ಕುಸ್ತಿ ಉಳಿವಿಗೆ ತೊಡೆ ತಟ್ಟಿದ ಪೈಲವಾನರು

| Published : Jan 23 2025, 12:47 AM IST

ಕುಸ್ತಿ ಉಳಿವಿಗೆ ತೊಡೆ ತಟ್ಟಿದ ಪೈಲವಾನರು
Share this Article
  • FB
  • TW
  • Linkdin
  • Email

ಸಾರಾಂಶ

ಸಾಮಾಜಿಕ, ರಾಜಕೀಯ, ಆರ್ಥಿಕ ಅನಿಶ್ಚಿತತೆಯಿಂದಾಗಿ ಗ್ರಾಮೀಣ ಕ್ರೀಡೆ ಕುಸ್ತಿ ಪುನರುಜ್ಜೀವನಗೊಳಿಸಬೇಕಿದೆ. ಈಗ ನೀಡುತ್ತಿರುವ ಮಾಸಿಕ ₹ 3,500 ಮಾಸಾಶನವನ್ನು ತಿಂಗಳಿಗೆ ಕನಿಷ್ಠ ₹ 10 ಸಾವಿರಕ್ಕೆ ಹೆಚ್ಚಿಸಬೇಕು. ಮಾಸಾಶನಕ್ಕೆ ಚಾಲ್ತಿಯಲ್ಲಿರುವ ಆದಾಯ ಮಿತಿ ತೆಗೆದುಹಾಕಬೇಕು ಎಂದು ಪೈಲ್ವಾನರು ಸರ್ಕಾರಕ್ಕೆ ಆಗ್ರಹಿಸಿದರು.

ಧಾರವಾಡ:

ರಾಷ್ಟ್ರೀಯ ಪರಂಪರೆ, ಸಂಸ್ಕೃತಿ ಮತ್ತು ಇತಿಹಾಸದೊಂದಿಗೆ ಹಾಸು ಹೊಕ್ಕಾಗಿರುವ ಕುಸ್ತಿ ಕಲೆ ಉಳಿಸಿ, ಕುಸ್ತಿ ಕ್ರೀಡಾಪಟುಗಳಿಗೆ ಪ್ರೋತ್ಸಾಹಿಸುವ ನಿಟ್ಟಿನಲ್ಲಿ ಸರ್ಕಾರದ ಗಮನ ಸೆಳೆಯಲು ಹಾಗೂ ಧಾರವಾಡದ ಪ್ರತಿಷ್ಠಿತ ಮಾರುತಿ ಗರಡಿಮನೆ ಉಳಿವಿಗಾಗಿ ಜಿಲ್ಲಾ ಕುಸ್ತಿ ಸಂಘದ ನೇತೃತ್ವದಲ್ಲಿ ಬುಧವಾರ ಬೃಹತ್‌ ಪ್ರತಿಭಟನಾ ರ್‍ಯಾಲಿಯನ್ನು ನಗರದಲ್ಲಿ ನಡೆಸಲಾಯಿತು.

ಆರಂಭದಲ್ಲಿ ಕಲಘಟಗಿ ರಸ್ತೆಯಲ್ಲಿರುವ ಮಾರುತಿ ಗರಡಿ ಮನೆ ಎದುರು ಧಾರವಾಡ ಮಾತ್ರವಲ್ಲದೇ ರಾಜ್ಯದ ವಿವಿಧೆಡೆಯಿಂದ ಆಗಮಿಸಿದ 100ಕ್ಕೂ ಹೆಚ್ಚು ಹಾಲಿ ಹಾಗೂ ಮಾಜಿ ಪೈಲವಾನಗಳು ಸಮಾವೇಶಗೊಂಡು ಅಲ್ಲಿಂದ ಜಿಲ್ಲಾಧಿಕಾರಿ ಕಚೇರಿ ವರೆಗೆ ಪ್ರತಿಭಟನಾ ರ್‍ಯಾಲಿ ನಡೆಸಿದರು.

