ಪಂಚ ಗ್ಯಾರಂಟಿ ಯೋಜನೆಗಳಿಂದ ಜಿಲ್ಲೆಯಲ್ಲಿ ₹3194.33 ಕೋಟಿ ಅನುದಾನ ವಿನಿಯೋಗವಾಗಿದೆ. ಅರ್ಹ ಬಡವರು ಈ ಯೋಜನೆಗಳಿಂದ ಹೊರಗುಳಿಯಬಾರದು ಎಂದು ಜಿಲ್ಲಾ ಗ್ಯಾರಂಟಿ ಯೋಜನಾ ಅನುಷ್ಠಾನ ಸಮಿತಿ ಅಧ್ಯಕ್ಷ ಶಾಮನೂರು ಟಿ.ಬಸವರಾಜ ತಿಳಿಸಿದ್ದಾರೆ.
- ಏಪ್ರಿಲ್‌ವರೆಗೆ ಗೃಹಲಕ್ಷ್ಮಿ ಜಮಾ, ಬಡವರಿಗೆ ಯೋಜನೆಗಳು ತಲುಪಲಿ: ಬಸವರಾಜ - - -
ಕನ್ನಡಪ್ರಭ ವಾರ್ತೆ ದಾವಣಗೆರೆಪಂಚ ಗ್ಯಾರಂಟಿ ಯೋಜನೆಗಳಿಂದ ಜಿಲ್ಲೆಯಲ್ಲಿ ₹3194.33 ಕೋಟಿ ಅನುದಾನ ವಿನಿಯೋಗವಾಗಿದೆ. ಅರ್ಹ ಬಡವರು ಈ ಯೋಜನೆಗಳಿಂದ ಹೊರಗುಳಿಯಬಾರದು ಎಂದು ಜಿಲ್ಲಾ ಗ್ಯಾರಂಟಿ ಯೋಜನಾ ಅನುಷ್ಠಾನ ಸಮಿತಿ ಅಧ್ಯಕ್ಷ ಶಾಮನೂರು ಟಿ.ಬಸವರಾಜ ತಿಳಿಸಿದರು.
ಮಂಗಳವಾರ ಜಿಲ್ಲಾ ಪಂಚಾಯಿತಿ ಸಭಾಂಗಣದಲ್ಲಿ ನಡೆದ ಗ್ಯಾರಂಟಿ ಯೋಜನೆಗಳ ಪ್ರಗತಿ ಪರಿಶೀಲನಾ ಸಭೆ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.ಅನ್ನಭಾಗ್ಯ ಯೋಜನೆಯಡಿ 5 ಕೆ.ಜಿ. ಅಕ್ಕಿ ಮತ್ತು ಐದು ಕೆಜಿ ಅಕ್ಕಿಯ ನಗದು ಸೇರಿದಂತೆ ಪ್ರಸ್ತುತ 10 ಕೆಜಿ ಅಕ್ಕಿಯನ್ನು ನೀಡಲಾಗುತ್ತಿದೆ. ಇದಕ್ಕಾಗಿ 2023ರ ಜುಲೈನಿಂದ ಇಲ್ಲಿಯವರೆಗೆ ₹568.17 ಕೋಟಿ ವೆಚ್ಚ ಮಾಡಲಾಗಿದೆ. ಗೃಹಲಕ್ಷ್ಮಿ ಯೋಜನೆಯಡಿ 351016 ಮಹಿಳಾ ಯಜಮಾನಿಯರಿಗೆ 2026ರ ಏಪ್ರಿಲ್‌ವರೆಗೆ ₹2123.28 ಕೋಟಿ ಜಮಾ ಮಾಡಲಾಗಿದೆ. ಗೃಹಜ್ಯೋತಿ ಯೋಜನೆಯಡಿ 513178 ಆರ್.ಆರ್. ಸಂಖ್ಯೆ ಹೊಂದಿರುವ ಗೃಹ ವಿದ್ಯುತ್ ಬಳಕೆ ಗ್ರಾಹಕರಿಗೆ ಏಪ್ರಿಲ್‌ನಲ್ಲಿ ₹24.80 ಕೋಟಿ ಹಣವನ್ನು ಹೊಂದಾಣಿಕೆ ಮಾಡಲಾಗಿದೆ. ಯುವನಿಧಿಯಡಿ 2024 ರಿಂದ 2026ರ ಫೆಬ್ರವರಿವರೆಗೆ ₹36.79 ಕೋಟಿ ನಿರುದ್ಯೋಗ ಭತ್ಯೆ ನೀಡಲಾಗಿದೆ ಎಂದ ಅವರು, ನಿಯಮ ಉಲ್ಲಂಘನೆ ಮಾಡುವ ನ್ಯಾಯಬೆಲೆ ಅಂಗಡಿಗಳ ಮೇಲೆ ಕಾನೂನು ಕ್ರಮ ಕೈಗೊಳ್ಳಬೇಕೆಂದು ನಿರ್ದೇಶನ ನೀಡಿದರು.
