ಪಕ್ಷಾಂತರಿ ಪುಟ್ಟಣ್ಣ ಖಾಸಗಿ ಶಿಕ್ಷಣ ಸಂಸ್ಥೆಗಳಿಗೆ ಪಿಆರ್‌ಒ

| Published : Feb 08 2024, 01:35 AM IST

ಪಕ್ಷಾಂತರಿ ಪುಟ್ಟಣ್ಣ ಖಾಸಗಿ ಶಿಕ್ಷಣ ಸಂಸ್ಥೆಗಳಿಗೆ ಪಿಆರ್‌ಒ
Share this Article
  • FB
  • TW
  • Linkdin
  • Email

ಸಾರಾಂಶ

ರಾಮನಗರ: ವಿಧಾನ ಪರಿಷತ್ ನಲ್ಲಿ ಶಿಕ್ಷಕರ ಪರ ಎಂದೂ ಧ್ವನಿಯಾಗದ ಪಕ್ಷಾಂತರಿ ಪುಟ್ಟಣ್ಣ ಉದ್ಯಮಿಗಳ ಖಾಸಗಿ ಶಿಕ್ಷಣ ಸಂಸ್ಥೆಗಳಿಗೆ ಪಿಆರ್ ಒ ಆಗಿ ಕೆಲಸ ಮಾಡಿದವರು. ಪಕ್ಷ , ನಾಯಕರು ಹಾಗೂ ಶಿಕ್ಷಕರ ನಂಬಿಕೆಗೆ ದ್ರೋಹ ಬಗೆದವರು ಎಂದು ಬೆಂಗಳೂರು ಶಿಕ್ಷಕರ ಕ್ಷೇತ್ರದ ಜೆಡಿಎಸ್ - ಬಿಜೆಪಿ ಮೈತ್ರಿ ಅಭ್ಯರ್ಥಿ ಎ.ಪಿ.ರಂಗನಾಥ್ ವಾಗ್ದಾಳಿ ನಡೆಸಿದರು.

ರಾಮನಗರ: ವಿಧಾನ ಪರಿಷತ್ ನಲ್ಲಿ ಶಿಕ್ಷಕರ ಪರ ಎಂದೂ ಧ್ವನಿಯಾಗದ ಪಕ್ಷಾಂತರಿ ಪುಟ್ಟಣ್ಣ ಉದ್ಯಮಿಗಳ ಖಾಸಗಿ ಶಿಕ್ಷಣ ಸಂಸ್ಥೆಗಳಿಗೆ ಪಿಆರ್ ಒ ಆಗಿ ಕೆಲಸ ಮಾಡಿದವರು. ಪಕ್ಷ , ನಾಯಕರು ಹಾಗೂ ಶಿಕ್ಷಕರ ನಂಬಿಕೆಗೆ ದ್ರೋಹ ಬಗೆದವರು ಎಂದು ಬೆಂಗಳೂರು ಶಿಕ್ಷಕರ ಕ್ಷೇತ್ರದ ಜೆಡಿಎಸ್ - ಬಿಜೆಪಿ ಮೈತ್ರಿ ಅಭ್ಯರ್ಥಿ ಎ.ಪಿ.ರಂಗನಾಥ್ ವಾಗ್ದಾಳಿ ನಡೆಸಿದರು.

ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಪುಟ್ಟಣ್ಣ ತಮ್ಮ ಅಧಿಕಾರದ ಅವಧಿಯಲ್ಲಿ ಸಣ್ಣ ಶಾಲೆಗಳು ಹಾಗೂ ಶಿಕ್ಷಕರ ಪರವಾಗಿ ನಿಂತವರಲ್ಲ. ಆಂಧ್ರಪ್ರದೇಶ ಸೇರಿದಂತೆ ಹೊರ ರಾಜ್ಯಗಳ ಉದ್ಯಮಿಗಳು ತೆರೆದಿರುವ ಖಾಸಗಿ ಶಿಕ್ಷಣ ಸಂಸ್ಥೆಗಳಿಗೆ ಪಿಆರ್‌ಒ ಆಗಿ ಕೆಲಸ ಮಾಡಿದವರು ಎಂದು ಟೀಕಿಸಿದರು.

