17ರಂದು ಬನವಾಸಿಯಲ್ಲಿ ಪಂಪ ಕಂಡ ಭಾರತ ರಾಜ್ಯ ಸಾಹಿತ್ಯಗೋಷ್ಠಿ

| Published : Nov 15 2024, 12:34 AM IST

ಸಾರಾಂಶ

ಸಾಹಿತ್ಯ ಗೋಷ್ಠಿಯನ್ನು ಬನವಾಸಿಯ ವನವಾಸಿಕ ಯಾತ್ರಿ ನಿವಾಸದಲ್ಲಿ ಹಮ್ಮಿಕೊಳ್ಳಲಾಗಿದೆ. ಅಂದು ಬೆಳಗ್ಗೆ ೯.೪೫ಕ್ಕೆ ಕಾರ್ಯಕ್ರಮವನ್ನು ಪರಿಷದ್ ರಾಜ್ಯ ಉಪಾಧ್ಯಕ್ಷ ಎಸ್.ಜಿ. ಕೋಟಿ ಉದ್ಘಾಟಿಸುವರು.

ಶಿರಸಿ: ಆದಿಕವಿ ಪಂಪನ ನೆಲ ಬನವಾಸಿಯಲ್ಲಿ ಅಖಿಲ ಭಾರತೀಯ ಸಾಹಿತ್ಯ ಪರಿಷದ್ ಕರ್ನಾಟಕ ವತಿಯಿಂದ ಪಂಪ ಕಂಡ ಭಾರತ ವಿಷಯದ ಮೇಲೆ ರಾಜ್ಯ ಸಾಹಿತ್ಯ ಗೋಷ್ಠಿಯನ್ನು ನ. ೧೭ರಂದು ಆಯೋಜಿಸಲಾಗಿದೆ ಎಂದು ಪರಿಷದ್ ರಾಜ್ಯ ಪ್ರಧಾನ ಕಾರ್ಯದರ್ಶಿ ರಘುನಂದನ್ ಭಟ್ಟ ತಿಳಿಸಿದರು.

ಸುದ್ದಿಗೋಷ್ಠಿಯಲ್ಲಿ ಮಾತನಾಡಿ, ಸಾಹಿತ್ಯ ಗೋಷ್ಠಿಯನ್ನು ಬನವಾಸಿಯ ವನವಾಸಿಕ ಯಾತ್ರಿ ನಿವಾಸದಲ್ಲಿ ಹಮ್ಮಿಕೊಳ್ಳಲಾಗಿದೆ. ಅಂದು ಬೆಳಗ್ಗೆ ೯.೪೫ಕ್ಕೆ ಕಾರ್ಯಕ್ರಮವನ್ನು ಪರಿಷದ್ ರಾಜ್ಯ ಉಪಾಧ್ಯಕ್ಷ ಎಸ್.ಜಿ. ಕೋಟಿ ಉದ್ಘಾಟಿಸುವರು. ಕನ್ಮಡ‌ ವಿದ್ವಾಂಸ ಡಾ. ವಿಷ್ಣು ಭಟ್ ಪಾದೇಕಲ್ಲು ದಿಕ್ಸೂಚಿ ಭಾಷಣ ಮಾಡಲಿದ್ದಾರೆ.

ಪರಿಷದ್ ಜಿಲ್ಲಾಧ್ಯಕ್ಷ ಗಂಗಾಧರ‌ ಕೊಳಗಿ‌ ಉಪಸ್ಥಿತರಿರಲಿದ್ದಾರೆ. ಪುಟ್ಟು ಕುಲಕರ್ಣಿಯವರ ಶ್ರೀ ಅರವಿಂದ ಸಾವಿತ್ರಿ ಪುಸ್ತಕ ಬಿಡಗಡೆಯಾಗಲಿದೆ. ಬಳಿಕ ೧೧.೩೦ರಿಂದ ಕರ್ಣಾರ್ಜುನ ಭಾಗವಾಗಿ ವಿಕ್ರಮಾರ್ಜುನ ವಿಜಯದ ಕರ್ಣ ವಿಷಯದ ಮೇಲೆ ಕನ್ನಡ ಪ್ರಾಧ್ಯಾಪಕ ಡಾ. ಜಗದೀಶ ತುರಗನೂರು, ಅರಸಿಕೇರಿ ಅರ್ಜುನನಾದ ಬಗೆ ವಿಷಯದ ಮೇಲೆ ಸಾಹಿತ್ಯ ವಿದ್ವಾಂಸ ಡಾ. ಶ್ರೀಧರ ಹೆಗಡೆ ಮಾತನಾಡಲಿದ್ದಾರೆ. ಪ್ರಾಧ್ಯಾಪಕ ರಾಘವೇಂದ್ರ ಸಂಪ ಅವಲೋಕ ಮಾಡಲಿದ್ದಾರೆ ಎಂದರು.

