ಸಾರಾಂಶ
ಯಾದಗಿರಿ ಜಿಲ್ಲೆ ವಡಗೇರಾದ ಶಿವಪುರ, ಗೋನಾಲ ಗ್ರಾಮಸ್ಥರಿಂದ ಜಿಲ್ಲಾಧಿಕಾರಿಗೆ ಪತ್ರ
ಆಕಾರಬಂದ್, ಟಿಪ್ಪಣಿಗೂ ಆಗದ ಹೊಂದಾಣಿಕೆ: ಸಾವಿರಕ್ಕೂ ಹೆಚ್ಚು ರೈತರ ಭೂಮಿ ಸಮಸ್ಯೆಕನ್ನಡಪ್ರಭ ವಾರ್ತೆ ಯಾದಗಿರಿ
ವರ್ಷಾನುಗಟ್ಟಲೇ ಕಚೇರಿ ಕಚೇರಿ ಅಲೆದಾಡಿದರೂ ಸಹ, 893 ರೈತರ ಪಹಣಿ ಹಾಗೂ ಟಿಪ್ಪಣಿ ಹೊಂದಾಣಿಕೆ ಸಮಸ್ಯೆ ಬಗೆಹರಿಸಲು ರಾಜ್ಯ ಸರ್ಕಾರಕ್ಕೆ ಸಾಧ್ಯವಾಗುತ್ತಿಲ್ಲವಾದ್ದರಿಂದ, ಕೂಗಳತೆ ದೂರದಲ್ಲಿರುವ ತೆಲಂಗಾಣ ರಾಜ್ಯಕ್ಕೆ ತಮ್ಮ ತಮ್ಮ ಗ್ರಾಮಗಳನ್ನು ಸೇರಿಸಲು ಅನುಮತಿಸಿ ಎಂದು ಯಾದಗಿರಿ ಜಿಲ್ಲೆ ವಡಗೇರಾ ತಾಲೂಕಿನ ಶಿವಪುರ ಹಾಗೂ ಗೋನಾಲ ಗ್ರಾಮಸ್ಥರು ಗುರುವಾರ ಜಿಲ್ಲಾಧಿಕಾರಿ ಭೇಟಿಯಾಗಿ, ಮನವಿ ಪತ್ರ ಸಲ್ಲಿಸಿದ ಅಚ್ಚರಿ ಘಟನೆಯೊಂದು ನಡೆದಿದೆ.
ತೆಲಂಗಾಣದ ಕೃಷ್ಣಾ ಪಟ್ಟಣದ ಸಮೀಪಕ್ಕಂಟಿಕೊಂಡ, ಕೃಷ್ಣಾ ನದಿಪಾತ್ರದ ರಾಜ್ಯದ ಯಾದಗಿರಿ ಜಿಲ್ಲೆಯ ವಡಗೇರಾ ತಾಲೂಕಿನ ಶಿವಪುರ ಹಾಗೂ ಗೋನಾಲದ ಈ ಗ್ರಾಮಸ್ಥರು ತೆಲಂಗಾಣ ರಾಜ್ಯಕ್ಕೆ ಸೇರುವ ಬಯಕೆ ವ್ಯಕ್ತಪಡಿಸಿದ್ದು, ತಮ್ಮಗಳ ಸಮಸ್ಯೆ ಬಗೆಹರಿಸಲು ರಾಜ್ಯ ಸರ್ಕಾರದ ಅಧಿಕಾರಿಗಳಿಗೆ ಆಗುತ್ತಿಲ್ಲವಾದ್ದರಿಂದ ಈ ನಿರ್ಣಯಕ್ಕೆ ಬಂದಿರುವುದಾಗಿ ತಿಳಿಸಿದ್ದಾರೆ.ಈ ಹಿಂದೆ ಅನೇಕ ವರ್ಷಗಳಿಂದ ಮನವಿ ಸಲ್ಲಿಸುತ್ತ ಬಂದಿರುವ ಇಲ್ಲಿನ ರೈತರು, ಕೆಲ ತಿಂಗಳ ಹಿಂದೆ ಸಚಿವ ಕೃಷ್ಣ ಬೈರೇಗೌಡರು ಯಾದಗಿರಿಗೆ ಬಂದಿದ್ದಾಗಲೂ ತಮ್ಮ ಅಳಲು ತೋಡಿಕೊಂಡಿದ್ದರು. ಚುನಾವಣೆ ಬಹಿಷ್ಕಾರದ ಎಚ್ಚರಿಕೆಯನ್ನೂ ನೀಡಿದ್ದರು. ಈ ಸಮಸ್ಯೆ ಬಗೆಹರಿಸುವು ಭರವಸೆ ಈಡೇರದಿದ್ದರಿಂದ, ರೋಸಿಹೋದ ಗ್ರಾಮಸ್ಥರು ತೆಲಂಗಾಣಕ್ಕೆ ಸೇರಲು ಬಯಸಿದ್ದಾರಂತೆ.