ಪಿಆರ್‌ಒ ಆಗಿ ಸಂಪಾದಿಸಿದ ಹಣವನ್ನು ಉಪಚುನಾವಣೆಯಲ್ಲಿ ಶಿಕ್ಷಕರಿಗೆ ಆಮಿಷದ ರೂಪದಲ್ಲಿ ಹಂಚುತ್ತಿದ್ದಾರೆಂಬ ಮಾಹಿತಿ ಇದೆ. ಈ ಬಗ್ಗೆ ಚುನಾವಣಾ ಆಯೋಗಕ್ಕೆ ದೂರು ಸಲ್ಲಿಸುತ್ತೇವೆ. ಆಮಿಷಗಳಿಗೆಲ್ಲ ಶಿಕ್ಷಕರು ಮರಳಾಗುವುದಿಲ್ಲ. ಪುಟ್ಟಣ್ಣ ಹಣ ಬಲ ಹೊಂದಿದ್ದರೆ, ನನಗೆ ಜೆಡಿಎಸ್ - ಬಿಜೆಪಿ ನಾಯಕರು, ಮುಖಂಡರು, ಕಾರ್ಯಕರ್ತರು ಹಾಗೂ ಸ್ವಾಭಿಮಾನಿ ಶಿಕ್ಷಕರ ಬೆಂಬಲ ಇದೆ ಎಂದು ಹೇಳಿದರು.

ಶಿಕ್ಷಕರ ಬೆನ್ನಿಗೂ ಚೂರಿ :

ಜೆಡಿಎಸ್ ಪಕ್ಷದಿಂದ 3 ಬಾರಿ ಗೆದ್ದಿದ್ದ ಪುಟ್ಟಣ್ಣ ಅವರಿಗೆ ಉಪಸಭಾಪತಿ ಹುದ್ದೆ ನೀಡಿ ಗೌರವಿಸಿತು. ಆದರೂ ಕುಮಾರಸ್ವಾಮಿಯವರ ಬೆನ್ನಿಗೆ ಚೂರಿ ಹಾಕಿ ಬಿಜೆಪಿ ಸೇರಿದರು. ಆನಂತರ ಬಿಜೆಪಿ ಮತ್ತು ಆರ್ ಎಸ್ ಎಸ್ ಕಾರ್ಯಕರ್ತರ ಶ್ರಮದಿಂದ ಗೆಲುವು ಸಾಧಿಸಿದರು. ಅವರ ಬೆನ್ನಿಗೂ ಚೂರಿ ಇರಿದು ಶಿಕ್ಷಕರನ್ನು ನಡು ನೀರಿನಲ್ಲಿ ಕೈ ಬಿಟ್ಟು ಹೋದ ಪುಟ್ಟಣ್ಣ ಕಾಂಗ್ರೆಸ್ ಸೇರಿದರು. ಆ ಪಕ್ಷಕ್ಕೆ ಯಾವಾಗ ಕೈ ಕೊಡುತ್ತಾರೊ ಗೊತ್ತಿಲ್ಲ ಎಂದು ವ್ಯಂಗ್ಯವಾಡಿದರು.

ವಿವಿಯಲ್ಲಿ ತಮ್ಮ ಬೆಳವಣಿಗೆಗೆ ಕಾರಣರಾದ ಶೆಟ್ಟಿ ಅವರ ಬೆನ್ನಿಗೂ ಚೂರಿ ಹಾಕಿದ ಪುಟ್ಟಣ್ಣ ಅವರಿಗೆ ನಂಬಿಕೆ ದ್ರೋಹ ಎಂಬುದು ರಕ್ತದಲ್ಲಿ ಕರಗತವಾಗಿದ್ದು, ತಮ್ಮ ಬೆಳವಣಿಗೆಗೆ ಕಾರಣರಾದವರಿಗೆಲ್ಲ ಮೋಸ ಮಾಡುತ್ತಲೇ ಬಂದಿದ್ದಾರೆ. ವೈಯಕ್ತಿಕ ಲಾಭಕ್ಕಾಗಿ ರಾಜಕೀಯ ಪಕ್ಷ ಮತ್ತು ಶಿಕ್ಷಕರನ್ನು ಉಪಯೋಗಿಸಿಕೊಂಡಿದ್ದಾರೆ. ಪಕ್ಷ , ನಾಯಕರು ಹಾಗೂ ಶಿಕ್ಷಕರಿಗೆ ನಿಷ್ಠೆಯಾಗಿ ಉಳಿದಿಲ್ಲ ಎಂದು ವಾಗ್ದಾಳಿ ನಡೆಸಿದರು.

