ಸಾರಾಂಶ
ಚಿತ್ರದುರ್ಗ: ನಗರದ ಸದ್ಗುರು ಕಬೀರಾನಂದಾಶ್ರಮದಲ್ಲಿ ನಡೆಯುತ್ತಿರುವ ಶಿವನಾಮ ಸಪ್ತಾಹದ 94ನೇ ಶಿವರಾತ್ರಿ ಮಹೋತ್ಸವದ ಅಂಗವಾಗಿ ಶುಕ್ರವಾರ ರಾಜಬೀದಿಯಲ್ಲಿ ಶಿವಲಿಂಗಾನಂದ ಶ್ರೀಗಳ ಪಲ್ಲಕ್ಕಿ ಹಾಗೂ ಜನಪದ ಉತ್ಸವ ಸಂಭ್ರಮದಿಂದ ನೆರವೇರಿತು. ರಾಜಬೀದಿಯ ಇಕ್ಕೆಲಗಳಲ್ಲಿ ನಿಂತಿದ್ದ ಭಕ್ತಾಧಿಗಳು ಶ್ರೀಗಳ ದರ್ಶನ ಪಡೆದು ಭಕ್ತಿ ಪ್ರದರ್ಶಿಸಿದರು. ಕಬೀರಾನಂದ ಆಶ್ರಮದಿಂದ ಹೊರಟ ಪಲ್ಲಕ್ಕಿ ಉತ್ಸವಕ್ಕೆ ಉತ್ಸವ ಸಮಿತಿ ಅಧ್ಯಕ್ಷ ಕೆ.ಸಿ. ನಾಗರಾಜ್ ಚಾಲನೆ ನೀಡಿದರು.
ಮುಖಂಡರಾದ ನಂದಿ ನಾಗರಾಜ್, ಪ್ರಶಾಂತ್, ನಾಗರಾಜ್ ಸಂಗಂ, ಸತೀಶ್, ಓಂಕಾರ್, ರುದ್ರೇಶ್ ಪ್ರಭಂಜನ್, ಪೈಲ್ವಾನ್ ತಿಪ್ಪೇಸ್ವಾಮಿ ನಿರಂಜನ ಮೂರ್ತಿ, ಶಾಸ್ತ್ರಿ, ತಿಪ್ಪೇಸ್ವಾಮಿ ಯೋಗಿಶ್ ಸೇರಿದಂತೆ ಹಲವರು ಉಪಸ್ಥಿತರಿದ್ದರು. ಉತ್ಸವ ಕಬೀರಾನಂದಾಶ್ರಮದಿಂದ ಪ್ರಾರಂಭವಾಗಿ ದೊಡ್ಡಪೇಟೆಯ ರಾಜಬೀದಿ, ಮೈಸೂರ್ ಕಫೆ, ಉಚ್ಚಂಗಿ ಯಲ್ಲಮ್ಮ ದೇವಾಲಯ ಚಿಕ್ಕಪೇಟೆ, ಆನೆಬಾಗಿಲು, ಸಂತೇಪೇಟೆ, ಬಿ.ಡಿ ರಸ್ತೆ, ಎಸ್‌ಬಿಎಂ ವೃತ್ತ, ಕೋಮಲ ನರ್ಸಿಂಗ್ ಹೋಂ, ಧರ್ಮಶಾಲಾ ರಸ್ತೆ, ಪಾರ್ಶ್ವನಾಥ್ ಸ್ಕೂಲ್ ಮುಂಭಾಗ, ಇಪಿ ಬ್ರದರ್ಸ್, ಶಾರದ ಬ್ರಾಸ್ ಬ್ಯಾಂಡ್ ಮನೆ ಮುಂಭಾಗ, ರಂಗಯ್ಯನ ಬಾಗಿಲು, ಉಜ್ಜಯಿನಿ ಮಠ, ಕರುವಿನಕಟ್ಟೆ ವೃತ್ತಯಿಂದ ಶ್ರೀಮಠವನ್ನು ತಲುಪಿತು. ದಾರಿಯುದ್ದಕ್ಕೂ ಭಕ್ತಾಧಿಗಳು ಶಿವಲಿಂಗಾನಂದ ಸ್ವಾಮಿಗಳ ದರ್ಶನಕ್ಕೆ ಸಾಲು ಗಟ್ಟಿದ್ದರು. ಶ್ರೀಗಳಿಗೆ ಫಲ, ಕಾಣಿಕೆ ನೀಡುವುದರ ಮೂಲಕ ದರ್ಶನ ಆರ್ಶೀವಾದ ಪಡೆದರು.