ಜಿಪಂ ಸಿಇಒ ಗಿತ್ತೆ ಮಾಧವ ವಿಠ್ಠಲ ರಾವ್ ಮಾತನಾಡಿ, ನ್ಯಾಯಬೆಲೆ ಅಂಗಡಿಗಳಲ್ಲಿ ಯಾರಾದರೂ ಕಾಳಸಂತೆಯಲ್ಲಿ ಅಕ್ಕಿ ಮಾರಾಟ ಮತ್ತು ನಿಗದಿತ ವೇಳೆಯಲ್ಲಿ ಅಂಗಡಿ ತೆರೆಯದೇ ಇರುವ ದೂರುಗಳಿದ್ದಲ್ಲಿ ಕ್ರಮ ಕೈಗೊಂಡ ಬಗ್ಗೆ ವರದಿ ನೀಡಬೇಕೆಂದು ಆಹಾರ ಇಲಾಖೆ ಅಧಿಕಾರಿಗಳಿಗೆ ನಿರ್ದೇಶನ ನೀಡಿದರು.ಮನೆಗಳಿಗೆ ವಿದ್ಯುತ್ ಸಂಪರ್ಕ ನೀಡಲು ನಿವಾಸ ಅನುಮತಿ ಪತ್ರ (ಒಸಿ) ಹೊಂದಬೇಕೆಂಬ ನಿಯಮ ಜಾರಿ ಇದೆ ಎಂದು ಹೊಸ ಮನೆ ನಿರ್ಮಾಣ ಮಾಡಿದವರಿಗೆ ವಿದ್ಯುತ್ ಸಂಪರ್ಕ ನೀಡುತ್ತಿಲ್ಲ ಎಂದು ಸದಸ್ಯರು ಹಿಂದಿನ ಸಭೆಯಲ್ಲಿ ಪ್ರಸ್ತಾಪಿಸಿದ್ದರು. ಇದಕ್ಕೆ ಬೆಸ್ಕಾಂ ಕಾರ್ಯನಿರ್ವಾಹಕ ಎಂಜಿನಿಯರ್ ಮಾತನಾಡಿ, ಯಾವುದೇ ವಾಸಸ್ಥಾನ ಅನುಮತಿ ಪತ್ರ ಅವಶ್ಯಕತೆ ಇರುವುದಿಲ್ಲ. 40*30 ಅಳತೆ ಮನೆ ಕಟ್ಟಿದವರಿಗೆ ನೋಂದಣಿ ಮಾಡಿದಲ್ಲಿ ವಿದ್ಯುತ್ ಸಂಪರ್ಕ ನೀಡಲಾಗುತ್ತಿದೆ ಎಂದರು. ಈ ವೇಳೆ ಸದಸ್ಯ ಗಿರೀಶ್ ಮಾತನಾಡಿ, ವಿದ್ಯುತ್ ಮೀಟರ್ ನೀಡಲು ಹೆಚ್ಚಿಗೆ ಶುಲ್ಕ ಪಡೆಯಲಾಗುತ್ತಿದೆ ಎಂದು ಪ್ರಸ್ತಾಪಿಸಿದಾಗ, ಸಿಂಗಲ್ ಫೇಸ್ ಡಿಜಿಟಲ್ ಮೀಟರ್‌ಗೆ ₹4998 ಮತ್ತು ತ್ರಿ ಫೇಸ್ ಮೀಟರ್‌ಗೆ ₹8880 ಗಳ ಬೆಲೆಯನ್ನು ನಿಗದಿ ಮಾಡಲಾಗಿದೆ. ಇದಕ್ಕಿಂತಲೂ ಹೆಚ್ಚಿನ ದರ ಪಡೆದಲ್ಲಿ ಬೆಸ್ಕಾಂಗೆ ದೂರು ನೀಡಬಹುದಾಗಿದೆ ಎಂದರು.
