ಚಿತ್ರಕಲೆಗೆ ಡಿ.ವಿ. ಹಾಲಭಾವಿ ನೀಡಿದ ಕೊಡುಗೆ ಅನನ್ಯ: ನಟ ಸುರೇಶ ಹೆಬ್ಳೀಕರ್

| Published : Dec 01 2024, 01:33 AM IST

ಸಾರಾಂಶ

ಚಿತ್ರಕಲಾ ಶಿಲ್ಪಿ ಡಿ.ವಿ. ಹಾಲಭಾವಿ ರಾಷ್ಟ್ರೀಯ ಟ್ರಸ್ಟ್ ಸಹಯೋಗದಲ್ಲಿ ನಗರದ ಆಲೂರು ವೆಂಕಟರಾಯ್ ಭವನದಲ್ಲಿ ಡಿ.ವಿ. ಹಾಲಭಾವಿ ರಾಷ್ಟ್ರೀಯ ಪ್ರಶಸ್ತಿ ಪ್ರದಾನ ಸಮಾರಂಭ ಶುಕ್ರವಾರ ಜರುಗಿತು.

ಧಾರವಾಡ: ಚಿತ್ರಕಲಾ ಶಿಲ್ಪಿ ಡಿ.ವಿ. ಹಾಲಭಾವಿ ರಾಷ್ಟ್ರೀಯ ಟ್ರಸ್ಟ್ ಸಹಯೋಗದಲ್ಲಿ ನಗರದ ಆಲೂರು ವೆಂಕಟರಾಯ್ ಭವನದಲ್ಲಿ ಡಿ.ವಿ. ಹಾಲಭಾವಿ ರಾಷ್ಟ್ರೀಯ ಪ್ರಶಸ್ತಿ ಪ್ರದಾನ ಸಮಾರಂಭ ಶುಕ್ರವಾರ ಜರುಗಿತು.

₹1 ಲಕ್ಷ ನಗದು, ಸ್ಮರಣಿಕೆ, ಫಲಕ ಒಳಗೊಂಡ ಜೀವಮಾನ ಸಾಧನೆಯ ಕುಂಚ ಕಲಾ ತಪಸ್ವಿ ರಾಷ್ಟ್ರೀಯ ಪ್ರಶಸ್ತಿಯನ್ನು ಗೋಕಾಕ್ ಮೂಲದ ಸಿದ್ದಪ್ಪ ಸತ್ಯಪ್ಪ ಪಾಟೀಲ, ₹50 ಸಾವಿರ ನಗದು, ಸ್ಮರಣಿಕೆಯ ಕುಂಚ ಕಲಾ ರಾಷ್ಟ್ರೀಯ ಪ್ರಶಸ್ತಿಯನ್ನು ಗದಗ ಮೂಲದ ಕಮಲ್ ಅಹ್ಮದ್ ಎಂ. ಅವರಿಗೆ ಪ್ರದಾನ ಮಾಡಲಾಯಿತು.

ಹಾಗೆಯೇ ತಲಾ ₹25 ಸಾವಿರ ನಗದು, ಸ್ಮರಣಿಕೆ ಹಾಗೂ ಫಲಕ ಒಳಗೊಂಡ ಯುವ ಕುಂಚ ಕಲಾಶ್ರೀ

ಪ್ರಶಸ್ತಿ ಮಹಾರಾಷ್ಟ್ರ ಮೂಲದ ನಿಲೇಶ ಭಾರ್ತಿ ಹಾಗೂ ನಿಲಿಶಾ ಫಾಡ್ ಅವರಿಗೆ ಪ್ರದಾನ

ಮಾಡಲಾಯಿತು.

ಸಮಾರಂಭ ಉದ್ಘಾಟಿಸಿದ ನಟ ಸುರೇಶ ಹೆಬ್ಳೀಕರ್, ಮುಂಬೈನಲ್ಲಿ ಕಲಿತ ಡಿ.ವಿ. ಹಾಲಭಾವಿ, ಧಾರವಾಡದಲ್ಲಿ ಬಡ ಮಕ್ಕಳ ಅನುಕೂಲಕ್ಕೆ ಚಿತ್ರಕಲಾ ಸ್ಕೂಲ್ ಪ್ರಾರಂಭಿಸಿ, ಚಿತ್ರಕಲೆಗೆ ನೀಡಿದ ಕೊಡುಗೆ ಅನನ್ಯ ಎಂದು ಹೇಳಿದರು.

ಚಿತ್ರಕಲೆ ಮನುಷ್ಯನ ಅಂತರಂಗ, ಆತ್ಮ, ಭಾವನೆಯಲ್ಲಿ ಮೂಡಲಿದೆ. ಚಿತ್ರಕಲೆ ಕಲಿಸಲು ದೊಡ್ಡ ಶಿಕ್ಷಕರು ಇದ್ದರೂ, ವ್ಯಕ್ತಿಯಲ್ಲಿ ಚಿತ್ರಕಲೆ ಕಲಿಯುಲು ಉತ್ಸುಕತೆ ಬೇಕು. ಅಂದಾಗ ಮಾತ್ರವೇ ಚಿತ್ರಕಲೆ ಸಿದ್ಧಿಸಲಿದೆ ಎಂದು ತಿಳಿಸಿದರು.

