ಸಾರಾಂಶ
ಹಿರೇಕೆರೂರು: ರಾಜ್ಯ ಸರ್ಕಾರ ಪಂಚಮಸಾಲಿಗಳ ಮೇಲೆ ಲಾಠಿ ಚಾರ್ಜ್ ಮಾಡಿಸುವ ಮೂಲಕ ೨ಎ ಮೀಸಲಾತಿ ಹೋರಾಟ ಹತ್ತಿಕ್ಕಲು ಪ್ರಯತ್ನಿಸುತ್ತಿದೆ. ನಮ್ಮ ಹೋರಾಟ ಹತ್ತಿಕ್ಕಲು ಸಾಧ್ಯವಿಲ್ಲ. ನೀವು ಮಾಡಿದ ದಬ್ಬಾಳಿಕೆಯಿಂದ ಈ ಹೋರಾಟ ಇನ್ನೂ ತೀವ್ರ ಸ್ವರೂಪ ಪಡೆದಿದೆ. ಪಂಚಮಸಾಲಿಗಳಲ್ಲಿ ಹೋರಾಟದ ಕಿಚ್ಚು ಹೆಚ್ಚಾಗಿದೆ ಎಂದು ತಾಲೂಕು ಪಂಚಮಸಾಲಿ ಸಮಾಜದ ಅಧ್ಯಕ್ಷ ಎಂ.ಎಂ. ಹುಲ್ಮನಿ ಸರ್ಕಾರದ ವಿರುದ್ಧ ಕಿಡಿಕಾರಿದರು.
ಬೆಳಗಾವಿಯ ಚಳಿಗಾಲದ ಅಧಿವೇಶನದ ಸಮಯದಲ್ಲಿ ಪಂಚಮಸಾಲಿ ಸಮಾಜದ ೨ಎ ಮೀಸಲಾತಿ ಹೋರಾಟಗಾರರ ಮೇಲೆ ಅನಗತ್ಯವಾಗಿ ಲಾಠಿ ಚಾರ್ಜ್ ಮಾಡಿದ ಸರ್ಕಾರದ ವಿರುದ್ಧ ಜಯಮೃತ್ಯುಂಜಯ ಸ್ವಾಮೀಜಿ ಪ್ರತಿಭಟನೆಗೆ ರಾಜ್ಯಾದ್ಯಾಂತ ಕರೆ ನೀಡಿದ ಹಿನ್ನೆಲೆಯಲ್ಲಿ ಪಟ್ಟಣದ ಸರ್ವಜ್ಞ ವೃತ್ತದಲ್ಲಿ ತಾಲೂಕು ಪಂಚಮಸಾಲಿ ಘಟಕದಿಂದ ಪ್ರತಿಭಟನೆ ನಡೆಸಿ ಅವರು ಮಾತನಾಡಿದರು.ಮೀಸಲಾತಿಗಾಗಿ ಹೋರಾಟ ಮಾಡುವುದು ನಮ್ಮ ಹಕ್ಕು, ನಮ್ಮ ಹಕ್ಕನ್ನು ಕಿತ್ತುಕೊಳ್ಳುವ ಅಧಿಕಾರ ಯಾರಿಗೂ ಇಲ್ಲ. ಪ್ರಜಾಪ್ರಭುತ್ವದಲ್ಲಿ ಪ್ರಜೆಗಳು ತಮ್ಮ ಹಕ್ಕಿಗಾಗಿ ಹೋರಾಟ ಮಾಡುತ್ತಾ ಬಂದಿದ್ದಾರೆ. ಅಂತಹ ಹೋರಾಟ ಕುಗ್ಗಿಸಲು ಪೊಲೀಸರ ನೆರವು ಪಡೆದು ಲಾಠಿ ಚಾರ್ಜ್ ಮಾಡಿಸುವ ಮೂಲಕ ದೌರ್ಜನ್ಯ ಎಸಗಿರುವುದು ಖಂಡನೀಯ. ಪಂಚಮಸಾಲಿಗಳ ಹೋರಾಟ ನಿನ್ನೆ ಇಂದಿನದಲ್ಲ, ಹಲವು