ಲೋಕದಲ್ಲಿ ಅನೇಕ ಭಾಷೆಗಳಿದ್ದು, ಪ್ರತಿಭಾಷೆಯಲ್ಲೂ ಒಂದೊಂದು ರೀತಿಯ ಶಬ್ದ ಜಾಲವಿದೆ.

ಕನ್ನಡಪ್ರಭ ವಾರ್ತೆ ಮೈಸೂರುಭಗವಂತನೊಂದಿಗೆ ಮಾತನಾಡಲು ಇರುವಂತಹ ಭಾಷೆಯ ಪರಂಪರೆಯೇ ಸ್ತೋತ್ರಗಳಾಗಿದ್ದು, ಶಂಕರಾಚಾರ್ಯರು ಬರೆದಿರುವ ಸ್ತೋತ್ರಗಳು ಅತ್ಯಂತ ಅದ್ಭುತವಾಗಿದೆ. ಇದಕ್ಕೆ ಸಮಾನವಾದ ಸ್ತೋತ್ರಗಳು ಇಂದಿಗೂ ರಚನೆಯಾಗಿಲ್ಲ ಎಂದು ಶೃಂಗೇರಿ ಶಾರದಾಪೀಠದ ಪೀಠಾಧ್ಯಕ್ಷರಾದ ಶ್ರೀ ವಿಧುಶೇಖರ ಭಾರತೀ ಸ್ವಾಮೀಜಿ ಹೇಳಿದರು. ಶೃಂಗೇರಿಯ ಶ್ರೀ ಜಗದ್ಗುರು ಶಂಕರಾಚಾರ್ಯ ಮಹಾಸಂಸ್ಥಾನಮ್‌, ಮೈಸೂರು ಜಿಲ್ಲೆ ಕೆ.ಆರ್.ನಗರ ತಾಲೂಕಿನ ವೇದಾಂತಭಾರತೀ ವತಿಯಿಂದ ನಗರದ ಅರಮನೆ ಆವರಣದಲ್ಲಿ ಶ್ರೀ ಶೃಂಗೇರಿ ಶಾರದಾಪೀಠದ ಜಗದ್ಗುರು ಶಂಕರಾಚಾರ್ಯ ಶ್ರೀ ಶ್ರೀ ಭಾರತೀತೀರ್ಥ ಸ್ವಾಮಿಗಳು ಸನ್ಯಾಸ ಸ್ವೀಕರಿಸಿದ 50ನೇ ವರ್ಷದ ಶುಭ ಸಂದರ್ಭದಲ್ಲಿ ಸುವರ್ಣಭಾರತೀ ಎಂಬ ಶೀರ್ಷಿಕೆಯ ಅಡಿ ಶನಿವಾರ ಆಯೋಜಿಸಿದ್ದ ಕಲ್ಯಾಣವೃಷ್ಟಿ ಮಹಾಭಿಯಾನದ ಸ್ತುತಿಶಂಕರ ಸ್ತೋತ್ರ ಮಹಾಸಮರ್ಪಣೆ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು. ಲೋಕದಲ್ಲಿ ಅನೇಕ ಭಾಷೆಗಳಿದ್ದು, ಪ್ರತಿಭಾಷೆಯಲ್ಲೂ ಒಂದೊಂದು ರೀತಿಯ ಶಬ್ದ ಜಾಲವಿದೆ. ಅದರಲ್ಲೂ ಪ್ರತಿಯೊಬ್ಬರೊಂದಿಗೆ ಮಾತನಾಡುವಾಗ ನಮ್ಮ ಭಾಷೆ, ಶೈಲಿ ಹಾಗೂ ಶಬ್ದಗಳು ಬದಲಾಗುತ್ತಾ ಹೋಗಲಿದೆ. ನಮ್ಮ ತಂದೆ-ತಾಯಿ, ಶಿಕ್ಷಕರು, ಮಕ್ಕಳು, ಸ್ನೇಹಿತರು