ಸಾರಾಂಶ
ಕಾರವಾರ: ಭಾರತದ ಬಂದರುಗಳಲ್ಲಿ ಪಾಕಿಸ್ತಾನದ ಹಡಗುಗಳಿಗೆ ಪ್ರವೇಶ ನಿರ್ಬಂಧಿಸಲಾಗಿದೆ. ಆದರೆ ಬೇರೆ ದೇಶದ ಹಡಗುಗಳಲ್ಲಿ ಪಾಕಿಸ್ತಾನದ ಸಿಬ್ಬಂದಿ ಬಂದರೆ ಏನು ಮಾಡೋದು? ಏನಿಲ್ಲ. ಅವರು ಭಾರತದ ನೆಲದ ಮೇಲೆ ಕಾಲಿಡುವಂತೆಯೇ ಇಲ್ಲ.
ಹಾಗಂತ ಇದೇನೂ ಹೊಸದಾಗಿ ಜಾರಿಯಾದ ಅಂದರೆ ಪಹಲ್ಗಾಮ್ ದಾಳಿಯ ತರುವಾಯ ಜಾರಿಯಾದ ಕ್ರಮ ಅಲ್ಲ. ಹಿಂದಿನಿಂದಲೂ ಇದೆ.ಪಹಲ್ಗಾಮ್ ದಾಳಿಯ ತರುವಾಯ ಪಾಕಿಸ್ತಾನದ ಹಡಗುಗಳಿಗೆ ಭಾರತದ ಯಾವುದೇ ಬಂದರುಗಳಿಗೆ ಪ್ರವೇಶ ನಿರ್ಬಂಧಿಸಲಾಗಿದೆ. ಒಂದು ವೇಳೆ ಪಾಕಿಸ್ತಾನದ ಸಿಬ್ಬಂದಿ ಸಿಂಗಪುರ, ಮಲೇಷ್ಯಾ ಅಥವಾ ಯಾವುದೇ ದೇಶದ ಹಡಗಿನಲ್ಲಿ ನಮ್ಮ ಬಂದರಿಗೆ ಬಂದರೂ ಅವರು ಹಡಗಿನಿಂದ ಕೆಳಕ್ಕಿಳಿಯುವಂತಿಲ್ಲ. ಹಡಗಿನಲ್ಲೇ ಇರಬೇಕು. ಪಾಕ್ ಪ್ರಜೆಗಳ ಬಗ್ಗೆ ಅಷ್ಟು ಕಟ್ಟುನಿಟ್ಟಿನ ಕ್ರಮವನ್ನು ಬಂದರು ಇಲಾಖೆ ಹಿಂದಿನಿಂದಲೂ ಅನುಸರಿಸುತ್ತಿದೆ.
ಬಂದರಿಗೆ ಬರುವ ಹಡಗುಗಳ ಮೇಲೆ ನಿಗಾ ಇಡುವಂತೆ ಹಾಗೂ ಹಡಗಿನಲ್ಲಿ ಬರುವ ಸಿಬ್ಬಂದಿ ಬಗ್ಗೆ ಜಾಗರೂಕತೆಯಿಂದ ಇರುವಂತೆ ಇಲ್ಲಿನ ವಾಣಿಜ್ಯ ಬಂದರಿನ ಭದ್ರತಾ ಅಧಿಕಾರಿ, ಸಿಬ್ಬಂದಿಗೆ ಕಟ್ಟುನಿಟ್ಟಿನ ಎಚ್ಚರಿಕೆ ನೀಡಲಾಗಿದೆ.ಮೀನುಗಾರಿಕಾ ಬೋಟಿನಲ್ಲಿ ಅಪರಿಚಿತರು ನುಸುಳಿ ಬರಬಹುದು ಎಂದು ಕರಾವಳಿ ಕಾವಲು ಪಡೆ ಮೀನುಗಾರಿಕಾ ಬೋಟ್ ನವರಿಗೆ ಜಾಗರೂಕತೆಯಿಂದ ಇರುವಂತೆ ಸೂಚಿಸಿದೆ. ಪರಿಶೀಲನೆಯನ್ನೂ ನಡೆಸಿದೆ.
ಕೈಗಾ ಹಾಗೂ ಐಎನ್ ಎಸ್ ಕದಂಬ ನೌಕಾನೆಲೆಯಲ್ಲಿ ಅವರದೇ ಆದ ಭದ್ರತಾ ಸಿಬ್ಬಂದಿ ಭದ್ರತೆಯ ಉಸ್ತುವಾರಿ ವಹಿಸಿದ್ದಾರೆ.ಪಾಕಿಸ್ತಾನಿಯರು ಯಾವುದೇ ದೇಶದ ಹಡಗಿನಲ್ಲಿ ಬಂದರೂ ಅವರಿಗೆ ಹಡಗಿನಿಂದ ಕೆಳಕ್ಕಿಳಿಯಲು ಅವಕಾಶ ಇಲ್ಲ. ಪಾಕ್ ಹಡಗುಗಳಂತೂ ಈಗ ಬಂದರುಗಳಿಗೆ ಪ್ರವೇಶಿಸುವಂತಿಲ್ಲ ಎನ್ನುತ್ತಾರೆ ಬಂದರು ಅಧಿಕಾರಿ ರಾಜಕುಮಾರ ಹೆಡೆ.