ಸಚಿವ ನಾಗೇಂದ್ರ ರಾಜೀನಾಮೆಗೆ ಆಗ್ರಹಿಸಿ ಬಿಜೆಪಿ ಪಾದಯಾತ್ರೆ ನಡೆಸಲು ಸಿದ್ಧತೆ ನಡೆಸಿರುವ ವಿಚಾರಕ್ಕೆ ಸಂಬಂಧಿಸಿದಂತೆ ಮುಖ್ಯಮಂತ್ರಿಗಳ ರಾಜಕೀಯ ಕಾರ್ಯದರ್ಶಿ ಹಾಗೂ ವಿರಾಜಪೇಟೆ ಶಾಸಕ ಎ.ಎಸ್. ಪೊನ್ನಣ್ಣ ತಿರುಗೇಟು ನೀಡಿದ್ದಾರೆ.
ಕನ್ನಡಪ್ರಭ ವಾರ್ತೆ ಮಡಿಕೇರಿ
ಸಚಿವ ನಾಗೇಂದ್ರ ರಾಜೀನಾಮೆಗೆ ಆಗ್ರಹಿಸಿ ಬಿಜೆಪಿ ಪಾದಯಾತ್ರೆ ನಡೆಸಲು ಸಿದ್ಧತೆ ನಡೆಸಿರುವ ವಿಚಾರಕ್ಕೆ ಸಂಬಂಧಿಸಿದಂತೆ ಮುಖ್ಯಮಂತ್ರಿಗಳ ರಾಜಕೀಯ ಕಾರ್ಯದರ್ಶಿ ಹಾಗೂ ವಿರಾಜಪೇಟೆ ಶಾಸಕ ಎ.ಎಸ್. ಪೊನ್ನಣ್ಣ ತಿರುಗೇಟು ನೀಡಿದ್ದಾರೆ.‘ಪಾದಯಾತ್ರೆ ಅಥವಾ ಸಾರ್ವಜನಿಕವಾಗಿ ಹೋರಾಟ ಮಾಡುವುದು ಅವರ ಸ್ವಾತಂತ್ರ್ಯ. ಒಂದು ರಾಜಕೀಯ ಪಕ್ಷವಾಗಿ ಅವರದ್ದೊಂದು ನಿಲುವು ಇರುತ್ತದೆ, ಅವರು ಮಾಡಲಿ. ಅದಕ್ಕೆ ನಮಗೆ ಯಾವುದೇ ಅಭ್ಯಂತರವಿಲ್ಲ. ಆದರೆ ಸದನದಲ್ಲಿ ಯಾಕೆ ಚರ್ಚೆಗೆ ಬರುತ್ತಿಲ್ಲ?” ಎಂದು ಪ್ರಶ್ನಿಸಿದರು.‘ಸತ್ಯ ಹೊರಗಡೆ ಬರಬಾರದು ಅಂತಲಾ? ಹೋರಾಟ ಮಾಡಿದರೆ ಅಲ್ಲಿ ಯಾರು ಉತ್ತರ ಕೊಡುವುದಿಲ್ಲ. ಇಲ್ಲಿ ಸದನದಲ್ಲಿ ನಿಮ್ಮ ಪ್ರಶ್ನೆಗೆ ಉತ್ತರ ಸಿಗುತ್ತದೆಯಲ್ಲವೇ? ಸಾರ್ವಜನಿಕರು ಮತ್ತು ಮಾಧ್ಯಮಗಳಲ್ಲಿರುವ ಎಲ್ಲಾ ಪ್ರಶ್ನೆಗಳಿಗೆ ಸದನದಲ್ಲಿ ಬಹಿರಂಗ ಚರ್ಚೆ ಮೂಲಕ ಉತ್ತರ ಸಿಗುತ್ತದೆ’ ಎಂದು ಹೇಳಿದರು.