ಲಲಿತ ಕಲೆಗಳಲ್ಲಿ ಮನಸಿನ ನೋವು ಶಮನ ಶಕ್ತಿ

| Published : Dec 15 2023, 01:31 AM IST

ಸಾರಾಂಶ

ಅಧ್ಯಕ್ಷತೆ ವಹಿಸಿದ್ದ ನಿವೃತ್ತ ಪ್ರಾಂಶುಪಾಲ ಡಾ. ಟಿ.ಎಸ್. ರಾಘವೇಂದ್ರ ಮಾತನಾಡಿ, ತಬಲಾ ನುಡಿಸಿದರೆ ನಾದ, ಮಾಧುರ್ಯ ಸೃಷ್ಟಿಯಾಗಬೇಕು. ನಾದದ ಮಾಧುರ್ಯ ಕೇಳುಗರ ಹೃದಯವನ್ನು ತಟ್ಟಬೇಕು. ಮನಸ್ಸನ್ನು ಮುಟ್ಟಬೇಕು. ತಬಲಾ ಕಲಿಯುವ ವಿದ್ಯಾರ್ಥಿಗಳು ಈ ಅಂಶಗಳನ್ನು ಗಮನದಲ್ಲಿ ಇಟ್ಟುಕೊಳ್ಳಬೇಕು. ತಬಲಾ ಕಲಿಕೆಗೆ ದೀರ್ಘ ಕಾಲದ ಸಂಯಮ, ಏಕಾಗ್ರತೆ ಬಯಸುತ್ತದೆ. ಸತತ ಅಭ್ಯಾಸದಿಂದ ಕರಗತ ಮಾಡಿಕೊಳ್ಳಬೇಕು. ಶ್ರದ್ಧೆ, ಪರಿಶ್ರಮದಿಂದ ಯಶಸ್ಸು ದೊರಕುತ್ತದೆ ಎಂದು ಹೇಳಿದರು.

ಕನ್ನಡಪ್ರಭ ವಾರ್ತೆ ಸಾಗರ

ಲಲಿತ ಕಲೆಗಳು ಮನಸ್ಸಿಗೆ ಮುದ ನೀಡುತ್ತವೆ. ಜಡಮನಸ್ಸನ್ನು ಜಾಗೃತಗೊಳಿಸುವ, ಮನಸ್ಸಿಗಾದ ನೋವನ್ನು ಶಮನಗೊಳಿಸುವ ಶಕ್ತಿ ಲಲಿತ ಕಲೆಗಳಿಗಿವೆ ಎಂದು ಕೇಂದ್ರ ಸಂಗೀತ, ನಾಟಕ ಅಕಾಡೆಮಿ ಪ್ರಶಸ್ತಿ ಪುರಸ್ಕೃತ ರಂಗಕರ್ಮಿ ಪುರುಷೋತ್ತಮ ತಲವಾಟ ಹೇಳಿದರು.

ಪಟ್ಟಣದ ತೇಜಸ್ವಿ ತಬಲಾ ವಿದ್ಯಾಲಯ ಹಮ್ಮಿಕೊಂಡಿದ್ದ ನಾದವೈಭವ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದ ಅವರು, ಕಲೆಗಳ ಕಲಿಕೆಗೆ ಪೋಷಕರು ಮಕ್ಕಳಿಗೆ ಪ್ರೋತ್ಸಾಹ ನೀಡಬೇಕು ಎಂದರು.

ಕಲಿಕೆಯಲ್ಲಿ ಗುರು-ಶಿಷ್ಯರ ಸಂಬಂಧ ಉತ್ತಮವಾಗಿ ಇರಬೇಕು. ತನಗೆ ಗೊತ್ತಿರುವುದನ್ನು ಪ್ರಾಮಾಣಿಕವಾಗಿ ಕಲಿಸುವ ಮನಸ್ಥಿತಿ ಗುರುವಿಗೆ ಇರಬೇಕು. ಒಂದು ವರ್ಷ ಕಲಿತರೆ ಸಾಕು ಎಂಬ ಪೋಷಕರ ಮನಸ್ಥಿತಿ ಬದಲಾಗಬೇಕು. ದೀರ್ಘಕಾಲದ ಪರಿಶ್ರಮದ ಕಲಿಕೆಯಿಂದ ಮಾತ್ರ ಕಲೆಗಳಲ್ಲಿ ಪ್ರಾವೀಣ್ಯತೆಯನ್ನು ಪಡೆಯಬಹುದು ಎಂದು ಹೇಳಿದರು.

