ಅವೈಜ್ಞಾನಿಕ ಬಿಆರ್‌ಟಿಎಸ್‌ ಪಥ ಸರಿಪಡಿಸಲು ಪಾದಯಾತ್ರೆ

| Published : Jul 16 2024, 12:36 AM IST

ಅವೈಜ್ಞಾನಿಕ ಬಿಆರ್‌ಟಿಎಸ್‌ ಪಥ ಸರಿಪಡಿಸಲು ಪಾದಯಾತ್ರೆ
Share this Article
  • FB
  • TW
  • Linkdin
  • Email

ಸಾರಾಂಶ

ಸಾರ್ವಜನಿಕ ವಾಹನಗಳ ಪ್ರಮಾಣ ನಿತ್ಯ ಅಧಿಕವಾಗುತ್ತಿದೆ. ದಿನ ಬೆಳಗಾದರೆ ನೂರಾರು ಹೊಸ ವಾಹನಗಳು ರಸ್ತೆಗೆ ಇಳಿಯುತ್ತಿವೆ. ಈಗಾಗಲೇ ಸಾರ್ವಜನಿಕರಿಗೆ ನಿಗದಿಪಡಿಸಿರುವ ರಸ್ತೆಯಲ್ಲಿ ಮಾತ್ರ ಈ ವಾಹನಗಳು ಸಂಚರಿಸಬೇಕಿರುವುದು ಕಡ್ಡಾಯವಾಗಿದೆ.

ಧಾರವಾಡ:

ಹುಬ್ಬಳ್ಳಿ-ಧಾರವಾಡ ಅವಳಿ ನಗರ ಮಧ್ಯೆದ ಅವೈಜ್ಞಾನಿಕ ಬಿಆರ್‌ಟಿಎಸ್‌ ಸಾರಿಗೆ ಪಥ ಸರಿಪಡಿಸುವುದು ಸೇರಿದಂತೆ ಹಲವು ಬೇಡಿಕೆಗಳ ಈಡೇರಿಕೆಗೆ ಆಗ್ರಹಿಸಿ ಸೋಮವಾರ ಧಾರವಾಡ ಧ್ವನಿ ನೇತೃತ್ವದಲ್ಲಿ ಪಾದಯಾತ್ರೆ ಯಶಸ್ವಿಯಾಯಿತು.

ಸಮೀಪದ ನವಲೂರ ಸೇತುವೆಯಿಂದ ಜಿಲ್ಲಾಧಿಕಾರಿ ಕಚೇರಿ ವರೆಗೆ ನಡೆದ ಪಾದಯಾತ್ರೆಯಲ್ಲಿ ವಿವಿಧ ಸಂಘಟನೆಗಳ ಪದಾಧಿಕಾರಿಗಳು, ಸದಸ್ಯರು ಮತ್ತು ಸಾರ್ವಜನಿಕರು ಭಾಗವಹಿಸಿ ಬಿಆರ್‌ಟಿಎಸ್‌ ಯೋಜನೆ ಬಗ್ಗೆ ತೀವ್ರ ವಿರೋಧ ವ್ಯಕ್ತಪಡಿಸಿದರು.

ಈ ವೇಳೆ ಮಾತನಾಡಿದ ಧಾರವಾಡ ಧ್ವನಿ ಅಧ್ಯಕ್ಷ ಈಶ್ವರ ಶಿವಳ್ಳಿ, ಸಾರ್ವಜನಿಕ ವಾಹನಗಳ ಪ್ರಮಾಣ ನಿತ್ಯ ಅಧಿಕವಾಗುತ್ತಿದೆ. ದಿನ ಬೆಳಗಾದರೆ ನೂರಾರು ಹೊಸ ವಾಹನಗಳು ರಸ್ತೆಗೆ ಇಳಿಯುತ್ತಿವೆ. ಈಗಾಗಲೇ ಸಾರ್ವಜನಿಕರಿಗೆ ನಿಗದಿಪಡಿಸಿರುವ ರಸ್ತೆಯಲ್ಲಿ ಮಾತ್ರ ಈ ವಾಹನಗಳು ಸಂಚರಿಸಬೇಕಿರುವುದು ಕಡ್ಡಾಯವಾಗಿದೆ. ಅತ್ತ ಕಡೆ ಸಾರ್ವಜನಿಕರ ವಾಹನಗಳು ಬಿಆರ್‌ಟಿಎಸ್‌ ಸಾರಿಗೆ ಮಾರ್ಗದಲ್ಲಿ ಸಂಚರಿಸುವುದನ್ನು ನಿಷೇಧಿಸಲಾಗಿದೆ. ಇನ್ನೊಂದೆಡೆ ಸಾರ್ವಜನಿಕರ ವಾಹನಗಳು ಸಂಚರಿಸುವ ರಸ್ತೆಯು ದ್ವಿಪಥ ಇದೆ. ಆದರೆ, ಈ ರಸ್ತೆಗೆ ಹೊಂದಿಕೊಂಡಿರುವ ಮನೆ, ವಾಣಿಜ್ಯ ಮಳಿಗೆ, ಸರ್ಕಾರಿ ಕಚೇರಿ, ಖಾಸಗಿ ಒಡೆತನದ ಆಸ್ತಿ, ಕಟ್ಟಡಗಳಿವೆ. ಸದರಿ ಸ್ಥಳಗಳಲ್ಲಿ ವಾಹನಗಳ ನಿಲುಗಡೆ ಆಗುತ್ತಿರುವುದರಿಂದ ದ್ವಿಪಥ ರಸ್ತೆ ಮತ್ತಷ್ಟು ಇಕ್ಕಟ್ಟಾಗಿದೆ. ಧಾರವಾಡ ನಗರದ ಲಕ್ಷ್ಮೀ ಟಾಕೀಜ್ ಬಳಿಯ ಬ್ಯಾರಿಕೇಡ್ ತೆಗೆದು, ತಹಸೀಲ್ದಾರ್ ಕಚೇರಿ ಕಡೆಯಿಂದ ಸಂಗಮ ಥಿಯೇಟರ್ ಸರ್ಕಲ್ ಮೂಲಕ ಟಿಕಾರೆ ರೋಡ್‌ನತ್ತ ವಾಹನಗಳು ತೆರಳಲು ಅನುಕೂಲ ಮಾಡಬೇಕು ಎಂದು ಆಗ್ರಹಿಸಿದರು.