ಧಾರವಾಡದಲ್ಲಿ ಅನೇಕ ಶ್ರೇಷ್ಠ ಕಲಾವಿದರು, ಸಾಹಿತಿಗಳು, ಚಿತ್ರ ಕಲಾವಿದರಿದ್ದು, ದ.ರಾ.ಬೇಂದ್ರೆ, ಮಲ್ಲಿಕಾರ್ಜುನ ಮನಸೂರು, ಗಂಗೂಬಾಯಿ ಹಾನಗಲ್, ಬಾಲೇಖಾನ್ ಹೀಗೆ ಅನೇಕ‌ ದಿಗ್ಗಜರು

ಸಾಹಿತ್ಯ, ಸಂಗೀತ, ಕಲೆಗೆ ಅಗಾಧ ಕೊಡುಗೆ ನೀಡಿದ್ದಾರೆ ಎಂದು ತಿಳಿಸಿದರು.

ಭಾಷೆಗಿಂತಲೂ ಮೊದಲ ಚಿತ್ರಕಲೆ ಹುಟ್ಟಿದೆ. ಭಾಷೆ ಇಲ್ಲದ ಕಾಲದಲ್ಲಿ ಕಟ್ಟಿಗೆ, ಕಲ್ಲಿನ ಚಿತ್ರಕಲೆ ಮೂಲಕ ಮನುಷ್ಯರಲ್ಲಿ ಪರಸ್ಪರ ಸಂವಹನ ನಡೆಯುತ್ತಿತ್ತು. ಇಂತಹ ಕಲೆಗೆ ಬಹಳಷ್ಟು ಆದ್ಯತೆ ನೀಡಬೇಕಿದೆ. ಅರಣ್ಯ, ಜೀವ ವೈವಿಧ್ಯತೆ, ಕೆರೆಗಳು ಉಳಿದಾಗ ಮಾತ್ರವೇ ಚಿತ್ರಕಲೆ ಉಳಿಯಲು ಸಾಧ್ಯ ಎಂದರು.

ವಿಜ್ಞಾನ-ತಂತ್ರಜ್ಞಾನ ಬೆಳೆದಂತೆ ಚಿತ್ರಕಲೆಗೆ ಹೆಚ್ಚಿನ ಅವಕಾಶಗಳು ಲಭಿಸಿದೆ. ಪರಿಣಾ‌ಮ ಚಿತ್ರಕಲೆ ಅಂತಾರಾಷ್ಟ್ರೀಯ ಮಟ್ಟಕ್ಕೆ ಬೆಳೆದಿದೆ. ಧಾರವಾಡದ ಸಾಹಿತ್ಯ, ಸಂಗೀತ, ಚಿತ್ರಕಲೆ, ರಂಗಭೂನಿ ಉಳಿಯಬೇಕಿದೆ ಎಂದು ಆಶಯ ವ್ಯಕ್ತಪಡಿಸಿದರು.

ಜೀವಮಾನ ಸಾಧನೆ ಪ್ರಶಸ್ತಿ ಸ್ವೀಕರಿಸಿದ ಸಿದ್ದಪ್ಪ ಪಾಟೀಲ, 1958ರಲ್ಲಿ ನಾನು ಸ್ಕೂಲ್ ಆಫ್ ಆರ್ಟ್ ವಿದ್ಯಾರ್ಥಿ.

ಅಲ್ಲಿಯೇ ಶಿಕ್ಷಕನಾಗಿ ಸೇವೆ ಪ್ರಾರಂಭಿಸಿದೆ. ಡಿ.ವಿ. ಹಾಲಭಾವಿ ಶಿಕ್ಷಕರು ಸ್ವಂತ ಮಗನ ಪ್ರೀತಿ ತೋರಿದರು. ಅವರ ಹೆಸರಿನ ಪ್ರಶಸ್ತಿ ಲಭಿಸಿರುವುದು ಖುಷಿ ತಂದಿದೆ ಎಂದು ತಿಳಿಸಿದರು.

ಟ್ರಸ್ಟ್ ಸದಸ್ಯ ಸುರೇಶ ಹಾಲಭಾವಿ, ಕಲಾವಿದ ಎಫ್.ವಿ. ಚಿಕ್ಕಮಠ, ಪಾರ್ವತಿ ಹಾಲಭಾವಿ, ಶಶಿ ಸಾಲಿ, ಬಿ.ಮಾರುತಿ, ಬಿ.ಎಂ.ಪಾಟೀಲ, ಬಿ.ಎಚ್.ಕುರಿಯವರ ಇದ್ದರು. ರವಿ ಕುಲಕರ್ಣಿ ನಿರೂಪಿಸಿದರು.