ಪ್ರಸ್ತುತ ಸಂದರ್ಭದಲ್ಲಿ ಸಾಮಾಜಿಕ, ರಾಜಕೀಯ, ಆರ್ಥಿಕ ಅನಿಶ್ಚಿತತೆಯಿಂದಾಗಿ ಗ್ರಾಮೀಣ ಕ್ರೀಡೆ ಕುಸ್ತಿ ಪುನರುಜ್ಜೀವನಗೊಳಿಸಬೇಕಿದೆ. ಈಗ ನೀಡುತ್ತಿರುವ ಮಾಸಿಕ ₹ 3,500 ಮಾಸಾಶನವನ್ನು ತಿಂಗಳಿಗೆ ಕನಿಷ್ಠ ₹ 10 ಸಾವಿರಕ್ಕೆ ಹೆಚ್ಚಿಸಬೇಕು. ಮಾಸಾಶನಕ್ಕೆ ಚಾಲ್ತಿಯಲ್ಲಿರುವ ಆದಾಯ ಮಿತಿ ತೆಗೆದುಹಾಕಬೇಕು. ಪ್ರತಿ ಜಿಲ್ಲೆಗೊಂದು ಕುಸ್ತಿ ವಸತಿ ತರಬೇತಿ ಶಾಲೆ ಹಾಗೂ ಕುಸ್ತಿ ಕ್ರೀಡಾಂಗಣ ನಿರ್ಮಿಸುವುದು ಸೇರಿದಂತೆ ಹಲವು ಬೇಡಿಕೆಗಳ ಬಗ್ಗೆ ಪೈಲವಾನರು ಸರ್ಕಾರದ ಗಮನ ಸೆಳೆದರು.

ಮಾಜಿ ಮತ್ತು ಹಾಲಿ ಕುಸ್ತಿಪಟುಗಳಿಗೆ ಉಚಿತ ರೈಲ್ವೆ ಮತ್ತು ಬಸ್ ಪಾಸ್‌ ನೀಡಬೇಕು. ಮಾಸಾಶನ ಪಡೆಯಲು ಈಗಿರುವ ವಯೋಮಿತಿಯನ್ನು 50ರಿಂದ 40 ವರ್ಷಕ್ಕೆ ಇಳಿಸಬೇಕು. ಸರ್ಕಾರಿ ನಿವೇಶನ ಹಂಚಿಕೆಯಲ್ಲಿ ಕುಸ್ತಿಪಟುಗಳಿಗೆ ಆದ್ಯತೆ ನೀಡಬೇಕು. ಮಾಜಿ ಕುಸ್ತಿಪಟುಗಳು ನೀಡಿರುವ ಮಾಸಾಶನದ ಅರ್ಜಿಗಳನ್ನು ಮಂಜೂರು ಮಾಡಿಸಲು ಕ್ರಮಕೈಗೊಳ್ಳಬೇಕು. ಈ ಮುಂಚೆ ಮಾಸಾಶನವನ್ನು ಗ್ರಾಮೀಣ, ತಾಲೂಕು ಮತ್ತು ಜಿಲ್ಲಾಮಟ್ಟಗಳಲ್ಲಿ ಸಾಧನೆ ಮಾಡಿದವರಿಗೂ ಕೂಡ ಮಂಜೂರು ಮಾಡುತ್ತಿದ್ದರು. ಆದರೆ ಇತ್ತೀಚೆಗೆ ರಾಜ್ಯ ಮತ್ತು ರಾಷ್ಟ್ರಮಟ್ಟದಲ್ಲಿ ಸಾಧನೆ ಮಾಡಿದವರಿಗೆ ಮಾತ್ರ ಮಂಜೂರು ಮಾಡುವುದಾಗಿ ತಿಳಿದಿದೆ. ಆದ್ದರಿಂದ ಸ್ಥಳೀಯ ಮಟ್ಟದ ಕುಸ್ತಿ ಕ್ರೀಡೆಯಲ್ಲಿ ಭಾಗವಹಿಸಿದವರಿಗೂ ಮಾಸಾಶನ ಸಿಗುವಂತೆ ಕ್ರಮಕೈಗೊಳ್ಳಬೇಕು ಎಂದು ಆಗ್ರಹಿಸಲಾಯಿತು.

