ದ.ಕ.ದಲ್ಲಿ ಸೋತು ‘ಗೆದ್ದ’ ಪದ್ಮರಾಜ್ ಪೂಜಾರಿ!

| Published : Jun 05 2024, 12:30 AM IST

ದ.ಕ.ದಲ್ಲಿ ಸೋತು ‘ಗೆದ್ದ’ ಪದ್ಮರಾಜ್ ಪೂಜಾರಿ!
Share this Article
  • FB
  • TW
  • Linkdin
  • Email

ಸಾರಾಂಶ

ಯಾವುದೇ ನಾಯಕರ ವಿರೋಧ ಕಟ್ಟಿಕೊಳ್ಳದೆ, ಎಲ್ಲರನ್ನೂ ಒಳಗೊಳಿಸಿಕೊಂಡು ಕಾರ್ಯಕರ್ತರಲ್ಲಿ ಹುಮ್ಮಸ್ಸು ಮೂಡಿಸುವಲ್ಲಿ ಪದ್ಮರಾಜ್‌ ಯಶಸ್ವಿಯಾಗಿದ್ದಾರೆ. ಮೊದಲ ಚುನಾವಣೆಯಲ್ಲೇ ಈ ಮಟ್ಟದಲ್ಲಿ ಪಕ್ಷದ ಯಂತ್ರಕ್ಕೆ ಚುರುಕು ಮುಟ್ಟಿಸಿದ್ದು ಮುಖಂಡರನ್ನೇ ಆಶ್ಚರ್ಯಗೊಳಿಸಿದೆ.

ಸಂದೀಪ್‌ ವಾಗ್ಲೆ

ಕನ್ನಡಪ್ರಭ ವಾರ್ತೆ ಮಂಗಳೂರು

ದಕ್ಷಿಣ ಕನ್ನಡ ಲೋಕಸಭಾ ಕ್ಷೇತ್ರವು ಹಿಂದುತ್ವದ ಭದ್ರಕೋಟೆ ಎನ್ನುವುದನ್ನು ಈ ಬಾರಿ ಮತ್ತೆ ಸಾಬೀತುಪಡಿಸಿದರೂ, ಬಿಜೆಪಿ ನಿರೀಕ್ಷೆ ಮಾಡಿದಷ್ಟು ಮತ ಪಡೆಯುವಲ್ಲಿ ವಿಫಲವಾಗಿದೆ. ಜಿಲ್ಲೆಯು ಬಿಜೆಪಿಯ ಕೋಟೆ ಅನ್ನಿಸಿಕೊಂಡಿದ್ದರೂ ಕೂಡ ಗೆಲುವು ಸುಲಭದ ತುತ್ತಲ್ಲ ಎನ್ನುವ ಸಂದೇಶವನ್ನು ಮತದಾರರು ರವಾನಿಸಿದ್ದಾರೆ. ಇದಕ್ಕೆ ಕಾರಣ ಕಾಂಗ್ರೆಸ್‌ ಅಭ್ಯರ್ಥಿ ಪದ್ಮರಾಜ್‌ ಪೂಜಾರಿ.

ಈ ಚುನಾವಣೆಯಲ್ಲಿ ಬಿಜೆಪಿಗೆ ಬಲವಾದ ಪೈಪೋಟಿ ನೀಡುವುದರೊಂದಿಗೆ, ನೆಲಕಚ್ಚಿದ್ದ ಕಾಂಗ್ರೆಸ್‌ನ ಅಸ್ತಿತ್ವವನ್ನು ಬಲಗೊಳಿಸುವಲ್ಲಿ ಸಫಲರಾಗಿರುವ ಪದ್ಮರಾಜ್‌ ಸೋಲಿನಲ್ಲೂ ಗೆದ್ದಿದ್ದಾರೆ. ವೈಯಕ್ತಿಕವಾಗಿಯೂ ಪದ್ಮರಾಜ್‌ ಅವರ ರಾಜಕೀಯ ಭವಿಷ್ಯಕ್ಕೆ ಈ ಸೋಲು ಮುನ್ನುಡಿ ಬರೆಯಾಗಲಿದೆ.

