29 ರಿಂದ ಡಿ. 4ರ ವರೆಗೆ ಜೈನ ಗುತ್ತಿಯಲ್ಲಿ ಪಂಚಕಲ್ಯಾಣೋತ್ಸವ

| Published : Nov 27 2024, 01:02 AM IST

29 ರಿಂದ ಡಿ. 4ರ ವರೆಗೆ ಜೈನ ಗುತ್ತಿಯಲ್ಲಿ ಪಂಚಕಲ್ಯಾಣೋತ್ಸವ
Share this Article
  • FB
  • TW
  • Linkdin
  • Email

ಸಾರಾಂಶ

ಹಂತ ಹಂತವಾಗಿ ಕ್ಷೇತ್ರದ ಬೆಳವಣಿಗೆಗೆ ಭಕ್ತರು ಸೇರಿದಂತೆ ಸಮುದಾಯದ ಬಾಂಧವರು ಸಹಕಾರ ನೀಡುತ್ತಿದ್ದಾರೆ. ಪಂಚಕಲ್ಯಾಣ ಮಹೋತ್ಸವಕ್ಕೆ ಸಮುದಾಯದ ಬಾಂಧವರು ಸೇರಿದಂತೆ ಎಲ್ಲರಿಗೂ ಮುಕ್ತ ಆಹ್ವಾನ ನೀಡಲಾಗುತ್ತಿದೆ.

ಕನ್ನಡಪ್ರಭವಾರ್ತೆ ಹಾಸನ

ಇಡೀ ಭಾರತದಲ್ಲಿ ಜೈನಕಾಶಿಯೆಂದೇ ಹೆಸರಾಗಿರುವ ಶ್ರವಣಬೆಳಗೊಳದಲ್ಲಿರುವ ಏಕಶಿಲಾ ಮೂರ್ತಿ ಗೊಮ್ಮಟೇಶ್ವರನ ಮೂರ್ತಿಯ ನಂತರ ದಕ್ಷಿಣ ಭಾರತದಲ್ಲಿಯೇ ದೊಡ್ಡದಾದ 24 ಅಡಿ ಎತ್ತರದ ಪದ್ಮಾಸನದಲ್ಲಿ ಕುಳಿತಿರುವ ಶೀತಲನಾಥ ತೀರ್ಥಂಕರ ಮತ್ತು 31 ಅಡಿ ಎತ್ತರದ ಮುನಿಸುವ್ರನಾಥ ಮೂರ್ತಿ ಹಳೇಬೀಡು ಸಮೀಪದ ಜೈನರಗುತ್ತಿಯಲ್ಲಿ ರಾರಾಜಿಸುತ್ತಿವೆ.

ಈ ಎರಡು ಮೂರ್ತಿಗಳ ಪ್ರತಿಷ್ಠಾಪನಾ ಮಹೋತ್ಸವದ ಅಂಗವಾಗಿ ಜೈನರ ಗುತ್ತಿ ಕ್ಷೇತ್ರದಲ್ಲಿ ನವೆಂಬರ್ 29 ರಿಂದ ಡಿಸೆಂಬರ್ 4 ರವರೆಗೆ ಬೃಹತ್ ಪಂಚಕಲ್ಯಾಣ ಮಹೋತ್ಸವ ಜರುಗಲಿದೆ.

ಜೈನರಗುತ್ತಿ ಚಾರಿಟೇಬಲ್ ಟ್ರಸ್ಟ್ ಸಭಾಂಗಣದಲ್ಲಿ ಸುದ್ದಿಗಾರರಿಗೆ ಮಾಹಿತಿ ನೀಡಿದ ಪರಮಪೂಜ್ಯ ಆಚಾರ್ಯ ಶ್ರೀ 108 ಚಂದ್ರಪ್ರಭ ಸಾಗರ ಮುನಿ ಮಹಾರಾಜರು, ಮಹೋತ್ಸವದ ಅಂಗವಾಗಿ ಆರು ದಿನಗಳ ಕಾಲ ವಿಶೇಷ ಕಾರ್ಯಕ್ರಮಗಳು ಜರುಗಲಿವೆ. ಇದರಲ್ಲಿ ಐದು ದಿನ ಗರ್ಭ ,ಜನ್ಮ ,ದೀಕ್ಷಾ, ಕೇವಲ ಜ್ಞಾನ, ಮೋಕ್ಷ ಕಲ್ಯಾಣ ಮಹೋತ್ಸವಗಳು ನಡೆಯಲಿವೆ ಎಂದು ವಿವರಿಸಿದರು. ಮಹೋತ್ಸವದಲ್ಲಿ ದೂರದಿಂದ ಆಗಮಿಸುವ ಜೈನ ಮುನಿಗಳು ಹಾಗೂ ಭಕ್ತರಿಗೆ ಊಟೋಪಚಾರ ಸೇರಿದಂತೆ ಅಗತ್ಯ ಸೌಲಭ್ಯ ವ್ಯತ್ಯಾಸ ಆಗದಂತೆ ಕ್ರಮ ಕೈಗೊಳ್ಳಲಾಗುತ್ತಿದೆ. ಕಳೆದ ಆರು ವರ್ಷಗಳಿಂದ ಕ್ಷೇತ್ರವನ್ನು ಮುನ್ನಡೆಸುವಲ್ಲಿ ಪರಮಪೂಜ್ಯ ಶ್ರೀ 108 ವೀರಸಾಗರ ಮುನಿ ಮಹಾರಾಜರು ಶ್ರಮಿಸಿದ್ದಾರೆ. ಅವರ ನೇತೃತ್ವದಲ್ಲಿ ಪಂಚಕಲ್ಯಾಣ ಮಹೋತ್ಸವವು ಜರುಗುತ್ತಿದೆ ಎಂದರು.