ಇದಲ್ಲದೇ ಸರ್ಕಾರಿ ಉದ್ಯೋಗಗಳಲ್ಲಿ ಅದರಲ್ಲೂ ಪೊಲೀಸ್, ಅಗ್ನಿಶಾಮಕದಳ, ಗೃಹರಕ್ಷಕ ದಳ ಮುಂತಾದ ಇಲಾಖೆಗಳಲ್ಲಿ ಕನಿಷ್ಠ ಎತ್ತರ ಹೊಂದಿರಬೇಕಾದ ಕರಾರು ಇದ್ದು, ಈ ಕುರಿತು ಸೂಕ್ತ ರಿಯಾಯಿತಿ ನೀಡಲು ಕ್ರಮಕೈಗೊಳ್ಳಬೇಕು. ಅತಿ ಮುಖ್ಯವಾಗಿ ರಾಷ್ಟ್ರೀಯ ಮತ್ತು ಅಂತಾರಾಷ್ಟ್ರೀಯ ಮಟ್ಟದಲ್ಲಿ ಹೆಸರು ಮಾಡಿದ ಕರ್ನಾಟಕದ ಖ್ಯಾತ ಕುಸ್ತಿಪಟು ದಿ. ಚಂಬಾ ಮುತನಾಳ ಹೆಸರಿನಲ್ಲಿ ರಾಷ್ಟ್ರೀಯ ಮಟ್ಟದ ಕುಸ್ತಿ ಪಂದ್ಯಾಟವನ್ನು ಧಾರವಾಡ ಮತ್ತು ಬೆಳಗಾವಿಯಲ್ಲಿ ಅನುಕ್ರಮವಾಗಿ ನಡೆಯುವಂತೆ ಕ್ರಮಕೈಗೊಳ್ಳಬೇಕು. ಹುಬ್ಬಳ್ಳಿ-ಧಾರವಾಡ ಮಹಾನಗರ ಪಾಲಿಕೆ ಪ್ರತಿ ವರ್ಷ“ಮಹಾಪೌರಕೇಸರಿ ನಾಮಾಂಕಿತ ಕುಸ್ತಿಪಂದ್ಯಾವಳಿ ನಡೆಸಲು ಕ್ರಮ ಕೈಗೊಳ್ಳಬೇಕು ಎಂಬ ಬೇಡಿಕೆಗಳನ್ನು ಜಿಲ್ಲಾಧಿಕಾರಿ ಮೂಲಕ ಸರ್ಕಾರದ ಮುಂದೆ ಇಡಲಾಯಿತು.

ಈ ವೇಳೆ ಮುಖಂಡರಾದ ಪಿ.ಎಚ್‌. ನೀರಲಕೇರಿ, ಭಾರತೀಯ ಶೈಲಿಯ ಕುಸ್ತಿ ಸಂಘದ ರಾಜ್ಯಾಧ್ಯಕ್ಷ ರತ್ನಕುಮಾರ ಮಠಪತಿ, ಓಲಂಪಿಯನ್‌ ಎಂ.ಆರ್‌. ಪಾಟೀಲ, ಕರ್ನಾಟಕ ಕೇಸರಿ ಅರ್ಜುನ ಖಾನಾಪುರ, ಕರ್ನಾಟಕ ಕೇಸರಿ ರಾಜಾಸಾಬ್‌ ಉಗರಗೋಳ, ಕರ್ನಾಟಕ ಕುಮಾರ ಮುಕ್ತುಂಸಾಬ್‌ ನದಾಫ್‌, ಮಲ್ಲೇಶಪ್ಪ ಹಿರೇಹೊನ್ನಿಹಳ್ಳಿ, ಮಲ್ಲಿಕಾರ್ಜುನ ಮುನವಳ್ಳಿ, ದಿವಪ್ಪ ಶಲವಡಿ, ಗುರುನಾಥ ದಾನ್ವಿನ್ನವರ, ಲಿಂಗರಾಜ ಹಡಪದ, ಶಿವಲಿಂಗ ದುಮ್ಮವಾಡ, ಮಡಿವಾಳಪ್ಪ ಕೊಟಬಾಗಿ, ರೆಹಮಾನ ಹೋಳಿ, ಜಿನ್ನಪ್ಪ ಕುಂದಗೋಳ ಇದ್ದರು.