ಸಾರಾಂಶ
ಕನ್ನಡಪ್ರಭ ವಾರ್ತೆ, ತುಮಕೂರುಪಂಚ ಗ್ಯಾರಂಟಿ ಯೋಜನೆಗಳಿಂದ ತುಮಕೂರು ಜಿಲ್ಲೆಗೆ ಇದುವರೆಗೂ 4701.88ಕೋಟಿ ರೂ. ಹಣವನ್ನು ಸರ್ಕಾರ ವ್ಯಯಿಸಿದೆ. ಸರ್ಕಾರವು ರಾಜ್ಯದಲ್ಲಿ ಜಾರಿ ಮಾಡಿರುವ ಗ್ಯಾರಂಟಿ ಯೋಜನೆಗಳ ಬಗ್ಗೆ ದೇಶ, ವಿದೇಶದಲ್ಲೂ ಚರ್ಚೆಯಾಗುತ್ತಿವೆ. ಶಕ್ತಿ ಯೋಜನೆ ಗೋಲ್ಡನ್ ಬುಕ್ ಆಫ್ ರೆಕಾರ್ಡ್ಗೆ ಸೇರ್ಪಡೆಯಾಗಿರುವುದೇ ಇದಕ್ಕೆ ಸಾಕ್ಷಿ ಎಂದು ರಾಜ್ಯ ಗ್ಯಾರಂಟಿ ಯೋಜನೆಗಳ ಅನುಷ್ಠಾನ ಪ್ರಾಧಿಕಾರದ ರಾಜ್ಯ ಉಪಾಧ್ಯಕ್ಷ ಹಾಗೂ ಶಾಸಕ ದಿನೇಶ್ ಗೂಳಿಗೌಡ ಅವರು ಹೇಳಿದರು.ಜಿಲ್ಲಾ ಪಂಚಾಯತ್ ಸಭಾಂಗಣದಲ್ಲಿ ಶುಕ್ರವಾರ ನಡೆದ ಜಿಲ್ಲಾ ಮಟ್ಟದ ಗ್ಯಾರಂಟಿ ಯೋಜನೆಗಳ ಅನುಷ್ಠಾನ ಪ್ರಾಧಿಕಾರದ ಪ್ರಗತಿ ಪರಿಶೀಲನಾ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದ ಅವರು, ಗ್ಯಾರಂಟಿ ಯೋಜನೆಗಳು ಚುನಾವಣೆ ಗೆಲುವಿಗಾಗಿ ಮಾಡಿದ ಯೋಜನೆಗಳಲ್ಲ. ಜನರ ಜೀವನಮಟ್ಟ ಸುಧಾರಣೆಗೆ 2023ರ ವಿಧಾನಸಭಾ ಚುನಾವಣಾ ಸಂದರ್ಭದಲ್ಲಿ ನಮ್ಮ ನಾಯಕ ಮುಖ್ಯಮಂತ್ರಿ ಸಿದ್ದರಾಮಯ್ಯ, ಉಪಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಮಾಡಿದ ಸಂಕಲ್ಪವನ್ನು ಜಾರಿಗೆ ತರಲಾಗಿದೆ ಎಂದರು.ಗ್ಯಾರಂಟಿ ಸಮಿತಿ ಅಧ್ಯಕ್ಷರು ಮತ್ತು ಸದಸ್ಯರು ಫಲಾನುಭವಿಗಳ ಜೊತೆ ನಿರಂತರ ಸಂಪರ್ಕದಲ್ಲಿದ್ದು, ಯೋಜನೆಯ ದುರುಪಯೋಗ ಆಗದಂತೆ ಎಲ್ಲೂ ಅಪಸ್ವರ ಬಾರದಂತೆ ನೋಡಿಕೊಳ್ಳಬೇಕು. ಬಡತನ ನಿರ್ಮೂಲನೆ ಮಾಡುವ ಉದ್ದೇಶದಿಂದ ಸಮಾಜದ ಕಟ್ಟಕಡೆಯ ವ್ಯಕ್ತಿಗೂ ಈ ಯೋಜನೆ ತಲುಪಿಸುವ ಕಾರ್ಯವನ್ನು ಮಾಡಬೇಕು ಎಂದರು. ಜಿಲ್ಲೆಯಲ್ಲಿರುವ 