ಶಾಂತಲಿಂಗ ಶಿವಾಚಾರ್ಯರಿಗೆ ಪಂಚಾಚಾರ್ಯ ಶ್ರೀ ಪ್ರಶಸ್ತಿ

| Published : Apr 08 2024, 01:08 AM IST

ಶಾಂತಲಿಂಗ ಶಿವಾಚಾರ್ಯರಿಗೆ ಪಂಚಾಚಾರ್ಯ ಶ್ರೀ ಪ್ರಶಸ್ತಿ
Share this Article
  • FB
  • TW
  • Linkdin
  • Email

ಸಾರಾಂಶ

ಬೆಳಗಾವಿ ನಗರದ ಹುಕ್ಕೇರಿ ಸಂಸ್ಥಾನ ಹಿರೇಮಠ ಕೊಡಮಾಡುವ ಪಂಚಾಚಾರ್ಯ ಶ್ರೀ ಪ್ರಶಸ್ತಿಯನ್ನು ಧಾರವಾಡ ತಾಲೂಕು ಅಮ್ಮಿನಬಾವಿ ಸಂಸ್ಥಾನ ಪಂಚಗೃಹ ಹಿರೇಮಠದ ಶಾಂತಲಿಂಗ ಶಿವಾಚಾರ್ಯ ಸ್ವಾಮೀಜಿಗೆ ನೀಡಲಾಗುತ್ತಿದೆ ಎಂದು ಹುಕ್ಕೇರಿ ಸಂಸ್ಥಾನ ಹಿರೇಮಠದ ಚಂದ್ರಶೇಖರ ಶಿವಾಚಾರ್ಯರು ತಿಳಿಸಿದ್ದಾರೆ.

ಬೆಳಗಾವಿ: ನಗರದ ಹುಕ್ಕೇರಿ ಸಂಸ್ಥಾನ ಹಿರೇಮಠ ಕೊಡಮಾಡುವ 2024ನೇ ಸಾಲಿನ ಪಂಚಾಚಾರ್ಯ ಶ್ರೀ ಪ್ರಶಸ್ತಿಯನ್ನು ಧಾರವಾಡ ತಾಲೂಕು ಅಮ್ಮಿನಬಾವಿ ಸಂಸ್ಥಾನ ಪಂಚಗೃಹ ಹಿರೇಮಠದ ಶಾಂತಲಿಂಗ ಶಿವಾಚಾರ್ಯ ಸ್ವಾಮೀಜಿಗೆ ನೀಡಲಾಗುತ್ತಿದೆ ಎಂದು ಹುಕ್ಕೇರಿ ಸಂಸ್ಥಾನ ಹಿರೇಮಠದ ಶ್ರೀ ಚಂದ್ರಶೇಖರ ಶಿವಾಚಾರ್ಯ ಸ್ವಾಮೀಜಿ ತಿಳಿಸಿದ್ದಾರೆ.

ಪ್ರತಿ ವರ್ಷ ಯುಗಾದಿಯಂದು ಶ್ರೀ ಜಗದ್ಗುರು ಪಂಚಾಚಾರ್ಯರ ಜಯಂತಿ ಯುಗಮಾನೋತ್ಸವದ ನೆನಪಿನಲ್ಲಿ ಹಿರಿಯ ಮಠಾಧೀಶರಿಗೆ ಈ ಪ್ರಶಸ್ತಿಯನ್ನು ಕೊಡಲಾಗುತ್ತಿದೆ. ಶ್ರೀಶಾಂತಲಿಂಗ ಶ್ರೀಗಳು ತಮ್ಮ 5ನೇ ವಯಸ್ಸಿನಲ್ಲಿಯೇ ಅಮ್ಮಿನಬಾವಿ ಸಂಸ್ಥಾನ ಪಂಚಗೃಹ ಹಿರೇಮಠದ ಪಟ್ಟಕ್ಕೆ ಏರಿದ್ದು, ತಮ್ಮ ಸುದೀರ್ಘ ಸನ್ಯಾಸದ ಬದುಕಿನಲ್ಲಿ ಯಶಸ್ಸಿನ 90 ವಸಂತ ಕಂಡಿದ್ದಾರೆ. ಅಮ್ಮಿನಬಾವಿ ಹಾಗೂ ಸುತ್ತಲಿನ ಗ್ರಾಮಗಳ ಮಕ್ಕಳ ವಿದ್ಯಾರ್ಜನೆಗಾಗಿ ತಮ್ಮ ಶ್ರೀಮಠದ ಆಶ್ರಯದಲ್ಲಿ ಶಾಂತೇಶ್ವರ ಪ್ರೌಢ ಶಾಲೆಯನ್ನು (1965), ಜತೆಗೆ ಕನ್ನಡ ಪ್ರಾಥಮಿಕ ಶಾಲೆಯನ್ನು(1991) ಪ್ರಾರಂಭಿಸಿ ಮುನ್ನಡೆಸಿದ್ದಾರೆ. ಉಭಯ ಶಾಲೆಗಳು ಇಂದು ಶಾಲಾ ಶಿಕ್ಷಣ ಇಲಾಖೆಯಿಂದ ಅನುದಾನಕ್ಕೆ ಒಳಪಟ್ಟಿವೆ. ಬಡ ಜಾಣ ವಿದ್ಯಾರ್ಥಿಗಳ ವಿದ್ಯಾರ್ಜನೆಗೆ ಶ್ರೀಮಠದಲ್ಲಿ ಅವಕಾಶ ಕಲ್ಪಿಸಿ ಅವರ ಬಾಳಿಗೆ ಬೆಳಕಾಗಿದ್ದಾರೆ.

ಆರಂಭದಿಂದಲೂ ಲಿಂಗಪೂಜಾ ನಿಷ್ಠರು. ಸೂರ್ಯೋದಯಕ್ಕೂ ಮುನ್ನವೇ ಇಷ್ಟಲಿಂಗಾರ್ಚನೆ ಪೂರೈಸುತ್ತಿದ್ದು, ಪ್ರಸ್ತುತ ಇಳಿವಯಸ್ಸಿನಲ್ಲಿಯೂ ಮುಂದುವರಿಸಿದ್ದಾರೆ. ವಿವಿಧ ಧರ್ಮಕ್ಷೇತ್ರಗಳಲ್ಲಿ ಇಷ್ಟಲಿಂಗಾನುಷ್ಠಾನ ಕೈಗೊಂಡು ಆತ್ಮಬಲ ಸಂಪಾದಿಸಿಕೊಂಡಿದ್ದಾರೆ. ಅಮ್ಮಿನಬಾವಿ ಸಂಸ್ಥಾನ ಪಂಚಗೃಹ ಹಿರೇಮಠದಲ್ಲಿ ಕಿರಿಯ ಶ್ರೀಗಳಾದ ಅಭಿನವ ಶಾಂತಲಿಂಗ ಶಿವಾಚಾರ್ಯರ ಸಮ್ಮುಖದಲ್ಲಿ ಏ.9 ರಂದು ಬೆಳಗ್ಗೆ 11 ಗಂಟೆಗೆ ಪ್ರಶಸ್ತಿ ಪ್ರದಾನ ಮಾಡಲಾಗುವುದೆಂದು ಹುಕ್ಕೇರಿಯ ಚಂದ್ರಶೇಖರ ಶಿವಾಚಾರ್ಯರು ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.