ಸಾರಾಂಶ
ಸೋಮರಡ್ಡಿ ಅಳವಂಡಿ
ಕೊಪ್ಪಳ: ಸಾಂಪ್ರದಾಯಿಕ ಕಲೆಯಾಗಿರುವ ತೊಗಲುಗೊಂಬೆಯಾಟದ ಮೂಲಕವೇ ರಾಮಾಯಣ, ಮಹಾಭಾರತದ ಕತೆಯನ್ನು ದೇಶ-ವಿದೇಶಗಳಲ್ಲಿಯೂ ಹೇಳುತ್ತಿರುವ ಶತಾಯುಷಿ ಭೀಮವ್ವ ದೊಡ್ಡಬಾಳಪ್ಪ ಶಿಳ್ಳಿಕ್ಯಾತರ ಅವರಿಗೆ ಕೇಂದ್ರ ಸರ್ಕಾರ 2025ನೇ ಸಾಲಿನ ಪ್ರದ್ಮಶ್ರೀ ಪ್ರಶಸ್ತಿ ಘೋಷಣೆ ಮಾಡಿದೆ.
ತಾಲೂಕಿನ ಮೋರನಾಳ ಗ್ರಾಮದ ಭೀಮವ್ವ ತನ್ನ ಹದಿನಾಲ್ಕನೇ ವರ್ಷದಲ್ಲಿಯೇ ತೊಗಲುಗೊಂಬೆಯಾಟ ಪ್ರದರ್ಶನ ಮಾಡಿದರು. ಮೊದಮೊದಲು ತಮ್ಮೂರ ಅಕ್ಕಪಕ್ಕದ ಜಾತ್ರೆ, ತಮ್ಮೂರು ಜಾತ್ರೆಯಲ್ಲಿ ತೊಗಲುಗೊಂಬೆಯಾಟ ಪ್ರದರ್ಶಿಸಿ ಜೀವನ ಮಾಡುತ್ತಿದ್ದಳು. ಜತೆಗೆ ರಾಮಯಾಣ, ಮಹಾಭಾರತದ ಕತೆಗಳನ್ನು ಹೇಳುತ್ತಿದ್ದರು.
ಇಂದು ಅಳಿದುಹೋಗುವ ಹಂತದಲ್ಲಿರುವ ಕಲೆಯಾಗಿರುವ ತೊಗಲುಗೊಂಬೆಯಾಟವನ್ನೇ ಭೀಮವ್ವ ತನ್ನ ಉಸಿರಾಗಿಸಿಕೊಂಡಿದ್ದಾರೆ.
ಕಣ್ಮರೆಯಾಗುತ್ತಿದ್ದ ತೊಗಲುಗೊಂಬೆಯಾಟಕ್ಕೆ ಮತ್ತಷ್ಟು ಆಧುನಿಕತೆ ಅಳವಡಿಸಿಕೊಂಡು, ರಾಜ್ಯದ ಮೂಲೆ ಮೂಲೆಗಳಲ್ಲಿ ಪ್ರದರ್ಶಿಸಿದ್ದಾರೆ. ದೇಶದ ನಾನಾ ಭಾಗದಲ್ಲಿಯೂ ಪ್ರದರ್ಶನ ನೀಡಿದ್ದಾರೆ. ಅಲ್ಲದೆ ಅಮೆರಿಕ, ಪ್ಯಾರಿಸ್, ಇಟಲಿ, ಇರಾನ್, ಇರಾಕ್, ಸ್ವಿಜ್ಜರ್‌ಲ್ಯಾಂಡ್, ಹಾಲೆಂಡ್ ಹೀಗೆ ಹತ್ತಾರು ದೇಶಗಳಲ್ಲಿ ಪ್ರದರ್ಶನ ನೀಡಿದ್ದಾರೆ. ಅನಕ್ಷರಸ್ಥೆಯಾಗಿದ್ದರೂ ಡಾಕ್ಟರೆಟ್ ಕೊಡಬಹುದಾದಷ್ಟು ಪಾಂಡಿತ್ಯವನ್ನು ಈ ಕಲೆಯಲ್ಲಿ ಹೊಂದಿದ್ದಾರೆ.
ಈಗಾಗಲೇ ರಾಜ್ಯೋತ್ಸವ ಸೇರಿದಂತೆ ಹತ್ತು ಹಲವು ಪ್ರಶಸ್ತಿಗಳನ್ನು ಭೀಮವ್ವ ತನ್ನ ಮೂಡಿಗೇರಿಸಿಕೊಂಡಿದ್ದಾರೆ. ಖಾಸಗಿಯಾಗಿಯಂತೂ ಸಾಲು ಸಾಲು ಪ್ರಶಸ್ತಿಗಳು ದಕ್ಕಿವೆ. ಈಗ ಕೇಂದ್ರ ಸರ್ಕಾರ ಕೊಡಮಾಡುವ ಪದ್ಮಶ್ರೀ ಪ್ರಶಸ್ತಿಗೆ ಆಯ್ಕೆಯಾಗುವ ಮೂಲಕ ದೇಶದ ಗಮನ ಸೆಳೆದಿದ್ದಾರೆ.
ಮುಡಿಗೇರಿದ ಪ್ರಶಸ್ತಿಗಳು: ಜಾನಪದ ಮತ್ತು ಬಯಲಾಟ ಅಕಾಡೆಮಿ ಪ್ರಶಸ್ತಿ, ಜಾನಪದಶ್ರೀ ಪ್ರಶಸ್ತಿ, ಹಿರಿಯ ನಾಗರಿಕ ಪ್ರಶಸ್ತಿ, ಸಂಗೀತ, ನಾಟಕ ಆಕಾಡೆಮಿ, ರಾಜ್ಯೋತ್ಸವ ಪ್ರಶಸ್ತಿ ಸಹ ಲಭಿಸಿವೆ.