ಶಿವಪುರ, ಗೋನಾಲ ಹಾಗೂ ಶಹಾಪುರ ತಾಲೂಕಿನ ಗುಂಡಗುರ್ತಿ ಗ್ರಾಮಗಳ ಸುಮಾರು 890ಕ್ಕೂ ಹೆಚ್ಚು ರೈತರ, ಹತ್ತು ಸಾವಿರಕ್ಕೂ ಹೆಚ್ಚು ಎಕರೆ ಪ್ರದೇಶದ ಆಕಾರ್ಬಂದ್ ಹಾಗೂ ಟಿಪ್ಪಣಿ ದಾಖಲೆಗಳು ಒಂದಕ್ಕೊಂದು ತಾಳೆಯಾಗುತ್ತಿಲ್ಲವಾದ್ದರಿಂದ ರೈತರ ಜಮೀನುಗಳ ಮಾರಾಟ, ಖರೀದಿ, ನೋಂದಣಿ ಅಥವಾ ಸರ್ಕಾರದ ಮತ್ತಿತರೆ ಯೋಜನೆಗಳನ್ನು ಪಡೆಯಲು ಸಾಧ್ಯವಾಗುತ್ತಿಲ್ಲ. ಪಹಣಿಯಲ್ಲಿ ನಮೂದಿಸಿದ ದಾಖಲೆಗೂ, ಜಿಪಿಎಸ್ ಲೋಕೇಶನ್‌ಗೂ ಭಾರಿ ವ್ಯತ್ಯಾಸಗಳು ಕಂಡುಬರುತ್ತಿದ್ದರಿಂದ, ರೈತರಿಗೆ ಈ ಸಮಸ್ಯೆ ಕಾಡುತ್ತಿದೆ. ಪಹಣಿಯಲ್ಲಿ 5 ಎಕರೆ ಇದ್ದರೆ, ಜಾಗೆಯಲ್ಲಿ 10 ಎಕರೆ ತೋರಿಸುತ್ತದೆ, 10 ಎಕರೆ ಇದ್ದರೆ 4 ಎಕರೆ ತೋರಿಸುತ್ತದೆ. ಸಾವಿರಾರು ರೈತರಿಗೆ ಈ ಸಮಸ್ಯೆ ಕಾಡುತ್ತಿದೆ. ಬ್ರಿಡ್ಜ್ ಕಂ ಬ್ಯಾರೇಜಿನ ಭೂಸಂತ್ರಸ್ತರಿಗೂ ಇದೇ ತಾಂತ್ರಿಕ ಕಾರಣದಿಂದ ಪರಿಹಾರವೂ ಸಿಕ್ಕಿಲ್ಲ. ಅಧಿಕಾರಿಗಳಾರೂ ಕೇಳುತ್ತಿಲ್ಲ ಅಂತಾರೆ ಶಿವಪುರದ ನಾಗರಾಜ್.-
12ವೈಡಿಆರ್16 : ಶಿವಪುರ-ಗೋನಾಲ ಗ್ರಾಮಸ್ಥರ ಪತ್ರ12ವೈಡಿಆರ್17 : ಜಿಲ್ಲಾಧಿಕಾರಿಗಳಿಗೆ ಮನವಿ ಸಲ್ಲಿಸಿದ ಗ್ರಾಮಸ್ಥರು.
---000---