ಸಾರಾಂಶ
ಸಂಪ್ರದಾಯದಂತೆ ಬೆಳಗ್ಗೆ ದೇವತಕ್ಕರು ಹಾಗೂ ಇತರ ತಕ್ಕರ ಮನೆಗಳಿಂದ ಪಲ್ ಬೈವಾಡು ಆಗಮಿಸಿತು. ಅಯ್ಯಪ್ಪ ಕಟ್ಟೆಯ ಮುಂದೆ ದೇವತಕ್ಕರು ಹಾಗೂ ಊರು ನಾಡಿನ ತಕ್ಕರು ಸೇರಿ ನಡೆಸುವ ಪ್ರಾರ್ಥನೆಯೊಂದಿಗೆ ಸಿಂಹ ಮಾಸದ ಆರಾಧನೆಗೆ ಚಾಲನೆ ನೀಡಲಾಯಿತು.
ಕನ್ನಡಪ್ರಭ ವಾರ್ತೆ ನಾಪೋಕ್ಲು
ಕಕ್ಕಬೆಯ ಪಾಡಿ ಇಗ್ಗುತಪ್ಪ ದೇವಾಲಯದಲ್ಲಿ ಸಿಂಹ ಮಾಸದ ಆರಾಧನೆ ಶ್ರದ್ಧಾ ಭಕ್ತಿಯಿಂದ ಸಂಪನ್ನಗೊಂಡಿತು.ಸಂಪ್ರದಾಯದಂತೆ ಬೆಳಗ್ಗೆ ದೇವತಕ್ಕರು ಹಾಗೂ ಇತರ ತಕ್ಕರ ಮನೆಗಳಿಂದ ಪಲ್ ಬೈವಾಡು ಆಗಮಿಸಿತು. ಅಯ್ಯಪ್ಪ ಕಟ್ಟೆಯ ಮುಂದೆ ದೇವತಕ್ಕರು ಹಾಗೂ ಊರು ನಾಡಿನ ತಕ್ಕರು ಸೇರಿ ನಡೆಸುವ ಪ್ರಾರ್ಥನೆಯೊಂದಿಗೆ ಸಿಂಹ ಮಾಸದ ಆರಾಧನೆಗೆ ಚಾಲನೆ ನೀಡಲಾಯಿತು.
ತುಲಾಭಾರ ಸೇವೆ, ಮಹಾಪೂಜೆ, ನಿತ್ಯ ಪೂಜೆಯ ಬಳಿಕ ಶ್ರೀ ಇಗ್ಗುತ್ತಪ್ಪ ದೇವರ ಉತ್ಸವ ಮೂರ್ತಿ ದಿವ್ಯ ಅಲಂಕೃತ ಭೂಶಿತವಾಗಿ ದೇವಸ್ಥಾನದ ಪ್ರಾಂಗಣದಲ್ಲಿ ಭಕ್ತರಿಗೆ ದರ್ಶನ ನೀಡಿದ್ದಲ್ಲದೆ ನಿತ್ಯ ಬಲಿಯೊಂದಿಗೆ ಉತ್ಸವ ಸಂಪನ್ನಗೊಂಡಿತು.ದೇವಾಲಯದ ಭಕ್ತ ಜನ ಸಂಘದ ಅಧ್ಯಕ್ಷ ಪರದಂಡ ಸುಬ್ರಮಣಿ ಕಾವೇರಪ್ಪ, ಕೊಡಗಿನ ಜನತೆಯ ಶ್ರೇಯೋಭಿವೃದ್ಧಿಗೆ ನಾಡಿನ ಸುಬಿಕ್ಷೆಗೆ ಹಾಗೂ ಪ್ರಾಕೃತಿಕ ವಿಕೋಪಗಳಿಂದ ರಕ್ಷಿಸಿ ಹರಸುವಂತೆ ಇಗ್ಗುತಪ್ಪನಲ್ಲಿ ಸಾಮೂಹಿಕ ಪ್ರಾರ್ಥನೆ ಸಲ್ಲಿಸಿದರು.
ಪೂಜಾ ವಿಧಿ ವಿಧಾನಗಳನ್ನು ಕುಶ ಭಟ್ ಹಾಗೂ ಜಗದೀಶ್ ನೆರವೇರಿಸಿದರು. ದೇವಸ್ಥಾನದ ಕಾರ್ಯಕಾರಿ ಮಂಡಳಿ ಅಧ್ಯಕ್ಷ ಬಾಚಮಂಡ ರಾಜ ಪೂವಣ್ಣ, ಸದಸ್ಯರು, ತಕ್ಕ ಮುಖ್ಯಸ್ಥರು, ಭಕ್ತರು ಹೆಚ್ಚಿನ ಸಂಖ್ಯೆಯಲ್ಲಿ ಪಾಲ್ಗೊಂಡಿದ್ದರು.