2019ರಲ್ಲಿ ಬರೋಬ್ಬರಿ 2.74 ಲಕ್ಷಗಳಷ್ಟು ಅಂತರದಿಂದ ಬಿಜೆಪಿ ಅಭ್ಯರ್ಥಿ ನಳಿನ್‌ ಕುಮಾರ್‌ ಗೆಲುವು ಸಾಧಿಸಿದ್ದರು. ಈ ಬಾರಿ 3ರಿಂದ 3.50 ಲಕ್ಷಗಳ ಭಾರೀ ಅಂತರದಿಂದ ಗೆಲುವು ಸಾಧಿಸುವ ಆತ್ಮವಿಶ್ವಾಸದಲ್ಲಿ ಬಿಜೆಪಿ ಮುಖಂಡರಿದ್ದರು. ಎದುರಾಳಿ ಪದ್ಮರಾಜ್‌ ಅವರ ಚುನಾವಣಾ ರಣತಂತ್ರ ಬಲಗೊಳ್ಳುತ್ತಿದ್ದಂತೆ ಗೆಲುವು ಸುಲಭವಿಲ್ಲ ಎನ್ನುವ ಅರಿವು ಬಿಜೆಪಿಗೆ ಬಂದಿತ್ತು. ಒಂದು ಹಂತದಲ್ಲಿ ಸೋಲು- ಗೆಲುವಿನ ಲೆಕ್ಕಾಚಾರದ ಚರ್ಚೆ ‘ಏನೂ ಆಗಬಹುದು’ ಎಂಬಲ್ಲಿಗೆ ಬಂದು ನಿಂತಿತ್ತು. ಜನಸಾಮಾನ್ಯರಲ್ಲೂ ಈ ಚರ್ಚೆಯನ್ನು ಬಲಗೊಳಿಸಿ, ಪಕ್ಷದ ಅಂತರವನ್ನು 1.49 ಲಕ್ಷಕ್ಕೆ ಇಳಿಸಿದ ಪದ್ಮರಾಜ್‌ ಚುನಾವಣಾ ತಂತ್ರಗಾರಿಕೆಯನ್ನು ಈ ಚುನಾವಣೆ ಅನಾವರಣಗೊಳಿಸಿದೆ.

‘ಕೈ’ ಹುಮ್ಮಸ್ಸು ಹೆಚ್ಚಿಸಿದ ಎಲೆಕ್ಷನ್‌:

ಕಳೆದ 33 ವರ್ಷಗಳಿಂದ ಸತತವಾಗಿ ಬಿಜೆಪಿ ಸಂಸದರನ್ನೇ ದ.ಕ. ಗೆಲ್ಲಿಸುತ್ತಾ ಬರುತ್ತಿದೆ. ಮುಖ್ಯವಾಗಿ ನರೇಂದ್ರ ಮೋದಿ ಅಧಿಕಾರಕ್ಕೆ ಬಂದ ನಂತರವಂತೂ ಇಲ್ಲಿನ ಬಿಜೆಪಿ ಬಲ ಇಮ್ಮಡಿಸಿದ್ದು, ಕಾಂಗ್ರೆಸ್‌ ಕಾರ್ಯಕರ್ತರ ಆಸಕ್ತಿ ತಳ ತಲುಪಿತ್ತು. ಇದು ಸಾಲದೆಂಬಂತೆ ಪಕ್ಷದ ನಾಯಕರ ಒಳಜಗಳಗಳು, ಬಣ ರಾಜಕೀಯ ಕಾಂಗ್ರೆಸ್‌ ಪಕ್ಷವನ್ನು ಅಧಃಪತನಕ್ಕೆ ದೂಡಿತ್ತು. ಮೊದಲ ಬಾರಿಗೆ ಕಾಂಗ್ರೆಸ್‌ ಕಾರ್ಯಕರ್ತರ ಯುದ್ಧೋಪಾದಿಯ ಹೋರಾಟ ಈ ಚುನಾವಣೆಯಲ್ಲಿ ಕಂಡುಬಂದಿದೆ.

ರಾಜ್ಯದಲ್ಲಿ ಲೋಕಸಭೆ ಚುನಾವಣಾ ಸಮರಕ್ಕೆ ಕಾಂಗ್ರೆಸ್‌ ದ.ಕ.ದಿಂದಲೇ ಚಾಲನೆ ನೀಡಿದ್ದರೂ, ಪದ್ಮರಾಜ್‌ ಅಭ್ಯರ್ಥಿಯಾದ ಬಳಿಕ ರಾಷ್ಟ್ರ, ರಾಜ್ಯ ಮಟ್ಟದ ದೊಡ್ಡ ನಾಯಕರು ಯಾರೂ ಬಂದಿರಲಿಲ್ಲ. ಆದರೂ ಪಕ್ಷದ ಕಾರ್ಯಕರ್ತರ ಉತ್ಸಾಹ ಕಡಿಮೆಯಾದಂತೆ ನೋಡಿಕೊಳ್ಳುವ ಬಹುದೊಡ್ಡ ಸವಾಲಿತ್ತು. ಯಾವುದೇ ನಾಯಕರ ವಿರೋಧ ಕಟ್ಟಿಕೊಳ್ಳದೆ, ಎಲ್ಲರನ್ನೂ ಒಳಗೊಳಿಸಿಕೊಂಡು ಕಾರ್ಯಕರ್ತರಲ್ಲಿ ಹುಮ್ಮಸ್ಸು ಮೂಡಿಸುವಲ್ಲಿ ಪದ್ಮರಾಜ್‌ ಯಶಸ್ವಿಯಾಗಿದ್ದಾರೆ. ಮೊದಲ ಚುನಾವಣೆಯಲ್ಲೇ ಈ ಮಟ್ಟದಲ್ಲಿ ಪಕ್ಷದ ಯಂತ್ರಕ್ಕೆ ಚುರುಕು ಮುಟ್ಟಿಸಿದ್ದು ಮುಖಂಡರನ್ನೇ ಆಶ್ಚರ್ಯಗೊಳಿಸಿದೆ.