‘ನಿಮ್ಮ ಮನಸ್ಸಿನಲ್ಲಿ ಇರುವ ಎಲ್ಲಾ ರೀತಿಯ ಪ್ರಶ್ನೆಗಳನ್ನು ಕೇಳಿ, ನಾವು ಕಾನೂನು ರೀತಿಯಲ್ಲೇ ಉತ್ತರ ಕೊಡುತ್ತೇವೆ. ಜನರಲ್ಲಿ ಗೊಂದಲಗಳಿವೆ, ನಾವು ಸ್ಪಷ್ಟಪಡಿಸಿ ಕೊಡಬಹುದು. ಆದರೆ ನೀವು ಸದನಕ್ಕೆ ಬಾರದಿದ್ದರೆ ಆ ಗೊಂದಲಗಳು ಹಾಗೆಯೇ ಮುಂದುವರೆಯುತ್ತವೆ’ ಎಂದು ಪೊನ್ನಣ್ಣ ಹೇಳಿದರು.‘ಮುಖ್ಯಮಂತ್ರಿಗಳು ನಾಗೇಂದ್ರ ಅವರನ್ನು ಯಾಕೆ ಮತ್ತೆ ಸಂಪುಟಕ್ಕೆ ತೆಗೆದುಕೊಂಡಿದ್ದಾರೆ ಎಂಬುದಕ್ಕೆ ಉತ್ತರ ಸಿಗಬೇಕಲ್ಲವೇ? ಆ ಉತ್ತರ ಬಂದರೆ ಬಿಜೆಪಿಯವರು ಬೆತ್ತಲಾಗುತ್ತಾರೆ ಎಂಬ ಭಯದಿಂದಲೇ ಅವರಿಗೆ ಸದನದಲ್ಲಿ ಚರ್ಚೆ ಬೇಡವಾಗಿದೆ’ ಎಂದು ಬಿಜೆಪಿ ವಿರುದ್ಧ ವಾಗ್ಧಾಳಿ ನಡೆಸಿದರು. ‘ನಾಗೇಂದ್ರ ವಿರುದ್ಧ ಪ್ರಾಸಿಕ್ಯೂಷನ್ - ಸ್ಯಾಂಕ್ಷನ್ ರಾಜ್ಯಪಾಲರ ವಿವೇಚನೆಗೆ ಬಿಟ್ಟಿದ್ದು : ಪೊನ್ನಣ್ಣಮಡಿಕೇರಿ: ಸಚಿವ ನಾಗೇಂದ್ರ ವಿರುದ್ಧ ಪ್ರಾಸಿಕ್ಯೂಷನ್‌ಗೆ ಅನುಮತಿ ಕೋರಿ ಸಿಬಿಐ ರಾಜ್ಯಪಾಲರಿಗೆ ಪತ್ರ ಬರೆದಿರುವುದು ಸಾಧಾರಣ ಪ್ರಕ್ರಿಯೆ ಎಂದು ಸಿಎಂ ರಾಜಕೀಯ ಕಾರ್ಯದರ್ಶಿ ಎ.ಎಸ್. ಪೊನ್ನಣ್ಣ ಹೇಳಿದರು.ಮಡಿಕೇರಿಯಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ‘ಸಿಬಿಐ ತನಿಖೆ ಮಾಡಿ ಚಾರ್ಜ್‌ಶೀಟ್‌ನಲ್ಲಿ ನಾಗೇಂದ್ರ ಅವರನ್ನು ಆರೋಪಿ ಎಂದು ಮಾಡಿದೆ. ಈಗ ಸ್ಯಾಂಕ್ಷನ್ ಕೇಳಿ ರಾಜ್ಯಪಾಲರಿಗೆ ಪತ್ರ ಬರೆದಿದೆ. ಭ್ರಷ್ಟಾಚಾರ ನಿಯಂತ್ರಣ ಕಾಯ್ದೆ ಸೆಕ್ಷನ್ 19(3) ಅಡಿಯಲ್ಲಿ ಸ್ಯಾಂಕ್ಷನ್ ಇಲ್ಲದೆ ಕೋರ್ಟ್ ಮುಂದುವರಿಯಲು ಆಗುವುದಿಲ್ಲ. ಯಾಕೆಂದರೆ ಅವರು ಮಂತ್ರಿಯಾಗಿದ್ದಾರೆ. ಆದರೆ ಸರ್ಕಾರದ ಸಲಹೆ ಇಲ್ಲದೆ ರಾಜ್ಯಪಾಲರು ಒಪ್ಪಿಗೆ ಕೊಡುತ್ತಾರೋ ಇಲ್ಲವೋ ಗೊತ್ತಿಲ್ಲ. ಅದು ಪೂರ್ಣವಾಗಿ ರಾಜ್ಯಪಾಲರಿಗೆ ಬಿಟ್ಟ ವಿಚಾರ’ ಎಂದರು.