ಉನ್ನತ ಶಿಕ್ಷಣ ಪ್ರೋತ್ಸಾಹಕ್ಕಾಗಿ ಪಂಚಮಸಾಲಿ ಪೀಠದಿಂದ ಸಾವಿರಾರು ಪ್ರತಿಭಾನ್ವಿತರಿಗೆ ಸನ್ಮಾನ

| Published : Jun 03 2024, 12:32 AM IST

ಉನ್ನತ ಶಿಕ್ಷಣ ಪ್ರೋತ್ಸಾಹಕ್ಕಾಗಿ ಪಂಚಮಸಾಲಿ ಪೀಠದಿಂದ ಸಾವಿರಾರು ಪ್ರತಿಭಾನ್ವಿತರಿಗೆ ಸನ್ಮಾನ
Share this Article
  • FB
  • TW
  • Linkdin
  • Email

ಸಾರಾಂಶ

ಶೈಕ್ಷಣಿಕ ಸಾಧಕರಿಗೆ ಸನ್ಮಾನ, ಪ್ರೋತ್ಸಾಹ ನೀಡಬೇಕಿದೆ. ಸಮಾಜದ ಯುವಪೀಳಿಗೆ ಐಎಎಸ್, ಐಪಿಎಸ್, ಐಐಟಿಯಂಥ ಉನ್ನತಮಟ್ಟದ ಶಿಕ್ಷಣ ಪಡೆದು ಸಮಾಜಮುಖಿ ಸೇವೆ ಮಾಡುವಂತಾಗಲಿ ಎಂದು ಹರಿಹರದ ವೀರಶೈವ ಲಿಂಗಾಯಿತ ಪಂಚಮಸಾಲಿ ಪೀಠದ ಜಗದ್ಗುರು ವಚನಾನಂದ ಮಹಾಸ್ವಾಮಿಜಿ ನುಡಿದಿದ್ದಾರೆ.

- ಪ್ರತಿಭಾ ಪುರಸ್ಕಾರ-ನಿವೃತ್ತ ನೌಕರರಿಗೆ ಸನ್ಮಾನ ಕಾರ್ಯಕ್ರಮದಲ್ಲಿ ವಚನಾನಂದ ಶ್ರೀ - - - ಕನ್ನಡಪ್ರಭ ವಾರ್ತೆ ಹೊನ್ನಾಳಿ

ಶೈಕ್ಷಣಿಕ ಸಾಧಕರಿಗೆ ಸನ್ಮಾನ, ಪ್ರೋತ್ಸಾಹ ನೀಡಬೇಕಿದೆ. ಸಮಾಜದ ಯುವಪೀಳಿಗೆ ಐಎಎಸ್, ಐಪಿಎಸ್, ಐಐಟಿಯಂಥ ಉನ್ನತಮಟ್ಟದ ಶಿಕ್ಷಣ ಪಡೆದು ಸಮಾಜಮುಖಿ ಸೇವೆ ಮಾಡುವಂತಾಗಲಿ ಎಂದು ಹರಿಹರದ ವೀರಶೈವ ಲಿಂಗಾಯಿತ ಪಂಚಮಸಾಲಿ ಪೀಠದ ಜಗದ್ಗುರು ವಚನಾನಂದ ಮಹಾಸ್ವಾಮಿಜಿ ನುಡಿದರು.

ಪಟ್ಟಣದ ಬಸವೇಶ್ವರ ಸಮುದಾಯ ಭವನದಲ್ಲಿ ಭಾನುವಾರ ಹೊನ್ನಾಳಿ ತಾಲೂಕು ವೀರಶೈವ ಪಂಚಮಸಾಲಿ ಸಮಾಜ ಹಮ್ಮಿಕೊಂಡಿದ್ದ ಪ್ರತಿಭಾ ಪುರಸ್ಕಾರ ಹಾಗೂ ನಿವೃತ್ತ ನೌಕರರಿಗೆ ಸನ್ಮಾನ ಸಮಾರಂಭದ ಸಾನ್ನಿಧ್ಯ ವಹಿಸಿ ಅವರು ಮಾತನಾಡಿದರು.