ಸೋಲಿಗೇನು ಕಾರಣ?

ದಕ್ಷಿಣ ಕನ್ನಡದಲ್ಲಿ ಈ ಬಾರಿ ಕಾಂಗ್ರೆಸ್‌ ಖಾತೆ ತೆರೆಯುವ ನಿರೀಕ್ಷೆ ಕಾರ್ಯಕರ್ತರಲ್ಲಿತ್ತು. ಕಾಂಗ್ರೆಸ್‌ ಮುಖಂಡರ ಪ್ರಕಾರ, ಗ್ಯಾರಂಟಿ ಯೋಜನೆಗಳು ನಿರೀಕ್ಷೆಯಷ್ಟು ಮತವಾಗಿ ಪರಿವರ್ತನೆಯಾಗುವಲ್ಲಿ ವಿಫಲರಾಗಿರುವುದು ಮೊದಲ ಕಾರಣ. ಹೆಚ್ಚು ಮತದಾರರಿರುವ ಬಿಲ್ಲವ ಅಭ್ಯರ್ಥಿಯನ್ನು ಕಣಕ್ಕಿಳಿಸಿದರೂ ಹಿಂದುತ್ವದೆಡೆಗೆ ಸಾಗಿ ಹೋಗಿರುವ ಸಮುದಾಯದ ಮಂದಿ ನಿರೀಕ್ಷೆಯಷ್ಟು ಕೈಹಿಡಿದಿಲ್ಲ. ದಕ್ಷಿಣ ಕನ್ನಡದಲ್ಲಿ ಇನ್ನೂ ಮೋದಿ ಅಲೆ ಇರುವುದು ಕೂಡ ಕಾಂಗ್ರೆಸ್‌ ಸೋಲಿಗೆ ಕಾರಣ ಎಂದು ವಿಶ್ಲೇಷಿಸಲಾಗುತ್ತಿದೆ.ದಕ್ಷಿಣ ಕನ್ನಡ ಲೋಕಸಭಾ ಕ್ಷೇತ್ರದಲ್ಲಿ ಈ ಬಾರಿ ಉತ್ತಮ ಫೈಟ್‌ ನೀಡಿದ್ದೇವೆ. ಗ್ಯಾರಂಟಿ ಯೋಜನೆಗಳು ದೊಡ್ಡ ಪ್ರಮಾಣದಲ್ಲಿ ಜನರಿಗೆ ತಲುಪಿದ್ದರೂ ನಿರೀಕ್ಷೆಯಷ್ಟು ಬೆಂಬಲ ನೀಡಿಲ್ಲ. ನರೇಂದ್ರ ಮೋದಿ, ಹಿಂದುತ್ವದ ಕಡೆಗೆ ಜನರ ಒಲವು ಇನ್ನೂ ಇದ್ದಂತೆ ಕಂಡುಬರುತ್ತಿದೆ. ಆದರೆ ಕಾಂಗ್ರೆಸ್‌ನ ಒಗ್ಗಟ್ಟಿನ ಹೋರಾಟ ಮುಂದುವರಿಯಲಿದೆ. ಮುಂದಿನ ಚುನಾವಣೆಗಳಲ್ಲಿ ಪಕ್ಷವನ್ನು ಇನ್ನಷ್ಟು ಬಲಿಷ್ಠಗೊಳಿಸಲಿದ್ದೇವೆ.

- ಹರೀಶ್‌ ಕುಮಾರ್‌, ಕಾಂಗ್ರೆಸ್‌ ದ.ಕ. ಜಿಲ್ಲಾಧ್ಯಕ್ಷರು.ಫೋಟೊ

ಪದ್ಮರಾಜ್‌