ಸೇರಿದಂತೆ ಪ್ರತಿಯೊಬ್ಬರ ಜತೆಗೆ ಮಾತನಾಡುವಾಗ ಭಾಷೆಯ ಶೈಲಿ ಬದಲಾಗಲಿದ್ದು, ಈ ಶೈಲಿ ಅರಿತು ಮಾತನಾಡಿದಾಗ ಮಾತ್ರವೇ ನಮ್ಮ ಕೆಲಸಗಳು ಸಫಲವಾಗಲಿದೆ ಎಂದರು. ಹೀಗಾಗಿ ಪ್ರತಿಯೊಬ್ಬ ವ್ಯಕ್ತಿಯೊಂದಿಗೆ ಮಾತನಾಡಲು ಅನೇಕ ಪ್ರಭೇದಗಳಿವೆ. ಈ ನಿಟ್ಟಿನಲ್ಲಿ ಪರಮಾತ್ಮನೊಂದಿಗೆ ಮಾತನಾಡುವ ಭಾಷೆ ಉತ್ಕೃಷ್ಟವಾಗಿರಬೇಕಿದ್ದು, ಹೀಗಾಗಿ ಸ್ತೋತ್ರಗಳಿಗೆ ಅಪಾರ ಮಹಿಮೆ ಇದೆ. ವೈದಿಕ ಧರ್ಮದ ಉದ್ಧಾರಕರಾದ ಆದಿಶಂಕರರು ರಚಿಸಿದ ಸ್ತೋತ್ರಗಳು ಪ್ರಭಾವಶಾಲಿಯಾಗಿದೆ. ಸ್ತೋತ್ರಗಳ ಮೂಲಕ ನಮ್ಮ ಆರಾಧ್ಯ ದೈವದೊಂದಿಗೆ ಮಾತನಾಡಲು ಸಾಧ್ಯವಿದೆ. ಅಂತಹ ಭಾಷೆಯೇ ಪರಂಪರೆಯಾಗಿ ಬಂದಿರುವ ಸ್ತೋತ್ರಗಳಾಗಿದ್ದು, ಶಂಕರಾಚಾರ್ಯರು ಅದ್ವೈತ ಸಿದ್ಧಾಂತವನ್ನು ನೀಡಿ, ಅದರ ಸಾಕ್ಷಾತ್ಕಾರಕ್ಕೆ ಅಗತ್ಯವಿರುವ ಉಪದೇಶ ನೀಡುವ ಮೂಲಕ ಭಗವಂತನೊಂದಿಗೆ ಮಾತನಾಡುವ ರೀತಿ, ಏನನ್ನು ಕೇಳಬೇಕು ಎಂಬುದನ್ನು ತಿಳಿಸಿಕೊಟ್ಟಿದ್ದಾರೆ ಎಂದರು.ಯಾವುದನ್ನು ಭಗವಂತ ಮಾತ್ರವೇ ಕೊಡಲಿಕ್ಕೆ ಸಾಧ್ಯವೂ ಅದನ್ನು ಮಾತ್ರವೇ ಆತನನ್ನು ಕೇಳಬೇಕೆಂದು ಶಂಕರಾಚಾರ್ಯರು ಸ್ತೋತ್ರಗಳಲ್ಲಿ ತಿಳಿಸಿದ್ದಾರೆ. ಈ ಹಲವು ಸ್ತೋತ್ರಗಳ ಮೂಲಕವಾಗಿ ಪರಮಾತ್ಮನ ಮಹಿಮೆ, ವೈಶಿಷ್ಟಗಳ ಬಗ್ಗೆ ತಿಳಿಸಿಕೊಟ್ಟಿದ್ದಾರೆ. ಜತೆಗೆ ಭಗವಂತನಲ್ಲಿ ಏನನ್ನು ಪ್ರಾರ್ಥನೆ ಮಾಡಿ ಏನನ್ನೂ ಆತನಿಂದ ಪಡೆಯಬೇಕೆಂಬುದನ್ನು ಕೂಡ ಉಪದೇಶ ಮಾಡಿದ್ದಾರೆ. ಹೀಗಾಗಿ ಪರಮಾತ್ಮನೊಂದಿಗೆ ಮಾತನಾಡುವು ಭಾಷೆಯೇ ಸ್ತೋತ್ರವಾಗಿದ್ದು, ಅದೇ ರೀತಿ ಪರಮಾತ್ಮನೊಂದಿಗೆ ಮಾತನಾಡುವ ಭಾಷೆಯನ್ನು ತಿಳಿದುಕೊಂಡಿರಬೇಕಿದೆ. ಈ ನಿಟ್ಟಿನಲ್ಲಿ ಪರಮೇಶ್ವರನ ಅವತಾರವೇ ಆಗಿರುವ ಶಂಕರರೇ ಈ ಎಲ್ಲ ಸ್ತೋತ್ರಗಳ ಮೂಲಕ ಭಗವಂತನೊಂದಿಗೆ ಮಾತನಾಡುವ ಭಾಷೆಯನ್ನು ತಿಳಿಸಿಕೊಟ್ಟಿದ್ದಾರೆ ಎಂದು ತಿಳಿಸಿದರು.ಪ್ರತಿಯೊಂದು ಸ್ತೋತ್ರಗಳಲ್ಲಿನ ವೈಶಿಷ್ಟ್ಯ ಅನಂತವಾದದ್ದು, ಈ ಸ್ತೋತ್ರಗಳನ್ನು ಎಲ್ಲರೂ ಪಠಣ ಮಾಡುವುದರ ಮೂಲಕ ಎಲ್ಲರೂ ಭಗವಂತನ ಅನುಗ್ರಹಕ್ಕೆ ಪಾತ್ರರಾಗಬೇಕೆಂಬ ಉದ್ದೇಶದೊಂದಿಗೆ ಸ್ತೋತ್ರ ಪಾರಾಯಣ ಅಭಿಯಾನ ಆರಂಭಿಸಲಾಯಿತು. ಅದರಂತೆ ಅರಮನೆ ಆವರಣದಲ್ಲಿ ನಡೆದ ಸ್ತುತಿಶಂಕರ ಸ್ತೋತ್ರ ಪಾರಾಯಣದಲ್ಲಿ ಸಹಸ್ರಾರು ಮಂದಿ ಏಕಕಂಠದಲ್ಲಿ ಸ್ತೋತ್ರಗಳ ಪಠಣೆ ಮಾಡಿರುವುದು ಸಂತಸ ತಂದಿದೆ ಎಂದರು. ಈ ವೇಳೆ ಶೃಂಗೇರಿ ಪೀಠದ ಶಂಕರಭಾರತಿ ಮಹಾಸ್ವಾಮೀಜಿ, ಯಡತೊರೆ ಯೋಗಾನಂದೇಶ್ವರ ಸರಸ್ವತಿ ಮಠದ ಬ್ರಹ್ಮಾನಂದ ಭಾರತಿ ಸ್ವಾಮೀಜಿ, ವೇದಾಂತ ಭಾರತಿ ಸ್ವಾಮೀಜಿ ಸಾನಿಧ್ಯ‌ವಹಿಸಿದ್ದರು. ಮೈಸೂರು ರಾಜವಂಶಸ್ಥೆ ಪ್ರಮೋದಾದೇವಿ ಒಡೆಯರ್, ಸಂಸದ ಯದುವೀರ್ ಕೃಷ್ಣದತ್ತ ಚಾಮರಾಜ ಒಡೆಯರ್ ಕುಟುಂಬ, ಶಾಸಕ ಟಿ.ಎಸ್‌. ಶ್ರೀವತ್ಸ, ಸ್ತುತಿಶಂಕರ ಸಂಚಾಲನ ಸಮಿತಿ ಕಾರ್ಯಾಧ್ಯಕ್ಷ ಸುಧಾಕರಶೆಟ್ಟಿ, ಸಂಚಾಲಕ ಹಾಗೂ ಎಂಐಟಿ ಶಿಕ್ಷಣ ಸಂಸ್ಥೆಗಳ ಮುಖ್ಯಸ್ಥ ಮುರುಳಿ, ಜಿಎಸ್ಎಸ್ ಸಮೂಹ ಸಂಸ್ಥೆಗಳ ಮುಖ್ಯಸ್ಥ ಶ್ರೀಹರಿ ದ್ವಾರಕನಾಥ್‌, ಎಂಡಿಎ ಮಾಜಿ ಅಧ್ಯಕ್ಷ ಎಚ್.