ಅಧ್ಯಕ್ಷತೆ ವಹಿಸಿದ್ದ ನಿವೃತ್ತ ಪ್ರಾಂಶುಪಾಲ ಡಾ. ಟಿ.ಎಸ್. ರಾಘವೇಂದ್ರ ಮಾತನಾಡಿ, ತಬಲಾ ನುಡಿಸಿದರೆ ನಾದ, ಮಾಧುರ್ಯ ಸೃಷ್ಟಿಯಾಗಬೇಕು. ನಾದದ ಮಾಧುರ್ಯ ಕೇಳುಗರ ಹೃದಯವನ್ನು ತಟ್ಟಬೇಕು. ಮನಸ್ಸನ್ನು ಮುಟ್ಟಬೇಕು. ತಬಲಾ ಕಲಿಯುವ ವಿದ್ಯಾರ್ಥಿಗಳು ಈ ಅಂಶಗಳನ್ನು ಗಮನದಲ್ಲಿ ಇಟ್ಟುಕೊಳ್ಳಬೇಕು. ತಬಲಾ ಕಲಿಕೆಗೆ ದೀರ್ಘ ಕಾಲದ ಸಂಯಮ, ಏಕಾಗ್ರತೆ ಬಯಸುತ್ತದೆ. ಸತತ ಅಭ್ಯಾಸದಿಂದ ಕರಗತ ಮಾಡಿಕೊಳ್ಳಬೇಕು. ಶ್ರದ್ಧೆ, ಪರಿಶ್ರಮದಿಂದ ಯಶಸ್ಸು ದೊರಕುತ್ತದೆ ಎಂದು ಹೇಳಿದರು.

ವಿದ್ವಾನ್ ಪಂಡಿತ್ ಮಡಿವಾಳಯ್ಯ ಸಾಲಿ ಉಪಸ್ಥಿತರಿದ್ದರು. ಬೇರೆ ಬೇರೆ ಪರೀಕ್ಷೆಗಳಲ್ಲಿ ಉತ್ತಮ ಅಂಕ ಗಳಿಸಿ ಸಾಧನೆ ಮಾಡಿರುವ ವಿದ್ಯಾರ್ಥಿಗಳಿಗೆ ಬಹುಮಾನ ವಿತರಿಸಲಾಯಿತು. ಪೋಷಕರು ವಿದ್ಯಾಲಯದ ಪ್ರಾಧ್ಯಾಪಕಿ ವಿದುಷಿ ಚೇತನಾ ರಾಜೀವ ರಾವ್ ದಂಪತಿಯನ್ನು ಸನ್ಮಾನಿಸಿದರು.

ಕಾರ್ಯಕ್ರಮದಲ್ಲಿ ಮಮತಾ ರಾಜಕುಮಾರ್ ಸ್ವಾಗತಿಸಿದರು. ವಿದುಷಿ ಚೇತನಾ ರಾವ್ ಪ್ರಾಸ್ತಾವಿಕವಾಗಿ ಮಾತನಾಡಿದರು. ರಚನಾ ನಿರೂಪಿಸಿದರು. ಸತ್ಯವತಿ ವಂದಿಸಿದರು.

- - - -11ಕೆ.ಎಸ್.ಎ.ಜಿ.2:

ಸಾಗರದಲ್ಲಿ ನಾದವೈಭವ ಕಾರ್ಯಕ್ರಮವನ್ನು ಪುರುಷೋತ್ತಮ ತಲವಾಟ ಉದ್ಘಾಟಿಸಿದರು.