ಕನ್ನಡಪ್ರಭ ವಾರ್ತೆ ಮೈಸೂರುನಗರ ಪೊಲೀಸ್‌ ವತಿಯಿಂದ ಶುಕ್ರವಾರ ಅಂತಾರಾಷ್ಟ್ರೀಯ ಮಾದಕ ದ್ರವ್ಯ ವಿರೋಧಿ ದಿನಾಚರಣೆ ಅಂಗವಾಗಿ ಆಯೋಜಿಸಿದ್ದ ಜಾಗೃತಿ ಜಾಥಕ್ಕೆ ಚಲನಚಿತ್ರ ನಟ ವಿನಯ್‌ ರಾಜ್‌ಕುಮಾರ್‌ ಚಾಲನೆ ನೀಡಿದರು.ನಗರದ ಅರಮನೆ ಕೋಟೆ ಆಂಜನೇಯಸ್ವಾಮಿ ದೇವಸ್ಥಾನ ಮುಂಭಾಗ ಆಯೋಜಿಸಿದ್ದ ಅಂತಾರಾಷ್ಟೀಯ ಮಾದಕ ದ್ರವ್ಯ ದುರುಪಯೋಗ ಮತ್ತು ಅಕ್ರಮ ಸಾಗಾಟ ವಿರೋಧಿ ದಿನದ ಜಾಥಾಗೆ ಚಾಲನೆ ನೀಡಿ ಮಾತನಾಡಿ, ಯುವಕ, ಯುವತಿಯರು ಮಾದಕ ವಸ್ತುಗಳ ದಾಸರಾಗುತ್ತಿರುವುದು ಅಪಾಯಕಾರಿ ಸಂಗತಿ. ಡ್ರಗ್ಸ್ ದುಷ್ಪರಿಣಾಮ ತಿಳಿಸಲು ಪೊಲೀಸರು ಹಮ್ಮಿಕೊಂಡಿರುವ ಜಾಥಾ ಅತ್ಯಗತ್ಯವಾಗಿತ್ತು. ಡ್ರಗ್ಸ್‌ ನಿಂದ ಆಗುವ ದುಷ್ಪರಿಣಾಮ ಅರಿತು ಯುವ ಪೀಳಿಗೆ ಮಾದಕ ವಸ್ತು ಸೇವನೆಯಿಂದ ಮುಕ್ತವಾಗಬೇಕು ಎಂದು ಸಲಹೆ ನೀಡಿದರು.ಶುಕ್ರವಾರ ಸೇ ನೋ ಡು ಡ್ರಗ್ಸ್ ಎಂಬ ಘೋಷ ವಾಕ್ಯದೊಂದಿಗೆ ಸಾಗಿದ ಜಾಥದಲ್ಲಿ ಶಾಲಾ ಕಾಲೇಜು ವಿದ್ಯಾರ್ಥಿಗಳು, ನರ್ಸಿಂಗ್ ವಿದ್ಯಾರ್ಥಿಗಳು, ಸಂಚಾರಿ ಪೊಲೀಸರು, ಮಹಿಳಾ ಪೊಲೀಸರು, ಕಮಾಂಡೋಗಳು, ಸಿಎಆರ್ ತಂಡ ಸೇರಿದಂತೆ ಪೊಲೀಸ್ ಇಲಾಖೆಯ ವಿವಿಧ ತಂಡಗಳು ಪಾಲ್ಗೊಂಡಿದ್ದವು. ಡ್ರಗ್ಸ್ ಎಂಬ ವಿಷ ಇನ್ನೇಕೆ, ಡ್ರಗ್ಸ್ ನಿಮ್ಮ ಬದುಕನ್ನು ಕೊಲ್ಲುತ್ತದೆ, ಡ್ರಗ್ಸ್ ಉಜ್ವಲ ಭವಿಷ್ಯವನ್ನು ಹಾಳು ಮಾಡುತ್ತದೆ, ಡ್ರಗ್ಸ್ ನೊಂದಿಗೆ ಒಡನಾಟ, ಅದುವೆ ಜೀವನದ ಕೊನೆಯಾಟ, ವ್ಯಸನದಿಂದ ದೂರವಿಡಿ ಜೀವನವನ್ನು ಆನಂದಿಸಿ, ನಶೆ ತ್ಯಜಿಸಿ ಯಶಸ್ವಿ ದಾರಿ ಹಿಡಿಯಿರಿ, ಉತ್ತಮ ಭವಿಷ್ಯದ ಕನಸಿಗಿಂತ ಮಿಗಿಲಾದ ನಶೆ ಇನ್ನೊಂದಿಲ್ಲ, ಡ್ರಗ್ಸ್ ಬಗ್ಗೆ ಎಚ್ಚೆತ್ತುಕೊಳ್ಳೋಣ, ಮಾದಕ ವ್ಯಸನ ತಡೆಯೋಣ, ಮಾದಕ ವಸ್ತುಗಳ ವಿರುದ್ಧ ಕರ್ನಾಟಕ ಎಂಬ ಘೋಷ ವಾಕ್ಯ ಜನರ ಗಮನ ಸೆಳೆಯಿತು.ಕೋಟೆ ಆಂಜನೇಯಸ್ವಾಮಿ ದೇವಸ್ಥಾನದಿಂದ ಹೊರಟ ಜಾಥಾ ಚಾಮರಾಜ ಒಡೆಯರ್ ವೃತ್ತ, ಆಲ್ಬರ್ಟ್ ವಿಕ್ಟರ್ ರಸ್ತೆ, ಕೆ.ಆರ್. ವೃತ್ತ, ಸಯ್ಯಾಜಿರಾವ್ ರಸ್ತೆ, ಆಯುರ್ವೇದ ಆಸ್ಪತ್ರೆ ವೃತ್ತ, ಇರ್ವಿನ್ ರಸ್ತೆ, ನೆಹರು ವೃತ್ತ, ಅಶೋಕ ರಸ್ತೆ ಮೂಲಕ ಸಾಗಿ ಕೋಟೆ ಆಂಜನೇಯಸ್ವಾಮಿ ದೇವಸ್ಥಾನ ಬಳಿ ಸಮಾಪ್ತಿಗೊಂಡಿತು.ನಗರ ಪೊಲೀಸ್ ಆಯುಕ್ತೆ ಸೀಮಾ ಲಾಟ್ಕರ್, ಡಿಸಿಪಿಗಳಾದ ಸುಂದರ್ ರಾಜ್, ಡಾ. ಹರ್ಷ ಪ್ರಿಯಂವದ, ಎ. ಮಾರುತಿ, ಸಿದ್ಧನಗೌಡ ಪಾಟೀಲ್, ಡಾ. ಶಂಕರ್, ಸಂಚಾರ ವಿಭಾಗದ ಎಸಿಪಿ ಶಿವಶಂಕರ್, ವಿವಿಧ ಶಾಲಾ-ಕಾಲೇಜು ವಿದ್ಯಾರ್ಥಿಗಳು, ನರ್ಸಿಂಗ್ ವಿದ್ಯಾರ್ಥಿನಿಗಳು, ಪೊಲೀಸ್ ಇಲಾಖೆಯ ವಿವಿಧ ತಂಡಗಳು ಪಾಲ್ಗೊಂಡಿದ್ದವು.