ಸಾರಾಂಶ
ಕನ್ನಡಪ್ರಭ ವಾರ್ತೆ ಸುಬ್ರಹ್ಮಣ್ಯ ಮಹಾತೋಭಾರ ಕುಕ್ಕೆ ಶ್ರೀ ಸುಬ್ರಹ್ಮಣ್ಯ ದೇವಸ್ಥಾನದ ಚಂಪಾಷಷ್ಠಿ ಜಾತ್ರಾ ಮಹೋತ್ಸವ ಕಾರ್ತಿಕ ಶುದ್ಧ ಚೌತಿಯ ದಿನವಾದ ಗುರುವಾರ ಶ್ರೀ ದೇವಳದಲ್ಲಿ ಪಲ್ಲಪೂಜೆ ನೆರವೇರಿತು. ದೇವಳದ ಪ್ರಧಾನ ಅರ್ಚಕ ವೇದಮೂರ್ತಿ ಸೀತಾರಾಮ ಯಡಪಡಿತ್ತಾಯ ಒಳಾಂಗಣದಲ್ಲಿ ಪಲ್ಲಪೂಜೆ ನೆರವೇರಿಸಿದರು. ಅಲ್ಲದೆ ಅಕ್ಷಯ ಪಾತ್ರೆಗೆ ಪೂಜೆ ಸಲ್ಲಿಸಿದರು. ಕುಕ್ಕೆಯಲ್ಲಿ ನಿರಂತರ ಅನ್ನದಾನ ನಡೆಯುವುದು ಪ್ರಧಾನವಾಗಿದ್ದು, ಜಾತ್ರಾ ಸಮಯ ‘ವಿಶೇಷ ಭೋಜನ ಪ್ರಸಾದ ವಿತರಣೆಯ ಸಂಕೇತವಾಗಿ ಶ್ರೀ ದೇವಳದಲ್ಲಿ ಪಲ್ಲಪೂಜೆ ನಡೆಯಿತು.ಜಾತ್ರೋತ್ಸವದ ಪ್ರಧಾನ 4 ದಿನಗಳಾದ ಚೌತಿ, ಪಂಚಮಿ, ಷಷ್ಠಿ, ಮತ್ತು ಅವಭೃತೋತ್ಸವದಂದು ವಿಶೇಷ ಅನ್ನದಾನ ನೆರವೇರುತ್ತದೆ. ಈ ಸಂಬಂಧವಾಗಿ ಗುರುವಾರ ಮಧ್ಯಾಹ್ನ ರೀತಿ ಪುರೋಹಿತರು ಅಂಗಡಿಗುಡ್ಡೆಯಲ್ಲಿ ನೂತನವಾಗಿ ನಿರ್ಮಿಸಿದ ಅನ್ನಸತ್ರ ಅನ್ನಪೂರ್ಣದಲ್ಲಿ ಪುರೋಹಿತ ಪ್ರಸನ್ನ ಹೊಳ್ಳ ಪಲ್ಲಪೂಜೆ ನೆರವೇರಿಸಿದರು. ಅಲ್ಲದೆ ವಿವಿಧ ವೈದಿಕ ವಿಧಿ ವಿಧಾನಗಳ ಮೂಲಕ ಅನ್ನಬ್ರಹ್ಮನಿಗೆ ಪೂಜೆ ಸಲ್ಲಿಸಿದರು. ಬಳಿಕ ಪ್ರಸಾದ ವಿತರಿಸಿದರು. ಕುಕ್ಕೆ ಸುಬ್ರಹ್ಮಣ್ಯ ಕ್ಷೇತ್ರ ನಿರಂತರ ಅನ್ನದಾನ ನೀಡುವ ಕ್ಷೇತ್ರವಾದುದರಿಂದ ಚೌತಿ ದಿನ ಅನ್ನಪ್ರಸಾದಕ್ಕೆ ಪೂಜೆ ನೆರವೇರುತ್ತದೆ.
ಈ ಸಂದರ್ಭದಲ್ಲಿ ಶ್ರೀ ದೇವಳದ ಕಾರ್ಯನಿರ್ವಹಣಾಧಿಕಾರಿ ಅರವಿಂದ ಅಯ್ಯಪ್ಪ ಸುತಗುಂಡಿ, ದೇವಳದ ಅಧೀಕ್ಷಕ ಪದ್ಮನಾಭ ಶೆಟ್ಟಿಗಾರ್, ಶ್ರೀ ದೇವಳದ ದೇವಣ್ಣ ಗೌಡ, ಮಹಾಬಲೇಶ್ವರ ದೋಳ, ಪುರುಷೋತ್ತಮ, ಬಾಲಸುಬ್ರಹ್ಮಣ್ಯ ಮಾರರ್, ಹೂವಪ್ಪ, ಭವಾನಿಶಂಕರ ದೇವರಗದ್ದೆ, ಎನ್.ಸಿ ಸುಬ್ಬಪ್ಪ, ನಿರಂಜನ ಭಟ್, ಸ್ವಯಂಸೇವಕರಾದ ಮೋಹನದಾಸ ರೈ, ನವೀನ್ ಕುಮಾರ್ ಕೆ., ಪ್ರವೀಣ್ ಕುಮಾರ್ ಕೆ. ಸೇರಿದಂತೆ ದೇವಳದ ಸಿಬ್ಬಂದಿ, ಭಕ್ತರು ಉಪಸ್ಥಿತರಿದ್ದರು.