ಪಂ. ಪಂಚಾಕ್ಷರಿ ಗವಾಯಿಗಳು ಇಂದಿಗೂ ಎಲ್ಲ ಸಂಗೀತಗಾರರಿಗೆ ಪ್ರೇರಕರಾಗಿ ಮಾರ್ಗದರ್ಶಿಸುತ್ತಿರುವ ಚೈತನ್ಯ ಸ್ವರೂಪಿ ಆಗಿದ್ದಾರೆ.
ಧಾರವಾಡ:
ಪಂ. ಪಂಚಾಕ್ಷರಿ ಗವಾಯಿಗಳು ಮಾನವೀಯ ಅಂತಃಕರಣ, ಕಠಿಣ ತಪಸ್ಸಿನ ಮೂಲಕ ಸಾವಿರಾರು ಸಂಖ್ಯೆಯ ಸಂಗೀತ ಕಲಾವಿದರ ಜೀವನದ ದಾರಿದೀಪವಾಗಿದ್ದರು ಎಂದು ಹಿರಿಯ ವೈದ್ಯ ಡಾ. ಉಮೇಶ ಹಳ್ಳಿಕೇರಿ ಹೇಳಿದರು.ಇಲ್ಲಿಯ ಡಾ. ಪುಟ್ಟರಾಜ ಗವಾಯಿ ಪ್ರತಿಷ್ಠಾನವು ಕರ್ನಾಟಕ ವಿದ್ಯಾವರ್ಧಕ ಸಂಘದಲ್ಲಿ ಪಂ. ಪಂಚಾಕ್ಷರಿ ಗವಾಯಿಗಳ 135ನೇ ಜಯಂತಿ ಪ್ರಯುಕ್ತ ಏರ್ಪಡಿಸಿದ್ದ ಸಂಗೀತೋತ್ಸವದಲ್ಲಿ ಮಾತನಾಡಿದ ಅವರು, ಪಂ. ಪಂಚಾಕ್ಷರಿ ಗವಾಯಿಗಳು ಇಂದಿಗೂ ಎಲ್ಲ ಸಂಗೀತಗಾರರಿಗೆ ಪ್ರೇರಕರಾಗಿ ಮಾರ್ಗದರ್ಶಿಸುತ್ತಿರುವ ಚೈತನ್ಯ ಸ್ವರೂಪಿ ಆಗಿದ್ದಾರೆ. ಗವಾಯಿಗಳು ದೀನ, ದುರ್ಬಲರ ಆಶಾಕಿರಣವಾಗಿ, ಸಂಗೀತ ಕಲಿಯಲು ಬರುವವರಿಗೆ ಜ್ಞಾನದ ಬೆಳಕನ್ನು ನೀಡಿ, ಹಿಂದೂಸ್ತಾನಿ ಗಾಯನ ಹಾಗೂ ವಾದ್ಯ ಸಂಗೀತ ಕ್ಷೇತ್ರಕ್ಕೆ ಭದ್ರ ಬುನಾದಿ ಹಾಕಿದ ಪ್ರಾತಃಸ್ಮರಣೀಯರು ಎಂದರು.