ರಾಜಾಜಿನಗರ ವಿಧಾನಸಭಾ ಕ್ಷೇತ್ರ ಚುನಾವಣೆಯಲ್ಲಿ ಸೋತ ಕಾರಣಕ್ಕೆ ಪುಟ್ಟಣ್ಣ ಮತ್ತೆ ಶಿಕ್ಷಕರ ಕ್ಷೇತ್ರದಿಂದ ಸ್ಪರ್ಧೆ ಮಾಡಿದ್ದಾರೆ. ಹಾಗೊಂದು ವೇಳೆ ಗೆದ್ದಿದ್ದರೆ ಮತ್ತೆ ಬರುತ್ತಿದ್ದರಾ ಎಂಬುದನ್ನು ಶಿಕ್ಷಕರು ಅರಿತುಕೊಳ್ಳಬೇಕು. ಯಾವ ನೈತಿಕತೆ ಮೇಲೆ ಪುಟ್ಟಣ್ಣ ಶಿಕ್ಷಕರಲ್ಲಿ ಮತ ಯಾಚನೆ ಮಾಡುತ್ತಿದ್ದಾರೆ ಎಂದು ಪ್ರಶ್ನೆ ಮಾಡಿದರು.

ಶಿಕ್ಷಕರಿಗೆ ಪುಟ್ಟಣ್ಣರವರ ಕೊಡುಗೆ ಶೂನ್ಯ. ನಾಲ್ಕು ಬಾರಿ ಗೆಲುವು ಸಾಧಿಸಿದರು ಶಿಕ್ಷಕರಿಗೆ ಜ್ಯೋತಿ ಸಂಜೀವಿನಿ ಯೋಜನೆ ಜಾರಿ ಮಾಡಿಸಲಿಲ್ಲ. ಅನುದಾನ ರಹಿತ ಶಿಕ್ಷಕರ ಸಮಸ್ಯೆಗಳಿಗೆ ಸ್ಪಂದಿಸಲಿಲ್ಲ. ಸರ್ಕಾರಿ ಶಾಲಾ ಶಿಕ್ಷಕರ ವರ್ಗಾವಣೆ, ಬಡ್ತಿ ಸಮಸ್ಯೆ ಬಗೆಹರಿಸಲಿಲ್ಲ. ಅಧಿಕಾರಕ್ಕಾಗಿ ಶಿಕ್ಷಕರ ಸಮಸ್ಯೆಗಳನ್ನು ಜೀವಂತವಾಗಿಟ್ಟು, ಸ್ವಂತ ಕೆಲಸ ಮಾಡಿಸಿಕೊಳ್ಳುತ್ತಿದ್ದಾರೆ. ಉಂಡೂ ಹೋದ ಕೊಂಡೂ ಹೋದ ಎಂಬ ಗಾದೆ ಮಾತಿಗೆ ಪುಟ್ಟಣ್ಣ ಅನ್ವರ್ಥವಾಗಿದ್ದಾರೆ ಎಂದು ಟೀಕಿಸಿದರು.

ಕಳೆದ ಚುನಾವಣೆಯಲ್ಲಿ ನಾನು ಸೋತರೂ ಕೊರೋನಾ ವೇಳೆ ಶಿಕ್ಷಕರ ಜೊತೆಯಲ್ಲಿ ನಿಂತಿದ್ದೆ. ಮಾಜಿ ಪ್ರಧಾನಿ ದೇವೇಗೌಡರ ನೇತೃತ್ವದಲ್ಲಿ ಅನುದಾನ ರಹಿತ ಶಿಕ್ಷಕರಿಗೆ ಕೊರೋನಾ ಪ್ಯಾಕೇಜ್ ನೀಡಬೇಕೆಂದು 15 ಹೋರಾಟ ಮಾಡಿದ್ದೇವೆ. ಇದರ ಪರಿಣಾಮವಾಗಿ ಆಗಿನ ಸರ್ಕಾರ ತಲಾ ಒಬ್ಬ ಶಿಕ್ಷಕನಿಗೆ 5 ಸಾವಿರ ಸಹಾಯಧನದಂತೆ 130 ಕೋಟಿ ರುಪಾಯಿ ಬಿಡುಗಡೆ ಮಾಡಿತು. ಎನ್ ಪಿಎಸ್ ಹೋರಾಟದಲ್ಲಿಯೂ ಭಾಗಿಯಾಗಿದ್ದೇನೆ.

