ಸಿಂಗಟಾಲೂರು ಏತ ನೀರಾವರಿ ಯೋಜನೆ ಚಾಲನೆಗೊಂಡು ದಶಕ ಕಳೆದರೂ, ಇನ್ನೂ ಬ್ಯಾರೇಜ್‌ನಲ್ಲಿ ಪೂರ್ಣ ಪ್ರಮಾಣದ ನೀರು ಸಂಗ್ರಹಣ ಸಾಮಾರ್ಥ್ಯ ಹೆಚ್ಚಿಸಲು ಸಾಧ್ಯವಾಗುತ್ತಿಲ್ಲ.
ಚಂದ್ರು ಕೊಂಚಿಗೇರಿ ಹೂವಿನಹಡಗಲಿ
ಸಿಂಗಟಾಲೂರು ಏತ ನೀರಾವರಿ ಯೋಜನೆಯ ಬಲದಂಡೆ, ಎಡದಂಡೆಯ ಭಾಗದ ಲಕ್ಷಾಂತರ ರೈತರಿಗೆ ಬ್ಯಾರೇಜ್ ಹಿನ್ನೀರು ಆಸರೆಯಾಗಿತ್ತು. ಎಲ್‌ನಿನೋ ಪರಿಣಾಮದಿಂದ ಮಳೆ ಇಲ್ಲದೇ ಕುಡಿವ ನೀರಿಗೆ ಹಾಹಾಕಾರ ಎದುರಾಗದಂತೆ ಮುನ್ನೆಚ್ಚರಿಕೆ ಕ್ರಮವಾಗಿ ನದಿ ನೀರನ್ನು ಅನಧಿಕೃತ ಮೋಟಾರ್‌ನಿಂದ ಎತ್ತಿ ರೈತರು ಭತ್ತ ನಾಟಿ ಮಾಡದಂತೆ ಜಿಲ್ಲಾಡಳಿತ ತಾಕೀತು ಮಾಡಿದ ಬೆನ್ನಲ್ಲೆ ರೈತರು ಭತ್ತದ ನಾಟಿ ಮರೆತು ರಾಗಿ ಬಿತ್ತನೆಯತ್ತ ಚಿತ್ತ ಹರಿಸಿದ್ದಾರೆ.ಸಿಂಗಟಾಲೂರು ಏತ ನೀರಾವರಿ ಯೋಜನೆ ಚಾಲನೆಗೊಂಡು ದಶಕ ಕಳೆದರೂ, ಇನ್ನೂ ಬ್ಯಾರೇಜ್‌ನಲ್ಲಿ ಪೂರ್ಣ ಪ್ರಮಾಣದ ನೀರು ಸಂಗ್ರಹಣ ಸಾಮಾರ್ಥ್ಯ ಹೆಚ್ಚಿಸಲು ಸಾಧ್ಯವಾಗುತ್ತಿಲ್ಲ.
ಬ್ಯಾರೇಜ್‌ನಲ್ಲಿ 509 ಮೀಟರ್ ನೀರು ಸಂಗ್ರಹಿಸಿದರೆ 3.12 ಟಿಎಂಸಿ ನೀರು ನಿಲುಗಡೆ ಮಾಡಬಹುದು. ಆದರೆ ಇದಕ್ಕೆ ಮುಳುಗಡೆಯಾಗಿರುವ ಗ್ರಾಮಗಳ ಸ್ಥಳಾಂತರವೇ ಅಡ್ಡಿಯಾಗಿದೆ. ಬಲದಂಡೆ ಭಾಗದಲ್ಲಿ ಅಲ್ಲಿಪುರ ಬಹುತೇಕ ಸ್ಥಳಾಂತರವಾಗಿದೆ. ಎಡದಂಡೆ ಭಾಗದ ಗುಮ್ಮಗೋಳ ಶೇ. 40 ರಷ್ಟು, ಬಿದರಹಳ್ಳಿ ಶೇ.80 ರಷ್ಟು ನವಗ್ರಾಮಕ್ಕೆ ಸ್ಥಳಾಂತರವಾಗಿದ್ದಾರೆ. ಉಳಿದಂತೆ ಗುಮ್ಮಗೋಳದ ಗೋಣಿಬಸವೇಶ್ವರ ದೇವಸ್ಥಾನ ಮುಳುಗಡೆಯಾಗುತ್ತಿದೆ, ಹೊಸ ದೇಗುಲ ನಿರ್ಮಾಣಕ್ಕಾಗಿ ಡಿಪಿಆರ್ ಸಿದ್ದಪಡಿಸಲು ಟೆಂಡರ್ ಕರೆಯಲಾಗಿದೆ. ಬಿದರಹಳ್ಳಿಯ ರೇಣುಕಾ ದೇವಿ ದೇಗುಲಕ್ಕೆ ತಡೆಗೋಡೆ ನಿರ್ಮಿಸಲು ಬೇಡಿಕೆ ಇದೆ. ಈ ಕಾಮಗಾರಿ ಪೂರ್ಣಗೊಂಡ ನಂತರದಲ್ಲಿ 509 ಮೀಟರ್‌ಗೆ ನೀರು ನಿಲ್ಲಿಸಲಾಗುತ್ತಿದೆ ಎಂಬ ಮಾಹಿತಿ ಇದೆ.ಸಿಂಗಟಾಲೂರು ಯೋಜನೆಯಲ್ಲಿ 509 ಮೀಟರ್‌ಗೆ ನೀರು ನಿಲ್ಲಿಸಿದ್ದರೆ ಈ ಬರದಲ್ಲಿ ಎಡ ಮತ್ತು ಬಲದಂಡೆ ಭಾಗದ ರೈತರಿಗೆ ನೆರವಾಗುತ್ತಿತ್ತು. ಈ ನಿಟ್ಟಿನಲ್ಲಿ ಸರ್ಕಾರ ಗಮನ ಹರಿಸಬೇಕೆಂಬುದು ರೈತರ ಒತ್ತಾಯ.