ಉತ್ಸವದಲ್ಲಿ ಚಂಡೆ, ಕೀಲು ಕುದುರೆ, ತಮಟೆ, ಜಾಂಜ್ ನೃತ್ಯ, ಲಂಬಾಣಿ ನೃತ್ಯ, ಖಾಸಬೇಡರ ಪಡೆ, ಡೊಳ್ಳು ಕುಣಿತ, ಕೋಲಾಟ, ಭಜನೆ, ತಟ್ಟೆರಾಯ, ಶಾರದಾ ಬ್ರಾಸ್ ಬ್ಯಾಂಡ್, ಕಹಳೆ, ಉರಿಮೆ, ಗೂರವಪ್ಪ, ಛತ್ರಿ ಚಾಮರ ಸೇರಿದಂತೆ ವಿವಿಧ ಜಾನಪದ ಕಲಾ ತಂಡಗಳು ಭಾಗವಹಿಸಿ ತಮ್ಮ ಪ್ರತಿಭೆಯನ್ನು ಪ್ರದರ್ಶನ ಮಾಡಿದರು. ಉರಿ ಬಿಸಿಲು ಲೆಕ್ಕಿಸದೆ ಭಕ್ತಾಧಿಗಳು ಮೆರವಣಿಗೆಯಲ್ಲಿ ಪಾಲ್ಗೊಂಡಿದ್ದು ವಿಶೇಷವಾಗಿತ್ತು. ಆದಿಚುಂಚನಗಿರಿ ಶಿಕ್ಷಣ ಟ್ರಸ್ಟ್ ಜ್ಞಾನ ವಿಕಾಸ ಪಾಲಿಟೆಕ್ನಿಕ್ ಕಾಲೇಜಿನ ಸಿಬ್ಬಂದಿ, ಸದ್ಗುರು ಕಬೀರಾನಂದಸ್ವಾಮಿ ನರ್ಸಿಂಗ್ ಕಾಲೇಜು, ಪ್ರಥಮ ದರ್ಜೆ ಕಾಲೇಜು, ಬಿಇಡಿ, ಪಿಯು ಕಾಲೇಜು, ಆಂಗ್ಲ ಶಾಲೆಯ ವಿದ್ಯಾರ್ಥಿಗಳು ಮೆರವಣಿಗೆಯಲ್ಲಿ ಪಾಲ್ಗೊಂಡಿದ್ದರು. ಕಬೀರಾನಂದ ಸ್ವಾಮಿ ಆಂಗ್ಲ ಮತ್ತು ಮಾಧ್ಯಮ ಪ್ರಾಥಮಿಕ ಶಾಲೆಯ ವಿದ್ಯಾರ್ಥಿಗಳು ದೇಶದ ವಿವಿಧ ರಾಜ್ಯದ ಉಡುಗೆಯನ್ನು ತೊಡುವುದರ ಮೂಲಕ ಭಾವೈಕ್ಯತೆ ಮೆರೆದರು. ಜಿಲ್ಲೆಯ ಬರ ಆವರಿಸಿರುವ ಹಿನ್ನಲೆ ಉತ್ಸವಕ್ಕೆ ಅಷ್ಟಾಗಿ ಅದ್ಧೂರಿತನದ ಸ್ಪರ್ಶ ನೀಡಿರಲಿಲ್ಲ. ಪುಷ್ಪಾಲಂಕೃತ ಪಲ್ಲಕ್ಕಿಯನ್ನು ಟ್ರಾಕ್ಟರ್‌ನಲ್ಲಿ ಇಡಲಾಗಿತ್ತು. ಪಲ್ಲಕ್ಕಿಯಲ್ಲಿಯೇ ಕುಳಿತು ಶ್ರೀಗಳು ನಗರದ ಪ್ರಮುಖ ಬೀದಿಯಲ್ಲಿ ಸಾಗಿ ಬಂದರು. ಬಿಸಿಲ ಬೇಗೆ ನೀಗಿಸಿಕೊಳ್ಳಲು ಅಲ್ಲಲ್ಲಿ ಮಜ್ಜಿಗೆ, ತಂಪು ಪಾನೀಯ ವಿತರಿಸಲಾಯಿತು.