ಸ್ವಚ್ಛತೆಯ ಜಾಗೃತಿಗಾಗಿ ಅಂಕೋಲಾದಿಂದ ಗೋಕರ್ಣಕ್ಕೆ ಪಹರೆ ಪಾದಯಾತ್ರೆ

| Published : Mar 11 2024, 01:16 AM IST

ಸಾರಾಂಶ

ಪ್ರವಾಸಿ ತಾಣದ ಸ್ವಚ್ಛತೆಗಾಗಿ ಕಾರವಾರದಿಂದ ಇಲ್ಲಿಗೆ ಆಗಮಿಸಿ ಜತೆಯಾಗಿರುವುದು ಪ್ರಶಂಸನಾರ್ಯ. ಇಂತಹ ಕಾರ್ಯಕ್ಕೆ ತಮ್ಮ ಸಹಾಯ-ಸಹಕಾರ ನಿರಂತರವಾಗಿದೆ

ಗೋಕರ್ಣ: ಕಾರವಾರ ಪಹರೆ ವೇದಿಕೆಯ ಸದಸ್ಯರು ಸ್ವಚ್ಛತೆಯ ಜಾಗೃತಿಗಾಗಿ ಭಾನುವಾರ ಅಂಕೋಲಾದಿಂದ ಗೋಕರ್ಣದ ವರೆಗೆ 15 ಕಿಮೀ ಪಾದಯಾತ್ರೆ ನಡೆಸಿದರು. ಇದೇ ವೇಳೆ ಗೋಕರ್ಣ ಪಹರೆ ಘಟಕ ಉದ್ಘಾಟಿಸಲಾಯಿತು.

ಬೆಳಗ್ಗೆ ಅಂಕೋಲಾ ಗಾಂಧಿ ಸ್ಮಾರಕ ಭವನದಿಂದ ಹೊರಟ ಪಾದಯಾತ್ರೆ ಗಂಗಾವಳಿ ಮೂಲಕ ಮಧ್ಯಾಹ್ನ ಇಲ್ಲಿನ ಗೋಗರ್ಭ ತಲುಪಿತು. ನಂತರ ಗ್ರಾಪಂ ಅಧ್ಯಕ್ಷೆ ಸುಮನಾ ಗೌಡ ಹಾಗೂ ಜಲ ಗೌರಿ ಎಂದೇ ಖ್ಯಾತರಾದ ಗೌರಿ ನಾಯ್ಕ ಜಂಟಿಯಾಗಿ ಇಲ್ಲಿನ ನೂತನ ಪಹರೆ ವೇದಿಕೆ ಘಟಕಕ್ಕೆ ಚಾಲನೆ ನೀಡಿದರು.

ಶಾಸಕ ದಿನಕರ ಶೆಟ್ಟಿ ಗೌರಿ ನಾಯ್ಕ ಅವರನ್ನು ಗೌರವಿಸಿದರು. ಬಳಿಕ ಮಾತನಾಡಿದ ಅವರು, ಪ್ರವಾಸಿ ತಾಣದ ಸ್ವಚ್ಛತೆಗಾಗಿ ಕಾರವಾರದಿಂದ ಇಲ್ಲಿಗೆ ಆಗಮಿಸಿ ಜತೆಯಾಗಿರುವುದು ಪ್ರಶಂಸನಾರ್ಯ. ಇಂತಹ ಕಾರ್ಯಕ್ಕೆ ತಮ್ಮ ಸಹಾಯ-ಸಹಕಾರ ನಿರಂತರವಾಗಿದೆ ಎಂದ ಅವರು, ಪಹರೆ ಮುಖ್ಯಸ್ಥ ವಕೀಲ ನಾಗರಾಜ ನಾಯಕ ಅವರನ್ನು ಅಭಿನಂದಿಸಿದರು. ಗೌರಿ ನಾಯ್ಕ ಅವರಿಗೆ ಪದ್ಮಶ್ರೀ ಪ್ರಶಸ್ತಿ ಒಲಿದು ಬರಲಿ ಎಂದು ಆಶಿಸಿದರು.

ಗ್ರಾಪಂ ಅಧ್ಯಕ್ಷೆ ಸುಮನಾ ಗೌಡ ಮಾತನಾಡಿ, ಸ್ವಚ್ಛತೆ ನಿರ್ವಹಿಸುವುದು ಸವಾಲಾಗಿರುವ ಇಂದಿನ ದಿನದಲ್ಲಿ ಇಂತಹ ಸಂಘಟನೆ ನಮಗೆ ಸಹಕಾರಿಯಾಗಿದ್ದು, ನಾವು ಜತೆಯಾಗಿದ್ದು, ಸುಂದರ ಪರಿಸರ ನಿರ್ಮಾಣಕ್ಕೆ ಕೈಜೋಡಿಸುತ್ತೇವೆ. ಸಂಘಟನೆಯ ಕಾರ್ಯ ನಿರಂತರವಾಗಿರಲಿ ಎಂದರು.

