ಕನ್ನಡಪ್ರಭ ವಾರ್ತೆ ಮೈಸೂರುಕುವೆಂಪುನಗರದ ಪಂಚಮಂತ್ರ ರಸ್ತೆಯ ನವೋ ಪ್ರಮತಿ ನಾಗರೀಕ ಸೇವೆಗಳ ತರಬೇತಿ ಕೇಂದ್ರದಲ್ಲಿ ತರಬೇತಿ ಪಡೆದು ಈ ಬಾರಿಯ ನಾಗರೀಕ ಸೇವಾ ಪರೀಕ್ಷೆಗಳಲ್ಲಿ ಉತ್ತಮ ಸಾಧನೆ ಮಾಡುವ ಮೂಲಕ ಕೇಂದ್ರ ಸೇವೆಗೆ ಆಯ್ಕೆಯಾದ ಜಿ.ಎಸ್. ಅಭಿಷೇಕ್ ನಾಯಕ್ ಹಾಗೂ ಸಾಗರ್ ಅಶ್ವತ್ಥಪ್ಪ ಅವರನ್ನು ಸಂಸ್ಥೆ ವತಿಯಿಂದ ಸನ್ಮಾನಿಸಲಾಯಿತು. ಜಿಲ್ಲಾ ಪತ್ರಕರ್ತರ ಭವನದಲ್ಲಿ ನಡೆದ ಕಾರ್ಯಕ್ರಮದಲ್ಲಿ ಹೆಚ್ಚುವರಿ ಜಿಲ್ಲಾಧಿಕಾರಿ ಐಶ್ವರ್ಯ ಅವರು ಸಾಧಕರನ್ನು ಅಭಿನಂದಿಸಿದರು.ಬಳಿಕ ಮಾತನಾಡಿದ ಐಶ್ವರ್ಯ ಅವರು, ಸ್ಪರ್ಧಾತ್ಮಕ ಪರೀಕ್ಷೆಗಳಲ್ಲಿ ಬಹಳಷ್ಟು ಮಂದಿ ಅನುತ್ತೀರ್ಣರಾದರೆ ಕೆಲವರು ಉತ್ತೀರ್ಣರಾಗುತ್ತಾರೆ. ಏಕೆಂದರೆ ಸರಿಯಾದ ಗುರಿಯಲ್ಲಿ ಸಾಗಲು ಮಾರ್ಗದರ್ಶಕರು ಅಗತ್ಯ. ಸಾಮಾನ್ಯ ವಿದ್ಯಾಭ್ಯಾಸದ ರೀತಿ ಇಲ್ಲಿ ಅಭ್ಯಾಸ ಇರದೇ ಬೇರೆ ರೀತಿಯಾಗಿರುತ್ತದೆ. ಈ ನಿಟ್ಟಿನಲ್ಲಿ ನವೋ ಪ್ರಮತಿ ತರಬೇತಿ ಉಪಯುಕ್ತವಾಗಿದೆ ಎಂದರು.ಕೆಲವೊಂದು ಬಾರಿ ನಿರೀಕ್ಷಿಸಿದಷ್ಟು ಅಂಕ ಬಾರದಿರಬಹುದು, ಆದರೇ ಜಗ್ಗದೇ ಮುಂದೆ ಸಾಗಬೇಕು. ಆಗ ಗುರಿ ಮುಟ್ಟುವುದು ಸಾಧ್ಯವಾಗುತ್ತದೆ ಎಂದು ಅವರು ಕಿವಿಮಾತು ಹೇಳಿದರು.ಸಂಸ್ಥೆ ಮುಖ್ಯಸ್ಥ ಹಾಗೂ ಮುಡಾ ಮಾಜಿ ಅಧ್ಯಕ್ಷ ಎಚ್.ವಿ. ರಾಜೀವ್ ಮಾತನಾಡಿ, ನಮಗೆ ಎಲ್ಲವೂ ಸಿಗುವಂತಿದ್ದರೆ, ಸುಲಭವೆಂದು ಸುಮ್ಮನಿರುತ್ತೇವೆ. ಆದರೆ ಸಿಗದಿದ್ದುದಕ್ಕಾಗಿ ಪ್ರಯತ್ನ ಪಟ್ಟು ಪಡೆಯುತ್ತೇವೆ. ಇದೇ ರೀತಿ ಕೆಲವೊಂದು ಅಹಿತಕರ ವಾತಾವರಣದ ಸ್ಥಳದ ವಿದ್ಯಾರ್ಥಿಗಳು ನಾಗರಿಕ ಸೇವಾ ಪರೀಕ್ಷೆಗಳಲ್ಲಿ ಸಾಧನೆ ಮಾಡುತ್ತಿದ್ದಾರೆ. ನಮ್ಮ ಭಾಷೆಯಲ್ಲೇ ಪರೀಕ್ಷೆಯಲ್ಲಿ ಬರೆದು ಸಾಧನೆ ಮಾಡಬಹುದಾಗಿದೆ ಎಂಬುದಕ್ಕೆ ಕನ್ನಡದಲ್ಲೇ ಪರೀಕ್ಷೆ ಎದುರಿಸಿ ಉತ್ತೀರ್ಣರಾದ ಹಲವರ ಉದಾಹರಣೆ ನಮ್ಮ ಮುಂದಿವೆ. ಹೀಗಾಗಿ ಅಭ್ಯರ್ಥಿಗಳು ಎದೆಗುಂದಬಾರದು. ಆದರೆ ಉತ್ತಮ ಹುದ್ದೆ ಗಳಿಸಿದ ಬಳಿಕ ಸಮಾಜದ ಕಟ್ಟ ಕಡೆಯ ವ್ಯಕ್ತಿಯ ಕಣ್ಣೊರೆಸುವ ಕೆಲಸ ಮಾಡಬೇಕು ಎಂದರು.ನಿವೃತ್ತ ಗ್ರೂಪ್ ಕ್ಯಾಪ್ಟನ್ ಸೈನಿ ನವಲ್, ಲಕ್ಷ್ಮೀಪುರಂ ಪೊಲೀಸ್ ಠಾಣೆ ವೃತ್ತ ನಿರೀಕ್ಷಕ ರವಿಶಂಕರ್, ಬಿ. ರವಿಕುಮಾರ್, ಎಸ್. ಫಣಿರಾಜ್. ಎಸ್.ಆರ್. ರವಿ ಹಾಗೂ ಸಂಸ್ಥೆಯಲ್ಲಿ ತರಬೇತಿ ಪಡೆದ ಅಭ್ಯರ್ಥಿಗಳು ಇದ್ದರು.
ಕೇಂದ್ರ ನಾಗರೀಕ ಸೇವಾ ಪರೀಕ್ಷೆ ಉತ್ತೀರ್ಣ ಅಭ್ಯರ್ಥಿಗಳಿಗೆ ಅಭಿನಂದನೆ
ಸ್ಪರ್ಧಾತ್ಮಕ ಪರೀಕ್ಷೆಗಳಲ್ಲಿ ಬಹಳಷ್ಟು ಮಂದಿ ಅನುತ್ತೀರ್ಣರಾದರೆ ಕೆಲವರು ಉತ್ತೀರ್ಣರಾಗುತ್ತಾರೆ. ಏಕೆಂದರೆ ಸರಿಯಾದ ಗುರಿಯಲ್ಲಿ ಸಾಗಲು ಮಾರ್ಗದರ್ಶಕರು ಅಗತ್ಯ
Latest Videos
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.