ಶೈಕ್ಷಣಿಕ ಕ್ಷೇತ್ರವೂ ಆಗಲಿದೆ:

ಈ ದೇಶದ ಭವಿಷ್ಯ ನಿಂತಿರುವುದು ಶಿಕ್ಷಣ ಕ್ಷೇತ್ರದ ಮೇಲೆ. ಹಾಗಾಗಿ ಈ ಐತಿಹಾಸಿಕ ಕ್ಷೇತ್ರದಲ್ಲಿ ಮುಂದಿನ ದಿನಗಳಲ್ಲಿ ಪ್ರತಿಭಾವಂತ ವಿದ್ಯಾರ್ಥಿಗಳಿಗೆ ಶೈಕ್ಷಣಿಕ ಸೇವೆ ಒದಗಿಸುವುದು ಹಾಗೂ ಜನರಿಗೆ ಆರೋಗ್ಯ ಸೇವೆ ಒದಗಿಸಲು ಚಿಂತಿಸಲಾಗಿದೆ.

ಆಸ್ಪತ್ರೆ ತೆರೆದು ಸುತ್ತಮುತ್ತಲಿನ ಜನರಿಗೆ ವೈದ್ಯಕೀಯ ಸೌಲಭ್ಯ ಹಾಗೂ ವಿದ್ಯಾರ್ಥಿಗಳಿಗೆ ಐಎಎಸ್, ಕೆಎಎಸ್ ಸೇರಿದಂತೆ ಸ್ಪರ್ಧಾತ್ಮಕ ಪರೀಕ್ಷೆಗಳಿಗೆ ತರಬೇತಿ ನೀಡುವ ಕೇಂದ್ರಗಳನ್ನು ಸ್ಥಾಪಿಸುವ ಇಚ್ಛೆಯನ್ನು ಹೊಂದಿದ್ದೇವೆ ಎಂದರು .

ಹಂತ ಹಂತವಾಗಿ ಕ್ಷೇತ್ರದ ಬೆಳವಣಿಗೆಗೆ ಭಕ್ತರು ಸೇರಿದಂತೆ ಸಮುದಾಯದ ಬಾಂಧವರು ಸಹಕಾರ ನೀಡುತ್ತಿದ್ದಾರೆ. ಪಂಚಕಲ್ಯಾಣ ಮಹೋತ್ಸವಕ್ಕೆ ಸಮುದಾಯದ ಬಾಂಧವರು ಸೇರಿದಂತೆ ಎಲ್ಲರಿಗೂ ಮುಕ್ತ ಆಹ್ವಾನ ನೀಡಲಾಗುತ್ತಿದೆ ಎಂದು ಹೇಳಿದರು.

ಪರಮಪೂಜ್ಯ ಶ್ರೀ 108 ವೀರಸಾಗರ ಮುನಿ ಮಹಾರಾಜರು, ಪಂಚಕಲ್ಯಾಣ ಮಹೋತ್ಸವ ಸಮಿತಿ ಅಧ್ಯಕ್ಷರಾದ ಕುಣಿಗಲ್ ಬ್ರಹ್ಮದೇವಯ್ಯ , ನೇಮಿನಾಥ, ಮಾಧ್ಯಮ ಸಂಯೋಜಕ ಎಸ್ .ಎನ್ .ಅಶೋಕ್ ಕುಮಾರ್, ಕನ್ನಡ ಸಾಹಿತ್ಯ ಪರಿಷತ್ ಜಿಲ್ಲಾ ಘಟಕದ ಮಾಜಿ ಅಧ್ಯಕ್ಷ ಹಾಗೂ ಸುವರ್ಣ ಮಹೋತ್ಸವ ಪ್ರಶಸ್ತಿ ಪುರಸ್ಕೃತ ಮದನ್ ಗೌಡರು, ಜಿಲ್ಲಾ ಕಾರ್ಯನಿರತ ಪತ್ರಕರ್ತರ ಸಂಘದ ಅಧ್ಯಕ್ಷ ಕೆ .ಎಚ್. ವೇಣು ಕುಮಾರ್ ಸೇರಿದಂತೆ ಇತರರು ಇದ್ದರು.