ಸಾರಾಂಶ
ಬೆಂಗಳೂರು : ಪಂಚೆಧಾರಿ ರೈತನ ಪ್ರವೇಶಕ್ಕೆ ನಿರಾಕರಿಸಿದ ಮಾಗಡಿ ರಸ್ತೆ ಜಿ.ಟಿ.ವರ್ಲ್ಡ್ ಮಾಲ್ ಮಂಗಳವಾರದಿಂದ ಪುನರ್ ಆರಂಭಗೊಂಡಿದೆ.
ಸೋಮವಾರ ಮಾಲ್ ಮಾಲೀಕರು ಬಿಬಿಎಂಪಿಗೆ ಬಾಕಿ ಇರುವ ಆಸ್ತಿ ತೆರಿಗೆಯನ್ನು ಸಂಪೂರ್ಣವಾಗಿ ಪಾವತಿಸಿದ್ದಾರೆ. ಹೀಗಾಗಿ, ಮಂಗಳವಾರದಿಂದ ಮಾಲ್ ಪುನರ್ ಆರಂಭಗೊಂಡಿದೆ. ಒಟ್ಟು ನಾಲ್ಕು ದಿನ ಮಾಲ್ ಬಂದ್ ಮಾಡಲಾಗಿತ್ತು.
ಪಂಚೆ ಧರಿಸಿ ಬಂದಿದ್ದ ರೈತರೊಬ್ಬರಿಗೆ ಸಿನಿಮಾ ನೋಡಲು ಬಿಡದೇ ಅಪಮಾನಿಸಿದ ಮಾಲ್‌ನ ಆಡಳಿತ ಮಂಡಳಿ ವಿರುದ್ಧ ಸಾರ್ವಜನಿಕ ವಲಯದಲ್ಲಿ ಭಾರೀ ಟೀಕೆ ವ್ಯಕ್ತವಾಗಿತ್ತು. ಜತೆಗೆ ವಿಧಾನಸಭೆಯ ಅಧಿವೇಶನದಲ್ಲಿಯೇ ಪಕ್ಷಾತೀತವಾಗಿ ಆಕ್ಷೇಪ ವ್ಯಕ್ತವಾಗಿತ್ತು. ಏಳು ದಿನ ಮಾಲ್ ಬಂದ್ ಮಾಡಿಸುವುದಾಗಿ ನಗರಾಭಿವೃದ್ಧಿ ಸಚಿವರು ಸದನದಲ್ಲಿ ಹೇಳಿದರು.
ಈ ಎಲ್ಲಾ ಬೆಳೆವಣಿಗೆಗಳ ನಡುವೆ ಕಳೆದ ಗುರುವಾರ ಸಂಜೆ 5 ಗಂಟೆ ಸುಮಾರಿಗೆ ಮಾಲ್ ಮಾಲೀಕರು ಸ್ವಯಂ ಪ್ರೇರಿತವಾಗಿ ಬಂದ್ ಮಾಡಿದ್ದರು. ತದ ನಂತರ ಬಿಬಿಎಂಪಿಯ ಅಧಿಕಾರಿಗಳು ಪಂಚೆ ಪ್ರಕರಣದ ಬಗ್ಗೆ ಕಾರಣ ಕೇಳಿ ನೋಟಿಸ್ ಜಾರಿಗೊಳಿಸುವುದೊಂದಿಗೆ ಆಸ್ತಿ ತೆರಿಗೆ ಬಾಕಿ ನೆಪ ನೀಡಿ ಮಾಲ್ ಸೀಜ್ ಮಾಡಿದ್ದರು.