ಜಿಪಂ ಸಿಇಒ ಮಾತನಾಡಿ, ಕೆಎಸ್‌ಆರ್‌ಟಿಸಿ ಅಧಿಕಾರಿಗಳು ಮಾರ್ಗದಲ್ಲಿ ಸಂಚರಿಸುವ ಬಸ್‌ಗಳನ್ನು ನಿಯಮಿತವಾಗಿ ತಪಾಸಣೆ ನಡೆಸಿ ಸುಸ್ಥಿತಿಯಲ್ಲಿಟ್ಟುಕೊಂಡು ಚಲಾಯಿಸಬೇಕು. ಅಪಘಾತ ಪ್ರಕರಣಗಳು ಸಂಭವಿಸಬಾರದು ಎಂದರು.ಸಭೆಯಲ್ಲಿ ಗ್ಯಾರಂಟಿ ಅನುಷ್ಠಾನ ಸಮಿತಿ ಉಪಾಧ್ಯಕ್ಷೆ ರಾಜೇಶ್ವರಿ, ನಂಜಾನಾಯ್ಕ, ಮಂಜುನಾಥ, ಅನಿಷ್ ಪಾಷ, ಶಶಿಕಲಾ, ಸದಸ್ಯರಾದ ಶಶಿಕಲಾ, ಗಿರೀಶ, ಲಿಯಾಕತ್ ಆಲಿ, ಕೆ.ಜಿ.ಉಮೇಶ, ಡೋಲಿ ಚಂದ್ರು, ಎಚ್.ಎ.ಜಗದೀಶ, ಸಿ.ಎಚ್. ಶ್ರೀನಿವಾಸ, ಷಂಶೀರ್ ಅಹಮದ್, ಶಿವರಾಮ್ ನಾಯಕ್, ಕೆಎಸ್‌ಆರ್‌ಟಿಸಿ ಅಧಿಕಾರಿಗಳು, ಆಹಾರ ಮತ್ತು ನಾಗರೀಕ ಸರಬರಾಜು ಇಲಾಖೆಯ ಜಂಟಿ ನಿರ್ದೇಶಕ ಮಧುಸೂದನ್, ಬೆಸ್ಕಾಂ ಉಪಾಧೀಕ್ಷಕ ತಿಪ್ಪೇಸ್ವಾಮಿ, ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆಯ ಉಪ ನಿರ್ದೇಶಕ ರಾಜಾನಾಯ್ಕ್ , ಜಿಲ್ಲಾ ಉದ್ಯೋಗಾಧಿಕಾರಿ ರವೀಂದ್ರ ಹಾಗೂ ಜಿಲ್ಲಾ ಮಟ್ಟದ ಅಧಿಕಾರಿಗಳು ಉಪಸ್ಥಿತರಿದ್ದರು.
- - --9ಕಡಿವಿಜಿ33: ದಾವಣಗೆರೆಯಲ್ಲಿ ಶಾಮನೂರು ಟಿ.ಬಸವರಾಜ ಅಧ್ಯಕ್ಷತೆಯಲ್ಲಿ ಜಿಲ್ಲಾ ಗ್ಯಾರಂಟಿ ಯೋಜನೆಗಳ ಅನುಷ್ಠಾನ ಸಮಿತಿ ಸಭೆ ನಡೆಯಿತು.