ಮಳೆಯಿಂದ ಭತ್ತದ ಗದ್ದೆಗಳು ನೆಲ ಸಮ

| Published : Oct 24 2025, 01:00 AM IST

ಸಾರಾಂಶ

ಇನ್ನೇನು ಒಂದು ವಾರ ಬಿಟ್ಟು ಬೆಳೆ ಕಟಾವು ಮಾಡೋಣ ಎಂಬ ಹಂತದಲ್ಲಿ ಇದ್ದ ಬೆಳೆಗಳು ಈಗ ಮಳೆ ರಾಯನ ರಭಸಕ್ಕೆ ನೆಲಕ್ಕುರುಳಿವೆ.

ಕುರುಗೋಡು: ಕುರುಗೋಡು, ಮಂಗಳವಾರ ಸಂಜೆ ಬುಧವಾರ ನಿರಂತರ ಸುರಿದ ಮಳೆಯಿಂದ ಸಮೀಪದ ಚಾನಾಳ್ ಗ್ರಾಮದಲ್ಲಿ ಭತ್ತದ ಬೆಳೆಗಳು ನೆಲಸಮಗೊಂಡಿವೆ.

ಬಹುತೇಕ ಗ್ರಾಮಗಳಲ್ಲಿ ಸಾವಿರಾರು ಎಕರೆಗೂ ಹೆಚ್ಚು ರೈತರು ಭತ್ತ ಬೆಳೆಯುತ್ತಾರೆ. ಇನ್ನು ಕಾಲುವೆ ಭಾಗದ ಪ್ರದೇಶದ ಚಾನಾಳ್, ತಾಳೂರು, ಹಂದಿಹಾಳ್, ಕೊರ್ಲಗುಂದಿ, ಗುಡುದೂರು, ಬಸರಕೋಡು, ಹಡ್ಲಿಗಿ ಗೆಣಿಕೆಹಾಳ್, ಎಚ್.ವೀರಾಪುರ, ಸೋಮಲಾಪುರ ಹಾವಿನಹಾಳು, ಮಣ್ಣೂರು, ಸೂಗೂರು ಸೇರಿದಂತೆ ಬಹುತೇಕ ಗ್ರಾಮಗಳಲ್ಲಿ ಕೂಡ ಸಾವಿರಾರು ಎಕರೆಗೆ ಹೆಚ್ಚು ಭತ್ತ ಬೆಳೆಯುತ್ತಾರೆ.

ಈಗಾಗಲೇ ರೈತರು ಭತ್ತದ ಬೆಳೆಗಳಿಗೆ ರಸಗೊಬ್ಬರ, ಕ್ರಿಮಿನಾಶಕ, ಕಳೆ ಸೇರಿದಂತೆ ವಿವಿಧರೀತಿಯಲ್ಲಿ ಕೃಷಿ ಚಟುವಟಿಕೆಗಳಿಗೆ ಬೇಕಾದ ಎಲ್ಲ ಕಾರ್ಯಗಳನ್ನು ಕೈಗೊಂಡು ಎಕರೆಗೆ ₹40 ರಿಂದ ₹50 ಸಾವಿರ ವೆಚ್ಚ ವ್ಯಯಿಸಿದ್ದಾರೆ. ಇನ್ನೇನು ಒಂದು ವಾರ ಬಿಟ್ಟು ಬೆಳೆ ಕಟಾವು ಮಾಡೋಣ ಎಂಬ ಹಂತದಲ್ಲಿ ಇದ್ದ ಬೆಳೆಗಳು ಈಗ ಮಳೆ ರಾಯನ ರಭಸಕ್ಕೆ ನೆಲಕ್ಕುರುಳಿವೆ.