ಜೆಎಸ್ಸೆಸ್‌ ಕಾಲೇಜಿನ ಮುಂದಿರುವ ಅವೈಜ್ಞಾನಿಕ ಸಿಗ್ನಲ್ ಲೈಟ್ ಸರಿಪಡಿಸಿ, ವಾಹನಗಳು ಮತ್ತು ವಿದ್ಯಾರ್ಥಿಗಳು ಕಾಲೇಜಿಗೆ ಹೋಗಿ ಬರಲು ಸುಗಮ ಸಂಚಾರ ವ್ಯವಸ್ಥೆ ಆಗಬೇಕು ಸೇರಿದಂತೆ ಹಲವು ಬೇಡಿಕೆ ಈಡೇರಿಸಿ ಅವಳಿ ನಗರದ ಜನತೆಯ ಅನುಕೂಲ ಕಾಪಾಡಬೇಕೆಂದು ಒತ್ತಾಯಿಸಿದರು.

ಧಾರವಾಡದ ಜ್ಯುಬಿಲಿ ಸರ್ಕಲ್‌ದಿಂದ ನವಲೂರ ವರೆಗೆ ಮತ್ತು ಉಣಕಲ್ಲದಿಂದ ರಾಣಿ ಚೆನ್ನಮ್ಮ ವೃತ್ತದ ವರೆಗೆ ಸಾರ್ವಜನಿಕರ ಬೈಕ್, ಆಟೋರಿಕ್ಷಾ ಮತ್ತು ಕಾರುಗಳು ಸೇರಿದಂತೆ ಇತರ ಲಘು ವಾಹನಗಳು ಸಂಚರಿಸಲು ಬಹಳಷ್ಟು ಹರಸಾಹಸ ಪಡಬೇಕಾಗಿದೆ. ಆದ್ದರಿಂದ ಮೇಲೆ ಕಾಣಿಸಿದ ಹಂತಗಳಲ್ಲಿ ಸಾರ್ವಜನಿಕರಿಗೆ ಬಿಆರ್‌ಟಿಎಸ್‌ ಸಾರಿಗೆ ಮಾರ್ಗದಲ್ಲಿ ಕಾರು, ಬೈಕ್, ಆಟೋರಿಕ್ಷಾ ಸಂಚರಿಸಲು ಅನುಮತಿ ನೀಡಬೇಕು ಎಂದು ಒತ್ತಾಯಿಸಿದರು.

ಜೆಎಸ್ಸೆಸ್‌ ಕಾರ್ಯದರ್ಶಿ ಡಾ. ಅಜಿತಪ್ರಸಾದ, ಧಾರವಾಡ ವಕೀಲರ ಸಂಘದ ಅಧ್ಯಕ್ಷ ಅಶೋಕ ಏಣಗಿ, ಜಯಕರ್ನಾಟಕ ಕರ್ನಾಟಕ ಸಂಘಟನೆ ಜಿಲ್ಲಾಧ್ಯಕ್ಷ ಸುಧೀರ ಮುಧೋಳ, ನವ ಕರ್ನಾಟಕ ಸಂಘಟನೆಯ ಗಿರೀಶ ಪೂಜಾರ, ಉತ್ತರ ಕರ್ನಾಟಕ ಗುತ್ತಿಗೆದಾರರ ಸಂಘದ ಅಧ್ಯಕ್ಷ ಸುಭಾಷ್ ಪಾಟೀಲ, ಮಾಜಿ ಮೇಯರ್ ಶಿವು ಹಿರೇಮಠ, ಪಾಲಿಕೆ ಸದಸ್ಯ ಶಂಭು ಸಾಲಮನಿ, ಸಂತೋಷ ಪಟ್ಟಣಶೆಟ್ಟಿ, ವೆಂಕಟೇಶ ರಾಯ್ಕರ, ಬಸವರಾಜ ಪೊಮೊಜಿ, ಕಲಂದರ ಮುಲ್ಲಾ, ಶರಣಗೌಡ ಗಿರಡ್ಡಿ, ಮಂಜುನಾಥ ನೀರಲಕಟ್ಟಿ, ಸವಿತಾ ಅಮರಶೆಟ್ಟಿ, ಇಮ್ರಾನ ತಾಳಿಕೋಟಿ, ದಲಿತ ಯುವ ಸೇನಾ, ಅಟೋಚಾಲಕರ-ಮಾಲಕರ ಸಂಘಟನೆಯ ನೂರಾರು ಜನರು ಪಾದಯಾತ್ರೆಯಲ್ಲಿದ್ದರು.