ವಿ. ರಾಜೀವ್, ಬಿಜೆಪಿ ಮುಖಂಡ ರಘು ಕೌಟಿಲ್ಯ, ವಿಪಿಎಫ್‌ ಘಟಕದ ಕಾರ್ಯದರ್ಶಿ ಸುಧೀಂದ್ರ, ಉಪಾಧ್ಯಕ್ಷ ಕೆ.ಆರ್‌. ಸತ್ಯನಾರಾಯಣ, ಕಾರ್ಯದರ್ಶಿ ಮಂಜುನಾಥ್‌ ಶ್ರೀವತ್ಸ, ನಿರ್ದೇಶಕರಾದ ಗಣೇಶ್‌, ಚಂದ್ರಶೇಖರ್‌, ಸತ್ಯಪ್ರಕಾಶ್‌, ಕಾರ್ತಿಕ್‌ ಪಂಡಿತ್‌, ಶ್ರೀರಾಮ್‌ ಸೇರಿದಂತೆ ಹಲವರು ಇದ್ದರು.---ಕೋಟ್ಸನಾತನ ಧರ್ಮದ ಪರಂಪರೆ ಬಗ್ಗೆ ವಿಶೇಷ ಶ್ರದ್ಧಾಭಕ್ತಿ, ಗೌರವ ಹೊಂದಿರಬೇಕು. ಇದನ್ನು ನಾವುಗಳು ಆಚರಣೆ ಮಾಡುವ ಜತೆಗೆ ಮಕ್ಕಳಿಗೂ ಇದನ್ನು ತಿಳಿಸುವುದು ಪ್ರತಿಯೊಬ್ಬ ಪೋಷಕರ ಜವಾಬ್ದಾರಿಯಾಗಿದೆ. ಮಕ್ಕಳಿಗೆ ನಮ್ಮ ಧರ್ಮ, ಸಂಸ್ಕಾರ ಹೇಳಿಕೊಡುವುದು ಮುಖ್ಯವಾಗಲಿದ್ದು, ಇದನ್ನು ತಿಳಿಸಿದಾಗ ಮಾತ್ರವೇ ಅವರಲ್ಲಿ ಒಳ್ಳೆಯ ಸ್ತುತಿ, ಸಾಮರ್ಥ್ಯ ಬೆಳೆಯಲಿದೆ. ಇದರ ಹೊರತಾಗಿ ಅವರಿಗೆ ಎಷ್ಟೇ ಆಸ್ತಿ ನೀಡಿದರೂ ಪ್ರಯೋಜನವಿಲ್ಲ. - ಶ್ರೀ ವಿಧುಶೇಖರಭಾರತೀ ಸ್ವಾಮೀಜಿ, ಶೃಂಗೇರಿ ಶಾರದಾಪೀಠ.---ನಮ್ಮ ಹಣೆಬರಹ ನಾವೇ ತಿದ್ದಬೇಕು: ನಮ್ಮ ಹಣೆ ಬರಹವನ್ನು ನಾವೇ ತಿದ್ದಬೇಕು. ಬಹಳ ಜನರಿಗೆ ಸ್ತೋತ್ರ ಎಂದರೆ ಅದೆಂತಹುದೋ ಭಾವನೆಯಿದೆ. ಸ್ತೋತ್ರಗಳು ನಮ್ಮ ಹಣೆಬರಹ ಬದಲಿಸುತ್ತವೆ. ಈ ಮಾತನ್ನು ವೈದ್ಯರು ಸಹ ಹೇಳುತ್ತಾರೆ. ಸ್ವತಃ ಶಂಕರರು ಈ ಮಾತು ಹೇಳಿದ್ದಾರೆ. ನಕ್ಷತ್ರ ಮಾಲಿಕ ಸ್ತೋತ್ರಕ್ಕೆ ವಿಶಿಷ್ಟ ಮಹತ್ವವಿದೆ. ಒಂದು ಲಕ್ಷ ಜನಕ್ಕೆ ಇದನ್ನು ತಲುಪಿಸುವ ಗುರಿಯೊಂದಿಗೆ ಮೈಸೂರಿನಲ್ಲಿ ಕಾರ್ಯಕ್ರಮ ನಡೆಸಲಾಗಿದೆ. ಅರಮನೆ ಮೊದಲು ಕೂಡ ಗುರು ಮನೆಯಾಗಿತ್ತು. ಅರಮನೆ ಇಂದಿಗೂ ಗುರುಮನೆ ಆಗಿಯೇ ಉಳಿದಿದೆ. ಗುರುಗಳ ಬಗ್ಗೆ ರಾಜಮನೆತನಕ್ಕೆ ಅಪಾರ ಶ್ರದ್ದಾ, ಭಕ್ತಿಯಿದೆ ಎಂಬುದಕ್ಕೆ ಇಂದಿನ ಕಾರ್ಯಕ್ರಮ ಸಾಕ್ಷಿಯಾಗಿದೆ ಎಂದು ಕೆ.ಆರ್.ನಗರದ ಯಡತೊರೆ ಯೋಗಾನಂದೇಶ್ವರ ಸರಸ್ವತಿ ಮಠದ ಬ್ರಹ್ಮಾನಂದ ಭಾರತಿ ಸ್ವಾಮೀಜಿ ಹೇಳಿದರು---ಬಾಕ್ಸ್‌ಸಹಸ್ರ ಕಂಠದಲ್ಲಿ ಶಂಕರ ಸ್ತುತಿಪಠಣೆವಿಶ್ವವಿಖ್ಯಾತ ಮೈಸೂರು ಅರಮನೆ ಆವರಣ ಶನಿವಾರ ಸಂಜೆ ವಿಶೇಷ ಧಾರ್ಮಿಕ ಕಾರ್ಯವೊಂದಕ್ಕೆ ಸಾಕ್ಷಿಯಾಯಿತು. ಸುಮಾರು 25 ಸಾವಿರಕ್ಕೂ ಹೆಚ್ಚು ಭಕ್ತರಿಂದ ನಡೆಸಿದ ಶಂಕರ ಸ್ತೋತ್ರ ಮಹಾಸಮರ್ಪಣೆ ಕಾರ್ಯಕ್ರಮ ಶಂಕರ ಸ್ತುತಿಯ ಸ್ಮರಣೆಯ ವೇದಿಕೆಯಾಗುವುದರೊಂದಿಗೆ ಸ್ತುತಿಶಂಕರ ಸ್ತೋತ್ರಮಹಾಸಮರ್ಪಣೆಯ ಪಾರಾಯಣ ಸಂಪನ್ನಗೊಂಡಿತು. ಶೃಂಗೇರಿ ಶಾರದಾಪೀಠದ ಜಗದ್ಗುರು ಶಂಕರಾಚಾರ್ಯ ಭಾರತೀತೀರ್ಥ ಸ್ವಾಮಿಗಳು ಸನ್ಯಾಸ ಸ್ವೀಕರಿಸಿ 50ನೇ ವರ್ಷದ ಶುಭ ಸಂದರ್ಭದಲ್ಲಿಅರಮನೆ ಅಂಗಳದಲ್ಲಿ ಸುವರ್ಣಭಾರತೀ ಎಂಬ ಶೀರ್ಷಿಕೆಯ ಅಡಿಯಲ್ಲಿ ಆಯೋಜಿಸಿದ್ದ ಕಲ್ಯಾಣವೃಷ್ಟಿ ಮಹಾಭಿಯಾನದ ಸ್ತೋತ್ರ ಮಹಾಸಮರ್ಪಣೆ ಕಾರ್ಯಕ್ರಮದಲ್ಲಿ ಸಾವಿರಕ್ಕೂ ಹೆಚ್ಚು ಮಂದಿ ಭಕ್ತರು ಭಾಗವಹಿಸಿ ಶಂಕರಾಚಾರ್ಯರು ರಚಿಸಿರುವ ಸ್ತೋತ್ರಗಳನ್ನು ಏಕಕಾಲದಲ್ಲಿ ಪಠಿಸುವ ಮೂಲಕ ಭಕ್ತಿಭಾವ ಮೆರೆದರು.