ಸಮಾಜದ ಪ್ರತಿಭಾನ್ವಿತ ಮಕ್ಕಳು ವಿವಿಧ ಕ್ಷೇತ್ರಗಳಲ್ಲಿ ಹೆಚ್ಚು ಸಾಧನೆಗೈಯಲು ಪಂಚಮಸಾಲಿ ಪೀಠದಿಂದ ಈವರೆಗೆ ಸುಮಾರು 20 ಸಾವಿರಕ್ಕೂ ಹೆಚ್ಚು ವಿದ್ಯಾರ್ಥಿಗಳನ್ನು ಸನ್ಮಾನಿಸಿ, ಪ್ರೋತ್ಸಾಹಿಸಿದೆ. ಸನ್ಮಾನಿತರಾದ ನಿವೃತ್ತ ನೌಕರರು ಸಮುದಾಯದ ಅತ್ಯವಶ್ಯಕ ಕಾರ್ಯ ಮಾಡಲಿ. ಹೊನ್ನಾಳಿಯ ಖ್ಯಾತವೈದ್ಯ ಡಾ.ರಾಜಕುಮಾರ ಅವರು ಪಂಚಮಸಾಲಿ ಪೀಠದ ಆಡಳಿತಾಧಿಕಾರಿಗಳಾದ ನಂತರದಲ್ಲಿ ಅನೇಕ ಸುಧಾರಣೆ ಕಾರ್ಯ ಆಗಿದೆ. ಇಂತಹ ಕೆಲಸಗಳು ತಮ್ಮ ತಂಡದೊಂದಿಗೆ ನಿರಂತರವಾಗಿ ಸಾಗುವಂತಾಗಲಿ ಎಂದರು.

ಪಂಚಮಸಾಲಿ ಸಮಾಜದ ಜಿಲ್ಲಾಧ್ಯಕ್ಷ ಹಾಗೂ ಪೀಠದ ಧರ್ಮದರ್ಶಿ ಬಿ.ಸಿ. ಉಮಾಪತಿ ಮಾತನಾಡಿ, ಇಂದಿನ ವಿದ್ಯಾರ್ಥಿಗಳು ಒಳ್ಳೆಯ ವಿಚಾರಧಾರೆ ಅಳವಡಿಸಿಕೊಳ್ಳುವ ಮೂಲಕ ಸಮಾಜ ಹಾಗೂ ತಮ್ಮ ಪ್ರಗತಿಗೆ ಕಾರಣವಾಗಬೇಕಿದೆ. ವಿದ್ಯಾರ್ಥಿಗಳ ಬದುಕು ಬಂಗಾರದ ಬದುಕು ಎಂಬುದನ್ನು ಅರಿತು ಧರ್ಮದ ಆಚರಣೆ ಹಾಗೂ ಸಂಸ್ಕಾರ ಅರಿತು ನಡೆಯುವ ಮೂಲಕ ಸಮಾಜದ ಉನ್ನತಿಗೆ ಎಲ್ಲ ಹಂತದಲ್ಲೂ ಕೈ ಜೋಡಿಸುವಂತೆ ತಿಳಿಸಿದರು.

ಗಡಿನಾಡು ಅಭಿವೃದ್ಧಿ ಪ್ರಾಧಿಕಾರ ಅಧ್ಯಕ್ಷ ಸೋಮಣ್ಣ ಬೇವಿನಮರದ ಪ್ರತಿಭಾ ಪುರಸ್ಕಾರ ನೆರವೇರಿಸಿ ಮಾತನಾಡಿ, ಪಂಚಮಸಾಲಿ ಸಮಾಜ ಬಹುತೇಕ ಕೃಷಿ ಮತ್ತು ವ್ಯಾಪಾರ ವೃತ್ತಿಯನ್ನು ಅವಲಂಬಿಸಿದೆ. ಹಿರಿಯರು ಮಕ್ಕಳ ಶೈಕ್ಷಣಿಕ ಪ್ರಗತಿಗೆ ಹೆಚ್ಚು ಒತ್ತು ನೀಡಬೇಕು. ಮಾಡುವ ಕೆಲಸದಲ್ಲಿ ಛಲ ಮತ್ತು ಗುರಿ ಇದ್ದರೆ ಯಶಸ್ಸು ಕಟ್ಟಿಟ್ಟ ಬುತ್ತಿ ಎಂದು ಹೇಳಿದರು.

