ನಾಳೆಯಿಂದ ಪಂಚಕಲ್ಯಾಣ ಪ್ರತಿಷ್ಠಾಪನಾ ಮಹೋತ್ಸವ: ಜವಳಿ

| Published : May 10 2025, 01:06 AM IST

ನಾಳೆಯಿಂದ ಪಂಚಕಲ್ಯಾಣ ಪ್ರತಿಷ್ಠಾಪನಾ ಮಹೋತ್ಸವ: ಜವಳಿ
Share this Article
  • FB
  • TW
  • Linkdin
  • Email

ಸಾರಾಂಶ

ಮೇ 11ರಂದು ಗರ್ಭಕಲ್ಯಾಣ ಮಹೋತ್ಸವ, 12ರಂದು ಜನ್ಮಕಲ್ಯಾಣ ಮಹೋತ್ಸವ, 13ರಂದು ದೀಕ್ಷಾ ಕಲ್ಯಾಣ ಮಹೋತ್ಸವ, 14ರಂದು ಕೇವಲಜ್ಞಾನ ಕಲ್ಯಾಣ ಮಹೋತ್ಸವ, 15ರಂದು ಮೋಕ್ಷ ಕಲ್ಯಾಣ ಮಹೋತ್ಸವ ಆ​ಯೋ​ಜಿ​ಸ​ಲಾ​ಗಿದೆ.

ಹು​ಬ್ಬ​ಳ್ಳಿ: ನ​ಗ​ರದ ಗೋಕುಲ ರಸ್ತೆ ಮಾನಸಗಿರಿಯ ಮಹಾವೀರ ತೀರ್ಥಂಕರರ ತ್ರಿಕೂಟ ಜಿನಮಂದಿರದಲ್ಲಿ ಮೇ 11ರಿಂದ 15ರವರೆಗೆ ವಾಸುಪೂಜ್ಯ ತೀರ್ಥಂಕರ ಹಾಗೂ ನೇಮಿನಾಥ ತೀರ್ಥಂಕರರ ಮೂರ್ತಿ ಪ್ರತಿಷ್ಠಾಪನೆ, ಬ್ರಹ್ಮದೇವರ ಮೂರ್ತಿ ಪ್ರತಿಷ್ಠಾಪನೆ, ಪಂಚಕಲ್ಯಾಣ ಪ್ರತಿಷ್ಠಾಪನೆ ಮಹೋತ್ಸವ ಹಾಗೂ ಸಮವಸರಣ ಮಂದಿರ ಲೋಕಾರ್ಪಣೆ ಕಾರ್ಯಕ್ರಮ ನಡೆಯಲಿದೆ ಎಂದು ಭಗವಾನ್‌ ಶ್ರೀ ಮಹಾವೀರ ಜೈನ ಹಿತವರ್ಧಕ ಸಂಘದ ಅಧ್ಯಕ್ಷ ಧರಣೇಂದ್ರ ಜವಳಿ ಹೇಳಿದರು.

ಸು​ದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಆಚಾರ್ಯ ಪುಣ್ಯಸಾಗರ ಮಹಾರಾಜರ ಸಾನ್ನಿಧ್ಯದಲ್ಲಿ ಹೊಂಬುಜ ಜೈನ ಮಠದ ದೇವೇಂದ್ರ ಕೀರ್ತಿ ಭಟ್ಟಾರಕ ಸ್ವಾಮೀಜಿ, ಸೋಂದಾಮಠದ ಭಟ್ಟಾಕಲಂಕ ಭಟ್ಟಾರಕ ಸ್ವಾಮೀಜಿ, ಪಂಚಕಲ್ಯಾಣದ ಪೂ​ಜಾ ವಿಧಿ-ವಿಧಾನ ನಡೆಸಿಕೊಡ​ಲಿ​ದ್ದಾರೆ ಎಂದ​ರು.

ಮೇ 11ರಂದು ಗರ್ಭಕಲ್ಯಾಣ ಮಹೋತ್ಸವ, 12ರಂದು ಜನ್ಮಕಲ್ಯಾಣ ಮಹೋತ್ಸವ, 13ರಂದು ದೀಕ್ಷಾ ಕಲ್ಯಾಣ ಮಹೋತ್ಸವ, 14ರಂದು ಕೇವಲಜ್ಞಾನ ಕಲ್ಯಾಣ ಮಹೋತ್ಸವ, 15ರಂದು ಮೋಕ್ಷ ಕಲ್ಯಾಣ ಮಹೋತ್ಸವ ಆ​ಯೋ​ಜಿ​ಸ​ಲಾ​ಗಿದೆ ಎಂದ​ರು.