ಪರಿಣಾಮ ಕಾಳುಗಳು ಉದಿರಿ ನೆಲಕ್ಕೆ ಬಿದ್ದಿವೆ. ಇದರಿಂದ ಅಪಾರ ಪ್ರಮಾಣದಲ್ಲಿ ಬೆಳೆಗಳು ನಷ್ಟ ಹೊಂದಿದ್ದು, ರೈತರ ಹೊಟ್ಟೆ ಮೇಲೆ ಬರೆ ಎಳೆದುಕೊಂಡಂತಾಗಿದೆ. ಬೆಳೆಗಳು ಸಂಪೂರ್ಣ ನೆಲಕ್ಕುರುಳಿದ ಪರಿಣಾಮ ಸಿವುಡು ಕೂಡ ಕಟ್ಟಲು ಬಾರದಂತಾಗಿದೆ. ಇದರಿಂದ ಭತ್ತ ಕಟಾವಿಗೆ ತುಂಬ ಸಮಸ್ಯೆಯಾಗಿದೆ. ಕಾಳುಗಳು ಅಲ್ಪ ಪ್ರಮಾಣದಲ್ಲಿ ಕೈ ಸೇರಿದರೆ ಅತಿಹೆಚ್ಚು ನೆಲಕ್ಕೆ ಉದುರಿ ಬೀಳಲಿದೆ. ಸುಮಾರು ವರ್ಷಗಳಿಂದ ಉತ್ತಮ ಬೆಳೆ ಕಾಣದೇ ಬೆಲೆ ಸಿಗದೇ ರೈತರ ಬದುಕು ಚಿಂತಾಜನಕವಾಗಿದೆ.

ಸದ್ಯ ಭತ್ತಕ್ಕೆ ಮಾರುಕಟ್ಟೆಯಲ್ಲಿ ಉತ್ತಮ ಬೆಲೆ ದೊರಕಿದ್ದು, ಇತ್ತ ಬೆಳೆ ಕಟಾವು ಹಂತದಲ್ಲಿ ಮಳೆ ರಾಯ ಹೊಕ್ಕರಿಸಿ ರೈತರ ನೆಮ್ಮದಿ ಕಸಿದಿದ್ದಾನೆ. ಇದರಿಂದ ರೈತರುತುಂಬಾ ನಷ್ಟಕ್ಕೆ ಸಿಲುಕಿದ್ದಾರೆ.

ಭತ್ತ ಬೆಳೆದ ರೈತನ ಬದುಕು ಹೇಳತೀರದಾಗಿದೆ. ಬೆಳೆ ಬೆಳೆಯಲು ಖರ್ಚು ಮಾಡಿದ ಹಣ ಮಳೆ ನೀರಿನಲ್ಲಿ ಕೊಚ್ಚಿ ಹೋಗಿದೆ. ಇಷ್ಟೆಲ್ಲ ನಷ್ಟವಾದರೂ ಯಾವ ಅಧಿಕಾರಿಗಳೂ ಸ್ಪಂದಿಸಿಲ್ಲ. ರೈತರ ಕಷ್ಟ ನೋವು ಕಂಡು ಸರ್ಕಾರ ಸೂಕ್ತ ಪರಿಹಾರ ನೀಡಲಿ ಎನ್ನುತ್ತಾರೆ ಚಾನಾಳ್ ಗ್ರಾಮದ ರೈತ ಅಂಗಡಿ ಚನ್ನಪ್ಪ.

ಸರ್ಕಾರ ಹೇಳುವುದೊಂದು ಮಾಡುವುದೊಂದು ಎನ್ನುವಂತಾಗಿದೆ. ಈವರೆಗೂ ಖರೀದಿ ಕೇಂದ್ರ ತೆರೆಯದೇ ರೈತರೊಂದಿಗೆ ಚೆಲ್ಲಾಟವಾಡುತ್ತಿದೆ. ಕೇಂದ್ರ, ರಾಜ್ಯ ಸರ್ಕಾರ ಈ ಬಗ್ಗೆ ಶೀಘ್ರ ನಿರ್ಣಯ ತೆಗೆದುಕೊಳ್ಳಬೇಕು. ಈ ಬಗ್ಗೆ ಅಧಿಕಾರಿಗಳು, ಜನಪ್ರತಿನಿಧಿಗಳು ಎಚ್ಚೆತ್ತುಕೊಳ್ಳಬೇಕು. ಇಲ್ಲದಿದ್ದರೆ ಅವರ ಕಚೇರಿ, ನಿವಾಸದ ಮುಂದೆ ರೈತ ಸಂಘದಿಂದ ಹೋರಾಟ ಮಾಡಲಾಗುವುದು ಎನ್ನುತ್ತಾರೆ ರಾಜ್ಯ ಹಸಿರು ಸೇನಾದ ಚಾನಾಳ್ ಗ್ರಾಮ ಘಟಕ ಅಧ್ಯಕ್ಷ ವಿರುಪಾಕ್ಷಿ.