ನಾನು ಶಿಕ್ಷಕರ ರಕ್ಷಕನಾಗಿ ಸೇವೆ:

ಚನ್ನಪಟ್ಟಣದ ದೇವಸ್ಥಾನವೊಂದರಲ್ಲಿ ನಿವೃತ್ತ ಶಿಕ್ಷಕರಿಗೆ ಸನ್ಮಾನ ಮಾಡಿದಾಗ ಅಲ್ಲಿದ್ದ ಶಿಕ್ಷಕರ ಮೇಲೆ ಪುಟ್ಟಣ್ಣ ಕ್ರಿಮಿನಲ್ ಪ್ರಕರಣ ಹಾಕಿಸಿದರು. ಈ ಶಿಕ್ಷಕರು ಮೂರು ಚುನಾವಣೆಗಳಲ್ಲಿ ಪುಟ್ಟಣ್ಣರವರಿಗೆ ಉಪಕಾರ ಮಾಡಿದ್ದರು. ನ್ಯಾಯಾಲಯದಲ್ಲಿ ಅವರ ಪರವಾಗಿ ನಾನು ವಾದ ಮಾಡಿ ಶಿಕ್ಷಕರ ರಕ್ಷಕನಾಗಿ ಕೆಲಸ ಮಾಡಿದ್ದೇನೆ ಎಂದು ತಿಳಿಸಿದರು.

ಬೆಂಗಳೂರು ಶಿಕ್ಷಕರ ಕ್ಷೇತ್ರದಲ್ಲಿ ಎಂದೂ ಕಾಂಗ್ರೆಸ್ ಗೆಲುವು ಸಾಧಿಸಿಲ್ಲ. ಇಲ್ಲೇನಿದ್ದರು ಜೆಡಿಸ್ - ಬಿಜೆಪಿ ನಡುವೆ ಪೈಪೋಟಿ ಇರುತ್ತಿತ್ತು. ಈಗ ಬಿಜೆಪಿಯೊಂದಿಗಿನ ಮೈತ್ರಿಯಿಂದ ಜೆಡಿಎಸ್ ಪಕ್ಷ ಮತ್ತಷ್ಟು ಬಲಗೊಂಡಿದೆ. ಎರಡು ಪಕ್ಷಗಳ ಕಾರ್ಯಕರ್ತರು ಬೆಂಬಲವಾಗಿ ನಿಂತಿದ್ದಾರೆ. 2026ರವರೆಗಿದ್ದ ಅಧಿಕಾರವನ್ನು ತ್ಯಜಿಸಿ ಶಿಕ್ಷಕರ ತೀರ್ಪಿಗೆ ಅವಮಾನ ಮಾಡಿರುವ ಪುಟ್ಟಣ್ಣ ಅವರನ್ನು ತಿರಸ್ಕರಿಸಿ ನನಗೊಂದು ಬಾರಿ ಅವಕಾಶ ನೀಡುತ್ತಾರೆಂಬ ವಿಶ್ವಾಸವಿದೆ ಎಂದು ರಂಗನಾಥ್ ಹೇಳಿದರು.

ಸುದ್ದಿಗೋಷ್ಠಿಯಲ್ಲಿ ಜೆಡಿಎಸ್ ತಾಲೂಕು ಅಧ್ಯಕ್ಷ ರಾಜಶೇಖರ್ , ಮುಖಂಡರಾದ ನರಸಿಂಹಮೂರ್ತಿ, ರೈಡ್ ನಾಗರಾಜ್, ಶಿವಲಿಂಗಯ್ಯ, ಬಿಜೆಪಿ ಜಿಲ್ಲಾಧ್ಯಕ್ಷ ಆನಂದಸ್ವಾಮಿ, ರುದ್ರದೇವರು, ಶಿವಾನಂದ, ಗೋಪಾಲ್, ನಾಗೇಶ್, ಪದ್ಮನಾಭ ಇದ್ದರು.

ಕೋಟ್ ..........

ಪುಟ್ಟಣ್ಣರವರು ಸೋಲಿನ ಭೀತಿಯಿಂದ ರಂಗನಾಥ ಹೆಸರಿನ ಇನ್ನಿಬ್ಬರನ್ನು ಕಣಕ್ಕಿಳಿಸಿ ಕುತಂತ್ರ ನಡೆಸುವ ಮೂಲಕ ಕೀಳುಮಟ್ಟದ ರಾಜಕಾರಣ ಮಾಡುತ್ತಿದ್ದಾರೆ. ಕಳೆದ ಬಾರಿ ರಂಗನಾಥ ಹೆಸರಿನ ಮೂವರನ್ನು ನಿಲ್ಲಿಸಿದ್ದರು. ಶಿಕ್ಷಕರು ಯಾರೂ ದಡ್ಡರಲ್ಲ, ಸ್ವಾಭಿಮಾನಿ ಶಿಕ್ಷಕರು ಪಕ್ಷಾಂತರಿ ಪುಟ್ಟಣ್ಣರವರಿಗೆ ಪಾಠ ಕಲಿಸುತ್ತಾರೆಂಬ ವಿಶ್ವಾಸವಿದೆ.