ವರ್ಷಗಳಿಂದ ನಡೆಯುತ್ತಲೆ ಇದೆ. ಆದರೆ ಈಗಿರುವ ಸಿದ್ದರಾಮಯ್ಯ ಅವರ ಸರ್ಕಾರ ಮಾತ್ರ ಲಿಂಗಾಯತ ವಿರೋಧಿ ಕೆಲಸಕ್ಕೆ ಕೈಹಾಕಿದೆ. ಇದು ಮುಂದಿನ ದಿನಮಾನಗಳಲ್ಲಿ ರಾಜ್ಯಾದ್ಯಂತ ಹೋರಾಟದ ಕಿಚ್ಚು ಹೆಚ್ಚಿಸುವಂತೆ ಮಾಡಿದೆ. ಪಂಚಮಸಾಲಿಗಳ ಮೇಲಿನ ಹಲ್ಲೆಗೆ ಸಂಬಂಧಿಸಿದಂತೆ ರಾಜ್ಯ ಸರ್ಕಾರ ನಡೆದುಕೊಂಡ ರೀತಿ ಪಂಚಮಸಾಲಿ ಸಮಾಜಕ್ಕೆ ಅಗೌರವ ತೋರಿದಂತಿದೆ. ಆದ್ದರಿಂದ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಪಂಚಮಸಾಲಿಗಳ ಕ್ಷಮೆ ಕೇಳಬೇಕು ಹಾಗೂ ೨ಎ ಮೀಸಲಾತಿ ನೀಡಬೇಕು ಎಂದು ಒತ್ತಾಯಿಸಿದರು.
ಪ್ರತಿಭಟನೆಯ ನಂತರ ತಹಸೀಲ್ದಾರ್ ಎಚ್. ಪ್ರಭಾಕರಗೌಡ ಅವರಿಗೆ ಮನವಿ ಸಲ್ಲಿಸಲಾಯಿತು.ಪ್ರತಿಭಟನೆಯಲ್ಲಿ ಪಪಂ ಮಾಜಿ ಅಧ್ಯಕ್ಷ ಕಂಠಾಧರ ಅಂಗಡಿ, ಜಿಲ್ಲಾ ಪಂಚಸೇನಾ ಉಪಾಧ್ಯಕ್ಷ ವೀರೇಶ ಕೋರಿಶೆಟ್ಟರ್, ರುದ್ರಮುನಿ ಹುಲ್ಮನಿ, ಎಂ.ಜಿ. ಈಶ್ವರಗೌಡ್ರ, ರಾಜು ತಿಪ್ಪಶೆಟ್ಟಿ, ರುದ್ರಗೌಡ ಪಾಟೀಲ, ಎಂ.ಡಿ. ಸಿಮಿಕೇರಿ, ಡಾ. ಬಸವರಾಜ ಪೂಜಾರ, ತಾಲೂಕು ಪಂಚಸೇನಾ ಅಧ್ಯಕ್ಷೆ ಪಾರ್ವತಿ ಪಾಟೀಲ, ಪೂಜಾ ಅಂಗಡಿ, ಕುಮಾರ ಜಗಳೂರ, ರುದ್ರಗೌಡ ನೀಲನಗೌಡ್ರ, ಪ್ರವೀಣ ಅಬಲೂರ, ಹೊಳಿಯಪ್ಪ ಬಣಕಾರ, ಕುಮಾರ ಬಣಕಾರ, ಕರಬಸಪ್ಪ ವಡೆನಪುರ, ಕುಬೇರಪ್ಪ ಗೌಡ್ರ, ನವೀನ ಕಣವಿ, ಬಸವರಾಜ ಗೊಡಚಿಕೊಂಡ, ಗಣೇಶ ತಾವರಗಿ ಸೇರಿದಂತೆ ಸಮಾಜ ಬಾಂಧವರು ಪಾಲ್ಗೊಂಡಿದ್ದರು.