ಸಾರಾಂಶ
ಕನ್ನಡಪ್ರಭ ವಾರ್ತೆ ಹಾಸನ
ಜಿಲ್ಲೆಯಾದ್ಯಂತ ಎಡೆಬಿಡದೆ ಸೋನೆ ಮಳೆ ಸುರಿಯುತ್ತಿರುವುದರಿಂದ ಇಡೀ ವಾತಾವರಣ ಶೀತಪೀಡಿತವಾಗಿದೆ. ಅದರಲ್ಲೂ ಮಲೆನಾಡು ಪ್ರದೇಶವಾದ ಸಕಲೇಶಪುರ ಹಾಗೂ ಅರೆ ಮಲೆನಾಡು ತಾಲೂಕುಗಳಾದ ಆಲೂರು, ಬೇಲೂರು, ಹಾಸನದಲ್ಲಿಯೂ ವ್ಯಾಪಕ ಮಳೆ ಬೀಳುತ್ತಿರುವುದರಿಂದ ನದಿಗಳಲ್ಲಿ ನೀರಿನ ಮಟ್ಟ ಹೆಚ್ಚುತ್ತಿದೆ. ಹಾಗಾಗಿ ಮುಂಜಾಗ್ರತಾ ಕ್ರಮವಾಗಿ ಈ ನಾಲ್ಕೂ ತಾಲೂಕುಗಳಲ್ಲಿ ಜು.16ರಂದು ಶಾಲೆಗಳಿಗೆ ರಜೆ ಘೋಷಣೆ ಮಾಡಲಾಗಿದೆ.ಕಳೆದ ಒಂದು ವಾರದಿಂದ ಬಿಡುವು ನೀಡಿದ್ದ ಮಳೆ ಸಕಲೇಶಪುರ ತಾಲೂಕಿನಲ್ಲಿ ಶನಿವಾರದಿಂದಲೇ ತೀವ್ರಗೊಂಡಿದೆ. ಭಾನುವಾರ ಸಂಜೆಯಿಂದ ಆಲೂರು, ಬೇಲೂರು ಹಾಗೂ ಹಾಸನ ತಾಲೂಕುಗಳಲ್ಲಿಯೂ ಮಳೆ ಆರ್ಭಟ ಮುಂದುವರೆದಿದ್ದು, ಹಗಲು ರಾತ್ರಿ ಸುರಿಯುತ್ತಿದೆ. ಸೂರ್ಯನ ಕಿರಣಗಳು ಕೂಡ ದಾಟಿ ಬರಲಾರದಷ್ಟರ ಮಟ್ಟಿಗೆ ದಟ್ಟವಾದ ಮಳೆ ಮೋಡಗಳು ಆವರಿಸಿದ್ದು, ಇಡೀ ವಾತಾವರಣವೇ ಮಂಕು ಕವಿದಂತಿದೆ.
ಸಕಲೇಶಪುರ ತಾಲೂಕಿನಲ್ಲಿ ವ್ಯಾಪಕ ಮಳೆಗೆ ಕೆಲವೆಡೆ ರಸ್ತೆಗೆ ಅಡ್ಡಲಾಗಿ ಮರಗಳು ಬಿದ್ದು ಸಂಚಾರಕ್ಕೆ ಅಡಚಣೆ ಉಂಟಾಗಿತ್ತು. ಆದರೆ, ಸ್ಥಳೀಯರೇ ಅವುಗಳನ್ನು ತೆರವು ಮಾಡಿದ್ದಾರೆ. ಅಲ್ಲಲ್ಲಿ ಗುಡ್ಡ ಕುಸಿದ ಘಟನೆಗಳು ಸಂಭವಿಸಿವೆ.ಇದಕ್ಕೂ ಮೊದಲು ಬಿದ್ದ ಮಳೆಗೆ ಈ ಭಾಗದ ಕಾಫಿ ಬೆಳೆಗಾರರು ಕಾಫಿ ತೋಟಗಳಲ್ಲಿ ಚಿಗುರು ತೆಗೆಯುವುದು, ಕಳೆ ತೆಗೆಸುವುದು ಮಾಡಿ ಗೊಬ್ಬರ ಹಾಕಿಸಿದ್ದಾರೆ. ಇನ್ನೇನಿದ್ದರೂ ಈ ಸೋನೆ ಕಳೆಯುವವರೆಗೂ ತೋಟಕ್ಕೆ ಕಾಲಿಡಲು ಸಾಧ್ಯವಿಲ್ಲ. ಸೋನೆ ಕಳೆದ ನಂತರ ಮತ್ತೆ ಗೊಬ್ಬರ ಹಾಕಿ ಚಿಗುರು ಹಾಗೂ ಕಳೆ ತೆಗೆಯುವ ಮಾಡಬೇಕಿದೆ.