330 ಗ್ರಾಮ ಪಂಚಾಯತಿ ಹಾಗೂ 4 ಸಾವಿರ ಅಂಗನವಾಡಿ ಕೇಂದ್ರಗಳಲ್ಲಿ ಗ್ಯಾರಂಟಿ ಯೋಜನೆಗಳ ಕುರಿತು ಫ್ಲೆಕ್ಸ್, ಬ್ಯಾನರ್ ಅಳವಡಿಸಿ ಪ್ರಚಾರ ಕಾರ್ಯ ಕೈಗೊಳ್ಳಬೇಕು. ಗ್ಯಾರಂಟಿ ಯೋಜನೆಗಳಿಗಾಗಿ ರಾಜ್ಯ ಸರ್ಕಾರ ಕಳೆದ 21 ತಿಂಗಳಲ್ಲಿ 98 ಸಾವಿರ ಕೋಟಿ ರು. ಹಣವನ್ನು ವ್ಯಯ ಮಾಡಿದೆ ಎಂದು ಹೇಳಿದರು. ಅನ್ನಭಾಗ್ಯ ಯೋಜನೆಯಡಿ ಪಡೆದ ಅಕ್ಕಿಯನ್ನು ಕಾಳಸಂತೆಯಲ್ಲಿ ಮಾರಾಟ ಮಾಡುತ್ತಿರುವುದಕ್ಕೆ ತಡೆ ಹಾಕಬೇಕು. ಗೋದಾಮುಗಳಲ್ಲಿ ಪಡಿತರ ದಾಸ್ತಾನನ್ನು ಅಚ್ಚುಕಟ್ಟಾಗಿ ನಿರ್ವಹಿಸಬೇಕು. ತೂಕದಲ್ಲಿ ವ್ಯತ್ಯಾಸ ಆಗದಂತೆ ನೋಡಿಕೊಳ್ಳಬೇಕು ಎಂದು ಜಿಲ್ಲಾ ಪಂಚಾಯತ್ ಮುಖ್ಯಕಾರ್ಯನಿರ್ವಾಹಕ ಅಧಿಕಾರಿ ಪ್ರಭು ಅಧಿಕಾರಿಗಳಿಗೆ ಸೂಚನೆ ನೀಡಿದರು. ಸಾರಿಗೆ ಬಸ್ಸುಗಳ ಕೊರತೆಯಾಗದಂತೆ ನೋಡಿಕೊಳ್ಳಬೇಕು. ಗೃಹಲಕ್ಷ್ಮಿ ಯೋಜನೆಯಡಿ ನೋಂದಣಿಯಾಗಿರುವ ಫಲಾನುಭವಿಗಳ ಪೈಕಿ ಐಟಿ/ಜಿಎಸ್‌ಟಿಯಿಂದ ೭೩೪೩ ಹಾಗೂ ಎನ್‌ಪಿಸಿಐನಿಂದ ೨೯೩೩ ಫಲಾನುಭವಿಗಳು ಯೋಜನೆಯಿಂದ ಹೊರಗುಳಿದಿದ್ದಾರೆ. ಇದನ್ನು ಸರಿಪಡಿಸುವ ಕಾರ್ಯವಾಗಬೇಕು ಎಂದರು.ಲ್ಯಾಪ್ ಟ್ಯಾಪ್, ಸೈಕಲ್ ಖರೀದಿ, ಔಷಧಿಗೆ ಬಳಕೆ ಗೃಹಲಕ್ಷ್ಮಿ ಹಣವನ್ನು ಮಹಿಳೆಯರು ಕುಟುಂಬ ನಿರ್ವಹಣೆಗೆ ಬಳಕೆ ಮಾಡಿಕೊಳ್ಳುವುದರ ಜೊತೆಗೆ ಚಿಕಿತ್ಸೆ, ಮಕ್ಕಳ ವಿದ್ಯಾಭ್ಯಾಸಕ್ಕೆ ಬಳಕೆ ಮಾಡಿಕೊಳ್ಳುತ್ತಿದ್ದಾರೆ. ಈ ಯೋಜನೆ ಹೀಗೆಯೇ ಮುಂದುವರಿಯಬೇಕು. ಪಂಚಗ್ಯಾರಂಟಿ ಯೋಜನೆಗಳು ನಮ್ಮ ಪಾಲಿಗೆ ಪಂಚರತ್ನ ಯೋಜನೆಗಳು ಎಂದು ಸಭೆಯಲ್ಲಿ ಉಪಸ್ಥಿತರಿದ್ದ ಫಲಾನುಭವಿಗಳು ತಮ್ಮ ಅನಿಸಿಕೆಯನ್ನು ಹಂಚಿಕೊಂಡರು.