ತಾಲೂಕಿನ ತುಂಗಭದ್ರಾ ನದಿ ತೀರದ ಹರವಿಯಿಂದ ಹಕ್ಕಂಡಿ ವರೆಗೂ 10 ಸಾವಿರಕ್ಕೂ ಅಧಿಕ ಭತ್ತ ಬೆಳೆಯುವ ಪ್ರದೇಶವಿದೆ. ನದಿಯಲ್ಲಿ ನೀರಿಲ್ಲ ಇದರಿಂದ ಕುಡಿವ ನೀರಿಗೆ ಮಾತ್ರ ಆದ್ಯತೆ ಇದೆ. ಆದರಿಂದ ರೈತರು ಭತ್ತದ ನಾಟಿ ಮಾಡುವಂತಿಲ್ಲ, ಒಂದು ವೇಳೆ ಅನಧಿಕೃತ ಮೋಟಾರ್ ಬಳಸಿ, ನೀರೆತ್ತಲು ಪ್ರಯತ್ನಿಸಿದರೆ ಕರೆಂಟ್ ಲೈನ್ ಕಟ್ ಮಾಡುವ ನಿರ್ಧಾರಕ್ಕೂ ಮುಂದಾಗುತ್ತೇವೆಂಬ ಎಚ್ಚರಿಕೆಯ ಮಾತು ಅಧಿಕಾರಿ ವಲಯದಿಂದ ಕೇಳಿ ಬರುತ್ತಿದೆ.ನದಿ ತೀರದ ಕೆಲ ರೈತರು ಭತ್ತದ ನಾಟಿ ಮಾಡಲು ಸಸಿ ಬೆಳೆಸಿದ್ದಾರೆ, ಜಿಲ್ಲಾಡಳಿತ ಭತ್ತದ ನಾಟಿ ಮಾಡದಂತೆ ನಿಷೇಧ ಹೇರಿದೆ. ಇಂತಹ ಸಂದರ್ಭದಲ್ಲಿ ರೈತರು ಭತ್ತದ ಗದ್ದೆ ಉಳುಮೆ ಮಾಡಿ, ಕಡಿಮೆ ನೀರು ಬಳಸಿ ಬೆಳೆಯುವ ರಾಗಿಯನ್ನು ಬಿತ್ತನೆ ಮಾಡಲು ಮುಂದಾಗಿದ್ದಾರೆ.
ಸಿಂಗಟಾಲೂರು ಬ್ಯಾರೇಜ್ 509 ಮೀಟರ್‌ಗೆ 3.12 ಟಿಎಂಸಿ ನೀರು ಸಂಗ್ರಹವಾಗುತ್ತದೆ. ಆದರೆ ಪೂರ್ಣ ಪ್ರಮಾಣದ ನೀರು ನಿಲುಗಡೆಗೆ ಗ್ರಾಮಗಳ ಸ್ಥಳಾಂತರ ಸಮಸ್ಯೆ ಇದೆ. ಈಗ 508 ಮೀಟರ್‌ಗೆ 2.4 ಟಿಎಂಸಿ ನೀರು ನಿಲ್ಲಿಸಲಾಗಿತ್ತು. ಸದ್ಯ 2.3 ಟಿಎಂಸಿ ನೀರು ಇದೆ ಎಂದು ಹೂವಿನಹಡಗಲಿ ಸಿಂಗಟಾಲೂರು ಏತ ನೀರಾವರಿ ಯೋಜನೆ ಎಇಇ ಎಚ್.ಸಿ. ರಾಘವೇಂದ್ರ ತಿಳಿಸಿದ್ದಾರೆ.