ಇನ್ನು ಅರಕಲಗೂಡು, ಚನ್ನರಾಯಪಟ್ಟಣ, ಹೊಳೆನರಸೀಪುರ ತಾಲೂಕುಗಳಲ್ಲಿಯೂ ಮಳೆ ಬೀಡುತ್ತಿದ್ದು, ಬರದ ತಾಲೂಕು ಎಂದೇ ಹೆಸರುವಾಸಿಯಾದ ಅರಸೀಕೆರೆ ಭಾಗದಲ್ಲಿ ಕೂಡ ಪೂರ್ಣ ಪ್ರಮಾಣದಲ್ಲಿ ಮೋಡ ಮುಸುಕಿದ ವಾತಾವರಣ ಇದೆ. ಆಗಾಗ ಮಳೆಯೂ ಬರುತ್ತಿದೆ. ಬಯಲುಸೀಮೆ ತಾಲೂಕುಗಳಾದ ಅರಸೀಕೆರೆ ಹಾಗೂ ಚನ್ನರಾಯಪಟ್ಟಣ ತಾಲೂಕುಗಳಿಗೆ ಮುಂಗಾರು ಮಳೆಗಿಂತ ಹಿಂಗಾರು ಮಳೆ ಹೆಚ್ಚಾಗಿ ಆಗುತ್ತಿತ್ತು. ಆದರೆ, ಈ ಬಾರಿ ಮುಂಗಾರು ಮಳೆ ಕೂಡ ಬಯಲುಸೀಮೆಯ ತಾಲೂಕುಗಳಿಗೆ ತಂಪೆರೆಯುತ್ತಿದೆ.ಈ ವರ್ಷ ವಾಡಿಕೆಯಂತೆ ಬೀಳುತ್ತಿರುವ ಮಳೆಯಿಂದಾಗಿ ರೈತರು ಕೃಷಿ ಚಟುವಟಿಕೆಯಲ್ಲಿ ತೊಡಗಿದ್ದಾರೆ. ಆಲೂರು, ಹಾಸನ, ಬೇಲೂರು, ಹೊಳೆನರಸೀಪುರ, ಅರಕಲಗೂಡು ತಾಲೂಕುಗಳಲ್ಲಿ ಈಗಾಗಲೇ ಖುಷ್ಕಿ (ಹೊಲ) ಜಮೀನುಗಳಲ್ಲಿ ಆಲೂಗಡ್ಡೆ, ಮುಸುಕಿನ ಜೋಳ, ಶುಂಠಿ ಬಿತ್ತನೆ ಮಾಡಿದ್ದು, ಅವುಗಳಿಗೆ ಮಾಡಬೇಕಾದ ಕೆಲಸಗಳನ್ನೆಲ್ಲಾ ಮಾಡಿ ಮುಗಿಸಿದ್ದಾರೆ. ಇನ್ನೇನಿದ್ದರೂ ಭತ್ತದ ನಾಟಿಗೆ ಸಿದ್ಧತೆ ನಡೆಸುತ್ತಿದ್ದು, ಬತ್ತದ ಸಸಿ ಮಡಿಗಳನ್ನು ಅಣಿಗೊಳಿಸುತ್ತಿದ್ದಾರೆ. ಗದ್ದೆಗಳ ಉಳುಮೆ ಮಾಡಿ ಹದಗೊಳಿಸುತ್ತಿದ್ದಾರೆ. ಜುಲೈ ಕಡೆಯಲ್ಲಿ ಹಾಗೂ ಆಗಸ್ಟ್ ತಿಂಗಳಲ್ಲಿ ಬತ್ತದ ನಾಟಿ ಕಾರ್ಯ ಪೂರ್ಣಗೊಳಿಸಲು ಬೇಕಾದ ಎಲ್ಲಾ ಸಿದ್ಧತೆಗಳನ್ನು ರೈತರು ಮಾಡಿಕೊಂಡಿದ್ದಾರೆ.
