ಪೈಲ್ವಾನ್ ಪಿಂಜಾರ್ ರಂಜಾನಸಾಬ್ ಕೃತಿ ಬಿಡುಗಡೆ

| Published : Dec 15 2024, 02:05 AM IST

ಸಾರಾಂಶ

ಹುತಾತ್ಮನಾದ ರಂಜಾನ್ ಸಾಬ್ ಅವರ ವಿಷಯವು ಬಿಡಿ ಬಿಡಿಯಾಗಿ ದಾಖಲಿಸಲಾಗಿದೆ.

ಬಳ್ಳಾರಿ: ಜಿಲ್ಲೆಯಲ್ಲಿ ನಡೆದ ಐತಿಹಾಸಿಕ, ಸಾಂಸ್ಕೃತಿಕ ಸಂಗತಿಗಳನ್ನು ದಾಖಲಿಸುವುದು ಅತ್ಯಂತ ಜರೂರಿನ ಪ್ರಮುಖ ಕಾರ್ಯವಾಗಿದೆ. ಕರ್ನಾಟಕ ಏಕೀಕರಣ ಸಂದರ್ಭದಲ್ಲಿ ಬಳ್ಳಾರಿಯನ್ನು ಕರ್ನಾಟಕದಲ್ಲಿ ಉಳಿಸಿಕೊಳ್ಳಲು ನಡೆಸಿದ ಹೋರಾಟ ಅವಿಸ್ಮರಣೀಯ. ವಿಸ್ಮೃತಿಗೆ ಸರಿದ ಅನೇಕ ಸಂಗತಿಗಳನ್ನು ಮತ್ತೆ ಸ್ಮರಿಸುವ ಮೂಲಕ‌ ಚರಿತ್ರೆಯನ್ನು ಪುನಃ ಅವಲೋಕಿಸಬೇಕಿದೆ ಎಂದು ವಿಜಯನಗರ ಶ್ರೀಕೃಷ್ಣದೇವರಾಯ ವಿವಿ ಉಪಕುಲಪತಿ ಡಾ.ಎಂ.ಮುನಿರಾಜು ಅಭಿಪ್ರಾಯಪಟ್ಟರು.

ನಗರದ ರಾಘವ ಕಲಾಮಂದಿರದಲ್ಲಿ ನಡೆದ ಕನ್ನಡ ಸಾಂಸ್ಕೃತಿಕ ಪರಿಷತ್ತು ಮತ್ತು ಪೈಲ್ವಾನ್ ರಂಜಾನ್ ಸಾಬ್ ಗಡಿನಾಡ ಕನ್ನಡ ಸಂಘದಿಂದ ಆಯೋಜಿಸಿದ್ದ ಸಾಹಿತಿ ಸಿದ್ದರಾಮ ಕಲ್ಮಠ ಅವರ ಕರ್ನಾಟಕ ಏಕೀಕರಣದ ಏಕೈಕ ಬಲಿದಾನ ಪೈಲ್ವಾನ್ ಪಿಂಜಾರ್ ರಂಜಾನ್ ಸಾಬ್ ಕೃತಿಯನ್ನು ಬಿಡುಗಡೆಗೊಳಿಸಿ ಮಾತನಾಡಿದರು.

ಇಲ್ಲಿಯವರೆಗೆ ಬಂದಿರುವ ಇತಿಹಾಸದ ಅನೇಕ ಪುಸ್ತಕಗಳಲ್ಲಿ ಕರ್ನಾಟಕ ಏಕೀಕರಣದ ಸಂದರ್ಭದಲ್ಲಿ ಹುತಾತ್ಮನಾದ ರಂಜಾನ್ ಸಾಬ್ ಅವರ ವಿಷಯವು ಬಿಡಿ ಬಿಡಿಯಾಗಿ ದಾಖಲಿಸಲಾಗಿದೆ. ಆದರೆ ಲೇಖಕ ಸಿದ್ದರಾಮ ಕಲ್ಮಠರು ರಂಜಾನ್ ಸಾಬ್ ಬಗ್ಗೆ ಪೂರ್ಣ ಮಾಹಿತಿಯೊಂದಿಗೆ ಅವರನ್ನು ಓದುಗರಿಗೆ ಪರಿಚಯಿಸಿ ಚಾರಿತ್ರಿಕವಾಗಿ ಆಕರವಾಗಬಹುದಾದ ಕೃತಿಯನ್ನು ಸಾಹಿತ್ಯ ಲೋಕಕ್ಕೆ ನೀಡಿದ್ದಾರೆ ಎಂದು ತಿಳಿಸಿದರು.