ಅವಧಿ ಎರಡರ ಭಾಗವಾಗಿ ಮಧ್ಯಾಹ್ನ ೨.೩೦ರಿಂದ ಕೃಷ್ಣಾರ್ಜುನ ವಿಷಯವಾಗಿ ಪಂಪನ ನಾಯಕನಾಗಿ ಅರ್ಜುನ ವಿಷಯದ ಮೇಲೆ ಪ್ರೊ. ಟಿ.ಜಿ. ಭಟ್ ಹಾಸಣಗಿ, ಪಂಪನ ಕೃಷ್ಣ ವಿಷಯದ ಮೇಲೆ ವಿದ್ವಾಂಸ ಡಾ. ಪುಟ್ಟು ಕುಲಕರ್ಣಿ ಮಾತನಾಡಲಿದ್ದು, ಸಂಸ್ಕೃತ ವಿದ್ವಾಂಸ ಲೋಹಿತಾಶ್ವ ತೀರ್ಥಹಳ್ಳಿ ಅವಲೋಕನ ಮಾಡಲಿದ್ದಾರೆ ಎಂದ ಅವರು, ಸಂಜೆ ೪ರಿಂದ ಸಮಾರೋಪ ನಡೆಯಲಿದ್ದು, ಸಂಸ್ಕೃತ ವಿದ್ವಾಂಸ ಡಾ. ಟಿ.ಎನ್. ಪ್ರಭಾಕರ ಮೈಸೂರು ಸಮಾರೋಪ ಮಾತುಗಳನ್ನಾಡಲಿದ್ದಾರೆ. ಪರಿಷದ್ ಕಾರ್ಯಕಾರಿಣಿ ಸದಸ್ಯ ಜಗದೀಶ ಭಂಡಾರಿ ಉಪಸ್ಥಿತಿ ಇರಲಿದೆ ಎಂದರು.

ಸುದ್ದಿಗೋಷ್ಠಿಯಲ್ಲಿ ಪರಿಷದ್ ಪ್ರಮುಖರಾದ ಭಾರತೀ ಮಿರ್ಜಿ, ಭಾನುರಾಜ ಮಂಗಳೂರು, ಕೃಷ್ಣಮೂರ್ತಿ ಪದಕಿ, ಜಗದೀಶ ಭಂಡಾರಿ, ಗಂಗಾಧರ ಕೊಳಗಿ ಇದ್ದರು.‌

ಸಮುದ್ರ ಆಮೆ ಪುನರ್ವಸತಿ ಕೇಂದ್ರದ ಸ್ಥಳ ಸ್ಥಳಾಂತರಕ್ಕೆ ವಿರೋಧ

ಹೊನ್ನಾವರ: ಹೊನ್ನಾವರದಲ್ಲಿ ಉದ್ದೇಶಿತ ಒಲಿವ್ ರಿಡ್ಲಿ ಸಮುದ್ರ ಆಮೆ ಸಂರಕ್ಷಣೆ ಕೇಂದ್ರವನ್ನು ಕಾರವಾರಕ್ಕೆ ಸ್ಥಳಾಂತರಿಸುವ ಯೋಜನೆಗೆ ಸ್ಥಳೀಯ ಸಂರಕ್ಷಣಾ ಕಾರ್ಯಕರ್ತರು ಮತ್ತು ಮೀನುಗಾರ ಸಮುದಾಯದಿಂದ ವ್ಯಾಪಕ ವಿರೋಧ ವ್ಯಕ್ತವಾಗಿದೆ.

ಸಮುದ್ರ ಸಂರಕ್ಷಣಾ ಎನ್‌ಜಿಒಗಳಲ್ಲಿ ಒಂದಾದ ಹೊನ್ನಾವರದ ಫೌಂಡೇಶನ್, ಕೆ ಶೋರ್ ಆಮೆ ಪುನರ್ವಸತಿ ಕೇಂದ್ರದ ಸ್ಥಳ ಆಯ್ಕೆ ಸಂಬಂಧ ವಿಶ್ವಬ್ಯಾಂಕ್‌ಗೆ ತಮ್ಮ ಆತಂಕವನ್ನು ಅಧಿಕೃತವಾಗಿ ವ್ಯಕ್ತಪಡಿಸಿದೆ.