ಹವಾಮಾನ ಇಲಾಖೆ ಜು.17ರವರೆಗೆ ಜಿಲ್ಲೆಯಾದ್ಯಂತ ಆರೆಂಜ್ ಅಲರ್ಟ್ ಘೊಷಿಸಿದೆ. ಹಾಗಾಗಿ ಇನ್ನೂ ಎರಡು ದಿನ ಮಳೆಯಾಗಲಿದೆ. ಈ ನಿಟ್ಟಿನಲ್ಲಿ ಮುಂಜಾಗ್ರತಾ ಕ್ರಮವಾಗಿ ಶಿಕ್ಷಣ ಇಲಾಖೆ ಉಪ ನಿರ್ದೇಶಕರಾದ ಎಚ್.ಕೆ.ಪಾಂಡು ನಾಲ್ಕು ತಾಲೂಕುಗಳಿಗೆ ಅನ್ವಯಿಸುವಂತೆ ಇಂದು (ಜು.16) ರಜೆ ಘೋಷಿಸಿದ್ದಾರೆ.* ಬಾಕ್ಸ್‌ನ್ಯೂಸ್: ಮಣ್ಣು ಕುಸಿತದ ಭೀತಿಸಕಲೇಶಪುರ ತಾಲೂಕಿನಲ್ಲಿ ನಡೆಯುತ್ತಿರುವ ಬೆಂಗಳೂರು-ಮಂಗಳೂರು ರಾಷ್ಟ್ರೀಯ ಹೆದ್ದಾರಿ ಚತುಷ್ಪಥ ಕಾಮಗಾರಿಗಾಗಿ ರಸ್ತೆ ಅಗಲೀಕರಣ ಮಾಡಲಾಗಿದೆ. ರಸ್ತೆ ಬದಿಯ ಗುಡ್ಡಗಳನ್ನು ಅವೈಜ್ಞಾನಿಕವಾಗಿ ಅಗೆದಿರುವುದರಿಂದ ಈ ಮಳೆಗೆ ಮಣ್ಣು ಕುಸಿಯುತ್ತಿದೆ. ರಸ್ತೆ ಬದಿಯ ಗುಡ್ಡಗಳನ್ನು ಕಡಿದಾಗಿ ಅಗೆದಿರುವುದರಿಂದ ರಸ್ತೆ ಬದಿಯ ಕೆಲ ಮನೆಗಳು ಅಪಾಯದ ಅಂಚಿನಲ್ಲಿವೆ. ಈ ಮನೆಗಳಲ್ಲಿ ವಾಸ ಮಾಡುತ್ತಿರುವವರು ಜೀವಭಯದಲ್ಲಿ ದಿನ ಕಳೆಯುವಂತಾಗಿದೆ.
* ಬಾಕ್ಸ್‌ನ್ಯೂಸ್: ನದಿಗಳಲ್ಲಿ ನೀರಿನ ಮಟ್ಟ ಹೆಚ್ಚಳಸಕಲೇಶಪುರ ತಾಲೂಕಿನಲ್ಲಂತೂ ಒಂದು ನಿಮಿಷವೂ ಬಿಡುವು ನೀಡದ ಮಳೆಯಿಂದಾಗಿ ನದಿ ಹಾಗೂ ಹಳ್ಳಕೊಳ್ಳಗಳಲ್ಲಿ ನೀರಿನ ಮಟ್ಟ ಏರಿಕೆ ಆಗುತ್ತಿದೆ. ಪರಿಣಾಮವಾಗಿ ಹೇಮಾವತಿ ನದಿಯಲ್ಲಿ ನೀರಿನ ಹರಿವು ಹೆಚ್ಚಿದೆ. ಇದರಿಂದಾಗಿ ಹೇಮಾವತಿ ಜಲಾಶಯಕ್ಕೆ 13,338 ಕ್ಯುಸೆಕ್‌ನಷ್ಟು ನೀರು ಹರಿದುಬರುತ್ತಿದೆ. ಇನ್ನು ಚಿಕ್ಕಮಗಳೂರು ಭಾಗದಲ್ಲಿಯೂ ವ್ಯಾಪಕ ಮಳೆಯಾಗುತ್ತಿರುವ ಕಾರಣ ಬೇಲೂರು ತಾಲೂಕಿನಲ್ಲಿರುವ ಯಗಚಿ ಜಲಾಶಯಕ್ಕೂ ನೀರಿನ ಹರಿವು ಹೆಚ್ಚಿದೆ.