ಸಾರಾಂಶ
ಕನ್ನಡಪ್ರಭ ವಾರ್ತೆ ರಬಕವಿ-ಬನಹಟ್ಟಿ
ಭಯೋತ್ಪಾದಕರ ವಿರುದ್ಧ ನಡೆದ ಆಪರೇಷನ್ ಸಿಂದೂರ್‌ನಲ್ಲಿ ಪ್ರಾಣದ ಹಂಗು ತೊರೆದು ಹೋರಾಟ ನಡೆಸಿದ ಯೋಧರಿಗೆ ಆತ್ಮಸ್ಥೈರ್ಯ ತುಂಬುವುದು ನಮ್ಮೆಲ್ಲರ ಕರ್ತವ್ಯ. ಭಾರತೀಯ ಹೆಣ್ಣು ಮಕ್ಕಳ ಸಿಂದೂರ ಅಳಿಸಿದ ವೈರಿಗಳನ್ನು ಅಪರೇಷನ್ ಸಿಂದೂರ ಮೂಲಕ ಸದೆಬಡಿಯಲಾಗಿದೆ ಎಂದು ಮೈಗೂರಿನ ಗುರುಪ್ರಸಾದ ಶ್ರೀ ನುಡಿದರು.ಬನಹಟ್ಟಿಯಲ್ಲಿ ಸಮಸ್ತ ದೇಶಭಕ್ತ ರಾಷ್ಟ್ರ ಪ್ರೇಮಿ ನಾಗರಿಕರಿಂದ ಶುಕ್ರವಾರ ತಿರಂಗಾ ಯಾತ್ರೆಯ ನಂತರ ಈಶ್ವರಲಿಂಗ ಮೈದಾನದಲ್ಲಿ ಜರುಗಿದ ಬೃಹತ್ ಅಭಿನಂದನಾ ಸಭೆಯಲ್ಲಿ ಮಾತನಾಡಿ, ಅಮೆರಿಕ ಸೇರಿದಂತೆ ಯುರೋಪ್ ದೇಶಗಳು ತಮ್ಮ ನಾಗರಿಕರ ಮೇಲೆ ಭಯೋತ್ಪಾದನಾ ಕೃತ್ಯವಾದರೆ ಮಾತ್ರ ಭಯೋತ್ಪಾದನೆ ದಮನ ಬಗ್ಗೆ ಮಾತನಾಡುತ್ತವೆ. ಸತತ ೭೦ ವರ್ಷಗಳ ಕಾಲ ಪಾಕ್‌ನ ಭಯೋತ್ಪಾದನೆಯಿಂದ ನರಳುತ್ತಿರುವ ಭಾರತೀಯ ಯೋಧರ, ಜನತೆಯ ಜೀವಗಳಿಗೆ ಬೆಲೆ ನೀಡದಿರುವುದು ಮತ್ತು ಕಾಲಕ್ಕನುಸಾರ ಭಯೋತ್ಪಾದಕರು ಎಂದು ಘೋಷಿಸಿದ ವ್ಯಕ್ತಿಗಳೊಡನೆ ಸಂಬಂಧ ಹೊಂದುವುದು ಅಕ್ಷಮ್ಯ ಎಂದು ಹೇಳಿದರು.ವೀರಯೋಧ ರಾಮನಗೌಡ ಪಾಟೀಲ ಮಾತನಾಡಿ, ಚೀನಾ ಮತ್ತು ರಷ್ಯಾದ ಸಂಭಾವ್ಯ ದಾಳಿ ಎದುರಿಸಲು ಅಮೆರಿಕ ಪಾಕ್‌ನ ಬೆಟ್ಟ ಪ್ರದೇಶದಲ್ಲಿ ಅಡಗಿಸಿಟ್ಟ ಪರಮಾಣು ಶಸ್ತ್ರಾಸ್ತ್ರಗಳಿಗೆ ಧಕ್ಕೆಯಾಗುವ ಭಯದಿಂದಲೂ ಅಮೆರಿಕ ತಕ್ಷಣ ಮಧ್ಯ ಪ್ರವೇಶಿಸಿದೆ ಎಂಬ ಮಾತು ಇದೀಗ ದಟ್ಟವಾಗಿದೆ. ಭೂಕಂಪದ ಸ್ಥಿತಿಯಲ್ಲಿ ಮೊದಲು ಸಹಾಯ ನೀಡಿದ ಭಾರತಕ್ಕೆ ದ್ರೋಹ ಎಸಗಿದ ಟರ್ಕಿಯಲ್ಲಿ ಮತ್ತೆ ಪ್ರಬಲ ಭೂಕಂಪ ಅಪ್ಪಳಿಸಿರುವುದು ನಮ್ಮ ಸನಾತನ ನಂಬಿಕೆಗೆ ಇಂಬು ನೀಡಿದೆ.ದೇಶದ ಅಖಂಡತೆ ಮತ್ತು ಭದ್ರತೆಗೆ ಧಕ್ಕೆ ಉಂಟಾದಾಗ ದೇಶ ಕಾಪಾಡುವ ಹೊಣೆ ಸೈನಿಕರದ್ದಾಗಿದೆ. ಅವರಿಗೆ ಗೌರವ ಸಲ್ಲಿಸುವುದು ನಮ್ಮೆಲ್ಲರ ಆದ್ಯ ಕರ್ತವ್ಯವಾಗಿದೆ ಎಂದು ಹೇಳಿದರು.ಹುಬ್ಬಳ್ಳಿ ವೀರಬಿಕ್ಷಾವರ್ತಿ ಮಠದ ಶ್ರೀ ಶಿವಶಂಕರ ಶಿವಾಚಾರ್ಯರು ಮಾತನಾಡಿ, ಭವಿಷ್ಯದಲ್ಲಿ ಪಾಕಿಸ್ತಾನ ಯಾವುದೇ ದುಸ್ಸಾಹಸಕ್ಕೆ ಕೈಹಾಕಿದರೆ ವಿಶ್ವಮಟ್ಟದಲ್ಲಿ ದೊಡ್ಡ ಸಂಕಷ್ಟ ಎದುರಿಸಲಿದೆ ಎಂದರು.