ಕಾರ್ಯಕ್ರಮದಲ್ಲಿ ಕೃತಿಯನ್ನು ಕುರಿತು ಮಾತನಾಡಿದ ಲೇಖಕ ಎಂ.ಎಂ. ಶಿವಪ್ರಕಾಶ್, ಕರ್ನಾಟಕ ಏಕೀಕರಣದಲ್ಲಿ ಏಕೈಕ ಬಲಿದಾನವಾದ ಪಿಂಜಾರ ರಂಜಾನ್ ಸಾಬ್ ಅವರ ಜೀವನ ಕಥನವನ್ನು ಯಾವುದೇ ರೀತಿಯಲ್ಲಿ ವೈಭವೀಕರಿಸದೇ ವಸ್ತುನಿಷ್ಠ ವಿಷಯಗಳನ್ನು ದಾಖಲಿಸಿ ಸಾಮಾನ್ಯ ಓದುಗ ಮತ್ತು ವಿದ್ಯಾರ್ಥಿಗಳು ಓದಿ ಪ್ರೇರಣೆ ಪಡೆಯುವಂತಹ ಕೃತಿಯಾಗಿದೆ ಎಂದರು.

ಸಾಹಿತಿ, ಕೃತಿ ರಚನೆಕಾರ ಸಿದ್ದರಾಮ ಕಲ್ಮಠ, ರಂಗತೋರಣ ಕಾರ್ಯದರ್ಶಿ ಪ್ರಭುದೇವ ಕಪ್ಪಗಲ್ಲು ಮಾತನಾಡಿದರು.

ವೀ.ವಿ.ಸಂಘದ ಮಾಜಿ ಕಾರ್ಯದರ್ಶಿ ಚೋರನೂರು ಕೊಟ್ರಪ್ಪ ಅಧ್ಯಕ್ಷತೆ ವಹಿಸಿದ್ದರು.

ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಹಾಯಕ ನಿರ್ದೇಶಕ ಬಿ.ನಾಗರಾಜ್, ಗಾಯಕ‌ ಯಲ್ಲನಗೌಡ ಶಂಕರಬಂಡೆ, ಪೈಲ್ವಾನ್ ರಂಜಾನ್ ಸಾಬ್ ಗಡಿನಾಡ ಕನ್ನಡ ಸಂಘದ ಅಧ್ಯಕ್ಷ ಪಿ.ಶರ್ಮಾಸ್ ವಲಿ, ದಾದಾ ಖಲಂದರ್, ನದಾಫ್ ಪಿಂಜಾರ್ ಸಂಘದ ಜಿಲ್ಲಾಧ್ಯಕ್ಷ ಪಿ.ಮೌಲಾಲಿ, ಪಿ.ಶಷಾ ಸಾಬ್, ಪಿ.ಅಮೀನಾ ಉಪಸ್ಥಿತರಿದ್ದರು.

ಶಿಕ್ಷಕ ಅಮಾತಿ ಬಸವರಾಜ್, ಉಪನ್ಯಾಸಕ ವಲಿಬಾಷಾ, ಉಪನ್ಯಾಸಕ ಎ.ಎಂ.ಪಿ.ವೀರೇಶ ಸ್ವಾಮಿ ಕಾರ್ಯಕ್ರಮ ನಿರ್ವಹಿಸಿದರು. ಗಾಯಕ ದೊಡ್ಡಬಸವ ಗವಾಯಿ ತಂಡದವರು ಕನ್ನಡ ಗೀತೆ ಪ್ರಸ್ತುತಪಡಿಸಿದರು.

ಬಳ್ಳಾರಿಯ ರಾಘವ ಕಲಾಮಂದಿರದಲ್ಲಿ ಸಾಹಿತಿ ಸಿದ್ದರಾಮ ಕಲ್ಮಠ ಅವರ ಕರ್ನಾಟಕ ಏಕೀಕರಣದ ಏಕೈಕ ಬಲಿದಾನ ಪೈಲ್ವಾನ್ ಪಿಂಜಾರ್ ರಂಜಾನಸಾಬ್ ಕೃತಿ ಲೋಕಾರ್ಪಣೆಗೊಂಡಿತು.