ಸಾರಾಂಶ
ಈದ್‌ಮಿಲಾದ್ ಮೆರವಣಿಗೆ ವೇಳೆ ಮೂವರು ಯುವಕರು ಪ್ಯಾಲೆಸ್ತೀನ್ ಧ್ವಜ ದ್ವಿಚಕ್ರ ವಾಹನದಲ್ಲಿ ಸುತ್ತಾಡಿರುವ ಘಟನೆ ಶಿವಮೊಗ್ಗ ಜಿಲ್ಲೆ ಭದ್ರಾವತಿಯಲ್ಲಿ ನಡೆದಿದ್ದು, ಹಳೆನಗರ ಪೊಲೀಸ್ ಠಾಣೆಯಲ್ಲಿ ಸ್ವಯಂ ಪ್ರೇರಿತ ಪ್ರಕರಣ ದಾಖಲಾಗಿದೆ.
ಕನ್ನಡಪ್ರಭ ವಾರ್ತೆ ಭದ್ರಾವತಿ
ಈದ್‌ಮಿಲಾದ್ ಮೆರವಣಿಗೆ ವೇಳೆ ಮೂವರು ಯುವಕರು ಪ್ಯಾಲೆಸ್ತೀನ್ ಧ್ವಜ ದ್ವಿಚಕ್ರ ವಾಹನದಲ್ಲಿ ಸುತ್ತಾಡಿರುವ ಘಟನೆ ಶಿವಮೊಗ್ಗ ಜಿಲ್ಲೆ ಭದ್ರಾವತಿಯಲ್ಲಿ ನಡೆದಿದ್ದು, ಹಳೆನಗರ ಪೊಲೀಸ್ ಠಾಣೆಯಲ್ಲಿ ಸ್ವಯಂ ಪ್ರೇರಿತ ಪ್ರಕರಣ ದಾಖಲಾಗಿದೆ.ಮಹಮದ್ ಪೈಗಂಬರ ಜನ್ಮದಿನ ಅಂಗವಾಗಿ ಸೆ.8ರಂದು ನಡೆದ ಈದ್‌ಮಿಲಾದ್ ಮೆರವಣಿಗೆ ದಿನದಂದು ಮೂವರು ಯುವಕರು ಪ್ಯಾಲೆಸ್ತೀನ್ ಧ್ವಜ ಹಿಡಿದು, ರೈಲ್ವೆ ನಿಲ್ದಾಣದ ಮುಂಭಾಗ, ತಿಮ್ಮಯ್ಯ ಮಾರುಕಟ್ಟೆ ಮೂಲಕ ದ್ವಿಚಕ್ರ ವಾಹನದಲ್ಲಿ ಬಿ.ಎಚ್.ರಸ್ತೆಯಲ್ಲಿ ಸುತ್ತಾಡಿರುವ ದೃಶ್ಯ ಸಿಸಿಟಿವಿ ಕ್ಯಾಮೆರಾದಲ್ಲಿ ಸೆರೆಯಾಗಿದ್ದು, ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ. ಈ ಘಟನೆ ರಾಷ್ಟ್ರೀಯ ಏಕತೆಗೆ ಧಕ್ಕೆಯನ್ನುಂಟು ಮಾಡಿದ್ದು, ಪೊಲೀಸರು ನಿರ್ಲಕ್ಷ್ಯ ವಹಿಸಿದ್ದಾರೆಂದು ಹಿಂದೂಪರ ಸಂಘಟನೆಗಳ ಮುಖಂಡರು ಆರೋಪಿಸಿದ್ದಾರೆ. ಇದೇ ದಿನ ‘ಪಾಕಿಸ್ತಾನ ಜಿಂದಾಬಾದ್ ಘೋಷಣೆ ಕೂಗಿರುವ’ ಸಂಬಂಧ ತನಿಖೆ ಇನ್ನೂ ನಡೆಯುತ್ತಿದ್ದು, ಇದೀಗ ಈ ಘಟನೆ ಬೆಳಕಿಗೆ ಬಂದಿರುವುದು ನಗರದಲ್ಲಿ ಮತ್ತಷ್ಟು ಅಶಾಂತಿ ನಿರ್ಮಾಣಕ್ಕೆ ಕಾರಣವಾಗಿದೆ.