ಅಧ್ಯಕ್ಷತೆ ವಹಿಸಿದ್ದ ಖ್ಯಾತ ಹಿಂದೂಸ್ತಾನಿ ಕಲಾವಿದ ಡಾ. ಹನುಮಂತ ಬುರ್ಲಿ ಮಾತನಾಡಿ, ಹುಟ್ಟಿನಿಂದ ಅಂಧತ್ವ ಅನುಭವಿಸುತ್ತಲೇ ಅನೇಕ ಕಷ್ಟ ಅನುಭವಿಸಿ, ಜೋಳಿಗೆ ಹಾಕಿ, ಲಕ್ಷಾಂತರ ವಿದ್ಯಾರ್ಥಿಗಳಿಗೆ ಸಂಗೀತ ಧಾರೆಯೆರೆದ ಅವರಿಗೆ ಜೀವನ ಕಟ್ಟಿಕೊಟ್ಟಂಥ ಮಹಾನುಭಾವರು ಪಂ. ಪಂಚಾಕ್ಷರ ಗವಾಯಿಗಳು. ಸಂಗೀತದ ಅಗಾದ ಹಸಿವು ಹೊಂದಿದ್ದ ಗವಾಯಿಗಳು ಜ್ಞಾನದ ಪಿಪಾಸುವಿನಂತೆ ನಿರಂತರ ಸಂಗೀತ ಮತ್ತು ವಾದ್ಯ ಸಂಗೀತ ಕಲಿಕೆಯೊಂದಿಗೆ ಕಲಾವಿದರ ಬಾಳಿಗೆ ಜ್ಞಾನದೀವಿಗೆಯಾದರು ಎಂದು ಹೇಳಿದರು.ನಂತರ ಜರುಗಿದ ಸಂಗೀತೋತ್ಸವದಲ್ಲಿ ಗಾಯಕಿ ಡಾ. ಶಕ್ತಿ ಪಾಟೀಲ ರಾಗ ಜೋಗಕೌಂಸ್ ಹಾಗೂ ಭೈರವಿಯಲ್ಲಿ ಭಜನ್ ಪ್ರಸ್ತುತ ಪಡಿಸಿದರು. ತಬಲಾದಲ್ಲಿ ಶ್ರೀಧರ ಮಂಡ್ರೆ ಹಾಗೂ ಹಾರ್ಮೊನಿಯಂದಲ್ಲಿ ಬಸವರಾಜ ಹಿರೇಮಠ ಸಾಥ್ ಸಂಗತ ನೀಡಿದರು. ಹೇಮಂತ ಜೋಶಿ ತಬಲಾ ಸೋಲೋದಲ್ಲಿ, ತಾಳ ತೀನತಾಲ್‌ದಲ್ಲಿ ಪೇಶಕಾರ್ ಸಾಥ್ ನೀಡಿದರು. ಹಾರ್ಮೊನಿಯಂ ಲೆಹರಾದಲ್ಲಿ ಪುಣೆಯ ಸ್ವಾನಂದ ರಾಜೋಪಾಧ್ಯೆ ಸಾಥ್ ಸಂಗತ ನೀಡಿದರು. ರವಿ ಕುಲಕರ್ಣಿ ನಿರೂಪಿಸಿದರು. ಐಶ್ವರ್ಯ ದೇಸಾಯಿ ಪ್ರಾರ್ಥಿಸಿದರು. ಉಪಾಧ್ಯಕ್ಷರಾದ ಶಂಕರ ಕುಂಬಿ ಸ್ವಾಗತಿಸಿದರು. ಪಿ.ಎಂ. ಪಾಟೀಲ ವಂದಿಸಿದರು. ಪಂ. ಎಂ. ವೆಂಕಟೇಶಕುಮಾರ, ಡಾ. ಉದಯಕುಮಾರ ದೇಸಾಯಿ ವೇದಿಕೆಯಲ್ಲಿದ್ದರು.
ಪಂ. ಬಿ.ಎಸ್. ಮಠ, ಮಲ್ಲಿಕಾರ್ಜುನ ಚಿಕ್ಕಮಠ, ಅಕ್ಕಮಹಾದೇವಿ ಮಠ, ಡಾ. ಮಲ್ಲಿಕಾರ್ಜುನ ತರ್ಲಗಟ್ಟಿ, ಡಾ. ಸುಮಿತ್ರಾ ಕಾಡದೇವರಮಠ, ಡಾ. ಮೃತ್ಯುಂಜಯ ಶೆಟ್ಟರ, ಪ್ರೊ. ಶಶಿಧರ ತೋಡಕರ, ಪ್ರಕಾಶ ಬಾಳಿಕಾಯಿ ಮತ್ತಿತರರು ಇದ್ದರು.