ಸಂಘದ ಧುರೀಣ ಶಿವಾನಂದ ಗಾಯಕವಾಡ ಮಾತನಾಡಿ, ಪ್ರಧಾನಿ ನರೇಂದ್ರ ಮೋದಿಯವರು ಬಲವಾದ ರಾಜಕೀಯ ಇಚ್ಛಾಶಕ್ತಿ ಪ್ರದರ್ಶಿಸಿದ್ದಕ್ಕಾಗಿ ಶ್ಲಾಘಿಸಿ ದೇಶ ಜನರು ಬಯಸಿದ್ದನ್ನು ಮಾಡಿದೆ. ಪಾಕಿಸ್ತಾನಕ್ಕೆ ಸೂಕ್ತ ಉತ್ತರ ನೀಡಿದ ಸೈನಿಕರ ಬೆಂಬಲಕ್ಕೆ ಇಡೀ ರಾಷ್ಟ್ರ ನಿಂತಿದೆ ಎಂದರು.ಬನಹಟ್ಟಿ ಹಿರೇಮಠದ ಶ್ರೀ ಶರಣಬಸವ ಶಿವಾಚಾರ್ಯರು, ಬಂಡಿಗಣಿ ನೀಲಮಾಣಿಕಮಠದ ಶ್ರೀಅನ್ನದಾನೇಶ್ವರ ಶ್ರೀಗಳು, ರಬಕವಿ ಶ್ರೀಗುರುದೇವ ಬ್ರಹ್ಮಾನಂದ ಆಶ್ರಮದ ಗುರುಸಿದ್ದೇಶ್ವರ ಶ್ರೀ, ಶಾಸಕ ಸಿದ್ದು ಸವದಿ ಇತರರು ಮಾತನಾಡಿದರು.
ಮೆರವಣಿಗೆ ನಗರದ ಈಶ್ವರಲಿಂಗ ಮೈದಾನದಿಂದ ಆರಂಭಗೊಂಡು ಪ್ರಮುಖ ಬೀದಿಗಳಲ್ಲಿ ಸಂಚರಿಸಿ ಈಶ್ವರಲಿಂಗ ಮೈದಾನದಲ್ಲಿ ಸಂಪನ್ನಗೊಂಡಿತು. ತಿರಂಗಾ ಯಾತ್ರೆಯಲ್ಲಿ ಭಾರತ್ ಮಾತಾ ಕಿ ಜೈ, ಭಾರತೀಯ ಸೇನೆಗೆ ಜಯವಾಗಲಿ ಮುಂತಾದ ಘೋಷಣೆಗಳು ಮೊಳಗದವು.ಎಲ್ಲ ಧರ್ಮಗಳ ಮುಖಂಡರು, ಮಾಜಿ ಸೈನಿಕರು, ಶಾಲಾ, ಕಾಲೇಜು ವಿದ್ಯಾರ್ಥಿಗಳು, ಎನ್‌ಸಿಸಿ ಕೆಡೆಟ್‌ಗಳು, ಯುವಕರು, ಚಿಂತಕರು, ಶಿಕ್ಷಕರು, ವಿವಿಧ ಸಂಘ ಸಂಸ್ಥೆಗಳ ಪದಾಧಿಕಾರಿಗಳು, ಎಲ್ಲ ಪಕ್ಷಗಳ ಕಾರ್ಯಕರ್ತರು, ಮಹಿಳೆಯರು, ನೇಕಾರರು ಹಾಗೂ ಎಲ್ಲಾ ನಾಗರಿಕರು ಪಾಲ್ಗೊಂಡಿದ್ದರು.