುರ ಪಟ್ಟಣಕ್ಕೆ ಪಾದಯಾತ್ರೆ ಮೂಲಕ ತೆರಳಿ ಬೃಹತ್ ಪ್ರತಿಭಟನೆಯನ್ನು ಹಮ್ಮಿಕೊಳ್ಳಲಾಗುವುದು ಎಂದು ತಿಳಿಸಿದರು.
ಕೆಡಿಪಿ ಸದಸ್ಯ ರಾಘವೇಂದ್ರ ನಾಯಕ್ ಮಾತನಾಡಿ, ಕೇಂದ್ರದ ಕಸ್ತೂರಿರಂಗನ್ ವರದಿಯ ಪರಿಣಾಮವಾಗಿ ತಾಲೂಕಿನಲ್ಲಿ ಬಹುತೇಕ ರೈತರ ಜೀವನ ಸರ್ವನಾಶವಾಗಲಿದೆ ವರದಿ ಜಾರಿಗೆ ಅವಕಾಶ ನೀಡದಂತೆ ರೈತರು ಕೃಷಿಕರು ಹೆಚ್ಚಿನ ಸಂಖ್ಯೆಯಲ್ಲಿ ಪಾದಯಾತ್ರೆಯಲ್ಲಿ ಭಾಗವಹಿಸುವಂತೆ ಮನವಿ ಮಾಡಿದ ಅವರು 2028 ರ ಸಾರ್ವತ್ರಿಕ ಚುನಾವಣೆಯಲ್ಲಿ ಕ್ಷೇತ್ರದಿಂದ ಯಡಿಯೂರಪ್ಪನವರ ಕುಟುಂಬಕ್ಕೆ ಮುಕ್ತಿ ದೊರಕಿಸಲು ಪಾದಯಾತ್ರೆ ನಾಂದಿ ಹಾಡಲಿದೆ ಈ ದಿಸೆಯಲ್ಲಿ ಕಾರ್ಯಕರ್ತರು ಕಂಕಣಬದ್ಧರಾಗಿದ್ದಾರೆ ಎಂದು ತಿಳಿಸಿದರು.ಜಿಲ್ಲಾ ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ ದರ್ಶನ್ ಉಳ್ಳಿ, ಯುವ ಕಾಂಗ್ರೆಸ್ ಅಧ್ಯಕ್ಷ ಮಂಜು ನಾಯಕ್, ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಶಿವರಾಮ ಪಾರಿವಾಳ ಮಾತನಾಡಿದರು. ಗೋಷ್ಠಿಯಲ್ಲಿ ಅಲ್ಪಸಂಖ್ಯಾತರ ಘಟಕದ ಅಧ್ಯಕ್ಷ ಮುಶೀರ್ ಅಹಮದ್, ಸೇವಾದಳದ ಅಧ್ಯಕ್ಷ ಕಬೂತರ್, ಎನ್. ಎಸ್.ಯು.ಐ ಅಧ್ಯಕ್ಷ ಸಮೀರ್, ಸುರೇಶ್ ಕಲ್ಮನೆ ಸತೀಶ್, ಹನುಮಂತ ನಾಯಕ್, ಚರಣ್ ಬನ್ನೂರು ಮತ್ತಿತರರು ಉಪಸ್ಥಿತರಿದ್ದರು.
----------------ಫೋಟೋ : 2ಎಸ್‌ಕೆಪಿ01
ಶಿಕಾರಿಪುರದ ಸುದ್ದಿಮನೆಯಲ್ಲಿ ಕಾಂಗ್ರೆಸ್ ಮುಖಂಡ ಈರೇಶ್ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದರು.