ವೀರಶೈವ ಪಂಚಮಸಾಲಿ ಯುವಪೀಳಿಗೆಯ ಉನ್ನತ ಭವಿಷ್ಯಕ್ಕೆ ಭದ್ರಬುನಾದಿ ಹಾಕಿ ಕೊಡುವ ಜೊತೆಗೆ ಸಮಾಜದ ಸಂಘಟನೆ ಮಾಡುವ ಕೆಲಸವನ್ನು ಪಂಚಮಸಾಲಿ ಸಮಾಜ ಮಾಡಿಕೊಂಡು ಬರುತ್ತಿದೆ ಎಂದು ವೀರಶೈವ ಪಂಚಮಸಾಲಿ ಸಮಾಜದ ತಾಲೂಕು ಅಧ್ಯಕ್ಷ ಬೆನಕನಹಳ್ಳಿ ವೀರಣ್ಣ ಹೇಳಿದರು.

ಕನ್ನಡಪ್ರಭ ವಾರ್ತೆ ಹೊನ್ನಾಳಿ

ವೀರಶೈವ ಪಂಚಮಸಾಲಿ ಯುವಪೀಳಿಗೆಯ ಉನ್ನತ ಭವಿಷ್ಯಕ್ಕೆ ಭದ್ರಬುನಾದಿ ಹಾಕಿ ಕೊಡುವ ಜೊತೆಗೆ ಸಮಾಜದ ಸಂಘಟನೆ ಮಾಡುವ ಕೆಲಸವನ್ನು ಪಂಚಮಸಾಲಿ ಸಮಾಜ ಮಾಡಿಕೊಂಡು ಬರುತ್ತಿದೆ ಎಂದು ವೀರಶೈವ ಪಂಚಮಸಾಲಿ ಸಮಾಜದ ತಾಲೂಕು ಅಧ್ಯಕ್ಷ ಬೆನಕನಹಳ್ಳಿ ವೀರಣ್ಣ ಹೇಳಿದರು.

ಪಟ್ಟಣದ ಹಿರೇಕಲ್ಮಠದ ಸಮುದಾಯ ಭವನದಲ್ಲಿ ಭಾನುವಾರ ಹಮ್ಮಿಕೊಂಡಿದ್ದ ಸಮಾಜದ ವಿದ್ಯಾರ್ಥಿಗಳಿಗೆ ಪ್ರತಿಭಾ ಪುರಸ್ಕಾರ ಸಮಾರಂಭದ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು. ಕೊಪ್ಪಳ ಜಿಲ್ಲೆಯ ಸಂಗೀತಾ ಅವರು ಈ ಬಾರಿಯ ಪಿಯುಸಿ ಕಲಾ ವಿಭಾಗದಲ್ಲಿ ರಾಜ್ಯಕ್ಕೆ ಪ್ರಥಮ ರ್ಯಾಂಕ್ ಪಡೆದಿದ್ದಾರೆ. ಅವರನ್ನು ಹೊನ್ನಾಳಿಗೆ ಕರೆಯಿಸಿ ಸನ್ಮಾನ ಮಾಡುತ್ತಿರುವುದು ತಮ್ಮ ಸಮಾಜಕ್ಕೆ ಹೆಮ್ಮೆಯ ವಿಷಯವಾಗಿದೆ. ಈ ನಡೆ ಉಳಿದ ವಿದ್ಯಾರ್ಥಿಗಳಿಗೆ ಪ್ರೇರಕಶಕ್ತಿಯಾಗಿ ಪರಿಣಮಿಸಲಿದೆ ಎಂದು ಹೇಳಿದರು.

ಬೆಳವಾಡಿ ಮಲ್ಲಮ್ಮ ಹೆಸರಲ್ಲಿ 5 ಪ್ರಶಸ್ತಿ:

ಪ್ರತಿಭಾ ಪುರಸ್ಕಾರ ಸಮಾರಂಭ ಉದ್ಘಾಟಿಸಿದ ಗಡಿನಾಡು ಅಭಿವೃದ್ಧಿ ಪ್ರಾಧಿಕಾರ ಅಧ್ಯಕ್ಷ ಸೋಮಣ್ಣ ಎಂ. ಬೇವಿನಮರದ ಮಾತನಾಡಿ, ತಮ್ಮ ಪ್ರಾಧಿಕಾರವು 6 ರಾಜ್ಯಗಳೊಂದಿಗೆ ಗಡಿಪ್ರದೇಶ ಹಂಚಿಕೊಂಡಿದೆ. ರಾಣಿ ಅಬ್ಬಕ್ಕ ದೇವಿ ಪ್ರಶಸ್ತಿಯನ್ನು ನೀಡಿದಂತೆಯೇ ವೀರವನಿತೆ ಬೆ‍ಳವಾಡಿ ಮಲ್ಲಮ್ಮ ಹೆಸರಿನಲ್ಲಿ ಶೀಘ್ರ 5 ಪ್ರಶಸ್ತಿಗಳನ್ನು ಸ್ಥಾಪಿಸಿ ತಮ್ಮ ಪ್ರಾಧಿಕಾರದಿಂದ ನೀಡಲಾಗುವುದು ಎಂದು ಹೇಳಿದರು.

ಪಂಚಮಸಾಲಿ ಮಠದ ಟ್ರಸ್ಟಿ ಡಾ.ರಾಜಕುಮಾರ್ ಮಾತನಾಡಿ, ಹೊನ್ನಾಳಿ ತಾಲೂಕು ಪಂಚಮಸಾಲಿ ಸಮಾಜವು ಪಾರದರ್ಶಕ ಹಾಗೂ ಸಮಾಜಮುಖಿ ಕಾರ್ಯಕ್ರಮಗಳನ್ನು ಹಮ್ಮಿಕೊಂಡು ಬರುತ್ತಿದೆ. ಬಡವಿದ್ಯಾರ್ಥಿಗಳಿಗೆ ಆರ್ಥಿಕ ಸಹಾಯ ಮೂಲಕ ಮುಂಚೂಣಿಯಲ್ಲಿದೆ. ಶಿಕ್ಷಣದ ಜೊತಗೆ ಫೋಷಕರು ವಿದ್ಯಾರ್ಥಿಗಳ ಆರೋಗ್ಯದ ಕಡೆಗೆ, ನಿಗಾ ವಹಿಸಬೇಕು. ಮಕ್ಕಳ ಚಲನವಲನಗಳ ಕಡೆಗೆ ಗಮನಕೊಡುವ ಮೂಲಕ ಅವರು ಸರಿದಾರಿಯಲ್ಲಿ ಸಾಗುವಂತೆ ನಾವೆಲ್ಲರೂ ನೋಡಿಕೊಳ್ಳಬೇಕು ಎಂದರು.

ದಾವಣಗೆರೆಯ ಮಕ್ಕಳ ತಜ್ಞರಾದ ಡಾ.ಸುಧಾ ಸಿ. ಪಾಟೀಲ್, ರಾಜು ವಿ. ಮೋತಿ ಮಾತನಾಡಿದರು. ಹೊನ್ನಾಳಿಯ ಮೂಳೆ ಮತ್ತು ಕೀಲು ಶಸ್ತ್ರಚಿಕಿತ್ಸಾ ತಜ್ಞ ಡಾ.ದೀಪಕ್ ಬಿ. ಉಪ್ಪಿನ್, ಅರ್ಬನ್ ಬ್ಯಾಂಕ್ ಸಿಇಒ ಎಚ್.ಪಿ.ದಿನೇಶ್, ಎಸ್‌ಎಸ್‌ಎಲ್‌ಸಿ ಮತ್ತು ಪಿಯುಸಿ ಪ್ರತಿಭಾವಂತ ವಿದ್ಯಾರ್ಥಿಗಳನ್ನು ಸನ್ಮಾನಿಸಲಾಯಿತು. ದಾನಿಗಳಾದ ಕುಂಕೋದ್ ಸೋಮಸೇಖರಪ್ಪ, ಸಿದ್ದೇಶ್ ನಾಡಿಗ್ ಅವರನ್ನು ಸನ್ಮಾನಿಸಲಾಯಿತು.

ಕಾರ್ಯಕ್ರಮದಲ್ಲಿ ರ್ಯಾಂಕ್ ವಿಜೇತೆ ಸಂಗೀತಾ, ನ್ಯಾಮತಿ ಚಂದ್ರಶೇಖರ ಪೂಜಾರ್, ಶಿಲ್ಪಾ ರಾಜುಗೌಡ, ಕುಂಕೂದ್ ಹಾಲೇಶ್, ಸುಮಾ ರವಿಕುಮಾರ್, ಅಶೋಕ್, ಗಿರೀಶ್ ನಾಡಿಗ್ ಮುಂತಾದವರು ಇದ್ದರು.