ಗೃಹಲಕ್ಷ್ಮಿ ಹಣ ಮಗಳ ಶಿಕ್ಷಣಕ್ಕೆ ನೆರವಾಗಿದೆ. ನನಗೆ ಬಂದ ಹಣದಿಂದ ಮಗಳಿಗೆ ಲ್ಯಾಪ್‌ಟಾಪ್ ಖರೀದಿಸಿ ಕೊಟ್ಟಿದ್ದೇನೆ ಎಂದು ತಿಪಟೂರು ಗಾಂಧಿನಗರದ ನಿವಾಸಿ ನಜ್ಮಭಾನು ಸಂತಸ ಹಂಚಿಕೊಂಡರು. ಗ್ಯಾರಂಟಿ ಯೋಜನೆಗಳು ಮಹಿಳೆಯರ ಪಾಲಿಗೆ ದಾರಿದೀಪ. ಗೃಹಲಕ್ಷ್ಮಿ ಹಣದಿಂದ ನನ್ನ ತಾಯಿ ಕಂಪ್ಯೂಟರ್ ಖರೀದಿಸಿಕೊಟ್ಟಿದ್ದಾರೆ. ಇದಕ್ಕಾಗಿ ಕರ್ನಾಟಕ ರಾಜ್ಯ ಸರ್ಕಾರಕ್ಕೆ ಧನ್ಯವಾದಗಳು. ಗ್ಯಾರಂಟಿ ಹಣ ವಿದ್ಯಾರ್ಥಿಗಳಿಗೆ ಅನುಕೂಲವಾಗಿದೆ. ಮುಂದಿನ ದಿನಗಳಲ್ಲಿ ಯುಪಿಎಸ್‌ಸಿ ಪರೀಕ್ಷೆ ಬರೆದು ಐಎಎಸ್ ಆಗುವ ಮಹತ್ವಾಕಾಂಕ್ಷೆ ಹೊಂದಿದ್ದೇನೆ ಎಂದು ತಿಪಟೂರಿನ ಶಾಲಾ ವಿದ್ಯಾರ್ಥಿನಿ ಪರೀಧಾ ಹೇಳಿದರು.ನನಗೆ ಬಂದಂತಹ ಗೃಹಲಕ್ಷ್ಮಿ ಹಣ ಔಷಧಿ ಖರೀದಿಗೆ ಅನುಕೂಲವಾಗಿದೆ. ಗ್ಯಾರಂಟಿ ಹಣವನ್ನು ಚಿಕಿತ್ಸೆಗೆ ಬಳಕೆ ಮಾಡಿಕೊಳ್ಳುವುದರ ಜೊತೆಗೆ ಮೊಮ್ಮಕ್ಕಳ ವಿದ್ಯಾಭ್ಯಾಸಕ್ಕೆ ಬಳಸಿಕೊಳ್ಳುತ್ತಿದ್ದೇನೆ ಎಂದು ತುಮಕೂರು ತಾಲೂಕು ಉರುಕೆರೆ ಗ್ರಾಮದ ಜಯಮ್ಮ ಹೇಳಿದರು. ಕಳೆದ 21 ತಿಂಗಳಲ್ಲಿ ಬಂದಂತಹ ಗೃಹಲಕ್ಷ್ಮಿ ಹಣದಿಂದ ನನ್ನ ಮೊಮ್ಮಗನಿಗೆ ಸೈಕಲ್ ಖರೀದಿಸಿ ಕೊಟ್ಟಿದ್ದೇನೆ. ಅವನ ವಿದ್ಯಾಭ್ಯಾಸಕ್ಕೂ ಅನುಕೂಲವಾಗಿದೆ. ಈ ಯೋಜನೆ ಗ್ರಾಮೀಣ ಭಾಗದವರಿಗೆ ತುಂಬಾ ಅನುಕೂಲವಾಗಿದೆ ಎಂದು ತುಮಕೂರು ತಾಲೂಕು ತಿಮ್ಲಾಪುರ ಗ್ರಾಮದ ಚಂದ್ರಮ್ಮ ಸಂತಸ ಹಂಚಿಕೊಂಡರು.ಸಭೆಯಲ್ಲಿ ಜಿಲ್ಲಾ ಮಟ್ಟದ ಗ್ಯಾರಂಟಿ ಯೋಜನೆಗಳ ಅನುಷ್ಠಾನ ಪ್ರಾಧಿಕಾರದ ಜಿಲ್ಲಾ ಅಧ್ಯಕ್ಷರಾದ ಚಂದ್ರಶೇಖರಗೌಡ, ಉಪಾಧ್ಯಕ್ಷರುಗಳಾದ ಹನುಮಂತಯ್ಯ, ನರಸೀಯಪ್ಪ, ಅಂಬರೀಶ್, ಶಿವಪ್ರಸಾದ್, ಪಂಚಾಕ್ಷರಿ ಹಾಗೂ ಪ್ರಾಧಿಕಾರದ ಸದಸ್ಯರು ಮತ್ತು ಜಿಲ್ಲಾ ಮಟ್ಟದ ಅಧಿಕಾರಿಗಳು ಉಪಸ್ಥಿತರಿದ್ದರು.