‘ಇವರ ಖಾತೆಗೂ ಹಣ ವರ್ಗಾವಣೆಯಾಗಿದೆ ಎಂದು ಸಿಬಿಐ ಹೇಳಿದೆ. ಅದು ಯಾರಿಗಾದರೂ ಸಿಕ್ಕಿದೆಯಾ? ಖಾತೆಗೆ ಹಣ ಹೋಗಿದೆ ಎನ್ನುವುದಕ್ಕೆ ದಾಖಲೆ ಇರಬೇಕಲ್ಲ. ಸುಮ್ಮನೆ ಹೋಗಿದೆ ಎಂದು ಯಾರೋ ಹೇಳುವುದಲ್ಲ. ಚಾರ್ಜ್‌ಶೀಟ್ ಸಲ್ಲಿಕೆಯಾಗಿದೆ, ಅದು ಬಿಜೆಪಿಯವರಿಗಾದರೂ ಸಿಗಬೇಕಲ್ಲವೇ?’ ಎಂದು ಪ್ರಶ್ನಿಸಿದರು.‘ರಾಜ್ಯ ಸರ್ಕಾರದ ತನಿಖಾ ಸಂಸ್ಥೆ ತನಿಖೆ ಮಾಡಿ ವರದಿ ನೀಡಿದೆ. ಈಗ ರಾಜ್ಯ ಸರ್ಕಾರದ ತನಿಖಾ ಸಂಸ್ಥೆಯ ವರದಿ ಒಪ್ಪಬೇಕಾ ಅಥವಾ ಕೇಂದ್ರ ಸರ್ಕಾರದ ತನಿಖಾ ಸಂಸ್ಥೆಯ ವರದಿ ಒಪ್ಪಬೇಕಾ? ಹೋಗಿದ್ದ ಪೂರ್ಣ ಹಣ ವಾಪಸ್ ಆಗಿದೆ. ಅದು ನಾಗೇಂದ್ರ ಅವರಿಂದ ರಿಕವರಿ ಆಗಿದೆಯಾ? ರಿಕವರಿ ಆಗದಿರುವುದಕ್ಕೆ ಅವರನ್ನು ಆರೋಪಿ ಅಲ್ಲ ಎನ್ನಲು ಆಗುವುದಿಲ್ಲ. ಆದರೆ ಅವರಿಂದ ರಿಕವರಿ ಮಾಡುವುದು ಬಹುಮುಖ್ಯ. ಆದ್ದರಿಂದ ನಾಗೇಂದ್ರ ದೋಷಮುಕ್ತರು ಎಂದು ತನಿಖಾ ಸಂಸ್ಥೆ ಹೇಳಿದೆ’ ಎಂದು ತಿಳಿಸಿದರು.‘ತನಿಖೆ ಆರಂಭವಾದಾಗ ಮುಕ್ತವಾಗಿ ತನಿಖೆ ಆಗಬೇಕು ಎಂದು ನಾಗೇಂದ್ರ ಅವರು ರಾಜೀನಾಮೆ ನೀಡಿದ್ದರು. ದೋಷಮುಕ್ತರಾದ ಮೇಲೂ ಅವರನ್ನು ಸಂಪುಟಕ್ಕೆ ಸೇರಿಸಬಾರದು ಎಂದರೆ ಹೇಗೆ? ನೀವು ಮಾಡುವ ತನಿಖೆ ಕೋರ್ಟಿನಲ್ಲಿ ತೀರ್ಮಾನ ಆಗುವವರೆಗೆ ಕಾಯಬೇಕಾ? ಎಂದು ಪ್ರಶ್ನಿಸಿದ ಅವರು, ಈ ಬಗ್ಗೆ ಸದನದಲ್ಲಿ ಚರ್ಚೆಗೆ ನಾವು ರೆಡಿ ಇದ್ದೇವೆ ಎಂದರು.