ಪಂಚಾಯತ್‌ರಾಜ್‌ ವ್ಯವಸ್ಥೆ ಕಡೆಗಣನೆ: ಸಾಣೂರು ಆಕ್ರೋಶ

| Published : Nov 02 2025, 04:00 AM IST

ಸಾರಾಂಶ

ರಾಜ್ಯದಲ್ಲಿ ಜಿಲ್ಲಾ ಹಾಗೂ ತಾಲೂಕು ಪಂಚಾಯಿತಿ ಚುನಾವಣೆಗಳು ಐದು ವರ್ಷಗಳಿಂದ ನಡೆಯದೇ ಜನಪ್ರತಿನಿಧಿಗಳಿಲ್ಲದ ಆಡಳಿತ ಮುಂದುವರಿದಿದೆ. ಕ್ಷೇತ್ರ ಪುನರ್‌ವಿಂಗಡಣೆ ಮತ್ತು ಮೀಸಲಾತಿ ಕಾರಣಕ್ಕೆ ಚುನಾವಣೆಗಳನ್ನು ಮುಂದೂಡುತ್ತಾ ಬರುತ್ತಿರುವ ಸರ್ಕಾರದ ಧೋರಣೆಯನ್ನು ಸಾಣೂರು ಗ್ರಾಮ ಪಂಚಾಯಿತಿ ಮಾಜಿ ಅಧ್ಯಕ್ಷ ಸಾಣೂರು ನರಸಿಂಹ ಕಾಮತ್ ತೀವ್ರವಾಗಿ ಟೀಕಿಸಿದ್ದಾರೆ.

ಕಾರ್ಕಳ: ರಾಜ್ಯದಲ್ಲಿ ಜಿಲ್ಲಾ ಹಾಗೂ ತಾಲೂಕು ಪಂಚಾಯಿತಿ ಚುನಾವಣೆಗಳು ಐದು ವರ್ಷಗಳಿಂದ ನಡೆಯದೇ ಜನಪ್ರತಿನಿಧಿಗಳಿಲ್ಲದ ಆಡಳಿತ ಮುಂದುವರಿದಿದೆ. ಕ್ಷೇತ್ರ ಪುನರ್‌ವಿಂಗಡಣೆ ಮತ್ತು ಮೀಸಲಾತಿ ಕಾರಣಕ್ಕೆ ಚುನಾವಣೆಗಳನ್ನು ಮುಂದೂಡುತ್ತಾ ಬರುತ್ತಿರುವ ಸರ್ಕಾರದ ಧೋರಣೆಯನ್ನು ಸಾಣೂರು ಗ್ರಾಮ ಪಂಚಾಯಿತಿ ಮಾಜಿ ಅಧ್ಯಕ್ಷ ಸಾಣೂರು ನರಸಿಂಹ ಕಾಮತ್ ತೀವ್ರವಾಗಿ ಟೀಕಿಸಿದ್ದಾರೆ.

ಹೈಕೋರ್ಟ್ ಹಲವು ಬಾರಿ ಗಡುವು ನಿಗದಿಪಡಿಸಿದ್ದರೂ, ಸರ್ಕಾರ ಇನ್ನೂ ಮೀಸಲಾತಿ ಪಟ್ಟಿ ಅಂತಿಮಗೊಳಿಸಿಲ್ಲ. ಇದರ ಪರಿಣಾಮವಾಗಿ ರಾಜ್ಯದ ಎಲ್ಲಾ ಜಿ.ಪಂ. ಮತ್ತು ತಾ.ಪಂ ಕಚೇರಿಗಳಲ್ಲಿ ಜನಸಾಮಾನ್ಯರ ಕೆಲಸಕ್ಕೆ ತೊಂದರೆ ಉಂಟಾಗಿದೆ ಎಂದು ಕಾಮತ್ ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಈ ವರ್ಷಾಂತ್ಯಕ್ಕೆ ಗ್ರಾಮ ಪಂಚಾಯಿತಿಗಳ ಅವಧಿ ಮುಗಿಯಲಿದ್ದು, ಸರ್ಕಾರದ ವಿಳಂಬದಿಂದ ಚುನಾವಣಾ ಪ್ರಕ್ರಿಯೆ ನಡೆಯದಿದ್ದರೆ ಆಡಳಿತ ಅಧಿಕಾರಿಗಳ ದರ್ಬಾರ್ ಮಾತ್ರ ಮುಂದುವರಿಯಲಿದೆ. ಇದರಿಂದ ಪ್ರಜಾಪ್ರಭುತ್ವ ಮತ್ತು ಪಂಚಾಯತ್ ರಾಜ್ ವ್ಯವಸ್ಥೆ ಸಂಪೂರ್ಣ ಕುಸಿಯುವ ಅಪಾಯವಿದೆ.

ರಾಜ್ಯ ಸರ್ಕಾರದ ಈ ಧೋರಣೆಯ ವಿರುದ್ಧ ಸ್ಥಳೀಯ ಆಡಳಿತ ಪ್ರತಿನಿಧಿಗಳು ಹಾಗೂ ಜನಸಾಮಾನ್ಯರು ಬೀದಿಗಿಳಿದು ಪ್ರತಿಭಟಿಸಲು ಸಮಯ ಬಂದಿದೆ ಎಂದು ಕರ್ನಾಟಕ ಪಂಚಾಯತ್ ರಾಜ್ ಪರಿಷತ್ ಬೆಂಗಳೂರು ಪರವಾಗಿ ನರಸಿಂಹ ಕಾಮತ್ ಪತ್ರಿಕಾ ಪ್ರಕಟಣೆಯಲ್ಲಿ ಎಚ್ಚರಿಸಿದ್ದಾರೆ.