ತೊರ್ಕೆ ಗ್ರಾಪಂ ಅಧ್ಯಕ್ಷ ಆನಂದ ಕವರಿ, ಹನೇಹಳ್ಳಿ ಗ್ರಾಪಂ ಅಧ್ಯಕ್ಷ ಸಣ್ಣು ಗೌಡ ಮಾತನಾಡಿ, ಒಟ್ಟಾಗಿ ಯಾವುದೇ ಕಾರ್ಯ ಮಾಡಿದರು ಅದು ಸಫಲವಾಗುತ್ತದೆ. ಇದಕ್ಕೆ ಪಹರೆಯೇ ಸಾಕ್ಷಿಯಾಗಿದೆ ಎಂದರು.

ಮಹಾಬಲೇಶ್ವರ ಮಂದಿರದ ಮೇಲುಸ್ತುವಾರಿ ಸಮಿತಿ ಸದಸ್ಯ ದತ್ತಾತ್ರೇಯ ಹಿರೇಗಂಗೆ ಮಾತನಾಡಿ, ಶುಚಿತ್ವದಿಂದ ನಾವು ದೇವಾಲಯಕ್ಕೆ ತೆರಳುವುದು, ಪೂಜೆಗೈಯುತ್ತೇವೆ, ಇದರ ಉದ್ದೇಶ ಸ್ವಚ್ಛತೆ. ಇದರಂತೆ ನಿರಂತರ ಈ ಪದ್ಧತಿ ಅಳವಡಿಸಿಕೊಂಡರೆ ಸ್ವಚ್ಛತೆಯ ಪಾಠ ರೂಢಿಗತವಾಗುವ ಮೂಲಕ ಪರಿಸರ ಸುಂದರವಾಗಿಡಲು ಸಹಕಾರವಾಗುತ್ತದೆ ಎಂದರು.

ಪ್ರಾಸ್ತಾವಿಕವಾಗಿ ಮಾತನಾಡಿದ ಪಹರೆ ವೇದಿಕೆ ಅಧ್ಯಕ್ಷ ನಾಗರಾಜ ನಾಯಕ, ಒಂಭತ್ತು ವರ್ಷ ನಿರಂತರವಾಗಿ ಸ್ವಚ್ಛತೆಯಲ್ಲಿ ಪಾಲ್ಗೊಂಡಿರುವ ಮೊದಲ ಸಂಘಟನೆ ಎಂಬುದು ಹೆಮ್ಮೆ ನಮ್ಮದಾಗಿದ್ದು, ಈ ಕಾರ್ಯ ಮತ್ತಷ್ಟು ವಿಸ್ತರಿಸಿ ಇಲ್ಲಿ ಪ್ರಾರಂಭಿಸಿದ್ದು, ಪುಣ್ಯ ಕ್ಷೇತ್ರದ ಸ್ವಚ್ಛತೆಗೆ ಎಲ್ಲರೂ ಜೊತೆಯಾಗೋಣ ಎಂದರು.

ತಾಪಂ ಸದಸ್ಯ ಮಹೇಶ ಶೆಟ್ಟಿ, ನಾಡುಮಾಸ್ಕೇರಿ ಗ್ರಾಪಂ ಅಧ್ಯಕ್ಷ ಈಶ್ವರ ಗೌಡ, ಸದಸ್ಯ ರಾಜೇಶ ನಾಯಕ ಮಾತನಾಡಿದರು.

ವೇದಿಕೆಯಲ್ಲಿ ಪಹರೆ ವೇದಿಕೆ ಗೌರವಾಧ್ಯಕ್ಷೆ ಖೈರುನ್ನಿಸಾ, ಅಂಕೋಲಾ ತಾಲೂಕು ವೈದ್ಯಾಧಿಕಾರಿ ಡಾ. ಜಗದೀಶ ನಾಯ್ಕ, ಹಾಲಕ್ಕಿ ಒಕ್ಕಲಿಗ ಸಮಾಜದ ಪ್ರಮುಖ ಪ್ರಕಾಶ ಗೌಡ ಉಪಸ್ಥಿತರಿದ್ದರು.

ಕನ್ನಡಪ್ರಭ ವಿಶೇಷ ಪ್ರತಿನಿಧಿ ವಸಂತಕುಮಾರ ಕತಗಾಲ ಗೌರಿ ನಾಯ್ಕ ಅವರನ್ನು ಪರಿಚಯಿಸಿದರು. ಪತ್ರಕರ್ತ ಟಿ.ಬಿ. ಹರಿಕಾಂತ ನಿರ್ವಹಿಸಿದರು. ಇಲ್ಲಿನ ಘಟಕದ ಪ್ರಮುಖ ನಾಗೇಶ ಗೌಡರವಿಗೆ ಸ್ವಚ್ಛತೆ ಪರಿಕರ ನೀಡುವ ಮೂಲಕ ಉದ್ಘಾಟಿಸಿದ್ದು ವಿಶೇಷವಾಗಿತ್ತು.

ಇದೇ ವೇಳೆ ಪಹರೆ ನೂತನ ಗೌರವಾಧ್ಯಕ್ಷರಾಗಿ ಆಯ್ಕೆಯಾದ ಜಿ.ಡಿ. ಮನೋಜ ಅವರಿಗೆ ರಾಷ್ಟಧ್ವಜ ನೀಡುವ ಮೂಲಕ ಅಧಿಕಾರ ಹಸ್ತಾಂತರಿಸಲಾಯಿತು. ಸ್ಥಳೀಯ ಘಟಕದ ಸದಸ್ಯರು ಸಹಕಾರ ನೀಡಿದರು.