ಭಾಗಶಃ ವಿಶ್ವಬ್ಯಾಂಕ್‌ನಿಂದ ಧನಸಹಾಯವನ್ನು ಪಡೆಯುತ್ತಿರುವ ಈ ಯೋಜನೆ, ವರ್ಷಗಳಿಂದ ಸಮುದ್ರ ಆಮೆಗಳ ಸಂರಕ್ಷಣೆಯಲ್ಲಿ ಸಕ್ರಿಯವಾಗಿ ತೊಡಗಿಸಿಕೊಂಡಿರುವ ಹೊನ್ನಾವರ ಫೌಂಡೇಶನ್, ಕರಾವಳಿಯಲ್ಲಿ ಓಲಿವ್ ರಿಡ್ಲಿ ಸಮುದ್ರ ಆಮೆಗಳ ಸಂರಕ್ಷಣೆಯಲ್ಲಿ ಹೊನ್ನಾವರದ ಮಹತ್ವವನ್ನು ತೋರಿಸಲು ಅಂಕಿ- ಅಂಶಗಳನ್ನು ಕಲೆ ಹಾಕಿದೆ. ಕರ್ನಾಟಕದ ಕರಾವಳಿಯಲ್ಲಿನ ಓಲಿವ್ ರಿಡ್ಲಿ ಗೂಡುಗಳು ಹೊನ್ನಾವರದಲ್ಲಿ ಅತಿ ಹೆಚ್ಚು ಕಾಣಸಿಗುತ್ತದೆ ಎಂದು ಹೊನ್ನಾವರ ಫೌಂಡೇಶನ್‌ನ ಟ್ರಸ್ಟಿ ಸಂದೀಪ ಹೆಗಡೆ ತಿಳಿಸಿದ್ದಾರೆ.ಇಲ್ಲಿ 112,063ಕ್ಕೂ ಹೆಚ್ಚು ಮೊಟ್ಟೆಗಳನ್ನು ಮತ್ತು 54,850 ಮರಿ‌ಗಳನ್ನು ದಾಖಲಿಸಲಾಗಿದೆ. ಹೀಗಾಗಿ ಕೇಂದ್ರವನ್ನು ಬೇರೆ ಪ್ರದೇಶಕ್ಕೆ ಸ್ಥಳಾಂತರಿಸುವುದರಿಂದ ಸಂರಕ್ಷಣಾ ಕೆಲಸದ ಜತೆಗೆ ಈ ಪ್ರದೇಶದಲ್ಲಿ ಆಮೆ ಮರಿ‌ಗಳ ಬದುಕು ಸಹ ಅಪಾಯದಲ್ಲಿ ಸಿಲುಕುತ್ತದೆ ಎಂದು ತಿಳಿಸಿದ್ದಾರೆ.ಸ್ಥಳೀಯ ಮೀನುಗಾರರೂ ಪುನರ್ವಸತಿ ಕೇಂದ್ರಕ್ಕೆ ಹೊನ್ನಾವರವನ್ನು ಸೂಕ್ತ ಸ್ಥಳವೆಂದು ತಿಳಿಸಿದ್ದಾರೆ. ಹೊನ್ನಾವರದ ಮೀನುಗಾರ ಸಮುದಾಯದ ನಾಯಕ ರಾಜೇಶ್ ತಾಂಡೆಲ್, ಒಲಿವ್ ರಿಡ್ಲಿ ಆಮೆ ಪವಿತ್ರವಾಗಿದೆ. ನಮ್ಮ ಸಾಂಸ್ಕೃತಿಕ ಪರಂಪರೆಯ ಸಂಕೇತವಾಗಿದೆ ಮತ್ತು ವಿಷ್ಣುವಿನ ಕೂರ್ಮ ಅವತಾರದ ಪ್ರತಿನಿಧಿಯಾಗಿದೆ. ಹೊನ್ನಾವರದ ಮೀನುಗಾರರು ಆಮೆಗಳ ಸಂರಕ್ಷಣೆಗೆ ಬದ್ಧರಾಗಿದ್ದಾರೆ ಮತ್ತು ಸಮುದ್ರದಲ್ಲಿ ಕಂಡುಬರುವ ಗಾಯಗೊಂಡ ಆಮೆಗಳನ್ನು ನಿರಂತರವಾಗಿ ರಕ್ಷಿಸುತ್ತಾರೆ. ಇಲ್ಲಿ ಪುನರ್ವಸತಿ ಕೇಂದ್ರವನ್ನು ಸ್ಥಾಪಿಸುವುದರಿಂದ ಆಮೆಗಳ ಸಂರಕ್ಷಣೆ ಸಾಧ್ಯವಾಗುತ್ತದೆ ಎಂದಿದ್ದಾರೆ.ಕರ್ನಾಟಕದ ಓಲಿವ್ ರಿಡ್ಲಿ ಸಮುದ್ರ ಆಮೆಗಳ ಬಗ್ಗೆ ವ್ಯಾಪಕವಾಗಿ ಸಂಶೋಧನೆ ನಡೆಸಿದ ಸಮುದ್ರಜೀವ ತಜ್ಞ ಡಾ. ಪ್ರಕಾಶ್ ಮೆಸ್ತಾ, ಒಲಿವ್ ರಿಡ್ಲಿ ಆಮೆಗಳು ವಿಶಿಷ್ಟ ಜೈವಿಕ ವೈಶಿಷ್ಟ್ಯತೆಯನ್ನು ಹೊಂದಿದ್ದು, ಹೊನ್ನಾವರದ ಕೇಂದ್ರವನ್ನು ಸ್ಥಳಾಂತರಿಸುವುದು ಸರಿಯಲ್ಲ ಎಂದು ತಿಳಿಸಿದ್ದಾರೆ.