18 ಪರ್ವ ಪ್ರದರ್ಶನ: ತೊಗಲುಗೊಂಬೆಯಾಟದ ಮೂಲಕವೇ ರಾಮಾಯಣ, ಮಹಾಭಾರತ, ಕುರುಕ್ಷೇತ್ರ, ವಿರಾಟ ಪರ್ವ, ಲವ-ಕುಶ ಕಾಳಗ, ಕರ್ಣಪರ್ವ, ದ್ರೌಪದಿ ವಸ್ತ್ರಾಪಹರಣ, ಆದಿಪರ್ವ, ಸರ್ವಪರ್ವ ಸೇರಿದಂತೆ ಮಹಾಭಾರತದ 18 ಪರ್ವಗಳನ್ನು ಪ್ರದರ್ಶನ ಮಾಡಿದ್ದಾರೆ.
80 ವರ್ಷಗಳ ಸುದೀರ್ಘ ಸೇವೆ: ದಾಖಲೆಗಳ ಪ್ರಕಾರ ಅವರಿಗೆ ಈಗ 95 ವರ್ಷ. ಈಗಲೂ ಅವರಿಗೆ ಕಲೆಯ ಬಗ್ಗೆ ಆಸಕ್ತಿ ಕಡಿಮೆಯಾಗಿಲ್ಲ. ದೇವರಂತೆ ಆರಾಧಿಸುತ್ತಾರೆ. ಸುದೀರ್ಘ 80 ವರ್ಷಗಳ ಕಾಲ ತೊಗಲುಗೊಂಬೆಯಾಟದ ಸೇವೆ ಮಾಡಿದ್ದು, ಇನ್ನೂ ಮಾಡುತ್ತಲೇ ಇದ್ದಾರೆ.
ಇಡೀ ಕುಟುಂಬ: ತನ್ನ ಪತಿಯೊಂದಿಗೆ ತೊಗಲುಗೊಂಬೆಯಾಟವನ್ನು ಕಲಿತ ಭೀಮವ್ವ ಅದನ್ನು ತಾನು ಮುಂದುವರಿಸಿಕೊಂಡು ಬಂದಿದ್ದಾರೆ. ಅದನ್ನು ಮತ್ತಷ್ಟು ಉತ್ತುಂಗಕ್ಕೆ ಏರಿಸಿದ್ದಾರೆ. ಅಷ್ಟೇ ಅಲ್ಲ, ಅವರ ಮಕ್ಕಳಾದ ವಿರೂಪಾಕ್ಷಪ್ಪ, ಯಂಕಪ್ಪ ಹಾಗೂ ಕೇಶಪ್ಪ ಸಹ ತೊಗಲುಗೊಂಬೆಯಾಟ ಮುಂದುವರಿಸಿದ್ದು, ಇಡೀ ಕುಟುಂಬವೇ ತೊಗಲುಗೊಂಬೆ ಕಲಾವಿದರಾಗಿದ್ದಾರೆ.
ರಾತ್ರಿಪೂರ್ತಿ ಕತೆ ಹೇಳ್ತಾರೆ: ಭೀಮವ್ವ ಬರಿ ತೊಗಲುಗೊಂಬೆಯಾಟ ಪ್ರದರ್ಶನ ಮಾತ್ರವಲ್ಲ, ರಾಮಾಯಣ, ಮಹಾಭಾರತದ ಕತೆಗಳನ್ನು ಹೇಳುತ್ತಾರೆ. ಕೇಳುವವರು ಗಟ್ಟಿಯಾಗಿದ್ದರೆ ರಾತ್ರಿಪೂರ್ತಿ ಹೇಳುತ್ತಾರೆ. ಆದರೂ ಅವರ ಕತೆಗಳು ಮಾತ್ರ ಮುಗಿಯುವುದಿಲ್ಲ. ಇವುಗಳನ್ನು ದಾಖಲಿಸುವ ಕಾರ್ಯ ಆಗಬೇಕಾಗಿದೆ.ನನಗೆ ಅತೀವ ಸಂತೋಷವಾಗಿದೆ. ನನ್ನ ಕಲೆಗೆ ದೊಡ್ಡ ಪ್ರಶಸ್ತಿ ಬಂದಿರುವುದು ಹೆಮ್ಮೆಯ ಸಂಗತಿ. ಇದು ಕಲೆಗೆ ಸಿಕ್ಕಗೌರವ ಎಂದು ತೊಗಲುಗೊಂಬೆ ಕಲಾವಿದೆ ಭೀಮವ್ವ ಶಿಳ್ಳಿಕ್ಯಾತರ ಹೇಳುತ್ತಾರೆ.
ನಮ್ಮ ಅಜ್ಜಿಗೆ ಕೇಂದ್ರ ಸರ್ಕಾರ ಪದ್ಮಶ್ರೀ ಪ್ರಶಸ್ತಿ ನೀಡಿರುವುದು ನನಗೆ ಅತೀವ ಸಂತೋಷ ನೀಡಿದೆ. ದೇಶದ ಪ್ರಧಾನಿ ಮತ್ತು ರಾಷ್ಟ್ರಪತಿಗೆ ತುಂಬು ಹೃದಯದ ಧನ್ಯವಾದ ಹೇಳುತ್ತೇನೆ ಎಂದು ಕಲಾವಿದೆಯ ಮೊಮ್ಮಗ ಪಾಂಡುರಂಗ ಶಿಳ್ಳಿಕ್ಯಾತರ ಹೇಳುತ್ತಾರೆ.