ರಾಜ್ಯ ವೀರಶೈವ ಲಿಂಗಾಯಿತ ಪಂಚಮಸಾಲಿ ಸಮಾಜ ಕಾರ್ಯಾಧ್ಯಕ್ಷ ಸೋಮನಗೌಡ ಪಾಟೀಲ್ ಮಾತನಾಡಿ, ಪ್ರಸ್ತುತ ದೇಶದಲ್ಲಿ ಸುಮಾರು 7 ಧರ್ಮಗಳಿವೆ. ವೀರಶೈವ ಲಿಂಗಾಯಿತ ಪಂಚಮಸಾಲಿ ಎಂಟನೇ ಧರ್ಮವಾಗಿ ಹೊರಹೊಮ್ಮಬೇಕಾಗಿದೆ. ಇದಕ್ಕಾಗಿ ಸಮಾಜದವರು ಹೋರಾಟ ಮಾಡಬೇಕಾಗಿದೆ. ಜೊತೆಗೆ ಸರ್ಕಾರ ಪಂಚಮಸಾಲಿ ಸಮುದಾಯವನ್ನು ಒ.ಬಿ.ಸಿ. ವರ್ಗಕ್ಕೆ ಸೇರಿಸಬೇಕಾಗಿದೆ ಎಂದು ಹೇಳಿದರು.

ರಾಜ್ಯ ಪಂಚಮಸಾಲಿ ಸಮಾಜದ ಉಪಾಧ್ಯಕ್ಷ ಪರಮೇಶ್ ಪಟ್ಟಣ ಶೆಟ್ಟಿ, ಸಮಾಜದ ತಾಲೂಕು ಅಧ್ಯಕ್ಷ ಬೆನಕನಹಳ್ಳಿ ವೀರಣ್ಣ ಮಾತನಾಡಿ, ಸಾರ್ವಜನಿಕ ಶಿಕ್ಷಣ ಇಲಾಖೆ ನಿವೃತ್ತ ನಿರ್ದೇಶಕ ಎನ್.ಎಸ್.ಕುಮಾರ್ ಮಾತನಾಡಿದರು. ಪಂಚಮಸಾಲಿ ಸಮಾಜ ಗೌರವಾಧ್ಯಕ್ಷ, ಗುರುಪೀಠದ ಆಡಳಿತಾಧಿಕಾರಿ ಡಾ. ಎಚ್.ಪಿ. ರಾಜಕುಮಾರ ಅವರು ನಿವೃತ್ತ ನೌಕರನ್ನು ಸನ್ಮಾನಿಸಿ ಮಾತನಾಡಿದರು.

ಮುಖ್ಯ ಅತಿಥಿಗಳಾದ ಹರಿಹರದ ಹರ ಪೀಠದ ಧರ್ಮದರ್ಶಿ ಜ್ಯೋತಿಪ್ರಕಾಶ್, ಮಹಿಳಾ ಆಧ್ಯಕ್ಷೆ ಶಿಲ್ಪಾ ರಾಜುಗೌಡ, ಹಾಲೇಶ್ ಕುಂಕೋದ, ಶಿಕ್ಷಕ ಪ್ರಸನ್ನ, ಎಚ್.ಪಿ. ಗಿರೀಶ್, ಶಕುಂತಲಾ ರಾಜ್ ಕುಮಾರ್, ನ್ಯಾಮತಿ ತಾಲೂಕು ಅಧ್ಯಕ್ಷ ಚಂದ್ರಶೇಖರ ಪೂಜಾರ್‌ ಸೇರಿದಂತೆ ಸಮಾಜದ ಹಲವು ಗಣ್ಯರು ಭಾಗವಹಿಸಿದ್ದರು.

- - -

-2ಎಚ್.ಎಲ್.ಐ1:

ಹೊನ್ನಾಳಿ ತಾಲೂಕುವ ವೀರಶೈವ ಪಂಚಮಸಾಲಿ ಸಮಾಜದಿಂದ ನಡೆದ ಪ್ರತಿಭಾ ಪುರಸ್ಕಾರ, ನಿವೃತ್ತ ನೌಕರರ ಸನ್ಮಾನ ಸಮಾರಂಭದಲ್ಲಿ ವಚನಾನಂದ ಮಹಾಸ್ವಾಮೀಜಿ ಮಾತನಾಡಿದರು.