- ಎ.ಪಿ.ರಂಗನಾಥ, ಜೆಡಿಎಸ್ - ಬಿಜೆಪಿ ಮೈತ್ರಿ ಅಭ್ಯರ್ಥಿ.

ಕೋಟ್ ...........

ಸಾಮಾನ್ಯ ಕಾರ್ಯಕರ್ತರಾಗಿದ್ದ ಪುಟ್ಟಣ್ಣ ಆಗರ್ಭ ಶ್ರೀಮಂತರಾಗಿದ್ದಾರೆ. ರಾಜಾಜಿನಗರ ಕ್ಷೇತ್ರ ಚುನಾವಣೆ ನಂತರ ಬೆಂಗಳೂರು ಶಿಕ್ಷಕರ ಕ್ಷೇತ್ರ ಉಪಚುನಾವಣೆಗೂ ಸ್ಪರ್ಧೆ ಮಾಡಿರುವುದು ಅವರು ಆರ್ಥಿಕವಾಗಿ ಎಷ್ಟು ಬಲಾಢ್ಯರು ಎಂಬುದಕ್ಕೆ ಸಾಕ್ಷಿ. ಜೆಡಿಎಸ್ ಮಾತ್ರವಲ್ಲ ಬಿಜೆಪಿ ಪಕ್ಷಕ್ಕೂ ವಿಶ್ವಾಸ ದ್ರೋಹ ಬಗೆದಿದ್ದು, ತಮ್ಮ ಸ್ವಾರ್ಥಕ್ಕಾಗಿ ಉಪ ಚುನಾವಣೆಗೆ ಕಾರಣರಾಗಿದ್ದಾರೆ. ಈ ಫಲಿತಾಂಶ ಕಾಂಗ್ರೆಸ್ ಸರ್ಕಾರದ ಜನವಿರೋಧಿ ಆಡಳಿತ ಹಾಗೂ ಮುಂಬುರುವ ಸಂಸತ್ ಚುನಾವಣೆ ದಿಕ್ಸೂಚಿಯಾಗಲಿದೆ.

- ಪ್ರಕಾಶ್ , ಜೆಡಿಎಸ್ ಉಸ್ತುವಾರಿ,

ಕೋಟ್ ..........

ಬಿಜೆಪಿ - ಜೆಡಿಎಸ್ ಮೈತ್ರಿ ಅಭ್ಯರ್ಥಿ ರಂಗನಾಥ್ ಶಿಕ್ಷಕರ ಪರವಾಗಿದ್ದಾರೆ. ಬೋಗಸ್ ಶಿಕ್ಷಕರನ್ನು ತೆಗೆಸಿ ನೈಜ ಶಿಕ್ಷಕರಿಗೆ ಮತದಾನಕ್ಕೆ ಅವಕಾಶ ಕಲ್ಪಿಸಿದ್ದಾರೆ. ಉಭಯ ಪಕ್ಷದ ಕಾರ್ಯಕರ್ತರು ತಮ್ಮ ಬಡಾವಣೆಯಲ್ಲಿರುವ ಶಿಕ್ಷಕರ ಮನವೊಲಿಸಿ ರಂಗನಾಥ ಪರವಾಗಿ ಮತ ಚಲಾಯಿಸುವಂತೆ ಮನವೊಲಿಸುವ ಕೆಲಸ ಮಾಡಬೇಕು.

- ಆನಂದಸ್ವಾಮಿ, ಜಿಲ್ಲಾಧ್ಯಕ್ಷರು, ಬಿಜೆಪಿ, ರಾಮನಗರ.7ಕೆಆರ್ ಎಂಎನ್ 7.ಜೆಪಿಜಿ

ಬೆಂಗಳೂರು ಶಿಕ್ಷಕರ ಕ್ಷೇತ್ರದ ಜೆಡಿಎಸ್ - ಬಿಜೆಪಿ ಮೈತ್ರಿ ಅಭ್ಯರ್ಥಿ ಎ.ಪಿ.ರಂಗನಾಥ್ ಸುದ್ದಿಗೋಷ್ಠಿಯಲ್ಲಿ ಮಾತನಾಡಿದರು.