ಪಂಚಾಕಲ್ಯಾಣ ಮಹೋತ್ಸವ ಕಮಿಟಿ ಅಧ್ಯಕ್ಷ ಉದಯ ಧಡೂತಿ ಮಾತನಾಡಿ, ಕುಮಾರಪಾರ್ಕ್ ಬಳಿಯ ಮೈದಾನದಲ್ಲಿ ಮುಖ್ಯ ವೇದಿಕೆ ಕಾರ್ಯಕ್ರಮ ನಡೆಯಲಿದೆ. ಅತಿಥಿಗಳಾಗಿ ಧರ್ಮಸ್ಥಳದ ಸುರೇಂದ್ರ ಹೆಗ್ಗಡೆ, ಹುಬ್ಬಳ್ಳಿಯ ಮೂರುಸಾವಿರ ಮಠದ ಡಾ. ಗುರುಸಿದ್ಧ ರಾಜಯೋಗೀಂದ್ರ ಸ್ವಾಮೀಜಿ, ಕೇಂದ್ರ ಸಚಿವ ಪ್ರಹ್ಲಾ​ದ ಜೋಶಿ, ವಿಧಾನ ಪರಿಷತ್‌ ಸಭಾಪತಿ ಬಸವರಾಜ ಹೊರಟ್ಟಿ, ಶಾಸಕರಾದ ಅರವಿಂದ ಬೆಲ್ಲದ, ಮಹೇಶ ಟೆಂಗಿನಕಾಯಿ, ಅಭಯಕುಮಾರ ಪಾಟೀಲ, ಮೇಯರ್‌ ರಾಮಪ್ಪ ಬಡಿಗೇರ ಭಾಗವಹಿಸಲಿದ್ದಾರೆ. ಕಾರ್ಯಕ್ರಮದಲ್ಲಿ ವಿವಿಧ ಕಡೆಗಳಿಂದ 5 ಸಾ​ವಿ​ರಕ್ಕೂ ಅಧಿಕ ಜನರು ಭಾ​ಗ​ವ​ಹಿ​ಸ​ಲಿ​ದ್ದಾರೆ ಎಂದ​ರು.

ಮಾನಸಗಿರಿಯಲ್ಲಿ 24 ತೀರ್ಥಂಕರರು ಕುರಿತು ತಿಳಿಸುವ ಸಮವಸರಣ ಮಂಟಪ ನಿರ್ಮಿಸಲಾಗಿದೆ. ತೀರ್ಥಂಕರರ ಉಪದೇಶಗಳನ್ನು ಕನ್ನಡ ಮತ್ತು ಇಂಗ್ಲಿಷ್‌ ಭಾಷೆಯಲ್ಲಿ ಆಡಿಯೋ ಮೂಲಕ ತಿಳಿಸಲಾಗುತ್ತದೆ. ಸಮವಸರಣ ಮಂಟಪವು ಉತ್ತರ ಕರ್ನಾಟಕ ಭಾಗದ ಮೊ​ದಲ ಮಂಟ​ಪವಾ​ಗಿದೆ ಎಂದ​ರು.

ಸು​ದ್ದಿ​ಗೋ​ಷ್ಠಿ​ಯಲ್ಲಿ ಪಂಚಕಲ್ಯಾಣ ಮಹೋತ್ಸವ ಕಮಿಟಿಯ ಎಸ್‌.ಬಿ. ನವಲಗುಂದ, ಧನಪಾಲ ಅಂಗಡಿ, ಉದಯಕುಮಾರ ಹಿರೇಗೌಡರ, ಪದ್ಮಶ್ರೀ ಹದಳದ, ಶೋಭಾ ಮುಕರೆ, ಶಾಂತರಾಜ ಹದಳದ, ಶಾಂತರಾಜ ಮಲ್ಲಸಮುದ್ರ, ಮಹಾವೀರ ಗೋಗಿ ಇದ್ದರು.